ಬೆಳವಣಕಿಯಲ್ಲಿ ಬಹುಮುಖಿ ಮಕ್ಕಳ ಬೇಸಿಗೆ ಶಿಬಿರ
ರೋಣ: ಅವರನ್ ಬಿಟ್ಟು, ಇವರ್ನ ಬಿಟ್ಟ ಇವರ್ಯಾರು...?, ಹತ್ತಿ ಕಟಗಿ... ಬತ್ತಿ ಕಟಗಿ.. ಭಾವನಾರ ಬಸಪ್ಪನಾರು, ಕೈ ಕೈ ದೂಳಗೈ, ಪಂಚಮ್ ಪಗಡಂ.., ಸಕ್ಕಾ ಸರಿಗೆ, ಗೋದಿ ಮುರುಗೆ.., ಕಣ್ಣಾ ಮುಚ್ಚೆ ಗಾಡೆ ಗೂಡೆ, ಮುದ್ದಿನ ಮೂಟೆ ಊರುಳೇ ಹೊಯ್ತು.., ಎಲ್ಲರೂ ಓಡಿ ಹೋಗಿ ಲಗೋರಿ ಬಿತ್ತು. ಅರರೇ... ಇದೇನಿದು ನಾವು ಸಣ್ಣವರಿದ್ದಾಗ ಇಂತಹ ಆಟ ಆಡುತ್ತಿದ್ದೆವಲ್ಲಾ ಅಂತ ನಿಮಗನಿಸ್ತಿದೆಯಲ್ಲ.
ಹೌದು... ಅದಕ್ಕೆಲ್ಲ ಸಾಕ್ಷಿಯಾಗಿದ್ದು ತಾಲೂಕಿನ ಬೆಳವಣಕಿ ಗ್ರಾಮದ ಮಾದರಿ ಕೇಂದ್ರ ಶಾಲೆಯ ಆವರಣದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ, ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಗ್ರಾಪಂ ಬೆಳವಣಕಿ ಸಹಯೋಗದಲ್ಲಿ ಆಯೋಜಿಸಿದ್ದ ಬಹುಮುಖಿ ಮಕ್ಕಳ ಬೇಸಿಗೆ ಶಿಬಿರ.
ಮಕ್ಕಳ ಅಪ್ಪಟ ಗ್ರಾಮೀಣ ಆಟ ಪರಿಚಯಿಸುವ ಉದ್ದೇಶ, ಮಕ್ಕಳಲ್ಲಿನ ಸೂಪ್ತ ಪ್ರತಿಭೆ ಗುರುತಿಸಿ ತರಬೇತಿಗೊಳಿಸುವುದು ಮತ್ತು ಅವರಲ್ಲಿನ ಕ್ರಿಯಾತ್ಮಕ ಹಾಗೂ ಸೃಜನಶೀಲತೆ ವೃದ್ಧಿಸುವ ಬಹುಮುಖಿ ಮಕ್ಕಳ ಬೇಸಿಗೆ ಶಿಬಿರವೊಂದು ತಾಲೂಕಿನ ಬೆಳವಣಕಿ ಗ್ರಾಮದಲ್ಲಿ ನಡೆದಿದ್ದು, ಮಕ್ಕಳ ಮನಸ್ಸು ಅರಳಿಸುವುದರೊಂದಿಗೆ ಪಾಲಕರಿಂದಲೂ ಸೈ ಎನಿಸಿಕೊಂಡಿದೆ. ಈ ಶಿಬಿರದಲ್ಲಿ ತಾಲೂಕಿನ ಯಾ.ಸ. ಹಡಗಲಿ, ಸವಡಿ ಮತ್ತು ಬೆಳವಣಕಿ ಗ್ರಾಮದ 5 ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳ 250ಕ್ಕೂ ಹೆಚ್ಚು 7ನೇ ತರಗತಿ ಒಳಗಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ದೇಶಿ ಕ್ರೀಡೆಗಳ ನೆನಪು: ಬಳೆ ಚೂರು ಆಟ, ಚಿನಿ ಪಣಿ, ಗಜಗ, ಕೈ ಸೊಸಿ ಚಪ್ಪಾಳೆ ತಟ್ಟುವ ಆಟ, ಬೆರಳಲ್ಲಿ ಆನೆ ಒಂಟೆ, ದಂಟಿನ ಆಟ, ಹಾಳೆಯ ಹಡಗಿನ ಆಟ, ಮಣ್ಣಿನ ಆಟ, ಬುಗರಿ, ಲಗೋರಿ, ಕಪ್ಪೆ ನೆಗೆತ, ಗಿಡ ಮಂಗನ ಆಟ, ಕಣ್ಣಾ ಮುಚ್ಚಾಲೆ ಆಟ, ಓಡಿ ಹೋಗಿ ಕಲ್ಲ ಮೇಲೆ ನಿಲ್ಲುವ ಆಟ, ಮುಟ್ಟಲು ಬಂದಾಗ ಗಿಡವೇರಿ ಕುಳಿಕೊಳ್ಳುವ ಆಟ, ಸಳಿ ಗಾಲಿ ತಿರುಗಿಸುತ್ತಾ ಓಡುವ ಆಟ, ಮಲ್ಲಕಂಬ, ಹಗ್ಗ ಏರುವ ಆಟ ಹೀಗೆ ಶಿಬಿರದಲ್ಲಿ ಮಕ್ಕಳಿಗಾಗಿ ಏರ್ಪಡಿಸಿದ್ದ ದೇಶಿ ಸಂಸ್ಕೃತಿಯ ಸೊಗಡನ್ನು ಹೊಂದಿರುವ ಆಟಗಳ ದೊಡ್ಡ ಪಟ್ಟಿಯೇ ಇದೆ.
