ಶಿಲ್ಪ ಕಾಯಕಲ್ಪ ಕಾಮಗಾರಿ ನೆನೆಗುದಿಗೆ
-ವಿಶೇಷ ವರದಿ
ಗಜೇಂದ್ರಗಡ: ಸಮೀಪದ ಸೂಡಿ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಚಾಲುಕ್ಯ ಅರಸರ ಕಾಲದ ಅದ್ಭುತ ಶಿಲ್ಪಕಲಾ ಸಂಪತ್ತು ಕಾಯಕಲ್ಪ ನೀಡುವ ಯೋಜನೆಗೆ ಚಾಲನೆ ದೊರೆತು ತಿಂಗಳುಗಳೇ ಗತಿಸಿದರೂ ಕಾಮಗಾರಿ ಇನ್ನೂ ಆರಂಭಗೊಳ್ಳದಿರುವುದು ಗ್ರಾಮಸ್ಥರ ಕೆಂಗಣ್ಣಿಗೆ ಗುರಿಯಾಗಿದೆ.
ಪ್ರಾಚ್ಯವಸ್ತು ಸಂಗ್ರಹಾಲಯ ಮತ್ತು ಪರಂಪರೆ ಇಲಾಖೆ ಮೈಸೂರು ವತಿಯಿಂದ 13ನೇ ಹಣಕಾಸಿನಲ್ಲಿ ಜೋಡು ಕಳಸದ ದೇಗುಲ ಸಂರಕ್ಷಣಾ ಕಾಮಗಾರಿಗೆ ರು. 33 ಲಕ್ಷ, ಮಲ್ಲಿಕಾರ್ಜುನ ದೇವಾಲಯಕ್ಕೆ ರು. 44.38 ಲಕ್ಷ, ಪುರಾತನ ಬಾವಿ ಸಂರಕ್ಷಣಾ ಕಾಮಗಾರಿಗೆ ರು. 26.63 ಲಕ್ಷ ವೆಚ್ಚದಲ್ಲಿ ಸ್ಮಾರಕಗಳ ಪುನರುಜ್ಜೀವನ ಕಾರ್ಯ ನಡೆಯಬೇಕಿತ್ತು. ಆದರೆ ಇಲ್ಲಿಯವರೆಗೂ ಕಾಮಗಾರಿ ನಡೆಯದ ಹಿನ್ನೆಲೆಯಲ್ಲಿ ಜೋಡು ಕಳಸ ದೇಗುಲ ಸುತ್ತಲಿನ ಆವರಣ ಜಾಲಿಮುಳ್ಳು ಕಂಟಿಯಿಂದ ಆವರಿಸಿದೆ. 10ನೇ ಶತಮಾನದ ಚಾಲುಕ್ಯ ರಾಣಿ ಅಕ್ಕಾದೇವಿಯ ರಾಜಧಾನಿಯಾಗಿದ್ದ ಸೂಡಿ ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿ ಮೆರೆಯುವಾಗ ನಿರ್ಮಾಣಗೊಂಡ ಶಿಲ್ಪಕಲೆಗಳು ಜನಪ್ರತಿನಿಧಿಗಳ ನಿರ್ಲಕ್ಷ್ಯಕ್ಕೊಳಗಾಗಿದ್ದವು. ಅವುಗಳ ಸಂರಕ್ಷಣೆಗೆ ಈ ಯೋಜನೆ ಜಾರಿಗೆ ತರಲಾಗಿದೆ.
ಕರ್ನಾಟಕ ಪ್ರಾಚೀನ ವಾಸ್ತು ಶಿಲ್ಪಕಲೆಯ ಪ್ರತೀಕಗಳಾದ ಜೋಡು ಕಳಸದ (ನಾಗೇಶ್ವರ) ದೇಗುಲ, ಅಕ್ಕೇಶ್ವರ (ಅನಂತಶಯನ, ಮಲ್ಲಿಕಾರ್ಜುನ), ನಗರೇಶ್ವರ ದೇವಾಲಯ, ನಾಗಕುಂಡ ಪುಷ್ಕರಣಿ, ಹಂಪಿ ಸ್ವರೂಪದ ಬೃಹದಾಕಾರದ ಏಕಶಿಲೆಯ ಕಡಲೆಕಾಳು ಗಣಪತಿ, ನಂದಿ, ಈಶ್ವರ ವಿಗ್ರಹ ಇರುವ ಮಂಟಪಗಳು, ಶಿಲಾಶಾಸನಗಳು ಜೀರ್ಣೋದ್ಧಾರ ಆಗಬೇಕಾಗಿದೆ. ಕಲ್ಯಾಣದ ಚಾಲುಕ್ಯರ ಆಳ್ವಿಕೆ ಕಾಲದಲ್ಲಿ 200 ವರ್ಷಗಳವರೆಗೆ ವೈಭವಯುತವಾಗಿದ್ದ ಜೋಡುಕಳಸದ (ನಾಗೇಶ್ವರ) ದೇಗುಲ ಶಿಥಿಲಾವಸ್ಥೆಗೆ ತಲುಪಿದೆ.
ವಾಸ್ತು ಶಿಲ್ಪದ ಪ್ರಾಧ್ಯಾಪಕ ಆ್ಯಡ್ಂ ಹಾರ್ಡಿ, ನೆದರಲೆಂಡ್ನ ವಾಸ್ತು ತಜ್ಞ ಜೆರಾರ್ಡ್ ಶೋಕಿಮಾ ಮತ್ತು ಕ್ಯಾಲಿಪೋರ್ನಿಯಾ ವಿಶ್ವವಿದ್ಯಾಲಯದ ಇತಿಹಾಸ ಸಂಶೋಧನಾ ವಿದ್ಯಾರ್ಥಿಗಳು ಸೂಡಿ ಗ್ರಾಮಕ್ಕೆ ಹಲವು ವರ್ಷಗಳ ಹಿಂದೆ ಭೇಟಿ ಕೊಟ್ಟು, ಅದ್ಭುತ ಶಿಲ್ಪಕಲಾ ಸಂಪತ್ತನ್ನು ಕಂಡು ನಿಬ್ಬೆರಗಾಗಿ ಪ್ರಶಂಸಿಸಿದ್ದಾರೆ. ವಿದೇಶಿಗರ ಹೆಗ್ಗಳಿಕೆಗೆ ಪಾತ್ರವಾಗಿರುವ ಇಂಥ ಸ್ಮಾರಕಗಳ ಉಳಿವಿಗೆ ಆಡಳಿತ ಮುಂದಾಗಿರುವುದು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರವಾಗಿತ್ತು. ಆದರೆ ಕಾಮಗಾರಿ ಪ್ರಾರಂಭಗೊಳ್ಳದಿರುವುದು ಇತಿಹಾಸ ತಜ್ಞರು ಹಾಗೂ ಪ್ರವಾಸಿಗರನ್ನು ಕೆರಳಿಸುವಂತೆ ಮಾಡಿದೆ. ಇನ್ನಾದರೂ ಆಡಳಿತ ವ್ಯವಸ್ಥೆ ಕಾಮಗಾರಿ ಚುರುಕುಗೊಳಿಸಲು ಮುಂದಾಗಬೇಕೆನ್ನುವುದು ನಾಗರಿಕರ ಅಂಬೋಣವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

