ಹಾಸ್ಟೆಲ್ ಹೊರ ಗುತ್ತಿಗೆ ನೌಕರರ ಪ್ರತಿಭಟನೆ
ಲಿಂಗಸ್ಗೂರು: ತಾಲೂಕಿನ ಮುದಗಲ್ ವೆಂಕಟರಾಯನಪೇಟೆ ಬಿಸಿಎಂ ಹಾಸ್ಟೆಲ್ ಮಹಿಳಾ ನೌಕರರ ಮೇಲೆ ವಿನಾಕಾರಣ ಕಿರುಕುಳ ನೀಡುವ ಜೊತೆಗೆ ಅವಾಚ್ಯ ಶಬ್ದಗಳಿಂದ ನಿಂದಿಸುವ ಸೂಪರಿಟೆಂಡೆಂಟ್ರ ಮೇಲೆ ಕ್ರಮಕ್ಕೆ ಆಗ್ರಹಿಸಿ ಸರ್ಕಾರಿ ವಸತಿ ನಿಲಯಗಳ ಹೊರ ಗುತ್ತಿಗೆ ನೌಕರರು ಸೋಮವಾರ ಪ್ರತಿಭಟಟಿಸಿದರು. ಮೆಟ್ರಿಕ್ ಪೂರ್ವ ಮತ್ತು ನಂತರದ ನಿಲಯಗಳು, ಮೊರಾರ್ಜಿ ದೇಸಾಯಿ, ಕಿತ್ತೂರು ಚೆನ್ನಮ್ಮ, ಏಕಲವ್ಯ ವಸತಿ ಶಾಲೆಗಳಲ್ಲಿ ಅಡುಗೆದಾರರು, ಸಹಾಯಕರು, ಜವಾನಗಾರ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಸುಮಾರು ನಾಲ್ಕು ತಿಂಗಳಿಂದ ವೇತನ ನೀಡಿಲ್ಲ. ಈ ಕುರಿತು ಕೇಳಿದರೆ ಸೂಪರಿಟೆಂಡೆಂಟ್ರವರು ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿದರು. ವೆಂಕಟರಾಯನ ಪೇಟೆಯ ಬಿಸಿಎಂ ಹಾಸ್ಟೆಲ್ ನೌಕರ ಹನುಮಂತ ಶರಣಪ್ಪ ಗೂಳಿ ಎಂಬುವರನ್ನು ತೆಗೆದು ಹಾಕಿದ್ದು, ಇದರಿಂದ ಕಾರ್ಮಿಕರಲ್ಲಿ ಭೀತಿ ಮೂಡಿಸಿದೆ. ಸೂಪರಿಟೆಂಡೆಂಟ್ ಬೆದರಿಕೆ ಹಾಕಿ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿದ್ದಾರೆ. ಕೂಡಲೇ ಸಮಸ್ಯೆ ಬಗೆಹರಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಎಐಟಿಯುಸಿಗೆ ಉತ್ತಮ ಪ್ರತಿಕ್ರಿಯೆ: ಬಾಷುಮಿಯಾ
ಸಿಂಧನೂರು: ಹಟ್ಟಿ ಚಿನ್ನದ ಗಣಿಯ ಸಿಬ್ಬಂದಿ ಮತ್ತು ಕಾರ್ಮಿಕ ಸಂಘದ ಚುನಾವಣಾ ಪ್ರಕ್ರಿಯೆ ಆರಂಭಗೊಂಡಿದ್ದು, ಎಐಟಿಯುಸಿಗೆ ಪುನಃ ಜಯಸಿಗಲಿದೆ ಎಂದು ಸಂಘಟನೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಬಾಷುಮಿಯಾ ತಿಳಿಸಿದ್ದಾರೆ. ನಗರದ ಎಪಿಎಂಸಿಯಲ್ಲಿ ಜಿಲ್ಲಾ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾರ್ಮಿಕ ಸಂಘದಿಂದ ಹಲವಾರು ಜನೋಪಯೋಗಿ ಕೆಲಸಗಳು ಆಗಿರುವುದರಿಂದ ಕಾರ್ಮಿಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಹಟ್ಟಿ ಕಾರ್ಮಿಕ ಸಂಘದ ಮುಖಂಡ ಶಾಂತಪ್ಪ ಮಳ್ಳಿ ಮಾತನಾಡಿ, ಕಾರ್ಮಿಕರ ಮಕ್ಕಳಿಗೆ ಉದ್ಯೋಗ, ಕಾರ್ಮಿ ಕರಿಗೆ ವೈದ್ಯಕೀಯ, ನಿವೃತ್ತಿ, ಶೇ.23ರಷ್ಟು ವೇತನ ಒಪ್ಪಂದ ಆ್ಯಂಡ್ ಗ್ರೌಂಡ್ ನೌಕರರಿಗೆ ಶೇ.15ರಷ್ಟು ಮನೆ ಬಾಡಿಗೆ ಹೆಚ್ಚಳ ಹಲವು ರೀತಿಯಲ್ಲಿ ಕಾರ್ಮಿಕರ ಪರ ಕೆಲಸ ಮಾಡಿರುವುದರಿಂದ ಈ ಬಾರಿಯೂ ಕಾರ್ಮಿಕರನ್ನು ತಮ್ಮನ್ನು ಬೆಂಬಲಿಸಲಿದ್ದಾರೆಂದು ವಿವರಿಸಿದರು. ಎಐಟಿಯುಸಿ ಮುಖಂಡ ವೆಂಕನಗೌಡ ಗದ್ರಟಗಿ, ಎಐಟಿಯುಸಿ ಜಿಲ್ಲಾ ಘಟಕದ ಅಧ್ಯಕ್ಷ ಸಂಗಯ್ಯ ಚಿಂಚರಿಕಿ ಇದ್ದರು.
ಪ್ರಶಸ್ತಿ ವಿಜೇತರಿಗೆ ಸನ್ಮಾನ
ರಾಯಚೂರು: ಡಾ. ರಾಜಕುಮಾರ್ ಅಭಿಮಾನಿಗಳ ಸಂಘದಿಂದ ವಿ.ಎಸ್. ಕಾಂತನವರಿಗೆ ನವರಂಗ ಭೂಷಣ ಪ್ರಶಸ್ತಿ ಪ್ರದಾನ ಮತ್ತು ಛಾಯಾಗ್ರಾಹಕ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ದೊರೆತ ಹೂಗಾರ್ ಸ್ಮಾರಕ ಮಾಧ್ಯಮ ಪ್ರಶಸ್ತಿ ಹಿನ್ನೆಲೆಯಲ್ಲಿ ಹಿಂದಿ ಸಮನ್ವಯ ಸಮಿತಿಯಿಂದ ಇತ್ತೀಚೆಗೆ ಸನ್ಮಾನ ಸಮಾರಂಭ ಹಾಗೂ ಕೃತಿ ಲೋಕರ್ಪಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಹಿಂದಿ ಸಮನ್ವಯ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ. ಅರುಣಾ ಹಿರೇಮಠ ಅವರು ಕಾಂತನವರ್ ಮತ್ತು ಮಲ್ಲಿಕಾರ್ಜುನ ಸ್ವಾಮಿ ಅವರನ್ನು ಸನ್ಮಾಸಿದರು. ಹಾಗೆಯೇ ಡಾ. ಅರುಣಾ ಹಿರೇಮಠ ಅವರ 'ರಾಯಚೂರಿನಲ್ಲಿ ಹಿಂದಿ ಚಟುವಟಿಕೆಗಳು' ಎಂಬ ಪುಸ್ತಕವನ್ನು ಮಧು ಪಾಂಡೆ, ಮಾನ್ವಿ ಅವರು ಲೋಕಾರ್ಪಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ರಮೇಶ ಮಾಲ್ಚಿಮಣಿ ಮಾತನಾಡಿದರು. ವಿದ್ಯಾ ಜಗನ್ನಾಥ್ ಅವರು ಕಾಂತನವರ್ ರಚಿತ ಪ್ರೇರಣಾ ಹಿಂದಿ ಕವಿತೆ ಹಾಡಿದರು. ಮಹೇಶ್ವರಿ ಹಿರೇಮಠ ಶಾಯಿರಿ ಪ್ರಸ್ತುತ ಪಡಿಸಿದರು. ಪ್ರೊ. ಪಿ. ಮಲ್ಲಣ್ಣ, ಸತ್ಯನಾರಾಯಣ ಮುಂಜುಂದಾರ್, ಎಸ್.ಎಂ. ಶಶಿಧರ್, ಆರ್.ಜಿ. ಶಾಸ್ತ್ರಿ, ವೆಂಕಟೇಶ ನವಲಿ, ಕಮಲಾಕರ್, ಮಾಧವ್, ಮಲ್ಲಿಕಾರ್ಜುನ ಸ್ವಾಮಿ ಆಲೂರು ಮಠ, ಮಂಜುನಾಥ ಗುತ್ತೇದಾರ್, ಶ್ಯಾಮಸುಂದರ ಉಪಸ್ಥಿತರಿದ್ದರು.
