ದೇವದುರ್ಗ; ಕೈ- ಕಮಲ ನೇರ ಹಣಾಹಣಿ
ಕನ್ನಡಪ್ರಭ ವಾರ್ತೆ, ರಾಯಚೂರು, ಏ.24
ಹಿಂದುಳಿದ ಕ್ಷೇತ್ರದಲ್ಲಿ ಈಗ ಪುನಾ ಚುನಾವಣೆ ಅಬ್ಬರ. ಅಭಿವೃದ್ಧಿಯ ಮಂತ್ರ ಪಠಣ. ಬಿಜೆಪಿ ಸರ್ಕಾರ ಕ್ಷೇತ್ರದ ಅಭಿವೃದ್ಧಿಗೆ ರು. 2 ಸಾವಿರ ಕೋಟಿ ಒದಗಿಸಿದೆ ಎಂಬ ಹೇಳಿಕೆಯೇ ಚರ್ಚೆಗೆ ಗ್ರಾಸ. ಆರೋಪ ಪ್ರತ್ಯಾರೋಪಕ್ಕೂ ಬಳಕೆ. ಅಭಿವೃದ್ಧಿಯಿಲ್ಲಿ ಅನುಮಾನಕ್ಕೆ ನಾಂದಿ ಹಾಡಿದೆ. ಕ್ಷೇತ್ರದಲ್ಲಿ ಕಾಂಗ್ರೆಸ್-ಬಿಜೆಪಿಯ ಮಧ್ಯೆಯೇ ನೇರ ಹಣಾಹಣಿ.
ದೇವದುರ್ಗ ಎಸ್ಟಿ ಮೀಸಲು ಕ್ಷೇತ್ರ ರಾಜ್ಯದಲ್ಲಿಯೇ ತೀರಾ ಹಿಂದುಳಿದ ತಾಲೂಕೆಂಬ ಹಣೆಪಟ್ಟಿ ಕಟ್ಟಿಕೊಂಡಿದೆ. ಇಲ್ಲಿಂದ ಆಯ್ಕೆಯಾದ ಅನೇಕರು ಸಚಿವರಾಗಿದ್ದಾರೆ. ಆದರೆ ಕ್ಷೇತ್ರದ ಸ್ಥಿತಿ ಮಾತ್ರ ಅಷ್ಟಕ್ಕಷ್ಟೇ. ಹದಗೆಟ್ಟ ರಸ್ತೆಗಳು, ಸಂಪರ್ಕವಿಲ್ಲದ ಗ್ರಾಮಗಳು. ನದಿ ತೀರದಲ್ಲಿದ್ದರೂ ಕುಡಿಯುವ ನೀರಿನ ಸಮಸ್ಯೆ ಎದುರಿಸುವ ಜನತೆ. ಮೂಲಸೌಲಭ್ಯಗಳ ಅಭಾವದ್ದೇ ಎಲ್ಲೆಡೆ ಆರೋಪ. ಇಂಥ ಸಮಸ್ಯೆಗಳ ಸುಳಿಯಲ್ಲಿಯೇ ಕ್ಷೇತ್ರದ ಮತದಾರರು ಮತ್ತೆ ಮತ ಹಾಕಲು ಸಜ್ಜಾಗಿದ್ದಾರೆ.
ಜನತಾ ಪರಿವಾರ: ತಾಲೂಕಿನಲ್ಲಿ 280939 ಜನಸಂಖ್ಯೆಯಿದೆ. 177862 ಮತದಾರರಿದ್ದಾರೆ. ಇದುವರೆಗಿನ ಚುನಾವಣೆಗಳಲ್ಲಿ ಕಾಂಗ್ರೆಸ್ 6 ಬಾರಿ ಗೆಲುವು ಕಂಡಿದೆ. ಜನತಾ ಪರಿವಾರ ಐದು ಬಾರಿ ಹಾಗೂ ಪಕ್ಷೇತರರು ಒಂದು ಬಾರಿ ಗೆದಿದ್ದಾರೆ. ಪರಿಣಾಮ ದೇವದುರ್ಗ ಕ್ಷೇತ್ರವೂ ಕಾಂಗ್ರೆಸ್‌ನ ಭದ್ರಕೋಟೆ ಎಂದೆನಿಸಿದೆ. ಆಗೊಮ್ಮೆ ಈಗೊಮ್ಮೆ ಬೇರೆ ಪಕ್ಷದವರು ಇಲ್ಲಿ ಅಧಿಪತ್ಯ ಸಾರಿದ್ದಾರೆ.
