ಗುಲ್ಬರ್ಗಾ

ಕುಡಿವ ನೀರಿಗಾಗಿ ರಸ್ತೆಗೆ ಕಲ್ಲು- ಮುಳ್ಳು...

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.26
ನಗರದ 10 ಮತ್ತು 11ನೇ ವಾರ್ಡಿನ ಜನತೆ ಕುಡಿವ ನೀರು ಮತ್ತು ಮೂಲ ಸೌಲಭ್ಯಕ್ಕಾಗಿ ಆಗ್ರಹಿಸಿ ರಸ್ತೆ ಮೇಲೆ ಕಲ್ಲು- ಮುಳ್ಳು ಹಾಕಿ ಶುಕ್ರವರಾ ಕೆಲ ಗಂಟೆಗಳ ಕಾಲ ಪ್ರತಿಭಟನೆ ನಡೆಸಿದರು.
ಕೋಟಗೇರಾ ಬಡಾವಣೆಯಲ್ಲಿ ಬೃಹತ್ ನೀರಿನ ಟ್ಯಾಂಕ್ ಇದ್ದು, ನಗರಕ್ಕೆಲ್ಲ ಸರಬರಾಜು ಆಗುತ್ತಿದ್ದರೂ ಈ ಬಡಾವಣೆಯವರಿಗೆ ಮಾತ್ರ ನೀರು ಸಿಗದಂತಾಗಿದೆ. ಹೀಗಾಗಿ ಎರಡೂ ವಾರ್ಡಿನ ಜನರು ಕುಡಿವ ನೀರಿಗಾಗಿ ಪರದಾಡುವಂತಾಗಿದೆ. ಕಳೆದ ಕೆಲವು ತಿಂಗಳಿಂದ ಒಳಚರಂಡಿ ಶುಚಿಗೊಳಿಸದ ಕಾರಣ ಅದು ತುಂಬಿ ರಸ್ತೆಯ ಮೇಲೆ ಕೊಳಚೆ ನೀರು ಹರಿದು ಬರುತ್ತಿದೆ.
ನಗರಸಭೆ ನಿರ್ಲಕ್ಷ್ಯ: ಅಲ್ಲದೆ ಕೆಲ ಮನೆಗಳಿಗೂ ಕೊಳಚೆ ನೀರು ನುಗ್ಗುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ಕುರಿತು ಅನೇಕ ಬಾರಿ ನಗರಸಭೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಬಡಾವಣೆಯ ನಿವಾಸಿ ಚಂದಪ್ಪ ದೂರಿದರು.
ಈಗಾಗಲೇ ಚುನಾಯಿತರಾದ ನಗರಸಭೆ ಸದಸ್ಯರೂ ಇತ್ತ ಗಮನಹರಿಸುತ್ತಿಲ್ಲ. ಚುನಾವಣೆಯ ಸಂದರ್ಭದಲ್ಲಿ ಭರವಸೆ ನೀಡಿ ಈಗ ನಮ್ಮನ್ನು ಮರೆತು ಹೋಗಿದ್ದಾರೆ ಎಂದು ನಿವಾಸಿಗಳು ಆಪಾದಿಸಿದರು. ನಾವು ಆಯ್ಕೆಯಾಗಿದ್ದೇವೆ ನಿಜ. ಆದರೆ ನಮಗೆ ಯಾವುದೇ ಅಧಿಕಾರ ಇಲ್ಲ. ಹೀಗಾಗಿ ನಮ್ಮ ಮಾತು ಅಧಿಕಾರಿಗಳು ಕೇಳಲ್ಲ ಎಂಬುದು ನಗರಸಭೆಯ ಸದಸ್ಯರ ಅನಿಸಿಕೆಯಾಗಿದೆ.
ಅಭ್ಯರ್ಥಿಗಳಲ್ಲಿ ಆತಂಕ: ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ನಗರ ನಿವಾಸಿಗಳು ಹಠಾತ್ ಮುಷ್ಕರಕ್ಕೆ ಇಳಿದಿದ್ದು ಅಭ್ಯರ್ಥಿಗಳಿಗೆ ಇರಸು ಮುರಸು ಉಂಟು ಮಾಡಿದೆ. ಆ ವಾರ್ಡಿನಲ್ಲಿ ಹೋಗಿ ಹೇಗೆ ಮತ ಕೇಳುವುದು ಎಂಬ ಅತಂಕಕ್ಕೆ ಒಳಗಾಗಿದ್ದಾರೆ.
ಸುದ್ದಿ ತಿಳಿದ ನಗರಸಭೆ ಆಯುಕ್ತರು ಸ್ಥಳಕ್ಕೆ ಭೇಟಿ ನೀಡಿ, ನಿವಾಸಿಗಳ ಜೊತೆ ಚರ್ಚಿಸಿದರು. ಕೂಡಲೇ ಕುಡಿವ ನೀರಿನ ಸಮಸ್ಯೆಗೆ ಪರಿಹಾರ ಒದಗಿಸಲಾಗುವುದು. ವಾರಕ್ಕೊಮ್ಮೆ ಚರಂಡಿಯನ್ನು ಶುಚಿಗೊಳಿಸಲಾಗುವುದು ಎಂದು ಭರವಸೆ ನೀಡಿದರು.
ಮತದಾನ ಬಹಿಷ್ಕಾರ- ಎಚ್ಚರಿಕೆ: ನಿಮ್ಮ ಭರವಸೆಯ ಮೇರೆಗೆ ಮುಷ್ಕರ ಹಿಂತೆಗೆದುಕೊಳ್ಳುತ್ತೇವೆ. ಆದರೆ ಒಂದೆರಡು ದಿನಗಳಲ್ಲಿ ಸೂಕ್ತ ಕ್ರಮ ಜರಗಿಸದಿದ್ದಲ್ಲಿ ಮೇ 5ರಂದು ನಡೆಯುವ ಮತದಾನವನ್ನು ಬಹಿಷ್ಕರಿಸಬೇಕಾಗುತ್ತದೆ ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.