65 ವರ್ಷ ಮೇಲ್ಪಟ್ಟ ರೈತರಿಗೆ ಮಾಸಾಶನ: ಬಿಎಸ್ವೈ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.6
ಕರ್ನಾಟಕ ಜನತಾ ಪಕ್ಷಕ್ಕೆ ರಾಜ್ಯದ ಜನತೆ ಈ ಚುನಾವಣೆಯಲ್ಲಿ ಆಶಿರ್ವಾದ ಮಾಡಿದರೆ ಈ ರಾಜ್ಯದ 65 ವರ್ಷ ಮೇಲ್ಪಟ್ಟ ಎಲ್ಲಾ ರೈತರಿಗೂ ಪಿಂಚಣಿ (ಮಾಸಾಶನ) ಕೊಡುವುದಾಗಿ ಘೋಷಿಸಿದ್ದಾರೆ.
ಚುನಾವಣಾ ಪ್ರಚಾರಾರ್ಥವಾಗಿ ಗುಲ್ಬರ್ಗ ಪ್ರವಾಸದಲ್ಲಿರುವ ಯಡಿಯೂರಪ್ಪ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಜೆಪಿ ರೈತರು, ಮಧ್ಯಮ ವರ್ಗದವರು, ಬಡವರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತ ವರ್ಗಗಳ ಪರವಾಗಿದೆ. ಈ ಬಾರಿಯಂತೂ ಇನ್ನೂ ಒಂದು ಹೆಜ್ಜೆ ಮುಂದಿಡುವ ಮೂಲಕ ಇವೆಲ್ಲಾ ವರ್ಗದ ಜನರಿಗೆ ಹೆಚ್ಚಿನ ನೆರವು ನೀಡುವ ಬಯಕೆ ತಮ್ಮದಾಗಿದೆ ಎಂದಿದ್ದಾರೆ.
ಪ್ರಣಾಳಿಕೆಗೆ ಶೀಘ್ರ ಅಂತಿಮ ರೂಪ: ಕೆಜೆಪಿ ಇಡೀ ರಾಜ್ಯಕ್ಕೆ ಒಂದು ಹಾಗೂ ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕವಾಗಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸುತ್ತಿದೆ. ಮಾಜಿ ಮಂತ್ರಿ ಕೆ.ಎಚ್. ಶ್ರೀನಿವಾಸ ನೇತೃತ್ವದ ಪ್ರಣಾಳಿಕೆ ಸಮಿತಿ ಈಗಾಗಲೇ ಕೆಲಸದಲ್ಲಿ ತೊಡಗಿದೆ. ಇನ್ನೇನು 2 ದಿನದಲ್ಲಿ ಪ್ರಣಾಳಿಕೆಗೆ ಅಂತಿಮ ರೂಪ ನೀಡುತ್ತೇವೆ. ಏ. 10 ರೊಳಗಾಗಿ ಕಜಪ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡುತ್ತೇವೆ ಎಂದರು.
ಆದಾಯಪತ್ರದ ಮಾನದಂಡ ಸಡಿಲು: ಸಂಧ್ಯಾ ಸುರಕ್ಷಾ, ಜನನಿ, ಮಡಿಲು, ತಾಯಿಭಾಗ್ಯ, ಭಾಗ್ಯಲಕ್ಷ್ಮೀ ಬಾಂಡ್ನಂತಹ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಈ ಬಾರಿ ಮಧ್ಯಮ ವರ್ಗದ ಕುಟುಂಬಗಳಿಗೂ ಅನ್ವಯಿಸುವಂತೆ ಬದಲಾವಣೆ ತರಲಾಗುತ್ತದೆ. ಈ ಯೋಜನೆಗಳ ಫಲಾನುಭವಿಗಳಾಗಲು ಮುಖ್ಯವಾಗಿ ಆದಾಯ ಪ್ರಮಾಣ ಪತ್ರ ಪರಿಗಣಿಸಲಾಗುತ್ತಿತ್ತು. ಕಜಪ ಅಧಿಕಾರಕ್ಕೆ ಬಂದರೆ ಆದಾಯ ಪತ್ರದ ಪ್ರಮಾಣ ಪದ್ಧತಿ ತೆಗೆದು ಹಾಕಲಾಗುತ್ತದೆ. ಯೋಜನೆಗಳು ಮುಕ್ತವಾಗಿ ಮಧ್ಯಮ ವರ್ಗಕ್ಕೂ ತಲುಪುವಂತೆ ಕ್ರಮಗಳನ್ನು ಜರುಗಿಸಲಾಗುತ್ತದೆ ಎಂದರು.
