ಪುಸ್ತಕಗಳಿಂದ ಮಕ್ಕಳ ವ್ಯಕ್ತಿತ್ವ ವಿಕಸನ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.25
ಪುಸ್ತಕಗಳು ಮಕ್ಕಳ ಜ್ಞಾನ, ಕೌಶಲ್ಯ, ವಿಚಾರ ಶಕ್ತಿಯನ್ನು ಹೆಚ್ಚಿಸಿ ಅವರನ್ನು ವೈಚಾರಿಕವಾಗಿ ಉತ್ತಮ ಆಸ್ತಿವಂತರನ್ನಾಗಿಸುತ್ತವೆ ಎಂದು ಹಿರಿಯ ಸಾಹಿತಿ ಬಸವರಾಜ ಶಾಸ್ತ್ರಿ ಹೇಳಿದರು.
ಇಲ್ಲಿನ ಅಭಯ ಅಭಿವೃದ್ಧಿ ಸೇವಾ ಸಂಸ್ಥೆಯ ಸ್ಮಾರ್ಟ್ ಕೋಚಿಂಗ್ ಸೆಂಟರ್ನಲ್ಲಿ ಆಯೋಜಿಸಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ಜೀವನದಲ್ಲಿನ ಸಾಧನೆಗೆ ಪುಸ್ತಕಗಳು ಮಹತ್ವದ ತಿರುವು ನೀಡುತ್ತವೆ. ಆದ್ದರಿಂದ ಹೆಚ್ಚು ಪುಸ್ತಕಗಳನ್ನು ಓದಬೇಕು. ಈ ಆಸ್ತಿಯನ್ನು ಯಾರಿಂದಲೂ ಕದಿಯಲು ಸಾಧ್ಯವಿಲ್ಲ ಎಂದು ಹೇಳಿದರು.
ಓದುವ ಹವ್ಯಾಸ ಕ್ಷೀಣ- ವಿಷಾದ: ಪತ್ರಕರ್ತ ಕರಬಸಯ್ಯ ದಂಡಿಗಿಮಠ ಮಾತನಾಡಿ, ಪ್ರತಿಯೊಬ್ಬ ವ್ಯಕ್ತಿಯ ವ್ಯಕ್ತಿತ್ವ ನಿರ್ಮಾಣ ಮಾಡುವಲ್ಲಿ ಪುಸ್ತಕಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ. ವಿಚಾರ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಇತ್ತೀಚಿನ ದಿನಗಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿರಿವುದು ಕಳವಳಕಾರಿಯಾದ ಸಂಗತಿಯಾಗಿದೆ. ಇದರಿಂದ ನಾವು ಸಿಮೀತವಾದ ವ್ಯಾಪ್ತಿಯಲ್ಲಿ ಬದಕನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿದೆ. ನಮ್ಮ ಸಂಸ್ಕೃತಿಯ ವಿಚಾರಗಳನ್ನು ತಿಳಿದುಕೊಳ್ಳಲಾಗುತ್ತಿಲ್ಲ ಎಂದರು.
ಹಬ್ಬ ಹರಿದಿನಗಳು ಆಚರಣೆಗಾಗಿ ಮಾತ್ರ ಗೋಚರವಾಗುತ್ತಿವೆ. ಅದರ ಹಿಂದಿರುವ ಹಿನ್ನೆಲೆ ಗೊತ್ತಾಗುತಿಲ್ಲ. ಇದರಿಂದ ಅವು ತಮ್ಮ ಮಹತ್ವ ಕಳೆದುಕೊಳ್ಳುತ್ತಿವೆ. ಬದುಕು ವೈಯಕ್ತಿಕತೆಯನ್ನು ಅವಲಂಬಿಸುವಂತಾಗಿ ನಾವು ಸ್ವಾರ್ಥಿಗಳಾಗುತ್ತಿದ್ದೇವೆ. ಇದು ಸಮಾಜದ ಸಹಭಾಗಿತ್ವ ಜೀವನಕ್ಕೆ ತೊಂದರೆಯಾಗುತ್ತದೆ. ಇದನ್ನು ನಿವಾರಿಸಲು ನಾವು ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಹಾಗೂ ಆಚಾರ ವಿಚಾರದ ಬಗ್ಗೆ ತಿಳಿ ಹೇಳಬೇಕು. ಅಲ್ಲದೆ ಆ ವಿಧದ ಪುಸ್ತಕಗಳನ್ನು ಮಕ್ಕಳಿಗೆ ಓದಲು ಪ್ರೋತ್ಸಾಹಿಸಬೇಕೆಂದು ಕಿವಿಮಾತು ಹೇಳಿದರು.
