ಪುರಸಭೆ ಗದ್ದು ಗೆಗೆ ಪೈಪೋಟಿ
ಕನ್ನಡಪ್ರಭ ವಾರ್ತೆ, ರೋಣ, ಸೆ. 1
ಸ್ಥಳಿಯ ಸಂಸ್ಥೆಯ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿ ಹೊರಬೀಳುತ್ತಿದ್ದಂತೆ ರೋಣ ಪುರಸಭೆಯಲ್ಲಿ ಗದ್ದುಗೆಗೇರಲು ಅಕಾಂಕ್ಷಿ ಸದಸ್ಯರುಗಳು ತೆರೆಮರೆಯಲ್ಲಿ ತೀವ್ರ ಕಸರತ್ತು ನಡೆಸಿದ್ದಾರೆ.
ರೋಣ ಪುರಸಭೆಯ ಅಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಪುರುಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಎಂದು ಇರುವುರಿಂದ ಈಗಾಗಲೇ ಕೆಲ ಸದಸ್ಯರು ಅಲ್ಲಲ್ಲಿ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸುತ್ತಿದ್ದಾರೆ.
ಕಳೆದ 5 ತಿಂಗಳ ಹಿಂದೆ ನಡೆದ ಸ್ಥಳಿಯ ಸಂಸ್ಥೆಗಳ ಚುನಾವಣೆಯಲ್ಲಿ ಪುರಸಭೆಯ 23 ಸ್ಥಾನಗಳಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಿದ್ದು, ಮತ್ತೆ ಪುರಸಭೆ ಆಡಳಿತವನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. 23 ಸ್ಥಾನದಲ್ಲಿ ಕಾಂಗ್ರೆಸ್-16 ಸ್ಥಾನ, ಬಿಜೆಪಿ-5, ಬಿಎಸ್ಸಾರ್ ಮತ್ತು ಪಕ್ಷೇತರ ತಲಾ 1 ಸ್ಥಾನ ಬಂದಿದ್ದು, ಇದರಲ್ಲಿ ಬಿಎಸ್ಸಾರ್ ಮತ್ತು ಪಕ್ಷೇತರ ಸದಸ್ಯರು ಕಾಂಗ್ರೆಸ್ ಸೇರ್ಪಡೆಯಾಗಿದ್ದರಿಂದ, ಕಾಂಗ್ರೆಸ್ ಒಟ್ಟು 18 ಸದಸ್ಯರನ್ನು ಹೊಂದಿದೆ.
ಆಕಾಂಕ್ಷಿ ಸದಸ್ಯರು: 18 ಸದಸ್ಯರ ಬಲ ಹೊಂದಿದ ಕಾಂಗ್ರೆಸ್ನಲ್ಲಿ ಅಧ್ಯಕ್ಷ ಗಾದಿಗೆ ಪ್ರಮುಖವಾಗಿ ತೋಟಪ್ಪ ನವಲಗುಂದ, ಅಡಿವೆಪ್ಪ(ಮುತ್ತಣ್ಣ) ಸಂಗಳದ, ಅಜ್ಜಪ್ಪ ರಡ್ಡೇರ, ಶಫೀಕ ಮೂಗನೂರ, ಖಾದರಸಾಬ ಸಂಕನೂರ, ಮಂಜುನಾಥ ಹಾಳಕೇರಿ, ಯಮನವ್ವ ಜುಮ್ಮನಕಟ್ಟಿ ಪ್ರಮುಖ ಆಕಾಂಕ್ಷಿಗಳು.
ಕಾಂಗ್ರೆಸ್ ಹಿಡಿತದಲ್ಲಿರುವ ಪುರಸಭೆಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವ ಸಾಧ್ಯತೆ ಕಡಿಮೆ. ಆದರೆ, ಸದ್ಯದ ಬೆಳವಣಿಗೆ ಗಮನಿಸಿದಾಗ ಕೆಲ ಸದಸ್ಯರು ಹಾಕಿಕೊಂಡ ಲೆಕ್ಕಾಚಾರದಂತೆ ನಡೆಯದೇ ಇದ್ದ ಪಕ್ಷದಲ್ಲಿ ಚುನಾವಣೆ ನಡೆಯಬಹುದಾಗಿದೆ.
ಬೆಂಬಲ ಪಡೆಯಲು ಸದಸ್ಯರ ಹವಣಿಕೆ: ಚುನಾವಣೆ ನಡೆಯಬಹುದೆಂದು ಕೆಲ ಸದಸ್ಯರು ತೆರೆಮರೆಯಲ್ಲಿ ಸದಸ್ಯರುಗಳನ್ನು ಸಂಪರ್ಕಿಸಿ ಸಭೆ ನಡೆಸಿ, ಬೆಂಬಲ ಸೂಚಿಸಲು ದುಂಬಾಲು ಬಿದ್ದಿದ್ದಾರೆ. ಅಧಿಕಾರದ ಗದ್ದುಗೆ ಕನಸು ಹೊತ್ತ ಕೆಲ ಸದಸ್ಯರಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಸಿಗದು ಎನ್ನುವ ಸಂದೇಶವೇನಾದರೂ ಮೊದಲೇ ಕಿವಿಗೆ ಬಿದ್ದಲ್ಲಿ, ಬಹಿರಂಗವಾಗಿ ವಿರೋಧಿಸುವ ಗೋಜಿಗೆ ಹೋಗದೇ ತೆರೆಮರೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರುವಂತೆ ಮಾಡಬಹುದಾಗಿದೆ.