ವೈಶಿಷ್ಟತೆ: ಶಿಬಿರದಲ್ಲಿ ಮಕ್ಕಳಿಗೆ ದೇಶಿ ಸಂಸ್ಕೃತಿ, ಗ್ರಾಮೀಣ ಕ್ರೀಡೆ ಪರಿಚಯಿಸುವ ಜತೆಗೆ ವಿಜ್ಞಾನ, ಸಾಹಿತ್ಯ, ಜಾನಪದ, ಮಕ್ಕಳ ರಂಗಭೂಮಿ, ಪ್ರವಾಸಿ ತಾಣಗಳ ಪರಿಚಯ, ಕಲೆ, ಕರ ಕುಶಲ ತರಬೇತಿ, ವ್ಯವಹಾರ ವಹಿವಾಟು, ಮಾಹಿತಿ ತಂತ್ರಜ್ಞಾನ ಮುಂತಾದ ವಿಷಯ ಕುರಿತು ಮಕ್ಕಳಿಗೆ ಮಾಹಿತಿ ನೀಡಲಾಯಿತು. ಮಕ್ಕಳ ರಂಗಭೂಮಿ, ರಂಗ ಗೀತೆ, ನಾಟಕ ಕುರಿತು ಮಕ್ಕಳ ರಂಗಭೂಮಿ ತಜ್ಞ ಡಾ. ನಿಂಗು ಸೊಲಗಿ, ಧಾರವಾಡದ ಲಿಂಗರಾಜ ರಾಮಾಪೂರ, ಹಡಗಲಿಯ ಶ್ಯಾಮ ಲ್ಯಾಂಡೆ ಅವರು ಸುತ್ತಲಿನ ಪರಿಸರದ ಮಹತ್ವ, ಮಣ್ಣಿನ ಗುಣಧರ್ಮ ಕುರಿತು, ಶಿವಕುಮಾರ ಅವರು ವಿಜ್ಞಾನ ಚಮತ್ಕಾರ ಕುರಿತು ತಿಳಿಸಿಕೊಟ್ಟರು. ಸುಮಾರು 20 ಅಡಿ ಎತ್ತರದ ಜೋತು ಬಿಟ್ಟ ಹಗ್ಗ (ರೋಪ್ ಮಲ್ಲಕಂಬ)ದಲ್ಲಿ ಮತ್ತು ಮಲ್ಲಕಂಬದ ವಿವಿಧ ಯೋಗಾಸನ ಭಂಗಿ ಕುರಿತು ತರಬೇತುದಾರರಾದ ಸಂತೋಷ, ದಾದಾಪೀರ, ಮೈಲಾರಿ ಅವರು ಮಲ್ಲಕಂಬ, ರೋಪ್ ಕಂಬಗಳ ಮೇಲೆ ಚಕ್ರಾಶನ, ಪದ್ಮಾಸನ, ಪಾರ್ಶ್ವಸನ, ಉರ್ದ್ವಾಸನ, ಭುಜಂಗಾಸನ ಸೇರಿದಂತೆ ವಿವಿಧ ಯೋಗಾಸನ ಭಂಗಿಗಳ ಕುರಿತು ತರಬೇತಿ ನೀಡಿದರು. ಕಾನೂನು ಮತ್ತು ಪೊಲೀಸ್ ವ್ಯವಸ್ಥೆ ಕುರಿತು ಪಿಎಸ್ಐ ಡಿ.ಬಿ. ಪಾಟೀಲ ಮಾಹಿತಿ ನೀಡಿದರು.
ಕೈ ಜೋಡಿಸಿದ ಗ್ರಾಮಸ್ಥರು: ಶಿಬಿರದ ಸಂಪೂರ್ಣ ಖರ್ಚು, ವೆಚ್ಚಗಳನ್ನು ಗ್ರಾಮಸ್ಥರೇ ದೇಣಿಗೆ ಮೂಲಕ ನೀಡಿ ಶಿಬಿರಾರ್ಥಿ ಮಕ್ಕಳಿಗೆ ಪೆನ್ನು, ಪುಸ್ತಕ, ಪೆನ್ಸಿಲ್, ಬಣ್ಣ ಹಾಳೆ, ಬಟ್ಟೆ ಮುಂತಾದ ಪಾಠ ಮತ್ತು ಪೀಠೋಪಕರಣಗಳಿಗೆ ಅಗತ್ಯವಿರುವ ಸಾಮಗ್ರಿಗಳ ವ್ಯವಸ್ಥೆ ಮಾಡಿಕೊಟ್ಟಿದ್ದರು.
-ಪಿ.ಎಸ್. ಪಾಟೀಲ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

