ಉಕ ಅಭಿವೃದ್ಧಿಗೆ ಆದ್ಯತೆ ನೀಡಿ
ಗದಗ: ಉತ್ತರ ಕರ್ನಾಟಕದಲ್ಲಿ ರೇಲ್ವೆ ಸೌಕರ್ಯ, ಕೈಗಾರಿಕೆ, ನೀರಾವರಿ, ಪ್ರವಾಸೋದ್ಯಮಕ್ಕೆ ಕೇಂದ್ರದಲ್ಲಿ ಸ್ಥಾಪನೆಯಾದ ಎನ್ಡಿಎ ಸರ್ಕಾರ ಆದ್ಯತೆ ನೀಡಲು ಒತ್ತಾಯಿಸಿ ಸಂಸದ ಶಿವಕುಮಾರ ಉದಾಸಿಯರಿಗೆ ಮನವಿ ಸಲ್ಲಿಸಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರೇಲ್ವೆ ಸಚಿವ ಡಿ.ವಿ. ಸದಾನಂದಗೌಡರ ಗಮನ ಸೆಳೆಯಲು ಜೂ. 1ರಂದು ಗದಗನಲ್ಲಿ ಮನವಿ ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಶಿವಬಸವ ಜನಕಲ್ಯಾಣ ಸಂಸ್ಥೆ ಅಧ್ಯಕ್ಷ ಬಸವಣ್ಣೆಯ್ಯ ಹಿರೇಮಠ ತಿಳಿಸಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಶಾಸಕ ಬಸವರಾಜ ರಾಯರಡ್ಡಿ ಹಿತಾಸಕ್ತಿಯಿಂದ ಗದಗ-ವಾಡಿ ನೂತನ ರೈಲು ಮಾರ್ಗ ಯಲಬುರ್ಗಾ ಮಾರ್ಗವಾಗಿ ರಚನೆಯಾಗುತ್ತಿರುವುದು ಗದಗ ಜಿಲ್ಲೆಯ ನರೇಗಲ್ಲ, ಗಜೇಂದ್ರಗಡ ಜನರಿಗೆ ನಿರಾಸೆ ಮೂಡಿಸಿದೆ. ಗದಗ-ಹಾವೇರಿ ನೂತನ ರೈಲು ಮಾರ್ಗಕ್ಕೆ ಕೇಂದ್ರ ರೇಲ್ವೆ ಮಂತ್ರಾಲಯ ಬಜೆಟ್ನಲ್ಲಿ ಆದ್ಯತೆ ನೀಡಿ ಹಲವು ವರ್ಷ ಕಳೆದರೂ ಅನುಷ್ಠಾನಗೊಳ್ಳುವಲ್ಲಿ ವಿಳಂಬವಾಗುತ್ತಿದೆ. ನರೇಗಲ್, ಗಜೇಂದ್ರಗಡ ಭಾಗದ ಜನತೆಗೆ ರೇಲ್ವೆ ಸೌಕರ್ಯ ಕಲ್ಪಿಸಲು ಹಾವೇರಿ-ಗದಗ, ನರೇಗಲ್, ಗಜೇಂದ್ರಗಡ, ಕುಷ್ಟಗಿ ಮಾರ್ಗವಾಗಿ ನೂತನ ರೈಲು ಮಾರ್ಗ ರಚಿಸುವುದು ಅವಶ್ಯವಿದೆ.