ನಿವೃತ್ತ ಸಿಬ್ಬಂದಿಗೆ ಬೀಳ್ಕೊಡುಗೆ
ರಾಯಚೂರು: ಶಿಕ್ಷಣ ಇಲಾಖೆಯಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದ ಆರ್.ಪಿ. ದೇಸಾಯಿ ನಿವೃತ್ತಿ ಹೊಂದಿದ ಹಿನ್ನೆಲೆ ಸನ್ಮಾನಿಸಿ ಬೀಳ್ಕೊಡಲಾಯಿತು. 1986ರಲ್ಲಿ ಇಲಾಖೆಯಲ್ಲಿ ಸೇವೆ ಆರಂಭಿಸಿದ ಅವರು ವಯೋನಿವೃತ್ತಿ ಹೊಂದಿದ ಹಿನ್ನೆಲೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಸನ್ಮಾನಿಸಿ ಬೀಳ್ಕೊಡಲಾಯಿತು. ಬಿಇಒ ಮಲ್ಲಿಕಾರ್ಜುನ ಮತ್ತು ಸಿಬ್ಬಂದಿ ನಿವೃತ್ತರನ್ನು ಸನ್ಮಾನಿಸಿದರು.
5ರೊಳಗೆ ಅತಿಥಿ ಉಪನ್ಯಾಸಕರು ಹಾಜರಾಗಿ
ಸಿಂಧನೂರು: ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯದಲ್ಲಿ 2014-15ನೇ ಸಾಲಿನ ಶೈಕ್ಷಣಿಕ ಸೇವೆಗೆ ಹಾಜರಾಗಬಯಸುವ ಅತಿಥಿ ಉಪನ್ಯಾಸಕರು ಜು.5ರೊಳಗೆ ತಮ್ಮ ಅಂಕಪಟ್ಟಿಗಳ ಜೆರಾಕ್ ಪ್ರತಿಗಳೊಂದಿಗೆ ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಅತಿಥಿ ಉಪನ್ಯಾಸಕರ ಸಂಘದ ತಾಲೂಕಾಧ್ಯಕ್ಷ ಡಾ. ಬಸವರಾಜ ಪಿ. ನಾಯಕ ತಿಳಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿಕೆ ಅವರು, ಪ್ರಸ್ತುತ 2013-14ನೇ ಸಾಲಿನಲ್ಲಿ ಸೇವೆ ಸಲ್ಲಿಸಿರುವ ಉಪನ್ಯಾಸಕರು ಈ ಶೈಕ್ಷಣಿಕ ವರ್ಷವು ಮುಂದುವರೆಯುತ್ತಾರೆ ಎಂದು ಕಾಲೇಜಿನ ಶಿಕ್ಷಣ ಇಲಾಖೆ ಬೆಂಗಳೂರು ಆದೇಶ ಪತ್ರದಲ್ಲಿ ತಿಳಿಸಿದೆ. ಜು.5ರ ನಂತರ ಬರುವ ಉಪನ್ಯಾಸಕರನ್ನು ಸೇವೆಗೆ ಪರಿಗಣಿಸಲಾಗುವುದಿಲ್ಲ ಎಂದು ತಿಳಿಸಿದ್ದಾರೆ.
ಮೂಲ ಸೌಕರ್ಯಕ್ಕಾಗಿ ಪ್ರಯತ್ನ
ಸಿಂಧನೂರು: ನಗರ ಯೋಜನಾ ಪ್ರಾಧಿಕಾರದ ಸೌಕರ್ಯ ಒದಗಿಸಲು ಪ್ರಯತ್ನ ಮಾಡುವುದಾಗಿ ನಯೋಪ್ರಾ ನೂತನ ಅಧ್ಯಕ್ಷ ಎಸ್.ಶರಣೇಗೌಡ ಭರವಸೆ ನೀಡಿದರು. ನೂತನ ಲೇಔಟ್ಗಳಿಗೆ ಮೂಲ ಸೌಕರ್ಯ ಕಲ್ಪಿಸಬೇಕಿದೆ. ಮೊದಲ ಭಾಗವಾಗಿ ಶೇ.40ರಷ್ಟು, ಮೂಲಸೌಕರ್ಯ ಪರಿಶೀಲಿಸಿ 2ನೇ ಹಾಗೂ 3ನೇ ಹಂತದಲ್ಲಿ ಶೇ.30ರಷ್ಟು ಲೇಔಟ್ಳಿಗೆ ಅನುಮೋದನೆ ನೀಡಲಾಗುವುದೆಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ನಯೋಪ್ರಾ ಕಟ್ಟಡಕ್ಕೆ ಇಲಾಖೆ ಅನುಮತಿ ನೀಡಿದ್ದು, 75 ಲಕ್ಷ ವೆಚ್ಚದ ಕಾಮಗಾರಿಗೆ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದರು.
