ಗದಗ

ಉಸ್ತುವಾರಿ ಸಚಿವರ ಸಾಧನೆ ಶೂನ್ಯ: ಟೀಕೆ

Published On :

ಬಿಎಸ್ಸಾರ್ ಮುಖಂಡ ಅನಿಲ ಮೆಣಸಿನಕಾಯಿ ಆರೋಪ
ಕನ್ನಡಪ್ರಭ ವಾರ್ತೆ, ಗದಗ, ಮಾ. 23
2 ದಿನಗಳಿಗೊಮ್ಮೆ ನೀರು ಕೊಡುತ್ತೇವೆ ಎಂದು ಹೇಳಿ ಅಧಿಕಾರಕ್ಕೆ ಬಂದು ಸಚಿವರಾಗಿ ವರ್ಷ ಕಳೆದಿದ್ದು, 2 ದಿನಗಳಿಗಲ್ಲ 15 ದಿನಕ್ಕೊಮ್ಮೆಯೂ ನೀರು ಪೂರೈಕೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲರು ವಿಫಲರಾಗಿದ್ದಾರೆ ಎಂದು ಬಿಎಸ್‌ಆರ್ ಮುಖಂಡ ಅನಿಲ ಮೆಣಸಿನಕಾಯಿ ಆರೋಪಿಸಿದರು.
ಅವರು ಭಾನುವಾರ ತಮ್ಮ ನಿವಾಸದಲ್ಲಿ ಬಿಎಸ್‌ಆರ್ ಬಿಟ್ಟು ಬಿಜೆಪಿಗೆ ಸೇರ್ಪಡೆಯಾಗುವ ಕುರಿತು ತಮ್ಮ ಅನುಯಾಯಿಗಳು ಹಾಗೂ ಬಿಎಸ್‌ಆರ್ ಕಾಂಗ್ರೆಸ್‌ನಿಂದ ಆಯ್ಕೆಯಾಗಿರುವ ಸ್ಥಳೀಯ ಸಂಸ್ಥೆಯ ಪದಾಧಿಕಾರಿಗಳ ಸಭೆಯ ಅನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಈ ಕುರಿತು ನಮ್ಮ ನಾಯಕ ಬಿ. ಶ್ರೀರಾಮುಲು ಅವರೊಂದಿಗೆ ಚರ್ಚಿಸಿದ್ದು, ಅವರ ನಿರ್ದೇಶನದ ಮೇರೆಗೆ ನಾವೆಲ್ಲಾ ನರೇಂದ್ರ ಮೋದಿ ಅವರನ್ನು ಪ್ರಧಾನಮಂತ್ರಿಯನ್ನಾಗಿ ಮಾಡುವ ನಿಟ್ಟಿನಲ್ಲಿ ಪಕ್ಷಕ್ಕೆ ಕೆಲಸ ಮಾಡಲು ಸೂಚಿಸಿದ ಹಿನ್ನೆಲೆಯಲ್ಲಿ ನನ್ನ ಎಲ್ಲ ಬೆಂಬಲಿಗರೊಂದಿಗೆ ಬಿಜೆಪಿಗೆ ಸೇರ್ಪಡೆಗೊಳ್ಳುತ್ತಿರುವೆ ಎಂದರು.
ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಹತ್ತಾರು ಗೊಂದಲಗಳಾಗಿ ನಾವೆಲ್ಲಾ ಬೇರೆ ಬೇರೆಯಾಗಿ ಸ್ಪರ್ಧಿಸಬೇಕಾದ ಅನಿವಾರ್ಯತೆ ಬಂದ ಹಿನ್ನೆಲೆಯಲ್ಲಿ ಹಾಗೂ ಕಾಂಗ್ರೆಸ್‌ನವರು ಜನತೆಗೆ ಹತ್ತಾರು ಸುಳ್ಳು ಭರವಸೆ ನೀಡಿ, ಮತ ಪಡೆದ ಹಿನ್ನೆಲೆಯಲ್ಲಿ ನಾವು ಸೋಲು ಕಾಣಬೇಕಾಯಿತು. ಅವರು ಅಧಿಕಾರಕ್ಕೆ ಬಂದು ವರ್ಷವಾಗಿದೆ. ಅವಳಿ ನಗರ ಸೇರಿದಂತೆ ಜಿಲ್ಲೆಯ ಯಾವುದೇ ಜ್ವಲಂತ ಸಮಸ್ಯೆಗಳಿಗೆ ಅವರಿಂದ ಸ್ಪಂದನೆ ಸಿಗುತ್ತಿಲ್ಲ. ಇದರಿಂದ ಜನತೆ ಬೇಸತ್ತು ಹೋಗಿದ್ದು, ಅವರಿಗೆ ಈ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸುತ್ತಾರೆ ಎಂದರು.