ಗದಗ ರೈಲು ನಿಲ್ದಾಣದಿಂದ ನೇರ ಮುಂಬೈ, ದೆಹಲಿ, ಕೊಲ್ಕತ್ತಾ, ಚೆನೈ ಕೇರಳ ತಲುಪಲು ಗದಗ-ಹುಬ್ಬಳ್ಳಿ-ಗುಂತಕಲ ಕಡೆಗೆ ಪ್ರಯಾಣಿಕರ ರೈಲು ಸೌಕರ್ಯ ಅವಶ್ಯ ಇವೆ. ಗದಗ-ಮುಂಡರಗಿ-ಹರಿಹರ ನೂತನ ರೈಲು ಮಾರ್ಗ ಆರಂಭಿಸುವುದು ಅವಶ್ಯವಿದೆ. ಅಂಧರ ಕಲ್ಯಾಣಕ್ಕಾಗಿ ಅವಿರತ ಶ್ರಮಿಸಿದ ಡಾ. ಪಂಡಿತ ಪುಟ್ಟರಾಜ ಕವಿ ಗವಾಯಿಗಳರವರ ಹೆಸರನ್ನು ಅಂತರರಾಜ್ಯದಲ್ಲಿ ಚಲಿಸುವ ರೈಲೊಂದಕ್ಕೆ ನಾಮಕರಣ ಮಾಡುವುದು ಅವಶ್ಯವಿದೆ.
ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ರೋಣ ಭಾಗಶಃ ಗದಗ ಭಾಗದ ರೈತಾಪಿ ಜನರು ಮಳೆ ಅಭಾವದಿಂದ ಬರಗಾಲಕ್ಕೆ ತುತ್ತಾಗುತ್ತಲಿದ್ದು, ಈ ಭಾಗದಲ್ಲಿ ಆರಂಭವಾಗಿರುವ ಶಿಂಗಟಾಲೂರು ಏತ ನೀರಾವರಿ ಇಟಗಿ-ಸಾಸಲವಾಡಿ ನೀರಾವರಿ ಯೋಜನೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಉಕದ ಗದಗ, ಬಾಗಲಕೋಟೆ, ಧಾರವಾಡ, ಬೆಳಗಾವಿ ಜಿಲ್ಲೆಗಳ ನಗರಗಳ ಹಳ್ಳಿ ಪಟ್ಟಣಗಳಿಗೆ ಕುಡಿಯುವ ನೀರಿನ ಜೀವನಾಡಿಯಾದ ಮಲಪ್ರಭಾ ನದಿಗೆ ಕಳಸಾ-ಬಂಡೂರಿ ನಾಲಾ ಜೋಡಣೆ ಕಾಮಗಾರಿ ತೀವ್ರಗೊಳಿಸಬೇಕಿದೆ.
ನದಿ ಜೋಡಣೆಗೆ ಆಸಕ್ತರಾಗಿರುವ ನರೇಂದ್ರ ಮೋದಿಯವರು ಮಹದಾಯಿ ನದಿ ತಿರುವಿಗೆ ಆದ್ಯತೆ ನೀಡಬೇಕಾಗಿದೆ. ಕಳಸಾ-ಬಂಡೂರಿ ನಾಲಾ ಜೋಡಣೆಯನ್ನು, ಮಹದಾಯಿ ನ್ಯಾಯಾಧೀಕರಣದಿಂದ ಮುಕ್ತಗೊಳಿಸಲು ಇಚ್ಛಾಶಕ್ತಿ ಹೊಂದಬೇಕಿದೆ. ಗದಗ ಭಾಗದಲ್ಲಿ ಬೆಳೆಯುವ ರೈತರ ಬೆಳೆಗಳಾದ ಮೆಣಸಿನಕಾಯಿ, ಉಳ್ಳಾಗಡ್ಡಿ, ಫಸಲುಗಳಿಗೆ ಬೃಹತ್ ಶೈತ್ಯಾಗಾರಗಳನ್ನು ನಿರ್ಮಿಸಬೇಕಾಗಿದೆ. ಅಪಾರ ಔಷಧಿ ಸಸ್ಯವುಳ್ಳ ಕಪ್ಪೋತ್ತಗಿರಿ ರಕ್ಷಣೆಗೆ ವಿಶೇಷ ಪ್ಯಾಕೇಜ್ ನೀಡುವುದು ಅವಶ್ಯವಿದೆ. ಈ ಎಲ್ಲ ಅಭಿವೃದ್ದಿ ಪರ ಯೋಜನೆಯ ಬೇಡಿಕೆಗಳ ಕುರಿತು ಜೂನ್ 1ರಂದು ಗದಗ ನಗರಕ್ಕೆ ಆಗಮಿಸಲಿರುವ ಸಂಸದ ಉದಾಸಿಯವರಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

