ಗದಗ

ಮಕ್ಕಳಿಗೆ ಬೆಳಕು ತೋರಬಲ್ಲವನೇ ನಿಜವಾದ ಶಿಕ್ಷಕ

Published On :

ಗದಗ: ಮಕ್ಕಳಲ್ಲಿಯ ಅಮೂರ್ತ ಕಲ್ಪನೆಗೆ ಜೀವಂತಿಗೆ ನೀಡಿ ಅವರ ಬಾಳಲ್ಲಿ ಬೆಳಕಾಗಬಲ್ಲವನೇ ನಿಜವಾದ ಗುರು ಎಂದು ಹುಲಕೋಟಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಆರ್.ಎಫ್. ಲೋಟಗೇರಿ ಹೇಳಿದರು.
ಅವರು ಬುಧವಾರ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ನೇತೃತ್ವದಲ್ಲಿ ಹುಲಕೋಟಿ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಏರ್ಪಡಿಸಿದ್ದ ಜಿಲ್ಲಾ ಪ್ರಶಸ್ತಿ ವಿಜೇತ ವಿ.ಎಂ. ಹಾದಿಮನಿ ಶಿಕ್ಷಕರಿಗೆ ಸನ್ಮಾನ ಹಾಗೂ ಶಿಕ್ಷಕ ಬಳಗಕ್ಕೆ ಗೌರವಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
 ಶಿಕ್ಷಕ ಸಮುದಾಯವನ್ನು ಜನಸಮುದಾಯ, ಸಂಘ ಸಂಸ್ಥೆಗಳು ಗೌರವಿಸುವ ಮೂಲಕ ಅವರಿಗೆ ಪ್ರೋತ್ಸಾಹವನ್ನು ನೀಡಬೇಕು. ಆ ನಿಟ್ಟಿನಲ್ಲಿ ಗದಗ-ಬೆಟಗೇರಿ ಇನ್ನರ್‌ವ್ಹೀಲ್ ಕ್ಲಬ್ ಇಂತಹ ಔಚಿತ್ಯಪೂರ್ಣ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಸೂಕ್ತ ಕಾರ್ಯ ಎಂದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಸಕ್ತ ಸಾಲಿನ ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ವಿ.ಎಂ. ಹಾದಿಮನಿ, ಕಲಿಯುವುದು, ಕಲಿಸುವುದು ನಿರಂತರ ಕ್ರಿಯೆ ಇಲ್ಲಿ ಮಕ್ಕಳು ತೋರುವ ಅಭಿಮಾನ ಪ್ರೀತಿ, ವಾತ್ಸಲ್ಯಕ್ಕೆ ಸಾಟಿಯೇ ಇಲ್ಲ. ಈ ಪ್ರಶಸ್ತಿಯ ಗರಿ ಮಕ್ಕಳಿಗೆ ಹಾಗೂ ಸಮುದಾಯಕ್ಕೆ ಸೇರಬೇಕು ಎಂದರು.
