ಗುಲ್ಬರ್ಗಾ

ಅಪಪ್ರಚಾರಕ್ಕೆ ಜೋತು ಬಿದ್ದರು

Published On :

 ನಾರಾಯಣ ಹೆಗಡೆ
ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.25
ದಿನೆ ದಿನೇ ಪ್ರಚಾರದ ದಿಕ್ಕು ಬದಲಾಗುತ್ತಿದೆ. ತಮ್ಮ ಸಾಧನೆಯನ್ನು ಹೇಳುವುದಕ್ಕಿಂತ ಹೆಚ್ಚಾಗಿ ಪ್ರತಿಸ್ಪರ್ಧಿಬಗ್ಗೆ ಅಪ ಪ್ರಚಾರ ಮಾಡುವುದರಲ್ಲೇ ಅಭ್ಯರ್ಥಿಗಳು ನಿರತರಾಗಿದ್ದಾರೆ.
ಪ್ರಮುಖ ಪಕ್ಷಗಳ ಅಭ್ಯರ್ಥಿಗಳೂ ಅಪಪ್ರಚಾರದ ಹೇಳಿಕೆಗಳಿಗೆ ಜೋತು ಬಿದ್ದಿದ್ದು, ಪಕ್ಷೇತರರಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳೂ ಬಲಿಯಾಗಬೇಕಿದೆ. ಅಲ್ಲದೇ ಒಂದು ಕ್ಷೇತ್ರದ ಪ್ರಬಲ ಅಭ್ಯರ್ಥಿ ತಮಗೆ ನೇರ ಸ್ಪರ್ಧೆ ಒಡ್ಡುತ್ತಿರುವ ಅಭ್ಯರ್ಥಿ ಬಗ್ಗೆಯೂ ಮತದಾರರಲ್ಲಿ ಗೊಂದಲ ಮೂಡಿಸುವ ಹೇಳಿಕೆ ನೀಡುತ್ತಿದ್ದಾರೆ. ತಮ್ಮ ಗೆಲವಿಗೆ ಅಡ್ಡಿಯಾಗುತ್ತಾರೆ ಎಂಬ ಅಭ್ಯರ್ಥಿಯನ್ನು ಟಾರ್ಗೆಟ್ ಮಾಡಿಕೊಂಡು, 'ಅವರು ಬುಕ್ ಆಗಿದ್ದಾರೆ. ಮತ್ತೊಬ್ಬರು ಈಗಾಗಲೇ ಹಣ ಪಡೆದು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಇನ್ನೊಬ್ಬರು ಮತ ಒಡೆಯಲು ಮಗದೊಬ್ಬ ಅಭ್ಯರ್ಥಿಯೇ ನಿಲ್ಲಿಸಿದ ಡಮ್ಮಿ ಕ್ಯಾಂಡಿಡೇಟು...' ಹೀಗೆ ಇತರ ಅಭ್ಯರ್ಥಿಗಳ ಬಗ್ಗೆ ಅಪಪ್ರಚಾರವೇ ಈಗ ಪ್ರಚಾರದ ವಸ್ತು.
ಅತಿರಥರಿಗೆ ಶುರುವಾಗಿದೆ ಅಂಜಿಕೆ: ಜಿಲ್ಲೆಯ ಹಾಲಿ ಶಾಸಕರಿಗೂ ನಾನೇ ಗೆಲ್ಲುತ್ತೇನೆ ಎಂದು ಧೈರ್ಯದಿಂದ ಹೇಳಿಕೊಳ್ಳುವ ಸ್ಥಿತಿ ಸದ್ಯಕ್ಕಿಲ್ಲ. ಕೆಲವು ಕ್ಷೇತ್ರಗಳಲ್ಲಿ ನೇರ ಸ್ಪರ್ಧೆ ಏರ್ಪಟ್ಟರೆ, ಮತ್ತೆ ಕೆಲವೆಡೆ ತ್ರಿಕೋನ ಸ್ಪರ್ಧೆ ಇದೆ. ಹಣ, ಜಾತಿ ಬಲ ಹೊಂದಿರುವ ಅಭ್ಯರ್ಥಿಗಳಿಗೂ ಚುನಾವಣೆ ಹತ್ತಿರ ಬರುತ್ತಿದ್ದಂತೆ ನಡುಕ ಶುರುವಾಗಿದೆ. ಆದ್ದರಿಂದ ತಮ್ಮ ಸಾಧನೆ ಹೇಳಿ ವೋಟು ಪಡೆಯುವುದಕ್ಕಿಂತ, ಇತರರ ಮೇಲೆ ಆಪಾದಿಸುವುದನ್ನೇ ಅಸ್ತ್ರ ಮಾಡಿಕೊಂಡಿದ್ದಾರೆ. ಇದರಿಂದ ಬೇರೆ ಅಭ್ಯರ್ಥಿಗಳನ್ನು ಬೆಂಬಲಿಸುವ ಮತದಾರ ಗೊಂದಲಕ್ಕೆ ಸಿಲುಕಿ ತಮ್ಮ ಕಡೆ ವಾಲಬಹುದೆಂದು ಆಲೋಚಿಸುತ್ತಿದ್ದಾರೆ.
