ಗುಲ್ಬರ್ಗಾ

ಅನನುಭವಿಗೆ ಟಿಕೆಟ್, ಬೆಂಬಲದ ಪ್ರಶ್ನೆಯೇ ಇಲ್ಲ

Published On :

ಯಾದಗಿರಿ: ಗ್ರಾಮ ಪಂಚಾಯಿತಿ ಚುನಾವಣೆಯಲ್ಲೂ ಆಯ್ಕೆಯಾಗದ ಅನನುಭವಿ ವ್ಯಕ್ತಿಗೆ ಯಾದಗಿರಿ ಮತಕ್ಷೇತ್ರದ ಬಿಜೆಪಿ ಟಿಕೆಟ್ ನೀಡಿರುವುದು ಕಾರ್ಯಕರ್ತರಲ್ಲಿ ತೀವ್ರ ಅಸಮಾಧಾನ ಮೂಡಿಸಿದೆ. ಕೂಡಲೇ ವರಿಷ್ಠರು ಇದನ್ನು ಸರಿಪಡಿಸಿ, ಸ್ಥಳೀಯ ಆಕಾಂಕ್ಷಿಗಳಿಗೆ ಟಿಕೆಟ್ ನೀಡಬೇಕು. ಈಗಿನ ಅಭ್ಯರ್ಥಿಯನ್ನು ಬೆಂಬಲಿಸುವ ಪ್ರಶ್ನೆಯೇ ಇಲ್ಲ ಎಂದು ಯಾದಗಿರಿ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.
ನೇರ ಪರಿಣಾಮ: ನಗರದ ಪತ್ರಿಕಾಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ. ವೆಂಕಟೇಶ ಗಡ್ಡಿಮನಿ ಅನುಭವ ಇಲ್ಲದ ವ್ಯಕ್ತಿ. ಯಾದಗಿರಿ ಮತಕ್ಷೇತ್ರದ ಟಿಕೆಟ್ ಅವರಿಗೆ ನೀಡಿರುವುದು ದುರ್ದೈವದ ಸಂಗತಿ. ಇದರಿಂದ ಜಿಲ್ಲೆಯ ನಾಲ್ಕು ಮತಕ್ಷೇತ್ರಗಳ ಬಿಜೆಪಿ ಅಭ್ಯರ್ಥಿಗಳ ಮೇಲೆ ನೇರ ಪರಿಣಾಮ ಬೀರಲಿದೆ ಎಂದು ಎಚ್ಚರಿಸಿದರು.
  ಜಿಪಂ ಸದಸ್ಯ ದೇವರಾಜ ನಾಯಕ ಮಾತನಾಡಿ, ಕ್ಷೇತ್ರದ ಜನರ ಪರಿಚಯವೇ ಇಲ್ಲದ ವ್ಯಕ್ತಿಗೆ ಟಿಕೆಟ್ ನೀಡಿರುವುದು ನಿಷ್ಠಾವಂತ ಕಾರ್ಯಕರ್ತರಿಗೆ ನೋವುಂಟು ಮಾಡಿದೆ. ಕ್ಷೇತ್ರದ ಯಾವುದೇ ವ್ಯಕ್ತಿಗೆ ಟಿಕೆಟ್ ನೀಡಿದರೆ ಪಕ್ಷದ ಅಭ್ಯರ್ಥಿ ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡುತ್ತೇವೆ. ಇಲ್ಲದಿದ್ದರೆ ಗೋ ಬ್ಯಾಕ್ ಸುರಪುರ ಚಳವಳಿಯನ್ನು ಮುಂದುವರಿಸಲಾಗುವುದು. ಪಕ್ಷದ ವರಿಷ್ಠರ ಮೇಲೆ ವಿಶ್ವಾಸವಿದೆ. ಒಂದು ವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಕಾರ್ಯಕರ್ತರು, ಬೆಂಬಲಿಗರು, ಬಿಜೆಪಿ ಪದಾಧಿಕಾರಿಗಳ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕುತಂತ್ರ: ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಸಿದ್ರಾಮರಡ್ಡಿ ಬಲಕಲ್ ಮಾತನಾಡಿ, ಚಂದ್ರಶೇಖರ ಮಾಗನೂರರು ರಾಜುಗೌಡರ ಆತ್ಮೀಯ. ಪಕ್ಷ ಬಿಟ್ಟು ಹೋಗಿರುವ ರಾಜುಗೌಡರ ಆತ್ಮೀಯ ವ್ಯಕ್ತಿಗೆ ಟಿಕೆಟ್ ನೀಡಲಾಗಿದೆ. ಕ್ಷೇತ್ರದಲ್ಲಿ ಆಕಾಂಕ್ಷಿಗಳು, ಸಮರ್ಥರು ಇಲ್ಲದೇ ಇದ್ದಲ್ಲಿ ಬೇರೆಯವರಿಗೆ ಟಿಕೆಟ್ ನೀಡಬಹುದಿತ್ತು. ಆದರೆ ಕ್ಷೇತ್ರದ ಬಿಜೆಪಿ ಕಾರ್ಯಕರ್ತರ ಹಿತವನ್ನು ಬದಿಗೊತ್ತಿ ಹೊರಗಿನವರಿಗೆ ಟಿಕೆಟ್ ನೀಡಿರುವುದರ ಹಿಂದೆ ಕುತಂತ್ರವಿದೆ ಎಂದು ದೂರಿದರು.
  ಶನಿವಾರ ರಾತ್ರಿಯವರೆಗೆ ಎಲ್ಲವನ್ನು ಸರಿಪಡಿಸುವುದಾಗಿ ವರಿಷ್ಠರು ಭರವಸೆ ನೀಡಿದ್ದಾರೆ. ಒಂದು ವೇಳೆ ಆಗದೇ ಇದ್ದಲ್ಲಿ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.
  ಜಿಪಂ ಸದಸ್ಯ ಬಸವರಾಜ ಖಂಡ್ರೆ, ಎಪಿಎಂಸಿ ಸದಸ್ಯರಾದ ಬಸವರಾಜ ಪಾಟೀಲ ಬಿಳ್ಹಾರ, ಲಗಮಣ್ಣ ಮುಂಡರಗಿ, ತ್ರಿಶೂಲ ಹವಾಲ್ದಾರ, ಗಿರೆಪ್ಪಗೌಡ ಬಾಣತಿಹಾಳ, ಭೀಮರಾಯ ಜಂಗಲಿ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.