ರಾಜ್ಯದಲ್ಲಿ ಕೆಜೆಪಿ ಅಧಿಕಾರಕ್ಕೆ: ಪಾಟೀಲ್ ವಿಶ್ವಾಸ
ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ. 21
ಪ್ರಸ್ತುತ ರಾಜ್ಯದಲ್ಲಿ ಪ್ರಾದೇಶಿಕ ಪಕ್ಷದ ಅಗತ್ಯತೆ ಹೆಚ್ಚಾಗಿದ್ದು, ವಿಧಾನಸಭಾ ಚುನಾವಣೆಯಲ್ಲಿ ಕೆಜೆಪಿ ಪ್ರಾದೇಶಿಕ ಪಕ್ಷ ಬಹುಮತ ಪಡೆದು ಅಧಿಕಾರಕ್ಕೆ ಬರಲಿದೆ ಎಂದು ಖ್ಯಾತ ಸಾಹಿತಿ ಹಾಗೂ ಕೆಜೆಪಿ ಪ್ರಚಾರ ಸಮಿತಿ ಸದಸ್ಯ ಚಂದ್ರಶೇಖರ ಪಾಟೀಲ್ ಹೇಳಿದರು.
ನಗರದಲ್ಲಿ ಅವರು ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದ ಪಕ್ಷದಿಂದ ಹೊರಬಂದು ಗಟ್ಟಿಮುಟ್ಟಾದ ಪ್ರಾದೇಶಿಕ ಪಕ್ಷ ಕಟ್ಟಿ ಕರ್ನಾಟಕ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣಬದ್ಧರಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಕೈ ಬಲಪಡಿಸಲು ಪಕ್ಷ ಸೇರ್ಪಡೆಯಾಗಿರುವುದಾಗಿ ಸ್ಪಷ್ಟಪಡಿಸಿದರು.
ಪಕ್ಷದ ಅಭ್ಯರ್ಥಿ ಪರ ಪ್ರಚಾರ: ಯಾವುದೇ ರಾಜಿಸಂಧಾನ ಇಲ್ಲದೆ ಪಕ್ಷ ಸೇರ್ಪಡೆಯಾಗಿದ್ದು, ತಮ್ಮ ಮೂಲ ಸಿದ್ಧಾಂತ ಮತ್ತು ಮೌಲ್ಯದಲ್ಲಿ ಯಾವುದೇ ಬದಲಾವಣೆಯಾಗದು, ತಮ್ಮ ತತ್ವ ಸಿದ್ಧಾಂತಕ್ಕೆ ಪಕ್ಷದಲ್ಲಿ ಧಕ್ಕೆ ಬಂದರೆ ಪಕ್ಷ ತ್ಯೇಜಿಸುವುದಾಗಿ ಹೇಳಿದ ಅವರು, ಸದ್ಯ ಪಕ್ಷದಲ್ಲಿ ರಾಜ್ಯ ಪ್ರಚಾರ ಸಮಿತಿ ಸದಸ್ಯನಾಗಿ ಕಾರ್ಯನಿರ್ವಹಿಸುತ್ತಿದ್ದು, ರಾಜ್ಯದ 18 ಜಿಲ್ಲಾ ಕೇಂದ್ರಗಳಲ್ಲಿ ಭೇಟಿ ನೀಡಿ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳುತ್ತಿರುವುದಾಗಿ ಹೇಳಿದರು.
