ಗುಲ್ಬರ್ಗಾ

ಬಿಎಸ್‌ವೈ ಚೂರಿಜಪಕ್ಕೆ ಹುಬ್ಬಳ್ಳಿಯಾಂವನ ಛೂಮಂತ್ರ...

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ.22
ಬಿಜೆಪಿಯಿಂದ ಹೊರಬಂದು ಕಜಪ ಮಾಡಿರುವ ಯಡಿಯೂರಪ್ಪ ಹೊಸ ಪಕ್ಷ ಕಟ್ರಿ, ನಾವಿರ್ತೇವೆ... ಎಂದು ಹೇಳಿದ ಘಟಾನುಘಟಿಗಳ್ಯಾರೂ ತಮ್ಮೊಂದಿಗೆ ಬಾರದೆ ಹೋಗಿದ್ದಕ್ಕೆ ಬೇಸರಗೊಂಡು ಚೂರಿ ಹಾಕಿದರು ಎಂದು ಮತ ಸಮರದ ಪ್ರಚಾರ ಸಭೆಗಳಲ್ಲೆಲ್ಲ ಚೂರಿಜಪ ಮಾಡುತ್ತಿರುವಾಗಲೇ, ಅದರ ಪರಿಣಾಮ ಬಿಜೆಪಿ  ಮೇಲೆ ಎಳ್ಳಷ್ಟು ಆಗಬಾರದು ಎಂದು ಹುಬ್ಬಳ್ಳಿಯಾಂವ, ಸಿಎಂ ಶೆಟ್ಟರ್ ತಮ್ಮ ಉತ್ತರ ಕರ್ನಾಟಕದ ಖಡಕ್ ಕನ್ನಡ ಬಳಸಿಛೂಮಂತ್ರ ಹಾಕುತ್ತಿದ್ದಾರೆ.
ಪಕ್ಷಗಳ ನಡುವಿನ ವಾಕ್ಸಮರ: ಇದರಿಂದಾಗಿ ಕರ್ನಾಟಕ ಮತ ಸಮರದಲ್ಲಿ ಈ ಬಾರಿ ಆಡಳಿತಾರೂಢ ಬಿಜೆಪಿ ಹಾಗೂ ಅದರಿಂದ ಹೊರಬಂದು ಯಡಿಯೂರಪ್ಪ ಕಟ್ಟಿರುವ ಕಜಪ ಪಕ್ಷಗಳ ನಡುವಿನ ವಾಕ್ಸಮರ ತಾರಕಕ್ಕೇರಿದಂತಾಗಿದೆ.
ಪಕ್ಷ ಒಬ್ರನ್ನ ನಾಯಕ ಮಾಡಿತ್ತು, ಅವ್ರ ಮ್ಯಾಗ ಭ್ರಷ್ಟಾಚಾರ ಅಪಾದನೆ ಬಂದ್ವು. ಅದು ಸ್ವಯಂಕೃತಾಪರಾಧ. ಅವ್ರೇ ಪಕ್ಷಬಿಟ್ಟು ಹೋದ್ರು. ಪಕ್ಷ ಈಗ ಸ್ವಚ್ಛ ಆಗ್ಯದ್ರಿ. ಅವ್ರಿಗೆ ಯಾರೂ ಚೂರಿ ಹಾಕಿಲ್ರಿ, ತಮ್ಮ ಬೆನ್ನಿಗೆ ತಾವೇ ಚೂರಿ ಹಾಕ್ಕೊಂಡಾರ, ಬೆಳಗಿಂದ ಸಂಜಿವರೆಗೂ ಅವ್ರು ಚೂರಿ ಹಾಕ್ಯಾರ, ಇವ್ರು ಹಾಕ್ಯಾರ ಅಂತ ಚೂರಿ ಜಪ ಮಾತೇ ಹೇಳ್ಕೊಂತ ಕುಂತವರಿಗೆ ನೀವು ನಂಬಾಕ ಹೋಗ್‌ಡ್ಯಾಡ್ರಿ..
