ಶಿರಹಟ್ಟಿ: ಜೆಡಿಎಸ್ ಸದಸ್ಯನ ನಾಪತ್ತೆ ಪ್ರಕರಣ ಸುಖಾಂತ್ಯ
ಶಿರಹಟ್ಟಿ: 4-5 ದಿನಗಳಿಂದ ಶಿರಹಟ್ಟಿ ಪಟ್ಟಣ ಪಂಚಾಯಿತಿಯ ಜೆಡಿಎಸ್ ಸದಸ್ಯ ಬಾಲಚಂದ್ರ ಇಟಗಿ ನಾಪತ್ತೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಪೊಲೀಸರ ಶೀಘ್ರ ಕಾರ್ಯಾಚರಣೆಯಿಂದ ಸದಸ್ಯನನ್ನು ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಶಿರಹಟ್ಟಿ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಘಟನೆ ಕುರಿತಂತೆ ಸಿಪಿಐ ಪ್ರಕಾಶ ನಾಯ್ಡು ಬುಧವಾರ ಪೊಲೀಸ್ ಠಾಣೆಯ ಕಾರ್ಯಾಲಯದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಪಂ ಸದಸ್ಯ ಬಾಲಚಂದ್ರ ಇಟಗಿ ಅವರ ಪತ್ನಿ ನಿರ್ಮಲಾ ಬಾಲಚಂದ್ರ ಇಟಗಿ ಆ. 31ರಂದು ತಮ್ಮ ಪತಿ ಕಾಣೆಯಾಗಿದ್ದಾರೆ ಎಂದು ಶಿರಹಟ್ಟಿ ಠಾಣೆಯಲ್ಲಿ ದೂರು ನೀಡಿದ್ದು, ಈ ಪ್ರಕರಣ ಪಟ್ಟಣದಲ್ಲಿ ಅನೇಕ ಉಹಾಪೋಹ ಮತ್ತು ಕುತೂಹಲಕ್ಕೆ ಕಾರಣವಾಗಿತ್ತು. ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್ಪಿ ವಿ.ವಿ. ಕುಂಬಾರ ಅವರು ಪಿಎಸ್‌ಐಗಳಾದ ವಿಕಾಸ ಲಮಾಣಿ, ಆರ್.ಎಚ್. ಕಟ್ಟಿಮನಿ ನೇತೃತ್ವದಲ್ಲಿ 2 ತಂಡ ರಚನೆ ಮಾಡಿ ಕಾಣೆಯಾದ ಸದಸ್ಯನ ಪತ್ತೆಗೆ ಜಾಲ ಬೀಸಿದ್ದರು.
ಖಚಿತ ಮಾಹಿತಿ ಮೇರೆಗೆ ಜಾಡು ಹಿಡಿದು ಹೊರಟ ಪೊಲೀಸರಿಗೆ ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪಪಂ ಸದಸ್ಯ ಪತ್ತೆಯಾಗಿದ್ದು, ಸದಸ್ಯನ ತಂದೆ ಹಾಗೂ ಆತನ ಪತ್ನಿ ಸಮ್ಮುಖದಲ್ಲಿಯೇ ಆತ ನೀಡಿದ ಹೇಳಿಕೆ ಮೇರೆಗೆ ನಾನು ಶ್ರಾವಣ ಮಾಸದಲ್ಲಿ ಪ್ರತಿ ವರ್ಷ ದೇವಸ್ಥಾನಕ್ಕೆ ತೆರಳುತ್ತಿದ್ದು, ಅದೇ ರೀತಿ ಈ ಬಾರಿಯೂ ಹೋಗಿದ್ದೇನೆ. ಆದರೆ, ಪತ್ನಿ ಮನೆಯಲ್ಲಿ ತಪ್ಪು ಗ್ರಹಿಕೆಯಿಂದ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ ಎಂದು ಗೊತ್ತಾಗಿದೆ. ತಮ್ಮನ್ನು ಯಾರೂ ಅಪಹರಿಸಿಲ್ಲ. ಕಾಣೆಯೂ ಆಗಿಲ್ಲ ಎಂದು ತಿಳಿಸಿದ್ದಾನೆ.
ಪಪಂ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನ ಆಯ್ಕೆ ಕುರಿತ ದಿನಾಂಕವೂ ನನ್ನ ಗಮನಕ್ಕೆ ಬಂದಿರುವುದಿಲ್ಲ. ಸ್ವ-ಇಚ್ಛೆಯಿಂದ ದೇವಸ್ಥಾನಕ್ಕೆ ತೆರಳಿದ್ದು ಒಂದು ವಾರದ ನಂತರ ಊರಿಗೆ ಬರುವುದಾಗಿ ಹೇಳಿಕೆ ನೀಡುವ ಮೂಲಕ ನಾಪತ್ತೆ ಪ್ರಕರಣ ಸುಖಾಂತ್ಯ ಕಂಡಿದೆ. ಪಿಎಸ್‌ಐ ವಿಕಾಸ ಲಮಾಣಿ ನೇತೃತ್ವದ ತಂಡದಲ್ಲಿ ಎಎಸ್‌ಐ ಪಿ.ಎಂ. ಬಡಿಗೇರ, ಪುರದ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