ಕೆಜೆಪಿಗೆ ಬೆಂಬಲಿಸಿ: ಗೋಕಾಕ ಚಳವಳಿ ಸೇರಿದಂತೆ ಹಲವಾರು ಚಳವಳಿಯಲ್ಲಿ ತಮ್ಮೊಂದಿಗೆ ಸಕ್ರಿಯವಾಗಿ ಪಾಲ್ಗೊಂಡಿರುವ ಹಲವಾರು ಚಳವಳಿಗಾರರು, ಹೋರಾಟಗಾರರು ರಾಜ್ಯದೆಲ್ಲಡೆ ನೆಲೆಸಿದ್ದಾರೆ. ತಾವು ಎಲ್ಲ ಜಿಲ್ಲೆಗಳಲ್ಲಿ ಸಂಚರಿಸಿ ಅವರನ್ನು ಸಂಪರ್ಕಿಸಿ ಸೈದ್ಧಾಂತಿಕ ನೆಲೆಕಟ್ಟಿನ ಪಕ್ಷವಾದಿ ಕೆಜೆಪಿಗೆ ಬೆಂಬಲಿಸಿ ಮತ ನೀಡಿ ಸುಭದ್ರ ಸರ್ಕಾರ ರಚನೆಗೆ ಅನುವು ಮಾಡಿಕೊಡಿ ಎಂದು ಮನವಿ ಮಾಡುವುದಾಗಿ ಹೇಳಿದರು.
ಕೇಂದ್ರ ಸರ್ಕಾರವನ್ನು ನಿಯಂತ್ರಣ ಮಾಡುವ ಶಕ್ತಿ ಕೇವಲ ಪ್ರಾದೇಶಿಕ ಪಕ್ಷಗಳಿಗೆ ಮಾತ್ರ ಇದೆ. ಪ್ರಾದೇಶಿಕ ಪಕ್ಷಗಳ ಅಣತಿಯಂತೆ ಕೇಂದ್ರ ಸರ್ಕಾರ ಅನಿವಾರ್ಯವಾಗಿ ನಡೆದುಕೊಳ್ಳುವ ವಾತಾವರಣ ಮೊದಲಿನಿಂದಲೂ ನಿರ್ಮಾಣವಾಗಿದೆ. ಹೀಗಾಗಿ ರಾಜ್ಯದಲ್ಲಿ ಗಟ್ಟಿಮುಟ್ಟಾದ ಪ್ರಾದೇಶಿಕ ಪಕ್ಷದ ಅವಶ್ಯಕತೆ ಇದ್ದು, ಅದು ಯಡಿಯೂರಪ್ಪ ನೀಡಲಿದ್ದಾರೆ ಎಂದರು.
ಮನವಿ: ರಾಜ್ಯದ ಎಲ್ಲ ಕನ್ನಡಪರ ಸಂಘಟನೆಗಳು, ಸಂಘ- ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಯಡಿಯೂರಪ್ಪ ನೇತೃತ್ವದ ಕೆಜೆಪಿ ಪಕ್ಷಕ್ಕೆ ಬೆಂಬಲಿಸಿ ಬಹುಮತ ನೀಡಿ ರಾಜ್ಯದ ಅಧಿಕಾರ ಚುಕ್ಕಾಣಿ ಹಿಡಿಯಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಉತ್ತರ ಕ್ಷೇತ್ರದ ಅಭ್ಯರ್ಥಿ ನಾಸಿರ ಹುಸೇನ್ ಉಸ್ತಾದ್, ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಬಾಬುರಾವ ಚವ್ಹಾಣ, ದಕ್ಷಿಣ ಮತಕ್ಷೇತ್ರದ ಅಭ್ಯರ್ಥಿ ಎಸ್.ಕೆ. ಕಾಂತಾ, ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಶರಣಬಸಪ್ಪ ಕಾಡಾದಿ, ಹಿಂದುಳಿದ ವರ್ಗಗಳ ರಾಜ್ಯ ಘಟಕದ ಕಾರ್ಯದರ್ಶಿ ದಿಲೀಪ ಬಿರಾದಾರ, ಗುಲ್ಬರ್ಗ ಮಹಾನಗರ ಜಿಲ್ಲಾಧ್ಯಕ್ಷ ಬಸವರಾಜ ಇಂಗಿನ್, ಮುಖಂಡರಾದ ವೈಜನಾಥ ಝಳಕಿ ಇತರರು ಇದ್ದರು.
