ಕುಡಿವ ನೀರು: ಪಪಂ ಮುತ್ತಿಗೆ
ನರೇಗಲ್ಲ: ಪ್ರತಿಭಟನೆಗೂ, ನರೇಗಲ್ಲ ಪಪಂಗೂ ಅದೇನೋ ಅವಿನಾಭಾವ ಸಂಬಂಧ. ಕುಡಿಯುವ ನೀರಿನ ಸಲುವಾಗಿ ಸಾರ್ವಜನಿಕರು ಪಪಂಗೆ ಪದೇ ಪದೇ ಮುತ್ತಿಗೆ ಹಾಕುತ್ತಿದ್ದಾರೆ. ಧಿಕ್ಕಾರ ಕೂಗುತ್ತಿದ್ದಾರೆ. ಇದೆಂದಿಗೆ ಮುಕ್ತಾಯ ಕಾಣುವುದೋ ಎಂಬುದನ್ನು ಆ ಭಗವಂತನೆ ಬಲ್ಲ.
ಎಂದಿನಂತೆ ಇಂದೂ ಪಪಂ ಬಾಗಿಲು ತೆರೆಯುವುದರಲ್ಲಿತ್ತು. ಅಷ್ಟರಲ್ಲೇ 10ನೇ ವಾರ್ಡ್ ನಾಗರಿಕರು ಪಪಂ ಮಾಜಿ ಅಧ್ಯಕ್ಷ ದಾವೂದಲಿ ಕುದರಿ ನೇತೃತ್ವದಲ್ಲಿ ಸಮರ್ಪಕ ನೀರು ಪೂರೈಕೆ ಮಾಡಬೇಕೆಂದು ಆಗ್ರಹಿಸಿ ಮಹಿಳೆಯರು, ಮಕ್ಕಳು, ಸಾರ್ವಜನಿಕರೆಲ್ಲರೂ ಖಾಲಿ ಕೊಡಗಳೊಂದಿಗೆ ಮುತ್ತಿಗೆ ಹಾಕಿದರು. ಸಮಾಧಾನಪಡಿಸಲು ಪಪಂ ಸಿಬ್ಬಂದಿ, ಮುಖ್ಯಾಧಿಕಾರಿ ಎಂ. ವಿಜಯಲಕ್ಷ್ಮಿ ಇನ್ನಿಲ್ಲದ ಹರಸಾಹಸಪಟ್ಟರು.
ಪರಿಸ್ಥಿತಿ ಉದ್ವಿಗ್ನ: ನಮ್ಮ ವಾರ್ಡಿನ ಸ್ಥಿತಿಯನ್ನಾದರೂ ನೋಡ ಬನ್ನಿ. ನೀರಿಗಾಗಿ ನಾವು ನಮ್ಮೆಲ್ಲ ಕೆಲಸ ಕಾರ್ಯಗಳನ್ನು ಬಿಟ್ಟು ನಿಲ್ಲಬೇಕಿದೆ. ಓಣಿಯಲ್ಲಿ ಟ್ಯಾಂಕರ್ ಬಂದರೆ ಯಾರ ಕೈ ಜೋರಾಗುತ್ತದೆಯೋ ಅವರಿಗೆ ಮಾತ್ರ ನೀರು ಸಿಗುತ್ತದೆ. ಉಳಿದವರಿಗೆ ಇಲ್ಲ. ಹೀಗಾದರೆ ನಮ್ಮೆಲ್ಲರ ಪರಿಸ್ಥಿತಿ ಏನು ಎಂದು ವಾದಿಸಿದ ಪ್ರತಿಭಟನಾಕಾರರು ಕೊನೆಗೂ ಮುಖ್ಯಾಧಿಕಾರಿಯವರನ್ನು ಮುಂದು ಹಾಕಿಕೊಂಡೆ ವಾರ್ಡ್ನೊಳಕ್ಕೆ ಹೋಗಿ ಅಲ್ಲಿನ ಸಮಸ್ಯೆ ಅವರ ಗಮನಕ್ಕೆ ತಂದರು. ಅಷ್ಟರಲ್ಲಾಗಲೇ ಪ್ರತಿಭಟನಾಕಾರರು ಜಕ್ಕಲಿ ಕ್ರಾಸ್ನಲ್ಲಿ ಟೈರ್ಗೆ ಬೆಂಕಿ ಹಚ್ಚಿ ಪರಿಸ್ಥಿತಿಯನ್ನು ಉದ್ವಿಗ್ನಗೊಳಿಸಲು ನೋಡಿದರು. ಸ್ಥಳದಲ್ಲಿಯೇ ಹಾಜರಿದ್ದ ಪಿಎಸ್ಐ ಜೂಲಕಟ್ಟಿ ಮತ್ತು ಅವರ ಸಿಬ್ಬಂದಿಯವರು ಅದಕ್ಕೆ ಅವಕಾಶವನ್ನೆ ನೀಡದಂತೆ ತಡೆದರು.
10ನೇ ವಾರ್ಡ್ ಸದಸ್ಯ ಶಶಿಧರ ಸಂಕನಗೌಡ್ರ, ಪಪಂ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ, ಕಲ್ಮೇಶ ತೊಂಡಿಹಾಳ ಮತ್ತಿತರರು ಜನರನ್ನು ಸಮಾಧಾನಿಸಲು ನೋಡಿದರು. ನೀರಿಗಾಗಿ ನಾರಿಯರ ಮತ್ತು ಸಾರ್ವಜನಿಕರ ಆಕ್ರೋಶ ಮುಗಿಲು ಮುಟ್ಟಿತ್ತು. ಹೀಗಾಗಿ ಈ ಸಂದರ್ಭದಲ್ಲಿ ಓಣಿಯೊಳಕ್ಕೆ ಬಂದ ಟ್ಯಾಂಕರ್ ಮರಳಿ ಕಳಿಸಲು ಕೆಲವರು ಮುಂದಾದರು. ಆಗ ಸದಸ್ಯ ಶಶಿಧರ ಸಂಕನಗೌಡ್ರ ಅವರನ್ನು ಸಮಾಧಾನಿಸಿ ನಿಮ್ಮ ಓಣಿಗೆ ಈಗ 3-4 ಟ್ಯಾಂಕರ್ ನೀರು ಸರಬರಾಜು ಮಾಡುತ್ತೇವೆ. ಒಂದು ವಾರದೊಳಗೆ ನೀರಿನ ಸಮಸ್ಯೆ ಈಡೇರಿಸಲಾಗುವುದು ಎಂಬ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