ಇನ್ನರ್‌ವ್ಹೀಲ್ ಕ್ಲಬ್ ಅಧ್ಯಕ್ಷೆ ಅನ್ನಪೂರ್ಣಾ ವರವಿ ಮಾತನಾಡಿ, ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕು ನೀಡಬಲ್ಲ ಚೈತನ್ಯ ಶಕ್ತಿ. ಅಂತಹವರನ್ನು ಗೌರವಿಸಬೇಕಾಗಿದ್ದು ಎಲ್ಲರ ಕರ್ತವ್ಯ ಎಂದರು. ಇದೇ ಸಂದರ್ಭದಲ್ಲಿ ಶಿಕ್ಷಕರಿಗಾಗಿ ಆಯೋಜಿಸಿದ್ದ ಆಟೋಟ ಸ್ಪರ್ಧೆಯಲ್ಲಿ ವಿಜೇತರಾದ ಹಾಗೂ ಶಾಲೆಯ ಎಲ್ಲ ಶಿಕ್ಷಕ ವೃಂದವನ್ನು ಸನ್ಮಾನಿಸಲಾಯಿತು. ಕವಿತಾ ದಂಡಿನ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಇನ್ನರ್‌ವ್ಹೀಲ್ ಕ್ಲಬ್‌ನ ಕಾರ್ಯದರ್ಶಿ ಸುಲೋಚನಾ ಐಹೋಳಿ, ಖಜಾಂಚಿ ಸುವರ್ಣಾ ವಸ್ತ್ರದ, ನಾಗರತ್ನಾ ಮಾರನಬಸರಿ, ಆರ್.ಎಚ್. ತುಗ್ಗಲದೋಣಿ, ಆರ್.ವೈ. ಬಸರಿ, ಎಲ್.ಎಸ್. ಬೆಳವಟಗಿ, ಎಂ.ಜಿ. ನಾವಳ್ಳಿ, ಎಫ್.ಎ.ಅರಸೂರ, ಎ.ಎಲ್. ಹೆಬ್ಬಳ್ಳಿ, ದೀಪಾ ಪೂಜಾರ, ಬಸವರಾಜ ಭಜಂತ್ರಿ ಮುಂತಾದವರು ಪಾಲ್ಗೊಂಡಿದ್ದರು. ಪಿ.ಕೆ. ಅವರಡ್ಡಿ ಸ್ವಾಗತಿಸಿದರು. ಎಸ್.ಎಂ. ಹೂಗಾರ ನಿರೂಪಿಸಿದರು. ಎಸ್.ಎ. ಖಾನ್ ವಂದಿಸಿದರು.

ಅರಿಸಿನದಗೆ ಉತ್ತಮ ಶಿಕ್ಷಕ ಪ್ರಶಸ್ತಿ
ಮುಂಡರಗಿ:  ತಾಲೂಕಿನ ಬರದೂರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 8 ವರ್ಷಗಳಿಂದ ವಿವಿಧ ಚಟುವಟಿಕೆಯಲ್ಲಿ ಕ್ರಿಯಾಶೀಲ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಶಾಂತಪ್ಪ ಅರಿಸಿನದ ಅವರಿಗೆ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ. 1997ರಲ್ಲಿ ಹಾವೇರಿ ಜಿಲ್ಲೆಯ ಗಾಂಧೀಪುರದಿಂದ ಶಿಕ್ಷಕ ವೃತ್ತಿ ಪ್ರಾರಂಭಿಸಿದ ಅರಿಸಿನದ ಅವರು  2006 ರಿಂದ ಮುಂಡರಗಿ ತಾಲೂಕಿನ ಬರದೂರ ಗ್ರಾಮದಲ್ಲಿ ಸೇವೆ ಸಲ್ಲಿಸುತ್ತಿದ್ದಾರ. ನಲಿಕಲಿ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ, ಚಿಣ್ಣರ ಅಂಗಳ ತರಬೇತಿ, ಚಲನೆ ಆಧಾರಿತ ಜೀರ್ಣಾಂಗವ್ಯೂಹ, ಭೂಗೋಳ, ಸೌರವ್ಯೂಹ ಸೇರಿದಂತೆ ಅನೇಕ ವಿಜ್ಞಾನ ಪ್ರಯೋಗಗಳನ್ನು, ಬೀಜಗಣಿತ ಸೂತ್ರಗಳ ಕಲಿಕಾ ಸಾಮಗ್ರಿ, ಸ್ಥಳದಲ್ಲಿಯೇ ವಿಜ್ಞಾನ ಮಾದರಿ ತಯಾರಿಸಿ ಕ್ರಿಯಾಶೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ಥಳದಲ್ಲಿಯೇ ವಿಜ್ಞಾನ ಮಾದರಿ ತಯಾರಿಕೆ ಸ್ಪರ್ಧೆಯಲ್ಲಿ ತಾಲೂಕಿನಲ್ಲಿ ಪ್ರಥಮ, ಜಿಲ್ಲಾಮಟ್ಟದಲ್ಲಿ ಪ್ರಥಮ, ರಾಜ್ಯಮಟ್ಟದಲ್ಲಿ ಭಾಗವಹಿಸಿದ್ದಾರೆ.  