ಕಾಂತಾ ಪರ ಸುಭಾಷ ಮತಯಾಚನೆ
ಗುಲ್ಬರ್ಗ: ತಾಜ್ಸುಲ್ತಾನಪುರ ಗ್ರಾಮದಲ್ಲಿ ದಕ್ಷಿಣ ಮತಕ್ಷೇತ್ರದ ಕೆಜೆಪಿ ಅಭ್ಯರ್ಥಿ ಎಸ್.ಕೆ. ಕಾಂತಾ ಅವರ ಪರವಾಗಿ ಕೆಜೆಪಿ ವಿಭಾಗೀಯ ಕಾರ್ಯದರ್ಶಿ ಸುಭಾಷ ಬಿರಾದಾರ ಕಮಲಾಪುರ ಮನೆ ಮನೆ ತೆರಳಿ ಮತಯಾಚಿಸಿದರು.
ಈ ಸಂದರ್ಭದಲ್ಲಿ ಶಾಂತಕುಮಾರ ಬಿರಾದಾರ, ಜಯಾನಂದ ಪಾಟೀಲ್, ಅಸ್ಲಂ ಕಲ್ಯಾಣಿ, ಚಿತ್ರಶೇಖರ ಹಾಗರಗಿ, ಹಣಮಂತ ನಿಂಬರಗಿ, ಬಾನುಮಂತ್ರಿ, ಮಹಾಂತೇಶ, ರೇವಣ್ಣ ಸಿದ್ದಪ್ಪ ನಿಂಬರಗಿ, ಗುರುರಾಜ ಎಂ ಹುಲಿ ಸೇರಿದಂತೆ ಹಲವಾರು ಕಾರ್ಯಕರ್ತರು ಇದ್ದರು.
ಕೆಜೆಪಿಗೆ ಸೇರ್ಪಡೆ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ಜೆಡಿಎಸ್ ಮುಖಂಡರು ಇತ್ತೀಚೆಗೆ ಸೇಡಂನಲ್ಲಿ ಏರ್ಪಡಿಸಿದ ಕಾರ್ಯಕ್ರಮದಲ್ಲಿ ಯಡಿಯೂರಪ್ಪ ಸಮ್ಮುಖದಲ್ಲಿ ಕೆಜೆಪಿ ಸೇರ್ಪಡೆಯಾದರು. ಜೆಡಿಎಸ್ ಹಿರಿಯ ಮುಖಂಡ ಬಸವರಾಜ ನಿಲಿ, ಮಾಜಿ ಜಿಪಂ ಸದಸ್ಯ ಬಸವರಾಜ ಬೆಣ್ಣೂರ, ತಾಲೂಕು ಅಧ್ಯಕ್ಷ ಡಿ.ಎಸ್. ನಾಮದಾರ, ತಾಲೂಕು ಮಾಜಿ ಅಧ್ಯಕ್ಷ ಮಲ್ಲಿನಾಥ ಇಂದೂರ, ಶಾಂತಕುಮಾರ ಪಾಟೀಲ್ ಬೆಣ್ಣೂರ, ಜಿಲ್ಲಾ ಉಪಾಧ್ಯಕ್ಷ ಬಸವರಾಜ ಶಿವಗೋಳ, ಟೆಂಗಳಿ ಮಾಜಿ ಅಧ್ಯಕ್ಷ ಚಂದ್ರಶೇಖರ ಬಂಕಲಗಿ, ಪೇಠಶಿರೂರ ಮಾಜಿ ಅಧ್ಯಕ್ಷ ಅಣವೀರಪ್ಪ ಭಾವಿನ್ ಅವರನ್ನು ಪಕ್ಷದ ಕಚೇರಿಕ್ಕೆ ಸ್ವಾಗತಿಸಿ ರಾಜ್ಯ ಕಾರ್ಯದರ್ಶಿ ತಿಪ್ಪಣ್ಣಪ್ಪ ಕಮಕನೂರ ನೇತೃತ್ವದಲ್ಲಿ ಸತ್ಕರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

