ಗದಗ

ಕಸದತ್ತ ಕಣ್ಣು ಹಾಯಿಸದ ನಗರಸಭೆ

Published On :

 ಶಿವಕುಮಾರ ಕುಷ್ಟಗಿ
ಕನ್ನಡಪ್ರಭ ವಾರ್ತೆ, ಗದಗ, ಜೂ. 28
ಗದಗ- ಬೆಟಗೇರಿ ಅವಳಿ ನಗರದಲ್ಲಿ ಕಸದ ಸಮಸ್ಯೆ ವ್ಯಾಪಕವಾಗಿದ್ದು, ನಗರಸಭೆ ಅಧಿಕಾರಿಗಳು ಮಾತ್ರ ಕೇವಲ ಕಾಟಾಚಾರಕ್ಕೆ ಎನ್ನುವಂತೆ ಮುಖ್ಯ ರಸ್ತೆಗಳಲ್ಲಿರುವ ಕಸ ಹಾಗೂ ಕಂಟೇನರ್‌ಗಳನ್ನು ಸ್ವಚ್ಛಗೊಳಿಸಿರುವುದನ್ನು ಹೊರತುಪಡಿಸಿ, ಕಸ ಸಂಪೂರ್ಣ ಸ್ವಚ್ಛ ಮಾಡುವತ್ತ ಗಮನ ನೀಡಿಲ್ಲ. ಅವಳಿ ನಗರದಲ್ಲಿ ಮಳೆಗಾಲದಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ರೋಗಗಳು ಹೆಚ್ಚಾಗುವ ಸಾಧ್ಯತೆ ಇದೆ.
ಅವಳಿ ನಗರದಲ್ಲಿ ಘನತ್ಯಾಜ್ಯ ವಿಲೇವಾರಿ ದೊಡ್ಡ ಸಮಸ್ಯೆಯಾಗಿ ಮಾರ್ಪಟಿದೆ. ಕಸವನ್ನು ಮೊದಲು ಹೊಂಬಳ ರಸ್ತೆಯ ಪಕ್ಕದಲ್ಲಿ ಹಾಕಲಾಗುತ್ತಿತ್ತು. ನಂತರ ಅದನ್ನು ಬಳಗಾನೂರ ರಸ್ತೆಗೆ ಸ್ಥಳಾಂತರಿಸಲಾಗಿದೆ. ಆದರೆ, ಈ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಭೇಟಿ ನೀಡಿದಲ್ಲಿ ಸತ್ಯ ಗೋಚರವಾಗುತ್ತದೆ. ಅಲ್ಲಿ ಕಸದ ಸಮರ್ಪಕ ನಿರ್ವಹಣೆಗೆ ಸಿಬ್ಬಂದಿಯೇ ಇಲ್ಲ. ಇನ್ನು ಸಂಗ್ರಹವಾಗುವ ಕಸವನ್ನು ವೈಜ್ಞಾನಿಕವಾಗಿ ವಿಂಗಡಿಸುವ ಕೆಲಸ ನಡೆಯಬೇಕು. ಆದರೆ, ಅವಳಿ ನಗರದ ಘನತ್ಯಾಜ್ಯ ವಿಲೇವಾರಿ ಘಟಕದಲ್ಲಿ ಇಲ್ಲಗಳ ಸರಮಾಲೆಯೇ ಇದೆ.
ಪರಿಸರ ಅಭಿಯಂತರೇ ಇಲ್ಲ
2 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಗದಗ- ಬೆಟಗೇರಿ ಅವಳಿ ನಗರದಲ್ಲಿ ಪ್ರತಿ ನಿತ್ಯವೂ 75 ಕ್ವಿಂಟಲ್‌ಗೂ ಅಧಿಕ ಕಸ ಉತ್ಪತ್ತಿಯಾಗುತ್ತದೆ. ಇದನ್ನು ಸಮರ್ಪಕವಾಗಿ ಸಾಗಾಟ ಮಾಡಬೇಕಾದಲ್ಲಿ 10ಕ್ಕೂ ಹೆಚ್ಚು