ಇವರು ವರ್ಷದಲ್ಲಿ ಮಾಡಿದ ಸಾಧನೆ ಎಂದರೆ, ಆ ಗೌಡರು ಉಸುಕಿನ ವ್ಯಾಪಾರ, ಈ ಗೌಡರು ಜೆಸಿಬಿ ವ್ಯವಹಾರ, ಇನ್ನೊಬ್ಬ ಗೌಡರು ವಿವಿಧ ಇಲಾಖೆಗಳನ್ನು ನಿರ್ವಹಿಸುತ್ತಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕ, ಚುನಾಯಿತರಾದವರೇ ಬೇರೆ ಗದಗ ಜಿಲ್ಲೆಯಲ್ಲಿ ಅಧಿಕಾರ ನಡೆಸುತ್ತಿರುವವರೇ ಬೇರೆ ಎಂದು ಪರೋಕ್ಷವಾಗಿ ಕಾಂಗ್ರೆಸ್ ಶಾಸಕರ ಆಡಳಿತ ವೈಖರಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ನೀವೇಕೆ ಕಳೆದ ಒಂದು ವರ್ಷದಿಂದ ಈ ಬಗ್ಗೆ ಮಾತನಾಡಿಲ್ಲ ಎನ್ನುವ ಪ್ರಶ್ನೆಗೆ ನನ್ನ ಕೆಲ ವೈಯಕ್ತಿಕ ಕಾರಣಗಳು ಹಾಗೂ ಜನತೆ ಅವರನ್ನು ಬೆಂಬಲಿಸಿದ್ದಾರೆ. ಅವರು ಅದೇನು ಅಭಿವೃದ್ಧಿ ಮಾಡುತ್ತಾರೆ? ಹೇಳಿದ ಮಾತನ್ನು ಎಷ್ಟೊಂದು ಉಳಿಸಿಕೊಳ್ಳುತ್ತಾರೆ? ಎನ್ನುವುದನ್ನು ಇಲ್ಲಿಯವರೆಗೂ ಕಾಯ್ದು ನೋಡಿದೆವು. ಅವರಿಂದ ಜನರಿಗೆ ಸ್ಪಂದನೆ ಸಿಗದೇ ಇರುವ ಹಿನ್ನೆಲೆಯಲ್ಲಿ ನಾಳೆಯಿಂದಲೇ ನಾವು ಹೋರಾಟಕ್ಕೆ ಇಳಿಯುತ್ತೇವೆ ಎಂದರು.
ಎಸ್.ಎಚ್. ಶಿವನಗೌಡ್ರ, ನಗರಸಭೆ ಸದಸ್ಯರಾದ ಮಂಜುನಾಥ ಮುಳಗುಂದ, ಸಂತೋಷ ಮೇಲಗಿರಿ, ನಾಗಲಿಂಗ ಐಲಿ, ಶ್ರೀನಿವಾಸ ಕರಿ, ರಾಘವೇಂದ್ರ ಯಳವತ್ತಿ, ಬಸವರಾಜ ಬೆಳದಡಿ, ವೆಂಕಟೇಶ ದಾಸರ, ಅಂಬರೀಷ ಹಿರೇಮಠ, ಬಸವಣ್ಣಯ್ಯ ಹಿರೇಮಠ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಈಶಣ್ಣ ಮುನವಳ್ಳಿ, ಶ್ರೀನಿವಾಸ ಹುಬ್ಬಳ್ಳಿ, ಮಂಜುನಾಥ ಮ್ಯಾಗೇರಿ, ಸತೀಶ ಮುದಗಲ್ಲ ಮುಂತಾದವರು ಸುದ್ದಿಗೋಷ್ಠಿಯಲ್ಲಿ ಇದ್ದರು.

ಮಾ. 30ರಂದು ಗದಗನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸುವ ಮೂಲಕ ನಾನು ಹಾಗೂ ನನ್ನ ಎಲ್ಲಾ ಬೆಂಬಲಿಗರು ಬಿ. ಶ್ರೀರಾಮುಲು ಹಾಗೂ ಬಿ.ಎಸ್. ಯಡಿಯೂರಪ್ಪ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಳ್ಳುತ್ತೇವೆ. ಅಂದಿನ ಸಮಾವೇಶದಲ್ಲಿ ಜಿಲ್ಲೆಯ ಎಲ್ಲ ಬಿಜೆಪಿ ಮುಖಂಡರು, ಮಾಜಿ ಸಚಿವರು, ಶಾಸಕರು, ವಿವಿಧ ಘಟಕಗಳ ಪದಾಧಿಕಾರಿಗಳು, ಹಿರಿಯ ಮುಖಂಡರು ಪಾಲ್ಗೊಳ್ಳುತ್ತಾರೆ.
-ಅನಿಲ್ ಮೆಣಸಿನಕಾಯಿ, ಬಿಎಸ್‌ಆರ್ ಮುಖಂಡ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.