ಬೆಲೆ ಕುಸಿತ: ರಸ್ತೆಗೆ ಟೊಮೆಟೋ ಸುರಿದು ಆಕ್ರೋಶ
ಲಕ್ಷ್ಮೇಶ್ವರ: ಬೆಲೆ ತೀವ್ರವಾಗಿ ಕುಸಿದಿದ್ದರಿಂದ ರೊಚ್ಚಿಗೆದ್ದ ರೈತರು ಟೊಮೆಟೋ ಹಣ್ಣಗಳನ್ನು ರಸ್ತೆಗೆ ಸುರಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ಪಟ್ಟಣದಲ್ಲಿ ಶುಕ್ರವಾರ ಮಧ್ಯಾಹ್ನ ನಡೆಯಿತು. ಶುಕ್ರವಾರ ಪಟ್ಟಣದ ಸಂತೆಯ ದಿನವಾಗಿದ್ದರಿಂದ ತಾಲೂಕಿನ ಹಲವಾರು ಹಳ್ಳಿಗಳ ರೈತರು ತಾವು ಬೆಳೆ ಟೊಮೆಟೋ ಮಾರಾಟಕ್ಕೆ ತಂದಿದ್ದರು. ಅವುಗಳನ್ನು ಕೊಳ್ಳಲು ಯಾರೂ ಮುಂದೆ ಬರದಿದ್ದಾಗ ರೈತರು ಆಕ್ರೋಶಗೊಂಡು ಪ್ರತಿಭಟನೆ ನಡೆಸಿದರು. ದಲ್ಲಾಳಿಗಳು 25 ಕೆಜಿ ಹಣ್ಣುಗಳ ಬುಟ್ಟಿಗಳಿಗೆ ಕೇವಲ 20-30 ರುಪಾಯಿ ಬೆಲೆಯನ್ನು ನಿಗದಿ ಮಾಡಿದ್ದನ್ನು ಕಂಡ ರೈತರು ಕಂಗಾಲಾಗಿ ಟೊಮೆಟೋ ಬೀದಿಯಲ್ಲಿ ಸುರಿದು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭ ಹರದಗಟ್ಟಿ ಗ್ರಾಮದ ರೈತ ದೇವಲಪ್ಪ ಲಮಾಣಿ ಮಾತನಾಡಿ, ಬೀಜ, ಗೊಬ್ಬರ, ಕ್ರಿಮಿನಾಶಕ ಸೇರಿದಂತೆ ಸಾವಿರಾರು ರು. ಖರ್ಚು ಮಾಡಿ ಟೊಮೆಟೋ ಬೆಳೆದು ಮಾರಾಟಕ್ಕೆ ತಂದರೆ ಇಲ್ಲಿ ಯಾರೂ ಹಣ್ಣನ್ನು ಕೇಳುವವರಿಲ್ಲ. ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ, ಬೆಲೆ ಕುಸಿತದಿಂದಾಗಿ ರೈತರು ಹೊಲದಲ್ಲೆ ಟೊಮೆಟೋ ಬೆಳೆಯನ್ನು ನಾಶ ಮಾಡಿದ್ದಾಗಿ ತಿಳಿಸಿದರು.
ಸರ್ಕಾರ ರೈತರ ಬೆಂಬಲಕ್ಕೆ ನಿಲ್ಲಬೇಕು ಎಂದು ಪುರಸಭೆಯ ಮಾಜಿ ಅಧ್ಯಕ್ಷ ಶಂಕ್ರಣ್ಣ ಮ್ಯಾಗೇರಿ, ಸಂಕ್ಲಿಪುರದ ಹನುಮಂತಗೌಡ ರಾಮನಗೌಡ್ರ, ಸೋಗಿಹಾಳದ ಯಲ್ಲಪ್ಪ ಸಂಕದಾಳ, ಪಟ್ಟಣದ ಪುರಸಭೆಯ ಸದಸ್ಯ ಲಂಕೆಪ್ಪ ಸೆರಸೂರಿ, ರಾಮಗೇರಿಯ ಬೀರಪ್ಪ ಕುರಿ, ಫಕ್ಕೀರಪ್ಪ ಬೇವಿನಮರದ ಮತ್ತಿತರರು ಆಗ್ರಹಿಸಿದ್ದಾರೆ.