ಹಿರಿತನಕ್ಕೆ ಸಿಗುತ್ತಾ ಆದ್ಯತೆ?: ಕಾಂಗ್ರೆಸ್ ಪಕ್ಷದ ವರಿಷ್ಠರು ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಯಾವ ಮಾನದಂಡ ಅನುಸರಿಸುತ್ತದೆ ಎನ್ನುವುದು ಕುತೂಹಲ ಮೂಡಿದ್ದು, ಕಳೆದ 2 ಅವಧಿಯಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗದಿಂದ ದೂರ ಉಳಿದಿತ್ತು. ಹೀಗಾಗಿ ಸಾಮಾನ್ಯ ವರ್ಗದಿಂದ ಆರಿಸಿ ಬಂದಿರುವ ಸದಸ್ಯರಿಗೆ ಅಧ್ಯಕ್ಷ ಸ್ಥಾನ ನೀಡಬೇಕು ಎನ್ನುವ ಮಾತು ಕೇಳಿ ಬರುತ್ತದೆ. ಹಿರಿತನವನ್ನು ಮಾನದಂಡ ಮಾಡಿಕೊಂಡಲ್ಲಿ ಕಾಂಗ್ರೆಸ್ನಿಂದ ಸತತವಾಗಿ 3 ಬಾರಿ ಪುರಸಭೆ ಪ್ರವೇಶಿಸಿರುವ 15ನೇ ವಾರ್ಡಿನ ಮುತ್ತಣ್ಣ ಸಂಗಳದ ಪ್ರಬಲ ಆಕಾಂಕ್ಷಿ. ಹಾಗೆಯೇ ಕಾಂಗ್ರೆಸ್ ಪಕ್ಷದಲ್ಲಿ ಬಹಳ ವರ್ಷಗಳಿಂದ ಗುರುತಿಸಿಕೊಂಡು, ಈಗ ತಾನೇ ಪ್ರಥಮ ಬಾರಿಗೆ ಪುರಸಭೆಗೆ ಆಯ್ಕೆಗೊಂಡ ತೋಟಪ್ಪ ನವಲಗುಂದ, ಅಜ್ಜಪ್ಪ ರಡ್ಡೆರ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಗಳು. ಇನ್ನು ಉಪಾಧ್ಯಕ್ಷ ಸ್ಥಾನಕ್ಕೆ ನಾಜಬೇಗಂ ಯಲಿಗಾರ, ರತ್ನಾ ಕೊಳ್ಳಿ, ಗೀತಾ ಗಡಗಿ, ವಿದ್ಯಾ ಬಡಿಗೇರ, ಜಯಶ್ರೀ ನವಲಗುಂದ ಆಕಾಂಕ್ಷಿಯಾಗಿದ್ದಾರೆ. ಹೈಕಮಾಂಡ್ ಅಲ್ಪಸಂಖ್ಯಾತರಿಗೆ ಪ್ರಾಧಾನ್ಯತೆ ನೀಡಿದಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ನಾಜಬೇಗಂ ಯಲಿಗಾರ ಆಯ್ಕೆಯಾಗುವ ಸಾಧ್ಯತೆಯಿದೆ.
ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಪಕ್ಷದ ಸಿದ್ದಾಂತಕ್ಕೆ ಎಲ್ಲರೂ ಹೊಂದಿಕೊಳ್ಳುವುದು ಮುಖ್ಯವಾಗಿದೆ. ಪಕ್ಷದ ವರಿಷ್ಠರ ಆಯ್ಕೆಯನ್ನು ಎಲ್ಲರೂ ಬೆಂಬಲಿಸಬೇಕು.
ಈ ವಾರದಲ್ಲಿ ಜಿಲ್ಲಾಧಿಕಾರಿಗಳ ಸೂಚನೆಯಂತೆ ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯ ಪ್ರಕ್ರಿಯೆ ನಡೆಯಲಿದ್ದು, ಸದ್ಯದಲ್ಲಿಯೇ ಚುನಾವಣೆ ದಿನಾಂಕ ನಿಗದಿ ಪಡಿಸಲಾಗುವುದು.
- ಎಂ.ಬಿ. ಪಾಟೀಲ ರೋಣ ತಹಸೀಲ್ದಾರ್
ಜನತೆ ಸಮಸ್ಯೆ ಮತ್ತು ಪಟ್ಟಣದ ಅಭಿವೃದ್ಧಿ ಯಲ್ಲಿ ಯುವ ಸದಸ್ಯರು ಅತ್ಯಂತ ಉತ್ಸುಕರಾಗಿದ್ದು, ಅದರಲ್ಲಿ ಅಜ್ಜಪ್ಪ ರಡ್ಡೇರ ಪ್ರಮುಖರಾಗಿದ್ದಾರೆ. ಪಕ್ಷದ ವರಿಷ್ಠರು ಈ ಬಾರಿ ಯುವಕರ ಆಯ್ಕೆಗೆ ಆದ್ಯತೆ ನೀಡಲಿ.
16ನೇ ವಾರ್ಡಿನ ಯುವಕರು
-ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

