ಗದಗ

ಹೊಲಕ್ಕೆ ನುಗ್ಗಿದ ಗುಡ್ಡದ ನೀರು: ಬೆಳೆ ಜಲಾವೃತ

Published On :

ಶಿರಹಟ್ಟಿ: ನಾಲ್ಕು ದಿನಗಳಿಂದ ಸುರಿದ ಮಳೆಯಿಂದ ರೈತಾಪಿ ವರ್ಗ ಒಂದೆಡೆ ಸಂತಸಪಟ್ಟರೆ ಮತ್ತೊಂದೆಡೆ ತಾಲೂಕಿನ ಮಾಚೇನಹಳ್ಳಿ ಗ್ರಾಮದ ಗುಡ್ಡದ ಪಕ್ಕದಲ್ಲಿ ಜಮೀನು ಹೊಂದಿದ ರೈತರು ತೀವ್ರ ಬೆಳೆ ಹಾನಿ ಅನುಭವಿಸುವಂತಾಗಿದೆ.
ತಾವು ವರ್ಷವಿಡಿ ಸಾವಿರಾರು ಹಣ ಖರ್ಚು ಮಾಡಿ ಬೆಳೆದ ಬೆಳೆಯು ನೀರಿನಲ್ಲಿ ಕೊಚ್ಚಿಹೋಗಿದ್ದು ರೈತರನ್ನು ಕಂಗಾಲಾಗಿಸಿದೆ. ಮಾಚೇನಹಳ್ಳಿ ಗ್ರಾಮದ ಗುಡ್ಡಕ್ಕೆ ಹೊಂದಿಕೊಂಡಿರುವ 30ಕ್ಕೂ ಹೆಚ್ಚು ರೈತರು 40 ಎಕರೆಯಲ್ಲಿ ಮುಂಗಾರು ಬೆಳೆಯಾಗಿ ಹತ್ತಿ, ಗೋವಿನ ಜೋಳ, ಈರುಳ್ಳಿ ಬಿತ್ತನೆ ಮಾಡಿದ್ದಾರೆ. ಸದ್ಯ ಬೆಳೆ ಸಮೃದ್ಧವಾಗಿದೆ. ಆದರೆ, ವಿಂಡ್ ವರ್ಲ್ಡ್ (ಗಾಳಿ ವಿದ್ಯುತ್ ಕಂಪನಿಯವರು) ಗುಡ್ಡದ ಮೇಲೆ 21 ಫ್ಯಾನ್ ಕಂಬ ನಿಲ್ಲಿಸಿದ್ದು, ಗುಡ್ಡ ಏರಲು ಮತ್ತು ಗುಡ್ಡದ ಮೇಲಿನ ನೀರನ್ನು ಕೆಳಗೆ ಹರಿಬಿಡಲು ದೊಡ್ಡ ಕಾಲುವೆ ನಿರ್ಮಾಣ ಮಾಡಿದ್ದು, ಅಲ್ಲಿಂದ ಬಂದ ನೀರು ಹೊಲಕ್ಕೆ ನುಗ್ಗಿದ್ದು ರೈತರ ಫಸಲನ್ನು ಹಾಳುಮಾಡಿದೆ.
8 ವರ್ಷಗಳಿಂದ ಈ ಸಮಸ್ಯೆ: 8 ವರ್ಷಗಳಿಂದ ಇಲ್ಲಿನ ರೈತರು ಪ್ರತಿ ವರ್ಷವೂ ಇದೇ ತೊಂದರೆ ಅನುಭವಿಸುತ್ತಿದ್ದು, ಸಾಲ ಸೋಲ ಮಾಡಿ ಬೀಜ-ಗೊಬ್ಬರ ಖರೀಧಿಸಿ ಬಿತ್ತನೆ ಮಾಡಿದ್ದಾರೆ. ಖಾಸಗಿ ಕಂಪನಿಯವರ ಉಪಟಳದಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ವಾತಾವರಣ ನಿರ್ಮಾಣವಾಗಿದೆ. ಗೋವಿನ ಜೋಳ, ಈರುಳ್ಳಿ, ಹತ್ತಿ ಬೆಳೆ ಗುಡ್ಡದ ಮೇಲಿಂದ ಹರಿದು ಬಂದ ಭಾರಿ ಪ್ರಮಾಣದ ನೀರಿನಿಂದ ಸಂಪೂರ್ಣ ಜಲಾವೃತವಾಗಿವೆ. ಭೂಮಿಯು ಜವಳು ಬಿದ್ದು ಶಕ್ತಿ ಕಳೆದುಕೊಳ್ಳುವ ಹಂತದಲ್ಲಿದೆ.
