ಗದಗ

ಮತದಾನ ಹೆಚ್ಚಳಕ್ಕೆ ಶ್ರಮಿಸಿ: ತುರಮರಿ

Published On :

ರೋಣ: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಶೇ. 95ಕ್ಕೂ ಹೆಚ್ಚಿನ ಮತದಾನ ನಡೆಯುವಂತೆ ಚುನಾವಣೆ ಸಿಬ್ಬಂದಿಯೊಂದಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರ ಶ್ರಮ ಅತ್ಯಂತ ಮುಖ್ಯವಾಗಿದೆ ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ, ಸಿಇಒ ವೀರಣ್ಣ ತುರಮರಿ ಹೇಳಿದರು.
ಅವರು ಬುಧವಾರ ಪಟ್ಟಣದ ದಿ.ಅಂದಾನಪ್ಪ ದೊಡ್ಡಮೇಟಿ ಸಭಾಭವನದಲ್ಲಿ ರೋಣ ತಾಲೂಕಿನ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆರಿಗಾಗಿ ಏರ್ಪಡಿಸಿದ್ದ ಮತದಾನ ಹೆಚ್ಚಳ ಮತ್ತು ಮತದಾನದಲ್ಲಿ ಮತದಾರ ಕಡ್ಡಾಯ ಪಾಲ್ಗೊಳ್ಳುವಿಕೆ ಕುರಿತು ಜರುಗಿದ ಸಭೆಯಲ್ಲಿ ಮಾತನಾಡಿದರು. 18 ವರ್ಷ ಮೇಲ್ಪಟ್ಟ ಪ್ರತಿ ಪ್ರಜೆಯು ಮತದಾನದ ಹಕ್ಕು ಪಡೆದಿರುತ್ತಾರೆ. ಅವರನ್ನು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೇರೇಪಿಸುವುದು ಮತ್ತು ಮತದಾನದ ಹಕ್ಕಿನ ಕುರಿತು ಅರಿವು ಮೂಡಿಸುವಲ್ಲಿ ಗ್ರಾಪಂ ಪಿಡಿಒಗಳೊಂದಿಗೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಶ್ರಮಿಸಬೇಕು. ಗ್ರಾಮದಲ್ಲಿನ ಪ್ರತಿ ಮನೆಗೆ ತೆರಳಿ ಚುನಾವಣೆ ಆಯೋಗ ಸಿದ್ಧಪಡಿಸಿದ ಮತದಾನ ಸಂಕಲ್ಪ ಪತ್ರ ನೀಡಿ ಬರೆಸಿಕೊಂಡು ಸಹಿ ಪಡೆಯಬೇಕು. ಅಂದಾಗ ಮತದಾರರಿಗೆ ಚುನಾವಣೆಯಲ್ಲಿ ಭಾಗವಹಿಸಲು ಕರೆ ನೀಡುವುದರ ಜತೆಗೆ ಮತದಾನ ಕರ್ತವ್ಯ ಕುರಿತು ತಿಳಿವಳಿಕೆ ನೀಡಿದಂತಾಗುತ್ತದೆ. ಆ ನಿಟ್ಟಿನಲ್ಲಿ ಕಾರ್ಯತತ್ಪರರಾಗಬೇಕು ಎಂದು ಸಲಹೆ ನೀಡಿದರು. ಕಲಾ ತಂಡಗಳ ಮೂಲಕ, ವಿವಿಧ ಸಂಘಗಳು, ಸ್ವಸಹಾಯ ಗುಂಪು, ಯುವಕ, ಯುವತಿ ಗುಂಪುಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಅಲ್ಲಲ್ಲಿ ಬ್ಯಾನರ್‌ಗಳನ್ನು ಹಾಕಲಾಗಿದೆ. ಧ್ವನಿವರ್ಧಕದ ಮೂಲಕ ಮತ್ತು ಸ್ಥಳೀಯ ಚಾನಲ್‌ಗಳ ಮೂಲಕ ಮತದಾನ ಹೆಚ್ಚಳ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಈ ಬಾರಿ ಶೇ. 95ಕ್ಕೂ ಹೆಚ್ಚು ಮತದಾನವಾಗುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು.
ತಾಲೂಕಿನ ಅಬ್ಬಿಗೇರಿ, ಹೊಳೆಆಲೂರು, ಕರಮುಡಿ, ಹೊಳೆಮಣ್ಣೂರು, ಹುನಗುಂಡಿ, ಹುಲ್ಲೂರ, ಅಸೂಟಿ, ಕೌಜಗೇರಿ, ಮೆಣಸಗಿ, ಮಲ್ಲಾಪುರ,ಬಳಗೋಡ ಸೇರಿದಂತೆ ಅನೇಕ ಮತಗಟ್ಟೆಯಲ್ಲಿ ಮತನದಾನ ಕಡಿಮೆಯಾಗಿದ್ದು, ಈ ಬಾರಿ ಅಲ್ಲಿ ಹೆಚ್ಚಳವಾಗಬೇಕು. ಆ ನಟ್ಟಿನಲ್ಲಿ ನಿಮ್ಮೆಲ್ಲರ ಪಾತ್ರ ಪ್ರಮುಖವಾಗಿದೆ ಎಂದರು. ಚುನಾವಣೆಯ ಕರ್ತವ್ಯದಲ್ಲಿ ಭಾಗವಹಿಸುವ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಯಾವುದೇ ಪಕ್ಷಪಾತಕ್ಕೆ ಒಳಗಾಗಬಾರದು. ಹಣ, ಸೀರೆ ಸೇರಿದಂತೆ ಅನೇಕ ಆಶೆ ಆಮಿಷಗಳಿಗೆ ಒಳಗಾಗದೇ ನಿಷ್ಪಕ್ಷಪಾತವಾಗಿ, ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸಬೇಕು. ಒಂದು ವೇಳೆ ಚುನಾವಣೆ ನಿಯಮಗಳಿಗೆ ಬದ್ಧರಾಗಿ ನಡೆದುಕೊಳ್ಳದಿದ್ದಲ್ಲಿ ಸೂಕ್ತ  ಕ್ರಮ ಕೈಗೊಳ್ಳಲಾಗುವುದು.
ಎಲ್ಲಿಯಾದರೂ ಮತದಾರರಿಗೆ ಆಸೆ-ಆಮಿಷ ಒಡ್ಡುವ ಮತ್ತು ಹಣ, ಮದ್ಯ, ಸೀರೆ, ಬಟ್ಟೆ ಸೇರಿದಂತೆ ಬೆಲೆ ಬಾಳುವ ವಸ್ತುಗಳನ್ನು ಮತದಾರರಿಗೆ ನೀಡಲು ಯಾರಾದರೂ ಆಗಮಿಸಿದಲ್ಲಿ ಕೂಡಲೇ ಚುನಾವಣೆ ಅಧಿಕಾರಿಗಳಿಗೆ ತಿಳಿಸಬೇಕು ಎಂದರು. ಜಿಪಂ ಯೋಜನಾ ನಿರ್ದೇಶಕ ಟಿ.ದಿನೇಶ, ಸಿಡಿಪಿಒ ಬಿ.ಎಸ್. ಮೋಕಾಶಿ, ತಾಲೂಕು ವೈದ್ಯಾಧಿಕಾರಿ ಡಾ.ಬಿ.ಎಸ್. ಭಜಂತ್ರಿ, ಡಾ. ರೇಖಾ ಹೊಸಮನಿ ಅಂಗನವಾಡಿ ಕಾರ್ಯಕರ್ತೆಯರು, ಆಶಾಕಾರ್ಯಕರ್ತೆಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.