ಈಶಾನ್ಯ 5 ಜಿಲ್ಲೆಗಳಲ್ಲಿ ಪೊಲೀಸ್ ಸರ್ಪಗಾವಲು
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.25
ಈಶಾನ್ಯ ವಲಯದ ವ್ಯಾಪ್ತಿಯಲ್ಲಿ ಮೇ 5ರಂದು ಭಾನುವಾರ ನಡೆಯುವ ವಿಧಾನಸಭಾ ಚುನಾವಣೆಯನ್ನು ಮುಕ್ತ, ಪಾರದರ್ಶಕ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಸಲು ವ್ಯಾಪಕ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಈಶಾನ್ಯ ವಲಯದ 5 ಜಿಲ್ಲೆಗಳಲ್ಲಿ ಜನತೆ ಯಾವುದೇ ಭೀತಿ ಇಲ್ಲದಂತೆ ಮತದಾನ ಮಾಡಲು ಈ ಕೆಳಕಂಡ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಗುಲ್ಬರ್ಗ ಈಶಾನ್ಯ ವಲಯದ ಪೊಲೀಸ್ ಮಹಾ ನಿರೀಕ್ಷಕ ಮಹ್ಮದ್ ವಜೀರ್ ಅಹ್ಮದ್ ತಿಳಿಸಿದ್ದಾರೆ.
ಮತಗಟ್ಟೆಗಳು: ಈಶಾನ್ಯ ವಲಯದ ಗುಲ್ಬರ್ಗ, ಬೀದರ, ರಾಯಚೂರು, ಕೊಪ್ಪಳ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಒಟ್ಟು 7074 ಮತಗಟ್ಟೆಗಳಿರುತ್ತವೆ. ಅವುಗಳಲ್ಲಿ 1038 ಮತಗಟ್ಟೆಗಳು ಅತೀ ಸೂಕ್ಷ್ಮ, 1557 ಸೂಕ್ಷ್ಮ ಮತ್ತು 4479 ಸಾಮಾನ್ಯ ಮತಗಟ್ಟೆಗಳಿರುತ್ತವೆ.
ಸಿಬ್ಬಂದಿ ನಿಯೋಜನೆ: ಗೃಹ ರಕ್ಷಕ ದಳ ಸೇರಿದಂತೆ ಒಟ್ಟು 8000 ಪೊಲೀಸ್ ಸಿಬ್ಬಂದಿಯನ್ನು ಈಶಾನ್ಯ ವಲಯದಲ್ಲಿನ ಎಲ್ಲ ಮತಗಟ್ಟೆಗಳಿಗೆ ನಿಯೋಜಿಸಲಾಗುವುದು. ನಾಗರಿಕ ಪೊಲೀಸ್ ಸಿಬ್ಬಂದಿಯೊಂದಿಗೆ ಕೇಂದ್ರೀಯ ಅರೆ ಸೇನಾ ಪಡೆಯ ಅರ್ಧ ತುಕಡಿ ಸಿಬ್ಬಂದಿಯನ್ನು ಸೂಕ್ಷ್ಮ, ಅತೀಸೂಕ್ಷ್ಮ ಹಾಗೂ ಮಹತ್ವದ ಮತಗಟ್ಟೆಗಳಿಗೆ ನಿಯೋಜಿಸಲಾಗುತ್ತದೆ. ಈ ಕುರಿತು ಈಶಾನ್ಯ ವಲಯಕ್ಕೆ ಒಟ್ಟು 65 ಸಿಆರ್ಪಿಎಫ್, ಬಿಎಸ್ಎಫ್, ಎಸ್ಎಸ್ಬಿ ಪಡೆಗಳನ್ನೊಳಗೊಂಡ ಕೇಂದ್ರೀಯ ಅರೆ ಸೇನಾ ಪಡೆ ಕಂಪನಿಗಳು ಹಂಚಿಕೆ ಮಾಡಲಾಗಿದೆ.
ಇದಲ್ಲದೆ ಕೆಎಸ್ಆರ್ಪಿಯ 16 ಪ್ಲಾಟೂನ್ಗಳನ್ನು ವಲಯದ ಎಲ್ಲ ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಸಶಸ್ತ್ರ ಪಡೆಯ 50 ತುಕಡಿಗಳನ್ನು ಸಹ ವಲಯದಲ್ಲಿ ನಿಯೋಜಿಸಲಾಗಿರುತ್ತದೆ.
ಪ್ರತಿ 15-20 ಮತಗಟ್ಟೆಗಳಿಗೆ ಒಂದು ಪೊಲೀಸ್ ಸಂಚಾರಿ ತುಕಡಿ ನಿಯೋಜಿಸಲಾಗುತ್ತದೆ. ಈ ತುಕಡಿಯು ಪೊಲೀಸ್ ಅಧಿಕಾರಿ ಮತ್ತು ಅರೆ ಸೇನಾಪಡೆ ಸಿಬ್ಬಂದಿಯನ್ನೊಳಗೊಂಡಿರುತ್ತವೆ. ಪ್ರತಿ ಕ್ಷೇತ್ರದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಡಿವೈಎಸ್ಪಿ ಅಥವಾ ಹೆಚ್ಚುವರಿ ಪೊಲೀಸ್ ಅಧಿಕಾರಿಗಳನ್ನು ಮೇಲ್ವಿಚಾರಣಾ ಅಧಿಕಾರಿಗಳನ್ನಾಗಿ ನಿಯೋಜಿಸಲಾಗುತ್ತದೆ.