ಪರೀಕ್ಷಾ ಭಯ ನಿವಾರಿಸಲು ವಿಶೇಷ ಚಟುವಟಿಕೆ: ಸೇವಾ ಸಂಸ್ಥೆಯ ನಿರ್ದೇಶಕ ಬಸವರಾಜ ಸ್ವಾಮಿ ಹಿರೇಮಠ ಅಧ್ಯಕ್ಷತೆ ವಹಿಸಿ, ಸಂಸ್ಥೆಯು ಗ್ರಾಮೀಣ ಭಾಗದ ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಮಕ್ಕಳಿಗೆ ಪ್ರೋತ್ಸಾಹ ನೀಡುತ್ತಿದೆ. ಈಗಾಗಲೇ ನಾವು ಗೌಡಗೇರಾ ಹಾಗೂ ನಾಗರಬಂಡಿ ಗ್ರಾಮದಲ್ಲಿ ಮಕ್ಕಳಿಗೆ ಉಚಿತವಾಗಿ ಪುಸ್ತಕಗಳನ್ನು ನೀಡಿದ್ದೇವೆ. ಅಲ್ಲದೆ ಈ ಭಾಗದ ಎಸ್ಸೆಸ್ಸೆಲ್ಸಿ ಮಕ್ಕಳ ಪರೀಕ್ಷೆ ಭಯವನ್ನು ನಿವಾರಿಸಲು ಅನುಕೂಲವಾಗುವಂತೆ ವಿಶೇಷ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು. ಚಂದಪ್ಪ ನಾಯಕ ಮುದ್ನಾಳ, ಅನಿಲಕುಮಾರ, ವಿಜಯಕುಮಾರ, ಶರಣಕುಮಾರ, ವೆಂಕಟೇಶ ಇತರರಿದ್ದರು. ರಾಧಿಕಾ, ಶಾಂತಾ ಪ್ರಾರ್ಥಿಸಿದರು. ನಾಗರಾಜ ಸ್ವಾಗತಿಸಿದರು.
ಜಾತಿ, ಹಣಬಲ ಬೇಡ
ಜಾತಿ, ಹಣ ಬಲವಿಲ್ಲದ ಚುನಾವಣೆ ನಮ್ಮ ಆದ್ಯತೆಯಾಗಬೇಕು. ಮತದಾರರು ಮನಸ್ಸು ಮಾಡಿದರೆ ಇಂತಹ ಬದಲಾವಣೆ ತರುವುದು ಕಷ್ಟದ ಕೆಲಸವೇನಲ್ಲ. ಎಲ್ಲವನ್ನೂ ಸರ್ಕಾರ, ಆಯೋಗ ಮಾಡಬೇಕು ಎನ್ನದೆ ನಾವು ಮೊದಲು ಪ್ರಜ್ಞಾವಂತ ಮತದಾರರಾಗಬೇಕು. ಹಣ- ಹೆಂಡದ ಆಮಿಷಗಳನ್ನು ತಿರಸ್ಕರಿಸುವ ಮೂಲಕ ಉತ್ತಮರ ಪರ ನಿಲ್ಲುವಂತಾಗಬೇಕು. ಅಂದಾಗ ಮಾತ್ರ ಮುಕ್ತ- ನ್ಯಾಯಸಮ್ಮತ ಚುನಾವಣೆ ನಡೆದು ಉತ್ತಮರು ಆಳುತ್ತಾರೆ. ಇಡೀ ದೇಶವೇ ಸುಭೀಕ್ಷವಾಗುತ್ತದೆ. ಬಿಗಿ ಬಂದೋಬಸ್ತ್ನಿಂದ ಚುನಾವಣೆ ಹಿಂಸಾಚಾರ ಈಗ ಹಿಂದಿನಂತೆ ಇಲ್ಲ. ಅದೇ ರೀತಿ ನಾವು ನಮ್ಮ ಮನಸ್ಸಿಗೆ ಬಿಗಿಯಾದಂಥ ಕಟ್ಟುಪಾಡು ಹಾಕಿಕೊಳ್ಳುವ ಮೂಲಕ ಜಾತಿ, ಹಣಬಲದ ಹಿನ್ನೆಲೆಯ ಚುನಾವಣೆ, ಮತ ನಿರ್ಣಯ ಕೈಗೊಳ್ಳದೆ ಸಮಾಜ, ಪ್ರಾಂತ, ದೇಶದ ಹಿತಾಸಕ್ತಿ, ನೆಲ, ಜಲ, ಭಾಷೆಯ ಹಿತಾಸಕ್ತಿ ಗಮನವಿಟ್ಟುಕೊಂಡು ಮತದಾನ ಮಾಡಬೇಕು, ಅಂದಾಗ ಮಾತ್ರ ಕಲುಷಿತ ಚುನಾವಣಾ ವ್ಯವಸ್ಥೆ ಪರಿಸುದ್ಧವಾಗುತ್ತದೆ, ಪರಿಶುದ್ಧರೂ ಬೆಳಕಿಗೆ ಬರುತ್ತಾರೆ, ಸುಗಮ ಆಡಳಿತ, ಉತ್ತಮ ಬದುಕು ನಮ್ಮದಾಗುತ್ತದೆ.
ಡಾ. ಎಸ್.ಎಸ್. ಗುಬ್ಬಿ,
ಮೂಳೆ ತಜ್ಞ- ಚಿಂತಕ, ಗುಲ್ಬರ್ಗ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

