ನಾಸೀರ್ ಹುಸೇನ್ ನಾಮಪತ್ರ ಗೊಂದಲಕ್ಕೆ ತೆರೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.19
ನಾಮಪತ್ರ ಪರಿಶೀಲನೆ ಕಾಲಕ್ಕೆ ಗುಲ್ಬರ್ಗ ಉತ್ತರ ಅಸೆಂಬ್ಲಿ ಕ್ಷೇತ್ರದ ಕೆಜೆಪಿ ಹುರಿಯಾಳು ಉಸ್ತಾದ್ ನಾಸೀರ್ ಹುಸೇನ್ ಇವರ ನಾಮಪತ್ರದ ಬಿ ಫಾರ್ಮ್ ವಿಚಾರವಾಗಿ ಮೂಡಿದ್ದ ಗೊಂದಲಕ್ಕೆ ಶುಕ್ರವಾರ ತೆರೆ ಬಿದ್ದಿದೆ.
ಗುಲ್ಬರ್ಗ (ಉ) ಚುನಾವಣಾಧಿಕಾರಿ, ಪಾಲಿಕೆ ಆಯುಕ್ತ ರವೀಂದ್ರ ಇವರು ನಾಸೀರ್ ಹುಸೇನ್ ಹಾಗೂ ಕೆಜೆಪಿ ಪಕ್ಷದ ನಾಯಕರು ಸಲ್ಲಿಸಿದ್ದ ದೂರನ್ನು ಅಮೂಲಾಗ್ರವಾಗಿ ಪರಿಶೀಲಿಸಿ ಹಾಗೂ ಚುನಾವಣಾ ಆಯೋಗಕ್ಕೂ ಈ ಬೆಳವಣಿಗೆ ಗಮನಕ್ಕೆ ತಂದು ನಿರ್ದೇಶನ ಕೋರಿದ್ದರು.
ಶುಕ್ರವಾರ ಮಧ್ಯಾಹ್ನ 3ಕ್ಕೆ ಮತ್ತೆ ಸಭೆ ನಡೆಸಿದ ರವೀಂದ್ರ ಮತ್ತು ಅಧಿಕಾರಿಗಳು ಹಾಗೂ ಅಭ್ಯರ್ಥಿ ನಾಸೀರ್ ಹುಸೇನ್ ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ತಮ್ಮ ಮಹತ್ವದ ನಿರ್ಣಯ ಪ್ರಕಟಿಸುವ ಮೂಲಕ ನಾಸೀರ್ ಅವರೇ ಕೆಜೆಪಿ ಅಭ್ಯರ್ಥಿ ಎಂದು ಹೇಳಿದ್ದಾರೆ. ಇದರೊಂದಿಗೆ ನಾಸೀರ್ ಹುಸೆನ್ ನಾಮಪತ್ರ ಪರಿಶೀಲನೆಯಲ್ಲಿ ಮೂಡಿದ್ದ ಗೊಂದಲದ ವಾತಾವರಣಕ್ಕೆ ತೆರೆ ಬಿದ್ದಂತಾಗಿದೆ.
ಮತ್ತೆ ಎ, ಬಿ ಫಾರ್ಮ್ ಕೊಟ್ಟೆವು: ನಾಸೀರ್: ಏ.15 ರಂದೇ ನಾಮಪತ್ರ ಸಲ್ಲಿಸಿದ್ದೆ. ಆಗ ಎ, ಬಿ ಫಾರ್ಮ್ ಮೂಲ ರೂಪದ್ದೇ ಲಗತ್ತಿಸಿದ್ದೆ. ನಾಮಪತ್ರ ಸ್ವೀಕರಿಸಿದ ಅಧಿಕಾರಿಗಳು ಎಲ್ಲವು ಸರಿಯಾಗಿದೆ ಎಂದು ಸ್ವೀಕೃತಿ ಪತ್ರವನ್ನೂ ನೀಡಿದ್ದರು. ಪರಿಶೀಲನೆ ಕಾಲದಲ್ಲಿ ಎ ಮತ್ತು ಬಿ ಫಾರ್ಮ್ ಮೂಲ ರೂಪದ್ದಿಲ್ಲ, ಜೆರಾಕ್ಸ್ ಅಂಟಿಸಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ತಮಗೆ ತುಂಬಾ ತೊಂದರೆಯಾಗಿದ್ದು, ತಾವು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾಗಿ ನಾಸೀರ್ ಹುಸೇನ್ ಹೇಳಿದರು.
