ಗುಲ್ಬರ್ಗಾ

ಬಿಎಸ್ವೈ ಹೇಳಿಕೆಗೆ ಎಂ.ಜಿ. ನಾಯಕ ಖಂಡನೆ

Published On :

ಸುರಪುರ: ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಪರವಾಗಿ ಚುನಾವಣೆ ಪ್ರಚಾರಕ್ಕೆ ಆಗಮಿಸಿದ್ದ ಯಡಿಯೂರಪ್ಪ ತಮ್ಮ ಭಾಷಣದಲ್ಲಿ ಸುರಪುರದಲ್ಲಿ ಒಂದೇ ಸಮುದಾಯದವರು ಅಧಿಕಾರಿ ನಡೆಸಿ ದಲಿತ ಮತ್ತು ಹಿಂದುಳಿದ ವರ್ಗಗಳ ಮೇಲೆ ದಬ್ಬಾಳಿಕೆ, ಗುಂಡಾಗಿರಿ ಮಾಡುತ್ತಿದ್ದಾರೆ. ಇದರಿಂದ ಕ್ಷೇತ್ರದ ಜನತೆ ಬೇಸತ್ತು ಹೋಗಿದ್ದಾರೆ ಎಂದು ಮಾಡಿರುವ ಆರೋಪ ಖಂಡನೀಯ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಅಭ್ಯರ್ಥಿ ರಾಜಾ ಮದನಗೋಪಾಲ ನಾಯಕ ಹೇಳಿದರು.
ಸವಾಲು: ಪಕ್ಷದ ಕಾರ್ಯಾಲಯದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಲ್ಲಿ ಬೇಡ ಸಮುದಾಯದವರೇ ಅಧಿಕಾರ ನಡೆಸಿದ್ದರೂ, ಯಾವುದೇ ಜಾತಿ ಜನಾಂಗದ ಮೇಲೆ ನಮ್ಮ ಸಮಾಜ ದೌರ್ಜನ್ಯ, ಗೂಂಡಾಗಿರಿ, ದಬ್ಬಾಳಿಕೆ ನಡೆಸಿಲ್ಲ. ಒಂದು ವೇಳೆ ಈ ಬಗ್ಗೆ ದಾಖಲೆಗಳಿದ್ದರೆ ಯಡಿಯೂರಪ್ಪ ಬಹಿರಂಗಪಡಿಸಲಿ. ಆಧಾರ ರಹಿತವಾಗಿ ಮಾತನಾಡಿ, ಬೇಡ ಸಮುದಾಯದ ಜನರ ಭಾವನೆಗೆ ಅವರು ಧಕ್ಕೆ ತಂದಿದ್ದಾರೆ. ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುವುದು ಅವರಿಗೆ ಗೌರವ ತರುವುದಿಲ್ಲ ಎಂದು ಕಿಡಿ ಕಾರಿದರು.
ಕಾನೂನುಬಾಹಿರ: ಬೇಡ ಸಮುದಾಯವು ಪರಿಶಿಷ್ಟ ಪಂಗಡಕ್ಕೆ ಸೇರಿದ್ದು ಎಂಬುದನ್ನು ಅರಿಯದೆ ಗೌರವಯುತ ಸ್ಥಾನದಲ್ಲಿದ್ದ ಯಡಿಯೂರಪ್ಪನವರು ಅವಹೇಳನಕಾರಿಯಾಗಿ ಮತ್ತು ಕಾನೂನುಬಾಹಿರವಾಗಿ ಮಾತನಾಡಿ ಸ್ಪಷ್ಟವಾಗಿ ಚುನಾವಣೆ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಮದನಗೋಪಾಲ ನಾಯಕ ಆರೋಪಿಸಿದರು.