ಏಕತೆ, ಜಾಗೃತಿಗಾಗಿ ಕ್ರೀಡಾಕೂಟ
ನರೇಗಲ್ಲ: ಎಲ್ಲ ದೇಶಗಳ ಏಕತೆ ಮತ್ತು ಜಾಗೃತಿಗಾಗಿ ಕ್ರೀಡಾಕೂಟ ಆಯೋಜಿಸಲಾಗುತ್ತದೆ. ಪಠ್ಯೇತರ ಚಟುವಟಿಕೆಯಿಂದ ವಿದ್ಯಾರ್ಥಿಗಳು ಮಾನಸಿಕ ಮತ್ತು ದೈಹಿಕವಾಗಿ ಸದೃಢರಾಗಲು ಸಹಕಾರಿಯಾಗಲಿದೆ ಎಂದು ನಿವೃತ್ತ ಪ್ರಾಚಾರ್ಯ ಎ.ಐ. ಮರಡಿಮಠ ಹೇಳಿದರು. ಸ್ಥಳೀಯ ಅನ್ನದಾನೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಈಚೆಗೆ ಜರುಗಿದ 47ನೇ ವಾರ್ಷಿಕ ಕ್ರೀಡಾಜ್ಯೋತಿ ಸ್ವೀಕರಿಸಿ ಮಾತನಾಡಿದರು. ಎಸ್.ಎ. ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಸಿ.ಜಿ. ಹುಡೆದಗಡ್ಡಿ ಮಾತನಾಡಿ, ದೇಶದಲ್ಲಿ ಕ್ರೀಡಾ ಪರಂಪರೆಯನ್ನು ಅಭಿವೃದ್ಧಿ ಪಡಿಸಲು ಯುವ ಪೀಳಿಗೆ ಕ್ರೀಡೆಯಲ್ಲಿ ರಾಷ್ಟ್ರ ಮಟ್ಟದ ಕ್ರೀಡಾಪಟುಗಳಾಗಿ ಎಂದರು. ಎಸ್.ಎ. ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಅರವಿಂದ ಸಜ್ಜನ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ಎವಿಪಿ ಸಮಿತಿಯ ಕಾರ್ಯದರ್ಶಿ ಸಿ.ಕೆ. ಹಿರೇಮಠ ಪಾರಿವಾಳ ಹಾರಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ಕ್ರೀಡಾ ನಿರ್ದೇಶಕ ಎಸ್.ಬಿ. ಗೌಡರ ಕ್ರೀಡಾಪಟುಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಡಾ. ಮಂಗಳೂರು ಸ್ವಾಗತಿಸಿದರು. ಎಸ್.ಎಚ್. ಕುಲಕರ್ಣಿ ನಿರೂಪಿಸಿದರು. ಎಸ್.ಎಸ್. ಕಂಟಿ ವಂದಿಸಿದರು.
ಇಂದಿನಿಂದ ಉತ್ಸವ
ಲಕ್ಷ್ಮೇಶ್ವರ: ಪಟ್ಟಣದ ಭಾವಸಾರ ಕ್ಷತ್ರಿಯ ಸಮಾಜವು ಗುರು ಏಕನಾಥ ಮಹಾರಾಜರ ಷಷ್ಠಿ ದಿಂಡಿ ಸೋಳಾಹ ಉತ್ಸವ ವಿಠ್ಠಲ ಮಂದಿರದಲ್ಲಿ ಮಾ. 22ರಿಂದ 3 ದಿನಗಳ ಕಾಲ ವಿಜೃಂಭಣೆಯಿಂದ ಜರಗುವದು ಎಂದು ಪಂಚಕಮಿಟಿಯ ಹಿರಿಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಮಾ. 22ರಂದು ಶನಿವಾರ ಬೆಳಗ್ಗೆ ಪೋತಿ ಸ್ಥಾಪನೆ ನಂತರ ಸಂಜೆ ಪ್ರವಚನ, 23ರಂದು ಭಾನುವಾರ ಜ್ಞಾನೇಶ್ವರಿಯ ಪಾರಾಯಣ ಜರಗುತ್ತದೆ. ರಾತ್ರಿ 10 ಗಂಟೆಗೆ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ನಂತರ 10.30ಕ್ಕೆ ಸಂತವಾಣಿ ಸಂಗೀತ ಕಾರ್ಯಕ್ರಮ ಜರಗಲಿದ್ದು, ಶಿರಸಿಯ ಗಾಯಕ ವಿನಾಯಕ ಹೆಗಡೆ, ಯಲ್ಲಾಪುರದ ಶೃತಿ ಬೋಡ ಅವರಿಂದ ಸಂಗೀತ ಕಾರ್ಯಕ್ರಮ ಜರುಗುತ್ತದೆ. ಸೋಮವಾರ 24ರಂದು ವಿಠ್ಠಲ ಮೂರ್ತಿಯ ಮೆರವಣಿಗೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗುವುದು.
