ಶಿರಹಟ್ಟಿ ವಿದ್ಯಾನಗರ, ಶಬ್ಬಿರ ಕಾಲನಿಗೆ ಮೂಲ ಸೌಲಭ್ಯ ನೀಡಿ
ಶಿರಹಟ್ಟಿ ಪಟ್ಟಣದ ವಿದ್ಯಾನಗರ, ಶಬ್ಬಿರ ಕಾಲನಿಯ ಜನತೆ ಮೂಲ ಸೌಲಭ್ಯದಿಂದ ಸಂಪೂರ್ಣ ವಂಚಿತರಾಗಿದ್ದು, ಸುಗಮ ಸಂಚಾರಕ್ಕೆ ರಸ್ತೆ ಇಲ್ಲ. ಚರಂಡಿ ಇಲ್ಲ. ಸರಿಯಾದ ಬೀದಿ ದೀಪದ ವ್ಯವಸ್ಥೆಯಿಲ್ಲ. ಪಪಂ ವತಿಯಿಂದ 1 ವರ್ಷದ ಹಿಂದೆ ಕೈಗೆತ್ತಿಕೊಂಡಿದ್ದ ಡಾಂಬರ ರಸ್ತೆ ಕಾಮಗಾರಿ ಸಂಪೂರ್ಣ ಕಳಪೆಯಾಗಿದ್ದರಿಂದ ಹಾಳಾಗಿ ಹೋಗಿದೆ. ಈ ಬಡಾವಣೆಯಲ್ಲಿ ಸಂಚಾರಕ್ಕೆ ಪಾದಚಾರಿಗಳು ತೀವ್ರ ಆಯಾಸ ಪಡುತ್ತಿದ್ದಾರೆ.
ಶಬ್ಬಿರ ಕಾಲನಿಯಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಚರಂಡಿ ನಿರ್ಮಿಸಿದ್ದು, ನೀರು ಹರಿಯದೇ ನಿಂತಲ್ಲೇ ನಿಲ್ಲುತ್ತಿದ್ದು, ಕೊಳಚೆ ನಿರ್ಮಾಣವಾಗಿ ಗಬ್ಬೆದ್ದು ನಾರುತ್ತಿದೆ. ಸಂಜೆಯಾಗುತ್ತಿದ್ದಂತೆ ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದ್ದು, ಜನತೆ ತತ್ತರಿಸಿಹೋಗಿದ್ದಾರೆ. ಕೆಲವು ಕಡೆ ಚರಂಡಿಯನ್ನೇ ನಿರ್ಮಿಸಿಲ್ಲ. ಇಲ್ಲಿ ಕೊಳಚೆಯ ಮಲಿನವಾದ ನೀರು ಹಾಗೆ ನಿಂತಿದ್ದು, ದುರ್ವಾಸನೆ ಬೀರುತ್ತಿದ್ದೆ. ಅನೇಕ ಬಾರಿ ಪಟ್ಟಣ ಪಂಚಾಯಿತಿ ಗಮನಕ್ಕೆ ತಂದರೂ ಇತ್ತ ಗಮನ ಹರಿಸುತ್ತಿಲ್ಲ ಎಂದು ಬಡಾವಣೆಯ ಮಹಿಳೆಯರು ಆರೋಪಿಸುತ್ತಾರೆ. ಅಲ್ಲಲ್ಲಿ ತ್ಯಾಜ್ಯಗಳಾಗಿ ಖಾಲಿಯಾಗಿ ಬಿದ್ದ ಗುಟುಕಾ ಪ್ಯಾಕ್, ಪ್ಲಾಸ್ಟಿಕ್ ಹಾಗೂ ಇನ್ನಿತರ ಬೇಡವಾದ ವಸ್ತುಗಳು ಬಿದ್ದಿವೆ. ಗಾಳಿ ಬಿಟ್ಟಾಗ ಹಾರಿ ಬಂದು ಚರಂಡಿಗೆ ಬೀಳುವುದರಿಂದ ಚರಂಡಿ ತುಂಬಿ ಕೊಳಚೆ ನೀರು ಹರಿಯುತ್ತಿಲ್ಲ. ಸಾರ್ವಜನಿಕ ಶೌಚಾಲಯವಿಲ್ಲ. ಹೂಳು ತುಂಬಿದ ಗಟಾರಗಳನ್ನು ಸ್ವಚ್ಛಗೊಳಿಸಿ ಕ್ರಿಮಿನಾಶಕ ಪೌಡರ್ ಸಿಂಪರಣೆ ಮಾಡುವುದು ಅಗತ್ಯವಾಗಿದ್ದು, ಇದ್ಯಾವುದು ಪಟ್ಟಣ ಪಂಚಾಯಿತಿಯಿಂದ ನಡೆಯುತ್ತಿಲ್ಲ. ಈ ಬಡಾವಣೆಯ ಕೆಲ ಭಾಗಗಳಲ್ಲಿ ಮಾತ್ರ ಚರಂಡಿ ಕಾಮಗಾರಿ ಮಾಡಲಾಗಿದ್ದು, ಅವು ಪೂರ್ಣಗೊಂಡಿಲ್ಲ. ಕಾಮಗಾರಿಯೂ ಯೋಜನೆಯಂತೆ ನಡೆದಿಲ್ಲ. ಅಭಿವೃದ್ಧಿ ಕಾರ್ಯಕ್ಕೆ ಕೋಟ್ಯಂತರ ರು. ಅನುದಾನ ಹರಿದು ಬಂದರೂ ಇಲ್ಲಿಯ ವರೆಗೂ ಯಾವ ರಸ್ತೆಯೂ ಡಾಂಬರ ಕಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದ್ದು, ಎಲ್ಲವನ್ನು ಸರಿಪಡಿಸಿ ಜನತೆಗೆ ಶುದ್ಧ ಕುಡಿಯುವ ನೀರು, ಬೀದಿ ದೀಪ, ಚರಂಡಿ, ರಸ್ತೆ ಕಾಮಗಾರಿ ಸೇರಿದಂತೆ ಎಲ್ಲ ಮೂಲ ಸೌಲಭ್ಯ ಕಲ್ಪಿಸಿಕೊಡಬೇಕು.