ಕಾಡು ಪ್ರಾಣಿಗಳು ಮಾಯ: ವಿಂಡ್ ವರ್ಲ್ಡ್ ಖಾಸಗಿ ಕಂಪನಿಯವರು ಗುಡ್ಡ ಅಗೆದು ಅಂದಾಜು ಒಂದು ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶ ನಾಶಪಡಿಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಸಾಕಷ್ಟು ಪ್ರಮಾಣದಲ್ಲಿದ್ದ ಕಾಡು ಪ್ರಾಣಿಗಳು ಅರಣ್ಯ ನಾಶದಿಂದಾಗಿ ಕಾಣದಾಗಿವೆ. ಗ್ರಾಮಸ್ಥರು ಅನೇಕ ಬಾರಿ ಇಲಾಖೆಯ ಗಮನಕ್ಕೆ ತಂದರೂ ಯಾವೊಬ್ಬ ಅಧಿಕಾರಿಯೂ ಇತ್ತ ಗಮನ ಹರಿಸದಿರುವುದಕ್ಕೆ ಬೇಸರ ವ್ಯಕ್ತಪಡಿಸುತ್ತಾರೆ.
ಪರಿಹಾರಕ್ಕೆ ಒತ್ತಾಯ: ಕಂಪನಿಯವರ ಅವೈಜ್ಞಾನಿಕ ಕಾರ್ಯಕ್ಕೆ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ತಹಸೀಲ್ದಾರ್ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಖುದ್ದಾಗಿ ಗ್ರಾಮಕ್ಕೆ ಭೇಟಿ ನೀಡಿ, ಹಾನಿಗೊಳಗಾದ ಜಮೀನಿನ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ದೊರಕಿಸಿ ಕೊಡಲು ಮುಂದಾಗಬೇಕು. ವಿಳಂಬ ನೀತಿ ಅನುಸರಿಸಿದರೆ ವಿಂಡ್ ವರ್ಲ್ಡ್ ಕಂಪನಿ ವಿರುದ್ಧ  ರೈತರು ಉಗ್ರ ಹೋರಾಟಕ್ಕೆ ಇಳಿಯ ಬೇಕಾಗುತ್ತದೆ ಎಂದು ಈ ಭಾಗದ ರೈತರು ಎಚ್ಚರಿಕೆ ನೀಡಿ ತಹಸೀಲ್ದಾರ್‌ಗೆ ಶುಕ್ರವಾರ ಮನವಿ ನೀಡಿದ್ದಾರೆ.
ಜಿಲ್ಲಾಧಿಕಾರಿಗಳು ಅರಣ್ಯ ಪ್ರದೇಶದಲ್ಲಿ ವಿಂಡ್ ವರ್ಲ್ಡ್ ಖಾಸಗಿ ಕಂಪನಿಯವರಿಗೆ ಅನುಮತಿ ನೀಡುವುದಕ್ಕೂ ಮೊದಲು ಅಲ್ಲಿನರೈತರ ಸ್ಥಿತಿ-ಗತಿ ತಿಳಿದುಕೊಂಡು ಅನುಮತಿ ನೀಡಬೇಕಿತ್ತು. ಬರಗಾಲ ಪೀಡಿತ ಪ್ರದೇಶದ ರೈತರು ಪ್ರತಿ ವರ್ಷವೂ ಇದೇ ತೊಂದರೆ ಅನುಭವಿಸುತ್ತಿದ್ದು, ಬೆಳೆ ಮತ್ತು ಜಮೀನು ಹಾಳಾಗುತ್ತಿದೆ. ಯೋಗ್ಯ ಪರಿಹಾರ ನೀಡಬೇಕು. ಇಲ್ಲದೇ ಹೋದಲ್ಲಿ ಇಲ್ಲಿನ ರೈತರೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು.
 ಶಂಕರ ಮರಾಠೆ (ಗ್ರಾಪಂ ಸದಸ್ಯ) ಮಾನೇಶ ಮರಾಠೆ, ಪ್ರಕಾಶಗೌಡ ಪಾಟೀಲ, ಶಿವಪುತ್ರಪ್ಪ ಮಾದರ, ಶೇಖಣ್ಣ ಸೊರಟೂರ, ಫಕೀರೇಶ ಸೊರಟೂರ, ಮಾಂತೇಶ ಮಡ್ಡಿ, ಮುತ್ತಪ್ಪ ಕಲಕೇರಿ, ಮಾಂತೇಶ ಶರೇವಾಡ (ರೈತರು)


-ಮಹದೇವಪ್ಪ ಎಂ. ಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.