ವೈಚಾರಿಕತೆ ಬದುಕಿಗೆ ಅನಿವಾರ್ಯ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.12
ನಾನು ಯಾವುದೇ ವೈಚಾರಿಕತೆಯನ್ನು ಅನುಸರಿಸುವುದಿಲ್ಲ ಎನ್ನುವುದು ಒಂದು ವೈಚಾರಿಕತೆಯಾಗಿದೆ ಹಾಗೂ ಇದು ವ್ಯಕ್ತಿವಾದವನ್ನು ಪ್ರತಿಬಿಂಬಿಸುತ್ತದೆ. ಒಂದು ಸರಿಯಾದ ಮಾದರಿ, ಸರಿಯಾದ ವೈಚಾರಿಕತೆ ಇಲ್ಲದಿದ್ದರೆ ದಿಕ್ಸೂಚಿ ಇಲ್ಲದೆ ಕಡಲಲ್ಲಿ ಪ್ರಯಾಣಿಸಿದಂತಾಗುತ್ತದೆ ಎಂದು ಆವಿಷ್ಕಾರ ಪ್ರಗತಿಪರ ಸಾಂಸ್ಕೃತಿಕ ವೇದಿಕೆಯ ರಾಜ್ಯ ಸಂಚಾಲಕ ಡಾ. ಬಿ.ಆರ್. ಮಂಜುನಾಥ ಹೇಳಿದರು.
ಆವಿಷ್ಕಾರ, ಎಐಡಿವೈಒ, ಎಐಎಂಎಸ್ಎಸ್ ಹಾಗೂ ಎಐಡಿಎಸ್ಒ ಸಂಘಟನೆಗಳಿಂದ ನಗರದಲ್ಲಿ ನಡೆದ ಗುಲ್ಬರ್ಗ 4ನೇ ಸಾಂಸ್ಕೃತಿಕ ಜನೋತ್ಸವದ ಕೊನೆಯ ದಿನದ ಸಾಂಸ್ಕೃತಿಕ ಚಳವಳಿಯ ಮುಂದಿರುವ ಸವಾಲುಗಳು ಎಂಬ ವಿಷಯದ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.
ಮಾಧ್ಯಮಗಳಲ್ಲಿ ಕೊಳಕು ಕಾರ್ಯಕ್ರಮ: ಇಂದು ಅಧಃಪತನಗೊಂಡಿರುವ ಪೋಸ್ಟ್ ಮಾಡರ್ನಿಸಮ್ನಂತಹ ಸಿದ್ಧಾಂತಗಳ ಪ್ರಭಾವ ಸಮಾಜದ ಮೇಲೆ ಗಾಢವಾಗಿದೆ. ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳ ಜಾರಿಯ ನಂತರವಂತೂ ಮಾಧ್ಯಮಗಳಲ್ಲಿ ಕೊಳಕಾದ ಕಾರ್ಯಕ್ರಮಗಳು ಪ್ರಸಾರಗೊಳಿಸುತ್ತಿವೆ. ಇನ್ನೊಂದೆಡೆ ಹೆಣ್ಣನ್ನು ಭೋಗದ ವಸ್ತುವಿನಂತೆ ಚಿತ್ರಿಸಿ ಮೌಢ್ಯ, ಹಳೆಯ ಕಂದಾಚಾರಗಳನ್ನು ತುರುಕುತ್ತಿದ್ದಾರೆ ಎಂದರು.
ರಾಜಕೀಯದಲ್ಲಿಯೂ ಭ್ರಷ್ಟತೆ ತುಂಬಿಹೋಗಿದೆ. ಅದು ಜನಜೀವನದ ಮೇಲೆ ವಿಷಕಾರಕ ಪರಿಣಾಮವನ್ನು ಉಂಟುಮಾಡುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ಪುರಸ್ಕಾರ ಹಾಗೂ ಹೆಸರಿಗೋಸ್ಕರ ರಚನೆಯಾಗುವ ಸಾಹಿತ್ಯ ಸಾಹಿತ್ಯವೇ ಅಲ್ಲ. ಈ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಇಂತಹ ಪ್ರಗತಿ ವಿರೋಧಿ ಸಿದ್ಧಾಂತಗಳನ್ನು ನಾವು ಪ್ರಬಲವಾಗಿ ವಿರೋಧಿಸಬೇಕೆಂದರು.