ಎಲ್ಲರದ್ದೂ ಒಂದೇ ಮಂತ್ರ: ಎಲ್ಲ ಪಕ್ಷಗಳ ಹಾಗೂ ಪಕ್ಷೇತರರಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳಿಂದ ಕೇಳಿ ಬರುತ್ತಿರುವ ಪ್ರಮುಖ ಮಾತೆಂದರೆ, 'ಕ್ಷೇತ್ರದ ಅಭಿವೃದ್ಧಿಗಾಗಿ ನನಗೆ ಮತ ನೀಡಿ' ಎಂದು. ಇದೇ ಮಾತುಗಳನ್ನು ಹಾಲಿ ಶಾಸಕರೂ ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. ಇಷ್ಟು ವರ್ಷ ಶಾಸಕರಾಗಿದ್ದರೂ ತಮ್ಮಿಂದ ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂಬುದನ್ನು ಅವರೇ ಹೇಳುತ್ತಿದ್ದಾರೆ. ಕ್ಷೇತ್ರ ಸಾಕಷ್ಟು ಹಿಂದುಳಿದಿದೆ, ಮೂಲ ಸೌಲಭ್ಯಗಳಿಲ್ಲ. ಕೆಲಸವಿಲ್ಲದೇ ಜನ ಗುಳೆ ಹೋಗುತ್ತಿದ್ದಾರೆ. ಇವಕ್ಕೆಲ್ಲ ಅವರೇ ಕಾರಣ. ಆದ್ದರಿಂದ ಈ ಬಾರಿ ಅಭಿವೃದ್ಧಿಗಾಗಿ ನನ್ನನ್ನು ಗೆಲ್ಲಿಸಿ ಎಂಬ ಸಿದ್ಧ ಪ್ರಣಾಳಿಕೆಯನ್ನು ಎಲ್ಲ ಅಭ್ಯರ್ಥಿಗಳು ಹೇಳುತ್ತಿದ್ದಾರೆ. ಆದರೆ ಮತದಾರ ಈ ಬಾರಿ ಜಾಗೃತನಾಗಿದ್ದು, ಎಲ್ಲರೂ ಹೇಳಿದ್ದನ್ನು ಕೇಳಿಸಿಕೊಳ್ಳುತ್ತಿದ್ದಾನೆ. ಯಾರಿಗೆ ಮತ ಹಾಕಬೇಕು ಎನ್ನುವುದು ನಮಗೂ ಗೊತ್ತು ಎಂದು ತಮ್ಮೊಳಗೇ ಹೇಳಿಕೊಳ್ಳುತ್ತಿದ್ದಾರೆ.
ರಾಜ್ಯ ಮಟ್ಟದಲ್ಲಿ ಒಂದು ಪಕ್ಷ ಮತ್ತೊಂದರ ಜತೆ ಕೈ ಜೋಡಿಸುತ್ತಿದೆ. ಆ ಪಕ್ಷ ಹೊಂದಾಣಿಕೆ ಮಾಡಿಕೊಂಡಿದೆ ಎಂಬ ಮಾತು ಕೇಳಿದ್ದ ಜನತೆ ತಮ್ಮ ಕ್ಷೇತ್ರದಲ್ಲೇ ಈ ರೀತಿಯ ಮಾತುಗಳನ್ನು ಕೇಳುವಂತಾಗಿದೆ. ಅಭಿವೃದ್ಧಿ, ಸಾಧನೆ, ಯೋಜನೆಗಳು ಪ್ರಚಾರದ ವೇಳೆ ಎರಡನೇ ಸ್ಥಾನಕ್ಕೆ ಹೋಗಿದೆ.  ಒಂದು ಪಕ್ಷದ ಅತೃಪ್ತ ಮುಖಂಡರು ತಮಗೆ ಸಪೋರ್ಟ್ ಮಾಡುತ್ತಿದ್ದಾರೆ ಎಂದು ಹೇಳಿ ಆ ಸಮುದಾಯದ ಮತ ಪಡೆಯುವ ಹವಣಿಕೆಯೂ ಈ ಅಪಪ್ರಚಾರದ ಒಂದು ಭಾಗವಾಗಿದೆ. ಆದ್ದರಿಂದ ಮತದಾರ ಅಭ್ಯರ್ಥಿ ಆಡಿದ ಮಾತನ್ನು ಅಳೆದು ತೂಗಿ ನಿರ್ಧರಿಸಬೇಕಿದೆ. ಅಭ್ಯರ್ಥಿ ಹೇಳಿದ್ದೆಲ್ಲ ಸತ್ಯ ಎಂಬ ಕಾಲ ಬದಲಾಗಿದೆ.
 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.