ಪ್ರಸಕ್ತ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಮಾಜಿ ಸಂಸದ, ಹಿರಿಯ ರಾಜಕಾರಣಿ ವೆಂಕಟೇಶ್ ನಾಯಕ, ಬಿಜೆಪಿಯಿಂದ ಮಾಜಿ ಸಚಿವ ಹಾಗೂ ಸಿಎಂ ರಾಜಕೀಯ ಕಾರ್ಯದರ್ಶಿಯಾಗಿದ್ದ ಶಿವನಗೌಡ ನಾಯಕ ಕಣದಲ್ಲಿರುವ ಪ್ರಮುಖರು. ಇವರಲ್ಲದೇ ಕೆಜೆಪಿಯಿಂದ ಶಾಂತಗೌಡ, ಬಿಎಸ್ಸಾರ್ ಕಾಂಗ್ರೆಸ್ ನಿಂದ ಚನ್ನನಗೌಡ, ಜೆಡಿಯು ನಿಂದ ಚನ್ನಬಸವ ಹಾಗೂ ಸಿಪಿಐ ಎಂಎಲ್ ರೆಡ್ ಸ್ಟಾರ್‌ನಿಂದ ಬಸವರಾಜ ನಾಯಕ ಅವರಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿಯ ಮಧ್ಯೆಯೇ ನೇರ ಹಣಾಹಣಿಯಿದೆ. ಜೆಡಿಎಸ್ ಇಲ್ಲಿ ಅಭ್ಯರ್ಥಿಯನ್ನು ಕಣಕ್ಕಿಳಿಸಿಲ್ಲ.
ಸ್ಪರ್ಧಾ ಕಣ: ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕ ತನ್ನ ರಾಜಕೀಯ ಗುರು ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ ನಾಯಕರ ವಿರುದ್ಧವೇ ಸ್ಪರ್ಧಿಸಿದ ಕ್ಷೇತ್ರವಿದು. ಜತೆಗೆ ತಾತ-ಮೊಮ್ಮಗನ ಸ್ಪರ್ಧಾ ಕಣವೂ ಹೌದು. ಕಳೆದ ಚುನಾವಣೆಯ ನಂತರದಲ್ಲಿ ಈ ಇಬ್ಬರ ಮಧ್ಯೆಯೇ ರಾಜಕೀಯ ಜಿದ್ದಾಜಿದ್ದಿ ಇಲ್ಲಿ ಸಾಮಾನ್ಯ. ಈಗ ಚುನಾವಣೆಯ ಮೂಲಕ ಸಾಮರ್ಥ್ಯ ಒರೆಗೆ ಹಚ್ಚುವ ಕಾರ್ಯ ನಡೆದಿದೆ.
ಅಬ್ಬರ-ಆರೋಪ-ಪ್ರತ್ಯಾರೋಪ: ದೇವದುರ್ಗ ಕ್ಷೇತ್ರದಲ್ಲಿ ಚುನಾವಣೆಯ ಆರಂಭದೊಂದಿಗೆ ಅಬ್ಬರದ ಪ್ರಚಾರ ಮೊದಲ್ಗೊಂಡಿದೆ. ಪಕ್ಷಾಂತರ ಪರ್ವವೂ ಆರಂಭ ವಾಗಿದೆ. ಕಳೆದ ಬಾರಿ ಬಿಜೆಪಿ ಅಭ್ಯರ್ಥಿ ಶಿವನಗೌಡ ನಾಯಕರೊಂದಿಗಿದ್ದ ಬಹುತೇಕರು ಕಾಂಗ್ರೆಸ್ ಅಭ್ಯರ್ಥಿ ಜತೆ ಈ ಬಾರಿ ಕೈಜೋಡಿಸಿದ್ದಾರೆ. ಇಲ್ಲಿ ಜೆಡಿಎಸ್‌ಗೆ ನೆಲೆಯಿಲ್ಲದಂತಾಗಿದ್ದು, ಅನೇಕರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಬಿಜೆಪಿ ಸರ್ಕಾರದಲ್ಲಿ ದೊರೆತಿದೆ ಎಂದು ಹೇಳಲಾಗುತ್ತಿರುವ 2 ಸಾವಿರ ಕೋಟಿ ರು. ಅನುದಾನದ ಬಳಕೆಯ ಬಗ್ಗೆಯೇ ಚುನಾವಣೆಯಲ್ಲಿ ಅಬ್ಬರದ ಆರೋಪ-ಪ್ರತ್ಯಾರೋಪದ ಮಾತಿದೆ. ಜತೆಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಈ ಅನುದಾನದ ದುರ್ಬಳಕೆಯ ಸಮಗ್ರ ತನಿಖೆಯ ಬಗ್ಗೆ ಮತದಾರರಿಗೆ ಭರವಸೆ ನೀಡಲಾಗುತ್ತಿದೆ.
ಕ್ಷೇತ್ರದಲ್ಲಿ ಮದ್ಯ ಮತ್ತು ಹಣದ ಹೊಳೆ ಹರಿಯುತ್ತಿರುವುದು ಗೌಪ್ಯವೇನಲ್ಲ. ಅಧಿಕಾರಿಗಳ ಕಾರ್ಯವೈಖರಿಯೇ ಇಲ್ಲಿ ಸಂಶ ಯಾಸ್ಪದ. ಅಕ್ರಮಗಳಿಗೆ ಇಲ್ಲಿ ಕಡಿವಾಣ ಮಾತ್ರ ಬಿದ್ದಿಲ್ಲ. ಈ ಕ್ಷೇತ್ರ ಎಸ್ಟಿಗಳಿಗೆ ಮೀಸಲಾಗಿರುವುದರಿಂದ ಎಸ್ಟಿ ಗಳೇ ಬಹುಪಾಲಿದ್ದಾರೆ. ಆದರೆ ಸದ್ಯದ ಚುನಾವಣೆಯಲ್ಲಿ ಲಿಂಗಾಯತರು ನಿರ್ಣಾಯಕರು.