ರಾಷ್ಟ್ರೀಯ ಯುವ ಪ್ರಶಸ್ತಿಗೆ ಅರ್ಜಿ ಕರೆ
ರಾಯಚೂರು: ಜಿಲ್ಲೆಯಲ್ಲಿ ಯುವಜನ ಸೇವೆ ರಾಷ್ಟ್ರೀಯ ಅಭಿವೃದ್ಧಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ರಾಷ್ಟ್ರೀಯ ಯುವ ಪ್ರಶಸ್ತಿಗೆ ಅರ್ಜಿ ಕರೆಯಲಾಗಿದೆ. 13ರಿಂದ 15 ವರ್ಷ ವಯೋವಾನದ ಯುವಕ- ಯುವತಿಯರಿಗೆ ಹಾಗೂ ಸಂಘಗಳಿಗೆ 2012- 13ನೇ ಸಾಲಿನ ರಾಷ್ಟ್ರೀಯ ಯುವ ಪ್ರಶಸ್ತಿ ನೀಡಲಾಗುವುದು. ಜಿಲ್ಲೆಯ ನೋಂದಾಯಿತ ಅರ್ಹ ಯುವಕ- ಯುವತಿಯರು, ಸಂಘಗಳ ಸದಸ್ಯರು ಜು.10ರೊಳಗೆ ಯುವಜನ ಸೇವಾಧಿಕಾರಿಗಳಿಂದ ಅರ್ಜಿ ಪಡೆದು ಸಲ್ಲಿಸಬಹುದು. ನಿಗದಿತ ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ದೂ. 08532-233330 ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.
ನಿಯಮಬಾಹಿರ ಮದ್ಯದಂಗಡಿ: ಜಿಲ್ಲಾಧಿಕಾರಿ ನಿರ್ಲಕ್ಷ್ಯಕ್ಕೆ ಖಂಡನೆ
ರಾಯಚೂರು: ನಗರದ ಶೆಟ್ಟಿಬಾವಿ ವೃತ್ತದ ಬಳಿ ನಿಯಮಬಾಹಿರವಾಗಿ ಮದ್ಯದ ಅಂಗಡಿ ನಿರ್ವಹಿಸುತ್ತಿರುವುದನ್ನು ಖಂಡಿಸಿ ಇತ್ತೀಚೆಗೆ ಅಬಕಾರಿ ಸಚಿವರಿಗೆ ಇಲ್ಲಿನ ನೇತಾಜಿ ನಗರ ಸಾರ್ವಜನಿಕ ಸಮಸ್ಯೆಗಳ ಹೋರಾಟ ಸಮಿತಿ ಒತ್ತಾಯಿಸಿದೆ. ಈ ಕುರಿತು ಬೆಂಗಳೂರಿಗೆ ತೆರಳಿದ ಸಮಿತಿ ಪದಾಧಿಕಾರಿಗಳು ಸಚಿವರಿಗೆ ಮನವಿ ಸಲ್ಲಿಸಿ, ಶೆಟ್ಟಿಬಾವಿ ವೃತ್ತದ ಬಳಿಯ ವೀರಭದ್ರೇಶ್ವರ ದೇವಸ್ಥಾನ ಹಾಗೂ ಚೌಕಿ ಮಸೀದಿ ಇರುವುದರಿಂದ ಮದ್ಯದ ಅಂಗಡಿಯಿಂದ ತೊಂದರೆಯಾಗಿದೆ. ಈ ಕುರಿತು ಜಿಲ್ಲಾಡಳಿತಕ್ಕೆ ದೂರಿದರೂ ಕ್ರಮ ಕೈಗೊಂಡಿಲ್ಲ ಎಂದು ದೂರಿದ್ದರು. ಲಕ್ಷ್ಮಿ ಬಾರ್ ಮತ್ತು ಲಾಡ್ಜಿಂಗ್ಗೆ ಅಬಕಾರಿ ಇಲಾಖೆ ಪರವಾನಗಿ ನೀಡುವ ವೇಳೆ ಗಮನಹರಿಸಿಲ್ಲ. ಅದರಿಂದಾಗಿಯೇ ಎರಡೂ ಧಾರ್ಮಿಕ ಸ್ಥಳಗಳಿಗೆ ಬಂದು ಹೋಗುವವರಿಗೆ ಮದ್ಯವ್ಯಸನಿಗಳಿಂದ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು. ಡಿಸಿಗೆ ಈ ಬಗ್ಗೆ ದೂರು ನೀಡಿದಾಗ ಮದ್ಯದ ಅಂಗಡಿ ಸ್ಥಳಾಂತರಕ್ಕೆ ಏ.30ರ ಗಡುವು ನೀಡಿದ್ದರು. ಆದರೆ ಮದ್ಯದ ಅಂಗಡಿಯವರು ಎರಡು ತಿಂಗಳ ಕಾಲಾವಕಾಶದ ನಂತರವೂ ಸ್ಥಳಾಂತರಿಸಿಲ್ಲ. ಆದ್ದರಿಂದ ಪರವಾನಗಿ ರದ್ದುಗೊಳಿಸಲು ಒತ್ತಾಯಿಸಿದರು.
ಇಂದಿನಿಂದ ಕೌನ್ಸೆಲಿಂಗ್
ರಾಯಚೂರು: ಜಿಲ್ಲೆಯ ಪ್ರೌಢಶಾಲಾ ಶಿಕ್ಷಕರ ಆನ್ಲೈನ್ ವರ್ಗಾವಣೆಯನ್ನು ಕೌನ್ಸೆಲಿಂಗ್ ಮೂಲಕ ಜು.1ರಿಂದ 4ರವರೆಗೆ ನಡೆಸಲಾಗುವುದೆಂದು ಶಿಕ್ಷಣ ಇಲಾಖೆ ತಿಳಿಸಿದೆ. ವರ್ಗಾವಣೆ ಬಯಸಿದ ಪ್ರೌಢಶಾಲಾ ಶಿಕ್ಷಕರು ಗುಲ್ಬರ್ಗದ ಆಯುಕ್ತರ ಕಚೇರಿಯಲ್ಲಿರಲು ತಿಳಿಸಿದೆ. ಶಿಕ್ಷಕರ ತಾತ್ಕಾಲಿಕ ಪಟ್ಟಿಯನ್ನು ಅಂತರ್ಜಾಲ www.cpigulbarga.kar.nic.in ರಲ್ಲಿ ಜೂ.26 ರಂದು ಪ್ರಕಟಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ತಪ್ಪಿದ ಅನಾಹುತ
ಸಿಂಧನೂರು: ತಾಲೂಕಿನ ಜವಳಗೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಬಿಸಿಯೂಟ ತಯಾರಿಸುವಾಗ ಹಲ್ಲಿ ಬಿದ್ದಿದ್ದು, ಅದೇ ಅಡುಗೆಯನ್ನು ಮಕ್ಕಳಿಗೆ ಬಡಿಸಲಾಗಿತ್ತು. ತಟ್ಟೆಯಲ್ಲಿ ಹಲ್ಲಿ ಕಂಡ ವಿದ್ಯಾರ್ಥಿ ಸಹಪಾಠಿಗಳಿಗೆ ತಿಳಿಸಿದ್ದಾನೆ. ಅಷ್ಟರಲ್ಲಿ 15 ವಿದ್ಯಾರ್ಥಿಗಳು ಊಟ ಮಾಡಿದ್ದರು. ಇನ್ನಿತರರು ಊಟ ಮಾಡದ ಕಾರಣದಿಂದ ಸಂಭವಿಸಬಹುದಾದ ಅನಾಹುತ ತಪ್ಪಿದೆ. 69ವಿದ್ಯಾರ್ಥಿಗಳನ್ನು ತಪಾಸಣೆ ಮಾಡಿ ಕಳುಹಿಸಿದ್ದು ಯಾವುದೇ ತೊಂದರೆಯಾಗಿಲ್ಲವೆಂದು ವೈದ್ಯಾಧಿಕಾರಿ ಡಾ. ಭಾಗೀರಥಿ, ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