ಮುದಿಯಪ್ಪ ನೇಮಕ
ರೋಣ: ನರಗುಂದ ಮತಕ್ಷೇತ್ರದ ಬಿಜೆಪಿ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರನ್ನಾಗಿ ರೋಣ ತಾಲೂಕಿನ ಹುಲ್ಲೂರ ಗ್ರಾಮದ ಮುದಿಯಪ್ಪ(ಫಕೀರಪ್ಪ) ಕರಡಿ ಅವರನ್ನು ನೇಮಕ ಮಾಡಲಾಗಿದೆ ಎಂದು ಗದಗ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ನಾಮದೇವ ಚಿಕ್ಕಣ್ಣವರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ಬಿಜೆಪಿ ಪಾದಯಾತ್ರೆ
ಗದಗ: ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಮಾ. 22ರ ಶನಿವಾರ ಬೆಳಗ್ಗೆ 9ಕ್ಕೆ ನಗರದ ಮುಳಗುಂದ ರಸ್ತೆಯ ಅಂಬಾಭವಾನಿ ದೇವಸ್ಥಾನದಿಂದ ಬೃಹತ್ ಪಾದಯಾತ್ರೆ ಕೈಗೊಳ್ಳಲಿದ್ದಾರೆ. ಮಾಜಿ ಶಾಸಕ ಸಿ.ಎಸ್. ಮುತ್ತಿನಪೆಂಡಿಮಠ ಪಾದಯಾತ್ರೆಗೆ ಚಾಲನೆ ನೀಡಲಿದ್ದು, ಸಂಜೆ 4ಕ್ಕೆ ಬೆಟಗೇರಿ ಮಾರುತಿ ದೇವಸ್ಥಾನ, ಸೆಟ್ಲ್ಮೆಂಟ್ನಿಂದ ಪ್ರಮುಖ ಬೀದಿಗಳಲ್ಲಿ ಪಾದಯಾತ್ರೆ ಮಾಡುವರು. ಪಾದಯಾತ್ರೆಯಲ್ಲಿ ಬಿಜೆಪಿಯ ಹಾವೇರಿ ಲೋಕಸಭಾ ಅಭ್ಯರ್ಥಿ ಶಿವಕುಮಾರ ಉದಾಸಿ, ಜಿಲ್ಲಾಧ್ಯಕ್ಷ ಹಾಗೂ ಮಾಜಿ ಸಚಿವ ಕಳಕಪ್ಪ ಬಂಡಿ, ಮಾಜಿ ಶಾಸಕ ಶ್ರೀಶೈಲಪ್ಪ ಬಿದರೂರ, ಶಹರ ಅಧ್ಯಕ್ಷ ಈಶ್ವರಪ್ಪ ಮುನವಳ್ಳಿ, ಗ್ರಾಮೀಣ ಘಟಕದ ಅಧ್ಯಕ್ಷ ಎಸ್.ಎಂ. ಪಾಟೀಲ, ರಾಷ್ಟ್ರೀಯ ಪರಿಷತ್ ಸದಸ್ಯ ಕಾಂತಿಲಾಲ್ ಬನ್ಸಾಲಿ, ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಶ್ರೀಕೃಷ್ಣ ಹೊಂಬಾಳಿ, ಶ್ರೀಕಾಂತ ಖಟವಟೆ, ಎಸ್.ಟಿ. ಮೇಲಗಿರಿ, ಎಸ್.ಬಿ. ಸಂಕಣ್ಣವರ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಮಾಜಿ ಅಧ್ಯಕ್ಷ ಎಂ.ಎಸ್. ಕರಿಗೌಡ್ರ, ಜಿಲ್ಲಾ ವಕ್ತಾರ ಶಂಕ್ರಪ್ಪ ಇಂಡಿ, ಪ್ರಾ. ಎಸ್.ವಿ. ಸಂಕನೂರ, ಪ್ರೇಮನಾಥ ಬಣ್ಣದ, ಆರ್.