ಅಂದು-ಇಂದು: 2008 ರಲ್ಲಿ ಕ್ಷೇತ್ರದ ಮತದಾರರು ಎರಡು ಚುನಾವಣೆ ಕಂಡಿದ್ದಾರೆ. 2008ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೆಂಕಟೇಶ ನಾಯಕ ವಿರುದ್ಧ ಗೆದಿದ್ದ ಜೆಡಿಎಸ್ ನಿಂದ ಸ್ಪರ್ಧಿಸಿ ಶಿವನಗೌಡ ನಾಯಕ, ಮುಂದೆ ಆಪರೇಷನ್ ಕಮಲಕ್ಕೆ ಸಿಲುಕಿ ರಾಜೀನಾಮೆ ನೀಡಿ ಮುಂದೆ ಕೆಲವೇ ದಿನಗಳಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹಾಲಿ ಕಾಂಗ್ರೆಸ್ ಅಭ್ಯರ್ಥಿಯ ಪುತ್ರ ಬಿ.ವಿ. ನಾಯಕ ವಿರುದ್ಧವೂ ಗೆಲವು ಸಾಧಿಸಿದ್ದರು.
ಆದರೆ ಎರಡು ಬಾರಿಯ ಗೆಲುವು ಅವರಲ್ಲಿ ಅಧಿಕಾರದ ದರ್ಪ ಹೆಚ್ಚಿಸಿದೆ ಎಂಬುದು ಅವರ ವಿರೋಧಿಗಳ ಅಭಿಪ್ರಾಯ. ಪರಿಣಾಮ ಬಿಜೆಪಿ ಹೊರತುಪಡಿಸಿ ಇನ್ನುಳಿದ ಪಕ್ಷಗಳ ಕಾರ್ಯಕರ್ತರ ವಿರುದ್ಧ ಸೇಡಿನ ರಾಜಕೀಯ ಮಾಡಿದ್ದಾರೆಂದೂ ದೂರುಗಳಿವೆ. ಪರಿಣಾಮ ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಲ್ಲಿದ್ದವರೂ ಹಾಗೂ ಇತರೆ ಪಕ್ಷಗಳವರು ಶಿವನಗೌಡರನ್ನು ಸೋಲಿಸುವ ಉದ್ದೇಶದಿಂದಲೇ ಕಾಂಗ್ರೆಸ್ ಜತೆ ಒಗ್ಗೂಡಿರುವುದು ಸ್ಪಷ್ಟ. ಕಳೆದ ಚುನಾವಣೆಯ ನಂತರದಲ್ಲಿ ದೇವದುರ್ಗದಲ್ಲಿ ಬಿಜೆಪಿ ಬೆಳೆಯಲಿಲ್ಲ, ಶಿವನಗೌಡ ನಾಯಕ ಮಾತ್ರ ಬೆಳೆದಿದ್ದಾರೆ. ಸದ್ಯದ ಚುನಾವಣೆಯಲ್ಲಿ ಈ ವಿಚಾರವೇ ಪ್ರಮುಖ ಪ್ರಚಾರ ವಸ್ತು. ಕಳೆದ ಚುನಾವಣೆಯಲ್ಲಿ ಕೇಳಿಬಂದಿದ್ದ ಮಾದರಿ ತಾಲೂಕಾಗಿಸುವ ಚಿಂತನೆ ಸಾಕಾರಗೊಂಡಿಲ್ಲ ಎಂಬುದು ಮೇಲ್ನೋಟಕ್ಕೆ ಸ್ಪಷ್ಟ.
ಈಗ ಮತ್ತೆ ಚುನಾವಣೆ ಬಂದಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಮಧ್ಯೆಯೇ ನೇರ ಹಣಾಹಣಿಯಿದ್ದು ಇನ್ನುಳಿದ ಪಕ್ಷಗಳ ಅಭ್ಯರ್ಥಿಗಳು ಕೇವಲ ಸಾಮಕಾವಸ್ತೆ ಮಾತ್ರ. ಜಿದ್ದಾಜಿದ್ದಿಯ ಕಣದಲ್ಲಿ ಮತದಾರರು ಮಾತ್ರ ಮೌನವಾಗಿದ್ದಾರೆ. ಗೆಲುವು ಯಾರಿಗೆ ಒಲಿಯಲಿದೆ ಎಂಬುದು ಸದ್ಯಕ್ಕೆ ಯಕ್ಷ ಪ್ರಶ್ನೆಯೇ ಸರಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