ಈಶಾನ್ಯ ವಲಯದಲ್ಲಿಯೂ ಜನ ಪೊಲೀಸ್ ಅಧೀಕ್ಷಕರು, 2 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 15 ಪೊಲೀಸ್ ಉಪ ಅಧೀಕ್ಷಕರು, 64 ಪೊಲೀಸ್ ನಿರೀಕ್ಷಕರು, 170 ಪೊಲೀಸ್ ಉಪ-ನಿರೀಕ್ಷಕರು ಮತ್ತು 405 ಸಹಾಯಕ ಪೊಲೀಸ್ ಉಪ ನಿರೀಕ್ಷಕರನ್ನು ಚುನಾವಣಾ ಕರ್ತವ್ಯಕ್ಕಾಗಿ ಉಪಯೋಗಿಸಲಾಗುತ್ತಿದೆ.
ಚುನಾವಣೆ ಕರ್ತವ್ಯಕ್ಕಾಗಿ ವಿಶೇಷ ಘಟಕಗಳಾದ ಡಿಸಿಆರ್ಬಿ, ಅಬಕಾರಿ ಮತ್ತು ಲಾಟರಿ ನಿಷೇಧ ದಳ ಘಟಕ, ಜೆಸ್ಕಾಂ ಘಟಕಗಳ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಹಾಗೂ ಅರಣ್ಯ ಘಟಕದ ಸಿಬ್ಬಂದಿಯನ್ನು ಸಹ ನಿಯೋಜಿಸಲಾಗುತ್ತಿದೆ.
ಚೆಕ್ಪೋಸ್ಟ್: ಈ ವಲಯದಲ್ಲಿ ಒಟ್ಟು 83 ಚೆಕ್ಪೋಸ್ಟ್ಗಳಿದ್ದು, ಅವು ಕಾರ್ಯಪ್ರವೃತ್ತರಾಗಿರುತ್ತವೆ. ಪೊಲೀಸ್ ಅಧಿಕಾರಿಗಳೊಂದಿಗೆ ಕೇಂದ್ರೀಯ ಅರೆ ಸೇನಾಪಡೆ ಸಿಬ್ಬಂದಿಗಳನ್ನು ಈ ಚೆಕ್ ಪೋಸ್ಟ್ಗಳಿಗೆ ನಿಯೋಜಿಸಲಾಗಿದೆ. ಸರಹದ್ದುಗಳಿಂದ ಜಿಲ್ಲೆಗಳಲ್ಲಿ ಅಕ್ರಮ ಮದ್ಯ ಪ್ರವೇಶ, ಬಟ್ಟೆ ಮತ್ತು ಹಣ ಸಾಗಣಿಕೆ ನಿಷೇಧಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಚೆಕ್ಪೋಸ್ಟ್ ಚೆಕ್ಕಿಂಗ್ ತೀವ್ರಗೊಳಿಸಲಾಗುತ್ತದೆ.
ರೌಡಿ ಶೀಟರ್ಸ್: ವಲಯದಲ್ಲಿ ಒಟ್ಟು 1652 ರೌಡಿ ಶೀಟರ್ ವ್ಯಕ್ತಿಗಳಿರುತ್ತಾರೆ. ಅವರನ್ನು ಗುರ್ತಿಸಿ ಅವರ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಲಾಗಿದೆ. ಅವರ ಮೇಲೆ ಮುನ್ನೆಚ್ಚರಿಕೆ ಕ್ರಮವಾಗಿ ಕಲಂ 107 ಸಿಆರ್ಪಿಸಿ ಪ್ರಕಾರ ಕೈಗೊಂಡು ಒಳ್ಳೆಯ ನಡತೆಗಾಗಿ ತಾಲೂಕು ದಂಡಾಧಿಕಾರಿಗಳಿಂದ ಮುಚ್ಚಳಿಕೆ ಪಡೆಯಲಾಗಿದೆ.
ಆಯುಧಗಳು: ವಲಯದಲ್ಲಿನ ಒಟ್ಟು 5114 ಆಯುಧ ಲೈಸೆನ್ಸ್ದಾರರು ಆಯುಧಗಳನ್ನು ಹೊಂದಿದ್ದು, ಅವುಗಳಲ್ಲಿ 4994 ಆಯುಧಗಳನ್ನು ಆಯುಧದಾರರಿಂದ ಜಪ್ತಿ ಪಡಿಸಿಕೊಳ್ಳಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