 ಶಿಕ್ಷಕ ಹಿರೇಮಠಗೆ ಪ್ರಶಸ್ತಿ  
ರೋಣ: 2013ನೇ ಸಾಲಿನ ಗದಗ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ರೋಣ ತಾಲೂಕಿನ ಸವಡಿ ಗ್ರಾಮದ ಸರ್ಕಾರಿ ಮಾದರಿ ಕೇಂದ್ರ ಶಾಲೆಯ ಶಿಕ್ಷಕ ಎಸ್.ಬಿ. ಹಿರೇಮಠ ಅವರಿಗೆ ಲಬಿಸಿದ್ದು, ಶಿಕ್ಷಕ ದಿನಾಚರಣೆ ನಿಮಿತ್ತ ಸೆ. 5 ರಂದು ಗದಗದಲ್ಲಿ ಜರುಗಲಿರುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುವದು. ಅವರು ಚುಕ್ಕಿ ಚಂದ್ರಾಮ, ಗೊರಕೆ ಗುಂಡ, ಜನಗಣಮನ ವೀರರು, ನಾನು ಬರ್ತೀನಿ ಸ್ಕೂಲಿಗೆ, ಮಾಡಿದ್ದುಣ್ಣೋ ಮಾರಾಯ, ಸೊಳ್ಳೆ ಬಂತು ಸೊಳ್ಳೆ, ಜ್ಞಾನ ಬಿಂದುಗಳು ಮತ್ತು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಅಷ್ಟ ದಿಗ್ಗಜರು ಹೀಗೆ ಅನೇಕ ಕೃತಿಗಳನ್ನು ರಚಿಸಿದ್ದಾರೆ.

ಶಿಕ್ಷಕರಿಗೆ ಸಾಮಾಜಿಕ ಬದ್ಧತೆ ಅಗತ್ಯ
ಗದಗ:  ಶಿಕ್ಷಕರೇ ನಿಜವಾದ ಸಮಾಜ ಶಿಲ್ಪಿಗಳು. ಶಿಕ್ಷಕ ಸಮುದಾಯಕ್ಕೆ ಸಾಮಾಜಿಕ ಬದ್ದತೆ ಇದ್ದರೆ ಸಾಕು, ಅವರಿಂದ ಗುರುತರವಾದ ರಚನಾತ್ಮಕ ಸಾಧನೆ ಸಾಧ್ಯ ಎಂದು ತೋಂಟದ ಡಾ.ಸಿದ್ದಲಿಂಗ ಮಹಾಸ್ವಾಮೀಜಿ ಹೇಳಿದರು.
ಅವರು ಸೋಮವಾರ ರಾತ್ರಿ ತೋಂಟದಾರ್ಯ ಮಠದಲ್ಲಿ ಲಿಂಗಾಯತ ಪ್ರಗತಿಶೀಲ ಸಂಘದಾಶ್ರಯದಲ್ಲಿ ನಡೆದ 2135ನೇ ಶಿವಾನುಭವ ಬಸವ ಮಹಾದರ್ಶನ ಪ್ರವಚನ ಮಂಗಲ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಶ್ರಾವಣ ಮಾಸದಲ್ಲಿ ಮಾತ್ರವಲ್ಲ ಶಿವನಾಮ, ಸಂಕೀರ್ತನೆ, ಒಳ್ಳೆಯ ಮಾತು, ನಡೆನುಡಿ, ಸತ್ಸಂಗ ಇವುಗಳೆಲ್ಲ ವರ್ಷದುದ್ದಕ್ಕೂ ಜೀವನ ಪರ್ಯಂತ ಅನುಸರಿಸಬೇಕಾದ ಅಂಶಗಳೇ ಆಗಿದ್ದರೂ ಶ್ರಾವಣ ಮಾಸದಲ್ಲಿ ಇದಕ್ಕೆ ವಿಶೇಷ ಪ್ರಾತಿನಿಧ್ಯ ನೀಡುವ ಪರಿಪಾಠ ಬೆಳೆದು ಬಂದಿದೆ ಎಂದರು.