ವಾಹನಗಳು ಬೇಕು. ಆದರೆ ಸದ್ಯ ನಗರಸಭೆಯಲ್ಲಿ 5 ಟ್ರ್ಯಾಕ್ಟರ್‌ಗಳು ಮಾತ್ರ ಇದ್ದು, ಇನ್ನಷ್ಟು ವಾಹನಗಳ ಖರೀದಿಗೆ ಆಡಳಿತ ಮಂಡಳಿ ಒಪ್ಪಿಗೆ ಬೇಕಾಗಿದೆ. ನಗರಸಭೆಗೆ ಮಂಜೂರಾಗಿರುವುದು ಇಬ್ಬರು ಪರಿಸರ ಅಭಿಯಂತರ ಹುದ್ದೆ ಆದರೆ, ನಗರಸಭೆಯಲ್ಲಿ ಪೂರ್ಣಾವಧಿ ಪರಿಸರ ಅಭಿಯಂತರ ಹುದ್ದೆ ಖಾಲಿ ಇದ್ದು,  ಒಬ್ಬ ಅಧಿಕಾರಿ 3 ದಿನ ಲಕ್ಷ್ಮೇಶ್ವರದಲ್ಲಿ, 3 ದಿನ ಗದಗನಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರು ಎರಡೂ ಕಡೆಗಳಲ್ಲಿ ನ್ಯಾಯ ಒದಗಿಸಲು ಸಾಧ್ಯವಾಗದೆ ಎರಡೂ ಪಟ್ಟಣಗಳ ಜನತೆ ತೊಂದರೆ ಅನುಭವಿಸುತ್ತಿದ್ದಾರೆ.
ಸದಸ್ಯರ ಆರೋಪ: ಕಸದ ಸಮಸ್ಯೆ ಬಗ್ಗೆ ಸಾರ್ವಜನಿಕರು ಮಾತನಾಡುವುದು ಸಾಮಾನ್ಯ. ಆದರೆ, ವಿಚಿತ್ರವೆಂದರೆ ನಗರಸಭೆಯ ಸದಸ್ಯರೇ ಅವಳಿ ನಗರದಲ್ಲಿ ಕಸದ ಸಮಸ್ಯೆ ತೀವ್ರವಾಗಿದೆ. ಈ ಬಗ್ಗೆ ಅಧಿಕಾರಿಗಳು ಗಮನ ನೀಡುತ್ತಿಲ್ಲ. ವಾರ್ಡ್‌ಗಳಲ್ಲಿನ ಸಮಸ್ಯೆಯ ಕುರಿತು ಜನತೆ ಕೇಳಿದರೆ ನಾವೇನು ಉತ್ತರ ಹೇಳಬೇಕು ಎಂದು ಸಾಮಾನ್ಯ ಸಭೆ ಅಲವತ್ತುಕೊಳ್ಳುತ್ತಿದ್ದಾರೆ. ಇದು ಕಸದ ಸಮಸ್ಯೆಗೆ ಹಿಡಿದ ಕನ್ನಡಿಯಾಗಿದೆ.





ಪ್ರತಿಕ್ರಿಯೆಗೆ ಸಿಗಲಿಲ್ಲ
ಕಸದ ಸಮಸ್ಯೆ ಪ್ರತಿಕ್ರಿಯೆಗಾಗಿ ನಗರಸಭೆಯ ಪೌರಾಯುಕ್ತರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಅವರು ಲಭ್ಯವಾಗುತ್ತಿಲ್ಲ. ಇನ್ನು ಪರಿಸರ ಅಭಿಯಂತರ ಯಾವುದೇ ಕರೆಗಳನ್ನು ಸ್ವೀಕರಿಸುತ್ತಿಲ್ಲ. ಇದರಿಂದಲೇ ಅವಳಿ ನಗರದ ಕಸದ ಸಮಸ್ಯೆಯ ಬಗ್ಗೆ ಅಧಿಕಾರಿಗಳು ಅದೆಷ್ಟು ಗಮನ ನೀಡುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.