ಎಂಥವರು ಉತ್ತಮ ಸಾಹಿತಿಯಾಗರು?: ಅಗ್ಗದ ಪ್ರಚಾರಕ್ಕಾಗಿ ಬಲಿಯಾಗದೆ ಅದರೊಂದಿಗೆ ಸಂಧಾನ ಮಾಡಿಕೊಳ್ಳದ ಸಾಹಿತಿಯು ಉತ್ತಮ ಸಾಹಿತಿ ಆಗಲು ಸಾಧ್ಯ. ಅಂತೆಯೇ ಶರಶ್ಚಂದ್ರ ಚಟರ್ಜಿ, ಪ್ರೇಮಚಂದ, ಬೇಂದ್ರೆ ಹೀಗೆ ಹಲವು ಜನ ಇದಕ್ಕೆ ಉದಾಹರಣೆಯಾಗಿದ್ದಾರೆ. ನಾವು ಹೊಸದನ್ನು ಸೃಷ್ಟಿಸುವುದು ಇಂದು ತುಂಬಾ ಅಗತ್ಯವಾಗಿದೆ. ಹಳೆಯದರ ಸ್ಥಳದಲ್ಲಿ ಹೊಸದನ್ನು ಸ್ಥಾಪಿಸುವುದೇ ಸಾಂಸ್ಕೃತಿಕ ಆಂದೋಲನದ ಗುರಿಯಾಗಿದೆ ಎಂದರು. ನಾವು ಭವಿಷ್ಯದ ಅತ್ಯುತ್ತಮ ಸೃಷ್ಟಿಗೆ ಹಿಂದಿನ ಒಳ್ಳೆಯ ಪರಂಪರೆಯನ್ನು ಗೊಬ್ಬರವಾಗಿ ಸ್ವೀಕರಿಸಿ ಹೊಸದನ್ನು ಸೃಷ್ಟಿಸಬೇಕು. ಈ ಮಹತ್ವಪೂರ್ಣ ಕಾರ್ಯಕ್ಕಾಗಿ ವಿಶ್ವದ ಎಲ್ಲ ಮೂಲೆಗಳಲ್ಲಿಯೂ ಇರುವ ಒಳ್ಳೆಯ ಸಾಹಿತ್ಯವನ್ನು ಗಾಢವಾಗಿ ಅಭ್ಯಸಿಸಬೇಕು ಎಂದು ಸಲಹೆ ನೀಡಿದರು.
ಜನರ ಸಂಪರ್ಕದಿಂದಲೇ ಉದಾತ್ತ ಸಾಹಿತ್ಯ ಸೃಷ್ಟಿ: ಕೇಂದ್ರೀಯ ವಿವಿ ಕನ್ನಡ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಪಕ ಡಾ. ವಿಕ್ರಂ ವಿಸಾಜಿ ಮಾತನಾಡಿ, ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿದರೆ ನಮ್ಮ ಸಾಹಿತ್ಯ ಬಲಹೀನವಾಗುತ್ತದೆ ಎಂದು ಹಲವು ಬುದ್ಧಿಜೀವಿಗಳು, ಸಾಹಿತಿಗಳು ಭ್ರಮೆಯಲ್ಲಿ ಮುಳುಗಿದ್ದಾರೆ. ಆದರೆ ಒಂದು ಉದಾತ್ತ ಉತ್ತಮ ಸಾಹಿತ್ಯ ಸೃಷ್ಟಿಯಾಗುವುದೇ ಜನರ ನಿರಂತರ ಸಂಪರ್ಕದಿಂದ. ಅವರ ನೋವು ಕಷ್ಟಗಳು ನಮ್ಮವಾದಾಗ ನಮ್ಮಿಂದ ಅದ್ಭುತ ಸೃಷ್ಟಿ ಸಾಧ್ಯ ಎಂದರು.
ಸಂವಾದದಲ್ಲಿ ನಗರದ ಹಲವು ಗಣ್ಯರು, ಸಾಂಸ್ಕೃತಿಕ ಚಳವಳಿಯ ಆಸಕ್ತ ವಿದ್ಯಾರ್ಥಿಗಳು, ಹಿರಿಯರು ಭಾಗವಹಿಸಿ ತಮ್ಮ ಹಲವಾರು ಪ್ರಶ್ನೆಗಳನ್ನು ಕೇಳಿ ಉತ್ತರ ಪಡೆದರು. ಆವಿಷ್ಕಾರದ ಜಿಲ್ಲಾ ಸಂಚಾಲಕ ವಿ.ಜಿ. ದೇಸಾಯಿ ಅಧ್ಯಕ್ಷತೆ ವಹಿಸಿದ್ದರು. ಎಐಡಿವೈಒ ಜಿಲ್ಲಾ ಕಾರ್ಯದರ್ಶಿ ಮಹೇಶ ನಾಡಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