ನಿವೃತ್ತ ಶಿಕ್ಷಕ ಎಂ.ಎ. ಹಂಚನಾಳ ಮಾತನಾಡಿದರು. ಕಾರಟಗಿಯ ವೀಣಾ ಸಂಗೀತ ಶಾಲೆಯವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಸವಣೂರು ಕಾಲೇಜಿನಲ್ಲಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ವೈ.ವಿ. ಯತ್ನಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಕೆ. ಸಣ್ಣಸೂಗೂರಪ್ಪ, ಪ್ರಕಾಶ ಕರಿಸೋಮನಗೌಡ್ರ, ಮೃತ್ಯುಂಜಯ ಸಂಕೇಶ್ವರ, ಶಿವಲೀಲಮ್ಮ ಕುರಡಗಿ, ಕಾರ್ಯದರ್ಶಿ ವೀರಣ್ಣ ಹೊನಗಣ್ಣವರ, ಪ್ರಭಯ್ಯ ಹಿರೇಮಠ, ಗುರುಬಸವಲಿಂಗ ತಡಸದ ಮತ್ತಿತರರಿದ್ದರು.
ಪ್ರೊ.ಎಸ್.ಎನ್.ಆದಿ ಸ್ವಾಗತಿಸಿ ಪರಿಚಯಿಸಿದರು. ಎಸ್.ಎಂ. ವಾಲಿ  ನಿರೂಪಿಸಿದರು.

ರೋಣ: ಇಂದು ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ರೋಣ: ದಿ. ಎಸ್.ಆರ್. ಪಾಟೀಲ ಪ್ರತಿಷ್ಠಾನದಿಂದ 2013ನೇ ಸಾಲಿನ ರೋಣ ತಾಲೂಕು ಉತ್ತಮ ಶಿಕ್ಷಕ ಪ್ರಶಸ್ತಿ ಕೊಡಮಾಡಲಾಗಿದ್ದು, ಪಟ್ಟಣದ ಅಕ್ಕಮಹಾದೇವಿ ಕಲ್ಯಾಣ ಮಂಟಪದಲ್ಲಿ ಸೆ. 5ರಂದು ಜರುಗುವ ಶಿಕ್ಷಕರ ದಿನಾಚರಣೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಆಯ್ಕೆಯಾದ ಪ್ರಾಥಮಿಕ ಶಾಲಾ ಶಿಕ್ಷಕರು: ಪ್ರಾಥಮಿಕ ಶಾಲಾ ವಿಭಾಗದಲ್ಲಿ ಶಿಕ್ಷಕ ಆರ್.ಬಿ. ಪ್ರಭಣ್ಣನರ (ಮಾರನಬಸರಿ), ಎಸ್.ಆರ್. ಬುರ್ಲಿಯವರ(ಹುಲ್ಲೂರ), ಎಲ್.ಬಿ .ಬಾಬು ನಾಯ್ಕರ(ಇಟಗಿ), ಎಸ್.ಬಿ. ಅಮರನಾಥ (ರೋಣ), ಲೋಕೇಶ (ಗುಳಗುಳಿ), ಎಸ್.