-ಪರಸಪ್ಪ ಸ್ವಾಮಿ, ಕೆ.ಎಚ್. ಖತೀಬ, ಬಡಾವಣೆಯ ನಿವಾಸಿಗಳು
ಕಲ್ಲು ಬಿದ್ದು ಇಬ್ಬರ ಸಾವು
ಗದಗ: ನಗರದ ಜಿತೇಂದ್ರ ಜೈನ್ ಎಂಬುವರು ಮನೆ ನಿರ್ಮಿಸಲು ಗುಜರಾತ್ನಿಂದ ತರಿಸಿದ್ದ ಮಾರ್ಬಲ್ ಕಲ್ಲುಗಳು ಬಿದ್ದು ಇಬ್ಬರು ಯುವಕರು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಗದಗ ನಗರದಲ್ಲಿ ನಡೆದಿದೆ.
ಮೃತ ಯುವಕರನ್ನು ನಗರದ ನಿವಾಸಿಗಳಾದ ಶಿವಾನಂದ ಅಡ್ನೂರ (28) ಹಾಗೂ ಕುಮಾರ ಸೂರಪ್ಪಗೌಡ್ರ (26) ಎಂದು ಗುರುತಿಸಲಾಗಿದೆ. ಇನ್ನೊಬ್ಬ ಕಾರ್ಮಿಕ ಬಸವರಾಜ ಹಳ್ಳದ ಎಂಬುವರಿಗೆ ಗಂಭೀರ ಗಾಯವಾಗಿದೆ. ಲಾರಿಯಲ್ಲಿದ್ದ ಮಾರ್ಬಲ್ ಕಲ್ಲುಗಳನ್ನು ತಪಾಸಣೆ ಮಾಡುವ ವೇಳೆ ಈ ಅವಘಡ ನಡೆದಿದೆ. ಈ ಕುರಿತು ಗದಗ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತ ಯುವಕರು ಜಿತೇಂದ್ರ ಜೈನ್ ಎಂಬುವರ ಬಳಿ ಹಲವಾರು ವರ್ಷಗಳಿಂದ ಕೆಲಸ ಮಾಡುತ್ತಿದ್ದರು ಎನ್ನಲಾಗಿದೆ. ಭಾನುವಾರ ಬಂದಿರುವ ಮಾರ್ಬಲ್ ಕಲ್ಲುಗಳ ಪರಿಶೀಲನೆಯ ವೇಳೆ ಈ ಘಟನೆ ನಡೆದಿದ್ದು, ಯುವಕರನ್ನು ಕಳೆದುಕೊಂಡ ಮನೆಯವರ ದುಃಖ ಮುಗಿಲು ಮುಟ್ಟಿತ್ತು.
ಯುವಕ ಸಾವು: ಗದಗ ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ಹೋಳಿ ಹಬ್ಬದ ಅಂಗವಾಗಿ ಬಣ್ಣದಾಟವಾಡಿ ಬಾವಿಗೆ ಜಳಕಕ್ಕೆ ಹೋಗಿದ್ದ ಯುವಕ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ನಡೆದಿದೆ. ಮೃತ ಯುವಕನನ್ನು ಗ್ರಾಮದ ನಿವಾಸಿ ಸದ್ದಾಂ ಹುಸೇನ ಮುಲ್ಲಾ (22) ಎಂದು ಗುರುತಿಸಲಾಗಿದೆ. ಈ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