ಎಂದು ಶೆಟ್ಟರ್ ಕಿವಿಮಾತು ಹೇಳಲಾರಂಭಿಸಿದ್ದಾರೆ. ಇಂತಹ ಮಾತುಗಳಿಗೆ ಸಾಕ್ಷಿಯಾಗುತ್ತಿರುವ ಉ- ಕ ಜನಸ್ತೋಮವಂತೂ ಕೇಕೆ ಹಾಕುತ್ತ ಚೂರಿ ಹೇಳಿಕೆಗಳ ನಾಯಕರ ಕಿವಿಗಡಚಿಕ್ಕುವಂತೆ ಕರತಾಡನ ಮಾಡುತ್ತಿದೆ.
ಗುಲ್ಬರ್ಗ, ಶಹಾಬಾದ್, ಅಫಜಲ್ಪುರ, ಗುಲ್ಬರ್ಗ ದಕ್ಷಿಣ ಅಸೆಂಬ್ಲಿ ಸೇರಿದಂತೆ ಜಗದೀಶ್ ಶೆಟ್ಟರ್ ತಾವು ಹೋದಕಡೆಗಳಲ್ಲೆಲ್ಲಾ ಯಡಿಯೂರಪ್ಪನವರ ಚೂರಿ ಮಾತುಗಳನ್ನೇ ಪ್ರಧಾನವಾಗಿ ಪ್ರಸ್ತಾಪಿಸಿ ಅದಕ್ಕೆ ಸೊಗಸಾದಂತಹ ವಿವರಣೆ ನೀಡುತ್ತಿರುವುದರಿಂದ ಸೇರಿದ್ದ ಜನ ಚೂರಿನುಡಿಗಳನ್ನಾಲಿಸುತ್ತ ನಗೆಗಡಲಲ್ಲಿ ತೇಲಾಡುತ್ತಿದ್ದಾರಲ್ಲದೆ ಚೂರಿ ಹೇಳಿಕೆ ಮೀರಿ ಅದರ ಹಿಂದಿನ ಮರ್ಮ ಅರಿಯುವ ಪ್ರಯತ್ನಕ್ಕೂ ಮುಂದಾಗಿದ್ದಾರೆ.
ವ್ಯಕ್ತಿ ಮುಖ್ಯ ಅಲ್ರಿ: 5 ವರ್ಷದ ಸಾಧನೆ ಬಿಜೆಪಿಯ ಮುಂದಿದೆ. ಸ್ವಚ್ಛ, ಉತ್ತಮ, ಪ್ರಗತಿಪರ ಸರ್ಕಾರ ಕೊಟ್ಟವರು ನಾವು, ಈ ಬಿಜೆಪಿಯನ್ನ ಯಾರೋ ಒಬ್ಬ ವ್ಯಕ್ತಿ ಕಟ್ಟಿದ್ದಲ್ಲ, ಲಕ್ಷಾಂತರ ಕಾರ್ಯಕರ್ತರ ಶ್ರಮ ಅಡಗಿದೆ. 1967 ರಲ್ಲಿ ಜನಸಂಘ ಇದ್ದಾಗಲೇ ಹುಬ್ಬಳ್ಳಿ, ಬೀದರ್ ಸೇರಿದಂತೆ 4 ಕಡೆ ಗೆದ್ದಿತ್ತು. 1983 ರಲ್ಲಿ 14 ಶಾಸಕರು ಗೆದ್ದಿದ್ದರು. ಆಗೆಲ್ಲ ಯಾರಿದ್ದರು ಕಾರ್ಯಕರ್ತರೇ ಅಲ್ಲವೆ ಪಕ್ಷ ಕಟ್ಟಿದ್ದು.
ಯಡಿಯೂರಪ್ಪ ಹೆಸರು ಹೇಳದೆ...: ಶೆಟ್ಟರ್ ಪ್ರಚಾರದ ವಿಶೇಷವೆಂದರೆ ಯಾವ ಸಭೆಯಲ್ಲಿಯೂ ಯಡಿಯೂರಪ್ಪ ಹೆಸರು ಪ್ರಸ್ತಾಪಿಸದೆ ಅವರೇ ತಮ್ಮ ಟೀಕೆಗಳ ಕೇಂದ್ರಬಿಂದು ಎಂಬ ಭಾವ ಸೇರಿದ್ದವರ ಮನದಲ್ಲಿ ಬರುವಂತೆ ಟೀಕಾಪ್ರಹಾರ ಮಾಡಿದ್ದು.
