ಬಿಟಿ ಹತ್ತಿ ಬೆಳೆ ವೀಕ್ಷಿಸಿದ ವಿಜ್ಞಾನಿಗಳ ತಂಡ
ಕನ್ನಡಪ್ರಭ ವಾರ್ತೆ, ರೋಣ, ಜ. 10
ಕನಕ ಬಿ.ಟಿ ಹತ್ತಿ ಬಿತ್ತಣೆ ಮಾಡಿ ಕೈಸುಟ್ಟುಕೊಳ್ಳಲಾಗಿದೆ ಎಂಬ ರೈತರ ದೂರಿನ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ವಿಶ್ವ ವಿದ್ಯಾಲಯದ ವಿಜ್ಞಾನಿಗಳಾದ ತಳಿ ಅಭಿವೃದ್ಧಿ ಶಾಸ್ತ್ರಜ್ಞ ಡಾ. ಎಸ್.ಎಸ್. ಪಾಟೀಲ ಮತ್ತು ಬೆಳೆ ಶರೀರ ಕ್ರಿಯಾ ಶಾಸ್ತ್ರಜ್ಞ ಡಾ. ಬಿ.ಸಿ. ಪಾಟೀಲ ನೇತೃತ್ವದ ತಂಡ ಸೋಮವಾರ ತಾಲೂಕಿನ ಮೆಣಸಗಿ, ಹೊಳೆಆಲೂರು, ಹುಲ್ಲೂರು, ಸಂದಿಗವಾಡ ಗ್ರಾಮದ ಜಮೀನುಗಳಲ್ಲಿನ ಬಿ.ಟಿ ಹತ್ತಿ ಬೆಳೆದ ಹೊಲಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
ಕನಕ ಬಿ.ಟಿ. ಹತ್ತಿ ಬೆಳೆದ ಸಂದಿಗವಾಡ ಗ್ರಾಮದ ರೈತರಾದ ಸಂಗನಗೌಡ ಹುಲ್ಲೂರ, ಕುಬೇರಗೌಡ ಭೂಸಗೌಡ್ರ, ಯಂಕಪ್ಪ ಜಾಲಿಹಾಳ ಅವರು ವೀಕ್ಷಣಾ ತಂಡದೆದುರು ಬಿ.ಟಿ. ಹತ್ತಿ ಬೆಳೆದು 6 ತಿಂಗಳಾದರೂ ಗಿಡದಲ್ಲಿ ಯಾವುದೇ ರೀತಿಯ ಕಾಯಿಗಳಾಗಿಲ್ಲ. ಬೆಳೆಯೂ ಕುಂಠಿತವಾಗಿದ್ದು, ಇಳುವರಿ ಬಾರದಂತಾಗಿದೆ. ಕೆಲವೆಡೆ ಗಿಡದಲ್ಲಿ ಕಾಯಿ ಬಿಟ್ಟಿರುವುದಿಲ್ಲ. ಇದರಿಂದ ಲಕ್ಷಾಂತರ ರು. ಗಳ ಬೆಳೆ ಹಾನಿಯಾಗಿದೆ. ಬಂಡವಾಳ ಹಾಕಿದ ಖರ್ಚು ಬಾರದಂತಾಗಿದೆ. ಅಲ್ಲದೆ, ಬೀಜ ವಿತರಣೆಯಲ್ಲಿಯೂ ಮೋಸವಾಗಿದೆ. ಸರ್ಕಾರ ರೈತರ ಸಮಸ್ಯೆಗೆ ಸ್ಪಂದಿಸಿ ಪರಿಹಾರ ನೀಡಲು ಮುಂದಾಗಬೇಕು. ಇಲ್ಲದಿದ್ದಲ್ಲಿ ರೈತರ ಸ್ಥಿತಿ ಶೋಚನೀಯವಾಗಲಿದೆ ಎಂದು ಅಳಲು ತೋಡಿಕೊಂಡರು.
ಈ ಕುರಿತು ವಿಜ್ಞಾನಿಗಳಾದ ಡಾ. ಎಸ್.ಎಸ್. ಪಾಟೀಲ ಮತ್ತು ಡಾ. ಬಿ.ಸಿ. ಪಾಟೀಲ ಮಾತನಾಡಿ, ರೋಣ ತಾಲೂಕಿನಲ್ಲಿ ಸುಮಾರು 1,400 ಹೆಕ್ಟೇರ್ನಷ್ಟು ಬಿ.ಟಿ. ಹತ್ತಿ ಬಿತ್ತನೆ ಮಾಡಲಾಗಿದೆ. ಕನಕ ಬಿ.ಟಿ. ತಳಿಯು ಮಿರಿಡ್ ಬಿಗ್ ಮತ್ತು ಮಿಡಚಿ, ನೋಣಕ್ಕೆ ಬೇಗ ತುತ್ತಾಗುವ ತಳಿಯಾಗಿದೆ. ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ಇಲ್ಲಿ ಕಂಡು ಬಂದಿದೆ. ಮಿಡಚಿ, ನೋಣ ಮುಖ್ಯವಾಗಿ ಹತ್ತಿ ಮೊಗ್ಗಿನಲ್ಲಿ ತತ್ತಿ ಇಟ್ಟು ಮರಿ ಮಾಡುತ್ತವೆ. ಮರಿಗಳು ಹತ್ತಿ ಗಿಡದ ಮೊಗ್ಗಿನ ಒಳಭಾಗವನ್ನು ತಿನ್ನುವುದರಿಂದ ಹೂವು ಉದುರಿ ಕಾಯಿಗಳು ಹಿಡಿಯದಂತಾಗುತ್ತವೆ. ಈ ಬಾಧೆಯೇ ಈ ವರ್ಷ ಅತಿಯಾಗಿ ಕಂಡು ಬಂದಿದೆ. ಅಲ್ಲದೇ ಒಂದು ಭಾಗದಲ್ಲಿ ಬಿತ್ತನೆ ಮಾಡಿದ ಕನಕ ಬಿ.ಟಿ. ಹತ್ತಿ ಬೀಜವು ಕಳೆಪೆಯಾಗಿದ್ದು ಕಂಡು ಬಂದಿದೆ. ಈ ಕುರಿತು ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು. ತಂಡದ ಜತೆ ರೋಣ ತಾಲೂಕು ಕೃಷಿ ಸಹಾಯಕ ನಿರ್ದೇಶಕ ಎಸ್.ಎ. ಸೂಡಿಶೆಟ್ಟರ್, ವಿ.ಎಸ್. ಶಾಂತಗೌಡ್ರ, ಎಸ್.ಆರ್. ದೊಡ್ಡಮನಿ, ಎಸ್.ಎಸ್. ಬಂಡಿಹಾಳ, ಬಿ.ಎಂ.ಚಳಗೇರಿ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