ಸುರಪುರ ವಿಧಾನಸಭೆ ಚುನಾವಣೆ ಇತಿಹಾಸ ಗೊತ್ತಿರದ ಕೆಜೆಪಿ ರಾಜ್ಯಾಧ್ಯಕ್ಷರು ಇಲ್ಲಸಲ್ಲದ ಆರೋಪ ಮಾಡಿರುವುದು ಸರಿಯಲ್ಲ. 1952ರಲ್ಲಿ ಕುರುಬ ಸಮುದಾಯದ ಕೋಲೂರು ಮಲ್ಲಪ್ಪ ಪ್ರಥಮ ಬಾರಿಗೆ ಚುನಾಯಿತರಾದರು. 1957ರಲ್ಲಿ ಲಿಂಗಾಯತ ಸಮುದಾಯದ ಧರ್ಮರಾವ ವಕೀಲ, 1962, 67, 72 ಹೀಗೆ ಮೂರು ಚುನಾವಣೆಯಲ್ಲಿ ಮುಸ್ಲಿಂ ಸಮುದಾಯದ ಅಬ್ದುಲ್ ವಾಹಿದ್ ಚೌದರಿ, ಅಬ್ಬಾಸ್ ಅಲಿ, ಲಿಂಗಾಯತ ಜನಾಂಗದ ಮಹಾಂತಸ್ವಾಮಿ ಹಿರೇಮಠ ಸ್ಪರ್ಧಿಸಿದ್ದರು. 1978ರಿಂದ 2004ರವರೆಗೆ ಕುರುಬ ಸಮಾಜದ ಶಿವಣ್ಣ ಮಂಗೀಹಾಳ ಸ್ಪರ್ಧಿಸಿದ್ದಾರೆ. ಅಂದಿನಿಂದ ಇಂದಿನವರೆಗೂ ಚುನಾಯಿತರಾದ ಯಾವೊಬ್ಬ ಶಾಸಕರೂ ಯಾವುದೇ ಜಾತಿ ಸಮುದಾಯದ ಮೇಲೆ ದಬ್ಬಾಳಿಕೆ, ಗುಂಡಾಗಿರಿ ಮಾಡಿರುವುದಿಲ್ಲ. ಕ್ಷೇತ್ರದಲ್ಲಿ ಶಾಂತಿ ಸೌಹಾರ್ದತೆಯಿಂದ ಇದ್ದಾರೆ. ಇದನ್ನು ತಿಳಿಯದೇ ಒಂದು ಕೋಮಿನ ಮೇಲೆ ಆರೋಪ ಮಾಡುವುದು ಸರಿಯಲ್ಲ ಎಂದರು.
ಒಲೈಕೆ ಸಲ್ಲದು: ಬಿಎಸ್ವೈ ಒಂದು ಕೋಮಿನವರನ್ನು ದಿಕ್ಕು ತಪ್ಪಿಸುವ ನಿಟ್ಟಿನಲ್ಲಿ ಮತ್ತೊಂದು ಕೋಮಿನವರನವರನ್ನು ಒಲೈಸುವುದು ಸರಿಯಲ್ಲ. ಬೇಡ ಸಮುದಾಯದ ಬಗ್ಗೆ ಹಗುರವಾಗಿ ಮಾತನಾಡಿದರೆ ಈ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಮುದಾಯ ವಿರುದ್ಧ ಅವಹೇಳಕಾರಿ ಭಾಷಣ ಮಾಡಿರುವ ಕೆಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಿಸಿಕೊಳ್ಳಬೇಕು ಎಂದು ಎಂ.ಜಿ. ನಾಯಕ ಆಗ್ರಹಿಸಿದರು.
ರಾಜಾ ಹರ್ಷವರ್ಧನ ನಾಯಕ, ರಾಜಾ ಮುಕುಂದನಾಯಕ, ರಾಜಾ ವಿಜಯವರ್ಧನ ನಾಯಕ, ಲಕ್ಷ್ಮಣ ಗುತ್ತೇದಾರ್, ರಾಘವೇಂದ್ರ ಬಾಡಿಯಾಳ, ಕೃಷ್ಣರಾಜ ಏವೂರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.