ಬಡವರು, ಮಧ್ಯಮ ನವರ್ಗದವರೆಲ್ಲರು ತೊಂದರೆಯಲ್ಲೇ ಬಾಳುತ್ತಿದ್ದಾರೆ. ರಾಜ್ಯದ ಸಿಎಂ ಆಗಿ ಮೂರು ಕಾಲು ವರ್ಷದಲ್ಲಿ ಪ್ರತ್ಯಕ್ಷವಾಗಿ ಕಂಡುಂಡ ಅನುಭವವೇ ಯೋಜನೆಗಳ ಫಲಾನುಭವಿಗಳ ಆಯ್ಕೆಯಲ್ಲಿ ಪಾಲಿಸಲ್ಪಡುತ್ತಿದ್ದ ಆದಾಯ ಮಿತಿ ಮಾನದಂಡ ಸಡಿಲುಗೊಳಿಸುವ ಚಿಂತನೆಗೆ ಕಾರಣ ಎಂದರು.
ಮಹಿಳಾ ಸಹಕಾರಿ ಬ್ಯಾಂಕ್: ಮಹಿಳೆಯರು ಹೆಚ್ಚು ಆರ್ಥಿಕ ಸ್ವಾವಲಂಬಿ ಚಟುವಟಿಕೆಗಳಲ್ಲಿ ತೊಡಗಲಿ ಎಂಬ ಬಯಕೆಯಿಂದ ರು. 2000 ಕೋಟಿ ಹೂಡಿಕೆ ಮಹಿಳಾ ಸಹಕಾರಿ ಬ್ಯಾಂಕ್ ಸ್ಥಾಪನೆ ಮಾಡುತ್ತೇವೆ. ಹನಿ ನೀರು ವ್ಯರ್ಥ ಹೋಗದಂತೆ ಮಾಡಲು ನೀರಿನ ಸದ್ಬಳಕೆಗೆ ಕ್ರಮ ಜರುಗಿಸಲಾಗುತ್ತದೆ. ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಸಮಾನ ಪ್ರಗತಿ ತಮ್ಮ ಕನಸು, ಅದನ್ನು ನನಸಾಗಿಸುವುದೇ ಗುರಿ ಎಂದರು.
ಡಾ. ನಂಜುಂಡಪ್ಪ ವರದಿ ಕಸದ ಬುಟ್ಟಿಗೆ ಬಿದ್ದಿತ್ತು. ತಾವು ಸಿಎಂ ಆಗಿ ಬಂದ ನಂತರ ಈ ವರದಿಯನ್ನು ಕಸದ ಬುಟ್ಟಿಯಿಂದ ತೆಗೆದು ಧೂಳು ಜಾಡಿಸಿ ಪರಿಪೂರ್ಣವಾಗಿ ಜಾರಿಗೆ ತರಲಾಯಿತು. ಜನಾಶೀರ್ವಾದ ತಮ್ಮ ಪಕ್ಷಕ್ಕೆ ದೊರೆತಲ್ಲಿ ಮುಂದಿನ ದಿನಗಳಲ್ಲಿಯೂ ಹಿಂದುಳಿದ ನೆಲದಲ್ಲಿ ಪ್ರಗತಿಯ ಹಸಿರು ಚಿಗುರುವಂತೆ ಮಾಡುವುದಾಗಿ ಹೇಳಿದರು.
ಕೆಜೆಪಿ 3ನೇ ಪಟ್ಟಿ ಶೀಘ್ರ: ಏ. 7ರಂದು ಚುನಾವಣಾ ಸಮೀತಿಯ ಸಭೆ ನಡೆಸಿ 60 ರಿಂದ 70ಸ್ಥಾನಗಳಿಗೆ ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಲಾಗುವುದು ಎಂದರು.
ಕೆಜೆಪಿ ಎಲ್ಲಾ 224 ಸ್ಥಾನಗಳಿಗೆ ಸ್ಪರ್ಧಿಸಲಿದೆ. ಏನೇ ಆಗಲಿ ಯಡಿಯೂರಪ್ಪ ಬಿಜೆಪಿಗೆ ಮತ್ತೆ ಮರಳೋದಿಲ್ಲ, ಇದೆಲ್ಲವು ತಮಗಾದವರ ಹಾಗೂ ಕೆಜೆಪಿ ಬೆಳವಣಿಗೆ ಸಹಿಸದವರ ಗೊಂದಲಕಾರಿ ಹೇಳಿಕೆ. ಜನತೆ ಇದನ್ನೆಲ್ಲ ನಂಬಬಾರದು. ಕೆಜೆಪಿಗೆ ಅಲ್ಪಸಂಖ್ಯಾತರ ಭಾರಿ ಬೆಂಬಲ ದೊರಕುತ್ತಿದೆ ಎಂದ ಯಡಿಯೂರಪ್ಪ ಚುನಾವಣಾ ಪೂರ್ವ, ನಂತರದ ಮೈತ್ರಿ ವಿಚಾರಗಳ ಬಗ್ಗೆ ತಾವು ಈಗಲೇ ಏನನ್ನೂ ಹೇಳೋದಿಲ್ಲ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