ಸಿ. ಮೇರವಾಡೆ, ತೋಟೋಸಾ ಬಾಂಡಗೆ, ಜಗನಾಥಸಾ ಬಾಂಡಗೆ, ಲಕ್ಷ್ಮಣ ಶಿಗ್ಗಾವಿ, ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಸಂಘಟನಾ ಕಾರ್ಯದರ್ಶಿ ಮೋಹನ್ ಮಾಳಶೆಟ್ರ, ರಾಜ್ಯ ಸ್ಲಂ ಮೋರ್ಚಾದ ಕಾರ್ಯಕಾರಣಿ ಸದಸ್ಯ ಶ್ರೀನಿವಾಸ ಹುಬ್ಬಳ್ಳಿ, ನಗರಸಭೆ ಸದಸ್ಯ ಸದಾನಂದ ಪಿಳ್ಳೆ, ಮಾಧವ ಗಣಾಚಾರಿ, ವಿನಾಯಕ ಮಾನ್ವಿ, ಅನೀಲ ಅಬ್ಬಿಗೇರಿ, ರಾಘವೇಂದ್ರ ಯಳವತ್ತಿ, ಪಾರ್ವತಿ ಪತ್ತಾರ, ಶ್ರೀನಿವಾಸ ಕರಿ, ಸಂತೋಷ ಮೇಲಗಿರಿ, ಪ್ರವೀಣ ಬನ್ಸಾಲಿ, ಜಯಶ್ರೀ ಬೈರವಾಡೆ, ಮಂಜುನಾಥ ಮುಳಗುಂದ, ಚನ್ನವ್ವ ಮುಳಗುಂದ, ನಾಗಲಿಂಗಪ್ಪ ಐಲಿ, ಮಹಿಳಾ ಘಟಕದ ಅಧ್ಯಕ್ಷೆ ಜಯಶ್ರೀ ಉಗಲಾಟದ, ಸ್ಲಂ ಮೋರ್ಚಾ ಅಧ್ಯಕ್ಷ ಅರವಿಂದ ಹುಲ್ಲೂರ, ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ನಾಮದೇವ ಚಿಕ್ಕಣ್ಣವರ, ಇರ್ಷಾದ ಮಾನ್ವಿ, ಮೋಹನ್ ಹೊನ್ನಳ್ಳಿ, ಶರಣಪ್ಪ ಗದ್ದಿಕೇರಿ, ಶರಣಪ್ಪ ಚುರ್ಚಿಹಾಳ, ರವಿ ಶಿದ್ಲಿಂಗ, ಶಿವರಾಜಕುಮಾರ ಹಿರೇಮನಿ ಪಾಟೀಲ, ಕಿಶನ್ ಮೇಹರವಾಡೆ, ಶಹರ ಘಟಕದ ಕಾರ್ಯದರ್ಶಿ ದಶರಥರಾಜ ಕೊಳ್ಳಿ, ಶ್ರೀನಿವಾಸ ಬಾಂಡಗೆ ಸೇರಿದಂತೆ ವಿವಿಧ ಮೋರ್ಚಾದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.
ಸೀತಾಬಾಯಿ ನಿಧನ
ಗಜೇಂದ್ರಗಡ: ಸಮೀಪದ ವೀರಾಪುರ ಗ್ರಾಮದ ಸೀತಾಬಾಯಿ ಅವಧೂತ್(71) ಅನಾರೋಗ್ಯ ಕಾರಣದಿಂದ ಈಚೆಗೆ ನಿಧನರಾದರು. ಮೃತರು ಪತಿ, ಐವರು ಪುತ್ರರು, ಓರ್ವ ಪುತ್ರಿ ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಮೃತ ಸೀತಾಬಾಯಿ ಅವಧೂತ್ರು ನ್ಯಾಯವಾದಿ ಶ್ರೀಕಾಂತ ಅವಧೂತ್ರ ತಾಯಿಯಾಗಿದ್ದು, ಇವರ ನಿಧನಕ್ಕೆ ಶಾಸಕ ಜಿ.ಎಸ್. ಪಾಟೀಲ, ನ್ಯಾಯವಾದಿ ವಿ.ಆರ್. ಗುಡಿಸಾಗರ, ಮಿಥುನ್ ಪಾಟೀಲ, ಪುರಸಭೆ ವಿಪಕ್ಷ ನಾಯಕ ಶಿವರಾಜ ಘೋರ್ಪಡೆ ಸಂತಾಪ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