ರಾಜಕೀಯ ಫಿತೂರಿ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾಸೀರ್, ರವೀಂದ್ರ ಅವರು ಶುಕ್ರವಾರ ಹೊರಡಿಸಿದ್ದ ಆದೇಶವನ್ನು ಓದುವ ಮೂಲಕ ತಮಗೆ ಕೊನೆಗೂ ನ್ಯಾಯ ದೊರಕಿದೆ. ಯಾರೋ ತಮಗೆ ರಾಜಕೀಯವಾಗಿ ಆಗದವರು ಇಂತಹ ಸಂಚು ರೂಪಿಸಿದ್ದು ದೇವರು ಇಂತಹ ಸಂಚುಗಳನ್ನೆಲ್ಲ ನಿವಾರಣೆ ಮಾಡಿದ್ದಾನೆ ಎಂದರು.
ಪಾಲಿಕೆಯಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದಕ್ಕೆ ಈ ಬೆಳವಣಿಗೆ ಸಾಕ್ಷಿ. ತಾವು ಮೂಲ ಪ್ರತಿ ಬಿ ಫಾರ್ಮ್ ಸಲ್ಲಿಸಿದ್ದರೂ ಸಹ ಝಿರಾಕ್ಸ್ ಪ್ರತಿಗಳೇಕೆ ಬಂದವು ಎಂಬುದೇ ನಿಗಢ. ಮೊದಲ ದಿನದ ನಾಮಪತ್ರದಲ್ಲಿ ಮೂಲ ಪ್ರತಿಗಳಿದ್ದವು. ಆದರೆ ಅವುಗಳೇ ಕಳೆದು ಹೋಗುತ್ತವೆ ಎಂದರೆ ಹೇಗೆ ಎಂದು ಅಚ್ಚರಿಪಟ್ಟರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿರುವ ಕೆಜೆಪಿ ಮುಖಂಡರಾದ ಬಸವರಾಜ ಇಂಗಿನ್, ತಿಪ್ಪಣ್ಣಪ್ಪ ಕಮಕನೂರ್ ನಾಸೀರ್ ಹುಸೇನ್ ನಾಮಪತ್ರಕ್ಕೆ ಲಗತ್ತಿಸಲಾಗಿದ್ದ ಮೂಲ ಪ್ರತಿ ಬಿ ಫಾರ್ಮ್ ಬದಲಾಗಿದ್ದು ಆ ಸ್ಥಾನದಲ್ಲಿ ಜೆರಾಕ್ಸ್ ಪ್ರತಿಗಳು ಬಂದಿವೆ. ಈ ಬಗ್ಗೆ ಸಿಓಡಿ ತನಿಖೆಯಾಗಲಿ ಎಂದು ಆಗ್ರಹಿಸಿದ್ದಾರೆ.
ಪಾಲಿಕೆಯಲ್ಲಿ ಮಾಜಿ ಶಾಸಕ ಹಾಗೂ ಗುಲ್ಬರ್ಗ(ಉ) ಕಾಂಗ್ರೆಸ್ ಅಭ್ಯರ್ಥಿ ಖಮರುಲ್ ಇಸ್ಲಾಂ ಅವರ ಪಾರುಪತ್ಯವೇ ಇದೆ. ಇದರಿಂದಲೇ ಇಂತಹ ಬೆಳವಣಿಗೆಗಳು ರಾಜಕೀಯವನ್ನೇ ಗುರಿಯಾಗಿಸಿಕೊಂಡು ನಡೆಯುತ್ತಿವೆ. ಚುನಾವಣೆ ಅಧಿಕಾರಿಗಳು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಬೇಕು. ಕ್ರಮಕ್ಕೆ ಮುಂದಾಗಬೇಕು ಎಂದು ನಾಸೀರ್ ಹುಸೇನ್ ಆಗ್ರಹಿಸಿದ್ದಾರೆ.
ಎರಡು ನಾಮಪತ್ರ ವಾಪಸ್: ನಾಮಪತ್ರ ವಾಪಸ್ ಪಡೆಯುವ ಅವಧಿ ಇದು. ಶುಕ್ರವಾರ ಜಿಲ್ಲೆಯ ಚಿತ್ತಾಪುರ (ಮೀ) ಕ್ಷೇತ್ರದಲ್ಲಿ ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿದ್ದ ಜೇಮಸಿಂಗ್ ಪಾಂಡುರಂಗ, ಸೀತಾರಾಂ ಹೇಮಲಾ ರಾಠೋಡ ಇವರು ತಮ್ಮ ನಾಮಪತ್ರ ವಾಪಸ್ ಪಡೆದಿದ್ದಾರೆ. ನಾಮಪತ್ರ ವಾಪಸ್ ಪಡೆಯಲು 20 ಕೊನೆಯ ದಿನ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

