ಗುಲ್ಬರ್ಗಾ

ಗನ್‌ಮ್ಯಾನ್ ಇಟ್ಟುಕೊಂಡು ಸುತ್ತಾಡಿದರೂ 3500 ಮತ!

Published On :

ಕಾರವಾರದಲ್ಲಿ 1971ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ 90 ಸಾವಿರಕ್ಕೂ ಹೆಚ್ಚು ಮತಗಳಿಂದ ಆಯ್ಕೆಯಾಗಿದ್ದ ವರ್ಣರಂಜಿತ ರಾಜಕಾರಣಿ ಬಿ.ವಿ. ನಾಯಕ ಅವರಿಗೆ ನಂತರದ ಚುನಾವಣೆಯಲ್ಲಿ ಅದೃಷ್ಟ ಕೈಕೊಟ್ಟಿತು. ಹೀಗಾಗಿ 1985ರ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲು ನಿರ್ಧರಿಸಿ ಕುಮಟಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದರು.ತಮಗೆ ಬೆದರಿಕೆ ಇರುವ ಹಿನ್ನೆಲೆಯಲ್ಲಿ ಗನ್‌ಮ್ಯಾನ್ ನೀಡಬೇಕೆಂದು ವಿನಂತಿಸಿ ಗನ್‌ಮ್ಯಾನ್ ಪಡೆಯುವಲ್ಲಿ ಅವರು ಯಶಸ್ವಿಯೂ ಆದರು. ದಢೂತಿ ಗನ್‌ಮ್ಯಾನ್ ಬಿ.ವಿ. ನಾಯಕ ನಿವಾಸದ ಮುಂದೆ ಕಾಣಿಸುತ್ತಿದ್ದಂತೆ ಅವರು ಪ್ರಚಾರ ಆರಂಭಿಸಿಯೇ ಬಿಟ್ಟರು. ಪ್ರಚಾರದ ಮೊದಲ ದಿನವೇ ಗನ್‌ಮ್ಯಾನ್ ಬಸವಳಿದಿದ್ದ. ಪೆಚ್ಚು ಮೋರೆ ಎದ್ದು ಕಾಣುತ್ತಿತ್ತು. ಏಕೆಂದರೆ ಬಿ.ವಿ. ನಾಯಕ ಪ್ರಚಾರಕ್ಕೆ ಯಾವ ವಾಹನವನ್ನೂ ಬಳಸಲಿಲ್ಲ. ಬೆಳಗ್ಗೆ 5 ಗಂಟೆಗೆಲ್ಲ ಎದ್ದು ಕಾಲ್ನಡಿಗೆಯಲ್ಲೇ ರಾತ್ರಿ ತನಕ ಸುತ್ತುತ್ತಿದ್ದರು.ಬಿ.ವಿ. ನಾಯಕ ಹಾಫ್ ಪ್ಯಾಂಟ್, ಟೀ ಶರ್ಟ್, ದಾರ ಕಟ್ಟಿ ಎದೆಗೆ ಇಳಿ ಬಿಟ್ಟ ಕನ್ನಡಕ, ತಲೆಗೊಂದು ಟೊಪ್ಪಿಗೆ ಧರಿಸಿ ಪಟ ಪಟನೆ ಹೆಜ್ಜೆ ಇಡುತ್ತಿದ್ದರೆ, ಮಣ ಭಾರದ ಗನ್ ಹಿಡಿದು ಗನ್‌ಮ್ಯಾನ್ ಅವರ ಹಿಂದೆ ಸುತ್ತಿ ಸುತ್ತಿ ಸುಸ್ತಾದ. ತನ್ನ ಡ್ಯೂಟಿ ಬದಲಿಸುವಂತೆ ಮೇಲಿಂದ ಮೇಲೆ ಮೇಲಧಿಕಾರಿಗಳಿಗೆ ವಿನಂತಿಸಿದರೂ ಪ್ರಯೋಜನವಾಗಲಿಲ್ಲ. ಚುನಾವಣೆ ನಡೆಯುವ ವೇಳೆಗೆ ಗನ್‌ಮ್ಯಾನ್ ಹೈರಾಣಾಗಿದ್ದ. ಇವರ ಪ್ರಚಾರದ ವೈಖರಿ ನೋಡಿ ಮತದಾರರೂ ಅಚ್ಚರಿ ಪಟ್ಟಿದ್ದರು. ಮನೆ ಮನೆಗೆ ಕಾಲ್ನಡಿಗೆಯಲ್ಲೇ ತೆರಳಿ ಇಡಿ ಕ್ಷೇತ್ರ ಸುತ್ತಿದ್ದರು. ಫಲಿತಾಂಶ ಬಂದಾಗ ಬಿ.ವಿ. ನಾಯಕರೂ ಕಕ್ಕಾಬಿಕ್ಕಿಯಾಗಿದ್ದರು. ಏಕೆಂದರೆ ಬಂದ ಒಟ್ಟೂ ಮತಗಳು 3500ನ್ನು ದಾಟಲಿಲ್ಲ.

-ವಸಂತಕುಮಾರ್ ಕತಗಾಲ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.