ಎಸ್. ಬಣಗಾರ (ನಾಗೇಂದ್ರಗಡ), ಎಸ್.ವಿ. ಘಟ್ಟಿ (ಚಿಕ್ಕಮಣ್ಣೂರ), ಎ.ಎಂ.ದೊಡ್ಡಮನಿ(ಕೃಷ್ಣಾಪೂರ), ಎಸ್.ಬಿ. ನಾಗನೂರ (ಶಾಂತಗೇರಿ), ಎಂ.ಎಚ್. ತಹಸೀಲ್ದಾರ್ (ಯರೇಬೆಲೆರಿ), ಬಿ.ವೈ. ಗಾಣಿಗೇರ (ಬಸರಕೋಡ), ಸಿ.ಎ. ನೆಲಗುಡ್ಡ (ಸಂದಿಗವಾಡ), ರವಿಕಾಂತ ತಳವಾರ (ಹುನಗುಂಡಿ), ಎಸ್.ಎಚ್.ಕುರ್ಲಗೇರಿ ಹಿರೇಮಠ (ಬೆಳವಣಕಿ), ಪಿ.ಎನ್ .ಸಳಗಾಂವಕರ (ಗಜೇಂದ್ರಗಡ), ಜಯಶ್ರೀ ಕುಲಕರ್ಣಿ (ನಾಗರಸಿಕೊಪ್ಪ), ಎಸ್.ಬಿ. ದಾನಪ್ಪಗೌಡರ (ಸರ್ಜಾಪುರ), ವಿ.ಬಿ. ರಡ್ಡೇರ (ಮುಗಳಿ), ಕೆ.ಆರ್. ಶ್ರೀನಿವಾಸ (ಹಿರೇಮಣ್ಣೂರ) ಮತ್ತು ಎಂ.ಐ. ಸಾಲವಾಡಗಿ (ನರೇಗಲ್) ಇವರನ್ನು ಆಯ್ಕೆ ಮಾಡಲಾಗಿದೆ.
ಪ್ರೌಢಶಾಲಾ ವಿಭಾಗ: ಪ್ರೌಢ ಶಾಲಾ ವಿಭಾಗದಲ್ಲಿ ಶಿಕ್ಷಕ ಐ.ಎಸ್. ಹಿರೇಮಠ (ಹಿರೇಹಾಳ), ವಿ.ಬಿ. ರಜಪೂತ (ಅಬ್ಬಿಗೇರಿ), ಎಸ್.ಬಿ.ನಾಯ್ಕರ (ಇಟಗಿ), ಬಿ.ಆರ್. ಕಟ್ಟಿಮನಿ (ರೋಣ) ಮತ್ತು ಅಕ್ಕಮ್ಮ ರಾಠೋಡ (ನರೇಗಲ್) ಇವರನ್ನು ಆಯ್ಕೆ ಮಾಡಲಾಗಿದೆ. ರೋಣ ಮತಕ್ಷೇತ್ರದ ಮುಂಡರಗಿ ತಾಲೂಕಿನ ಡಂಬಳಿ ಹೋಬಳಿಯ ಶಾಲೆಗಳ ಶಿಕ್ಷಕ ಆರ್.ಕೆ. ಪೂಜಾರ (ಡೋಣಿ), ಎಸ್.ಪಿ. ಸಜ್ಜನ (ಪೇಠಾಲೂರ), ವೈ.ಎಚ್. ಬಚನಳ್ಳಿ (ಪೇಟಾಲೂರ), ಶ್ರೀನಿವಾಸ ಉಮಜಿ (ಹಳ್ಳಿಗುಡಿ) ಮತ್ತು ಎಸ್.ಡಿ. ಚಿಗರಿ (ಮೇವುಂಡಿ) ಇವರನ್ನು ಆಯ್ಕೆ ಮಾಡಲಾಗಿದೆ ಎಂದು ದಿ. ಎಸ್.ಆರ್. ಪಾಟೀಲ ಪ್ರತಿಷ್ಠಾನ ಅಧ್ಯಕ್ಷ ಜಿ.ಎಸ್. ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.