ಜೆಡಿಎಸ್ ಅಭ್ಯರ್ಥಿಗೆ ಧರಂಸಿಂಗ್, ಬೆಳಮಗಿ ಒಳಬೆಂಬಲ: ಪಾಟೀಲ್
ಕ.ಪ್ರ.ವಾರ್ತೆ, ಆಳಂದ, ಏ.20
ವಿಧಾನಸಭಾ ಮತಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಸುಭಾಷ ಆರ್. ಗುತ್ತೇದಾರ ಅವರಿಗೆ ಕಾಂಗ್ರೆಸ್ ಸಂಸದ ಧರ್ಮಸಿಂಗ್ ಹಾಗೂ ಗುಲ್ಬರ್ಗ ಜಿಲ್ಲಾ ಉಸ್ತುವಾರಿ ಸಚಿವ ರೇವುನಾಯಕ ಬೆಳಮಗಿಯವರು ಒಳಗೊಳಗೆ ಬೆಂಬಲಿಸುವ ಅನೈತಿಕ ರಾಜಕಾರಣ ಮಾಡುತ್ತಿದ್ದಾರೆ ಎಂದು ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಿ.ಆರ್. ಪಾಟೀಲ್ ಆರೋಪಿಸಿದರು.
ಅವಕಾಶವಾದಿ ರಾಜಕಾರಣ: ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಅಸ್ತಿತ್ವವೇ ಇಲ್ಲವಾಗಿದೆ. ಹಾಗಾಗಿ ಧರ್ಮಸಿಂಗ್ ಹಾಗೂ ಬೆಳಮಗಿಯವರು ಸುಭಾಷ ಗುತ್ತೇದಾರ ಅವರನ್ನು ಹಲವಾರು ಸಂದರ್ಭದಲ್ಲಿ ಬೆಂಬಲಿಸುವ ಮೂಲಕ ಅವಕಾಶವಾದಿ ರಾಜಕಾರಣ ಮಾಡುತ್ತಿದ್ದಾರೆ ಎಂದು ಅವರು ದೂರಿದರು.
ಜೆಡಿಎಸ್ ಅಭ್ಯರ್ಥಿ ಸುಭಾಷ ಗುತ್ತೇದಾರ ಅವರು ಮತದಾರರಿಗೆ ಹಣದ ಹಾಗೂ ಹೆಂಡದ ಆಮಿಷ ಒಡ್ಡುತ್ತಿದ್ದರೂ ಸಹ ಚುನಾವಣಾ ಆಯೋಗವು ಯಾವುದೇ ರೀತಿಯಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ ಎಂದು ದೂರಿದ ಅವರು, ಗುತ್ತೇದಾರ ಅವರಿಗೆ ಸೇರಿದ ಮದ್ಯದ ಅಂಗಡಿಯಲ್ಲಿಯೇ ಮದ್ಯವನ್ನು ಹಂಚಲಾಗುತ್ತಿದೆ. ಅಲ್ಲದೇ ಸ್ವ ಸಹಾಯ ಸಂಘಗಳಿಗೆ ಹಣ ಕೊಡುವುದು ಹಾಗೂ ದೇವಸ್ಥಾನಗಳ ಅಭಿವೃದ್ಧಿಯ ಭರವಸೆ ಮುಂತಾದ ಆಮಿಷಗಳನ್ನು ಒಡ್ಡುತ್ತಿದ್ದಾರೆ. ಈಗಾಗಲೇ ತಾವು ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಿರುವೆ ಎಂದು ಅವರು ಹೇಳಿದರು.
ಏ.22 ರಂದು ಪ್ರಚಾರ: ಬಿ.ಎಸ್. ಯಡಿಯೂರಪ್ಪ ಅವರು ಆಳಂದಕ್ಕೆ ಏ.22 ರಂದು ಆಗಮಿಸಿ ಪ್ರಚಾರ ನಡೆಸುವರು. ಏ.21 ರಂದು ಕೆಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ವಿಧಾನ ಪರಿಷತ್ತಿನ ಸದಸ್ಯ ಎನ್.ಡಿ. ಲಕ್ಷ್ಮೀನಾರಾಯಣ ಅವರು ಆಳಂದದಲ್ಲಿ ಮತ್ತು ಖಜೂರಿ ಸರ್ಕಲ್ನಲ್ಲಿ ಕೆಜೆಪಿ ಉಪಾಧ್ಯಕ್ಷೆ ಹಾಗೂ ನಟಿ ಶೃತಿಯವರು ಪ್ರಚಾರ ನಡೆಸುವೆಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