ಗುಲ್ಬರ್ಗ ಸಭೆಯಲ್ಲಂತೂ ಚೂರಿ ಇರಿತದ ಕುರಿತಂತೆ ವ್ಯಂಗ್ಯ- ಲೇವಡಿ ಭರಿತ ಮಾತುಗಳಿಂದ ಯಡಿಯೂರಪ್ಪನವರಿಗೆ ತಿವಿದರೂ ಎಲ್ಲಿಯೂ ಶೆಟ್ಟರ್ ತಾವು ಯಾರನ್ನು ಟೀಕಿಸುತ್ತಿದ್ದೇನೆ ಎಂದು ಹೆಸರು ಉಸುರದೆ ಹೋಗಿದ್ದು ಗಮನಾರ್ಹಯ.
2008ರಲ್ಲಿ 110 ಸ್ಥಾನಗಳನ್ನು ಕೊಟ್ಟ ಜನತೆ ಈ ಬಾರಿ ಸ್ಪಷ್ಟ ಬಹುಮತ ಕೊಡುವಂತೆ ಕೋರಿದ ಶೆಟ್ಟರ್ ಕಳೆದ ಬಾರಿಯಂತೆ ಈ ಬಾರಿ ತಪ್ಪುಗಳು ಮರುಕಳಿಸದಂತೆ ಕಾಳಜಿಯಿಂದ ಸರ್ಕಾರ ನಡೆಸುವ ಜವಾಬ್ದಾರಿ ತಮ್ಮದೆಂದೂ ಹೇಳಿದ್ದಾರೆ.
ಉ- ಕ ಭಾಗದವರಿಗೆ ಸಿಎಂ ಅವಕಾಶ ಅಪರೂಪ: ಬಿಜೆಪಿಯೊಂದೇ ಸಿಎಂ ಅಭ್ಯರ್ಥಿಯಾಗಿ ತಮ್ಮನ್ನು ಬಿಂಬಿಸಿದೆ, ಈ ಧೈರ್ಯ ಕಾಂಗ್ರೆಸ್ ಪಕ್ಷವೂ ಪ್ರದರ್ಶಿಸಿಲ್ಲ. ನಾಯಕರ ಗೊಂದಲದಲ್ಲಿರೋ ಪಾರ್ಟಿಗಳಿಗೆ ಮತ ಹಾಕಿ ಯಾಕೆ ಅದನ್ನ ವ್ಯರ್ಥ ಮಾಡಿಕೊಳ್ಳುತ್ತೀರಿ ಉ- ಕ ಭಾಗದವರಿಗೆ ಸಿಎಂ ಅವಕಾಶ ಸಿಗುವುದೇ ಅಪರೂಪ.
ಶೆಟ್ಟರ್ ಚುನಾವಣೆ ಸಭೆಗಳಲ್ಲಿ ಶುದ್ಧ ಉತ್ತರ ಕರ್ನಾಟಕದ ಕನ್ನಡ ಬಳಕೆಯಾಗುತ್ತಿದೆ. ಅದರಲ್ಲೂ ಹುಬ್ಬಳ್ಳಿಯ ಕನ್ನಡ ಕೇಳಲು ಬಲು ವಿಶಿಷ್ಟ. ಹೀಗಾಗಿ ಹೈ- ಕ ಸೇರಿದಂತೆ ರಾಜ್ಯಾದ್ಯಂತ  ಶೆಟ್ಟರ್ ಉ- ಕ ಖಡಕ್ ಕನ್ನಡ ಮಾತುಗಳಿಗೆ, ಅವರ ಹಾಗೂ ಯಡ್ಡಿ ನಡುವಿನ ಚೂರಿ ಸಮರದ ಹೇಳಿಕೆ- ಪ್ರತಿ ಹೇಳಿಕೆಗಳಿಗೆ ಸಾಕಷ್ಟು ಕಿವಿಗಳು ಕಾಯುತ್ತ ಕುಳಿತಿವೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.