ಗುರುಮಠಕಲ್ ಅಭಿವೃದ್ಧಿಗಾಗಿ 'ಕೈ'ಗೆ ಮತ ನೀಡಿ: ಖರ್ಗೆ
ಕನ್ನಡಪ್ರಭ ವಾರ್ತೆ, ಗುರುಮಠಕಲ್, ಏ.26
ಮೂರು ಹೋಳಾಗಿರುವ ಬಿಜೆಪಿಗೆ ರಾಜ್ಯದಲ್ಲಿ ಭವಿಷ್ಯವಿಲ್ಲ. ಕೆಜೆಪಿ ಹಾಗೂ ಜೆಡಿಎಸ್ ಕನಸು ಕಾಣುವುದನ್ನು ಬಿಟ್ಟು ಮತ್ತೇನೂ ಮಾಡಲು ಸಾಧ್ಯವಿಲ್ಲ. ರಾಜ್ಯಾದ್ಯಂತ ಕಾಂಗ್ರೆಸ್ ಅಲೆಯಿದ್ದು, ಪಕ್ಷ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ವಿಶ್ವಾಸ ವ್ಯಕ್ತಪಡಿಸಿದರು.
ಗುರುಮಠಕಲ್ ಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಾಬೂರಾವ ಚಿಂಚನಸೂರ ಅವರ ಪರವಾಗಿ ಪ್ರಚಾರ ನಡೆಸಿದ ಅವರು, ನಾನು ಕ್ಷೇತ್ರದ ಶಾಸಕನಾಗಿ 37 ವರ್ಷಗಳ ಕಾಲ ನಿಮ್ಮ ಸೇವೆ ಮಾಡಿದ್ದೇನೆ. ನನ್ನ ನಂತರದಲ್ಲಿ ಬಂದ ಶಾಸಕ ಚಿಂಚನಸೂರ ಅವರಿಂದಲೂ ಕ್ಷೇತ್ರದ ಅಭಿವೃದ್ಧಿಯಾಗಿದೆ ಎಂದರು.
ಶೀಘ್ರವೇ ನದಿ ನೀರು ಸರಬರಾಜು: ಗುರುಮಠಕಲ್ ಜನತೆಯ ಬಹುದಿನಗಳ ಬೇಡಿಕೆಯಾದ ಕುಡಿವ ನೀರಿನ ಯೋಜನೆಗೆ ಸುಮಾರು 41 ಕೋಟಿ ಅನುದಾನವನ್ನು ನೀಡಿ, ಭೀಮಾ ನದಿಯಿಂದ ಗುರುಮಠಕಲ್ ಪಟ್ಟಣ ಸೇರಿದಂತೆ ವಿವಿಧ ಗ್ರಾಮಗಳಿಗೆ ಶಾಶ್ವತ ಕಾಮಗಾರಿ ಕೈಗೊಳ್ಳಲಾಗಿದೆ. ಅದು ಮುಗಿಯುವ ಹಂತದಲ್ಲಿದ್ದು, ಶೀಘ್ರದಲ್ಲಿ ನೀರು ಸರಬರಾಜು ಮಾಡುವ ಕಾರ್ಯ ನಡೆಯಲಿದೆ. ಮುಂದೆ ಕೂಡ ನಿಮ್ಮ ಸೇವೆಯಲ್ಲಿ ಕಾಂಗ್ರೆಸ್ ತೊಡಗಿಕೊಳ್ಳಲಿದೆ ಎಂದು ಭರವಸೆ ನೀಡಿದರು.
ಕ್ಷೇತ್ರ ಅಭಿವೃದ್ಧಿಯಾಗಿಲ್ಲ ಎಂದು ಪ್ರತಿಪಕ್ಷದವರು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಬೇರೆ ಮತಕ್ಷೇತ್ರಗಳನ್ನು ನೋಡಿ ಬಂದು ಅವರು ಮಾತನಾಡಲಿ. ಗುರುಮಠಕಲ್ ಮತಕ್ಷೇತ್ರದಲ್ಲಿ ಎಷ್ಟು ಅಭಿವೃದ್ಧಿ ಕಾಮಗಾರಿಗಳು ಅಗಿದೆ ಎನ್ನುವುದು ಆಗ ಮನವರಿಕೆಯಾಗುತ್ತದೆ ಎಂದು ಹೇಳಿದರು.
ವಿಶ್ವಾಸ ಕಳೆದುಕೊಂಡ ಬಿಜೆಪಿ: ಸಂಸದ ಎನ್.ಧರ್ಮಸಿಂಗ್ ಮಾತನಾಡಿ, ರಾಜ್ಯದಲ್ಲಿ ಅಧಿಕಾರ ನಡೆಸಿದ ಬಿಜೆಪಿ ಲೂಟಿ ಮಾಡಿ ಜನರ ವಿಶ್ವಾಸವನ್ನು ಕಳೆದುಕೊಂಡಿದೆ. ಬಿಜೆಪಿಯಲ್ಲಿನ ಅಂತರಿಕ ಕಚ್ಚಾಟದಿಂದ ಪಕ್ಷ ಮೂರು ಭಾಗಗಳಾಗಿದೆ. ಆದ್ದರಿಂದ ಕಾಂಗ್ರೆಸ್ ಹೊರತುಪಡಿಸಿ ಯಾವ ಪಕ್ಷದಿಂದಲೂ ಸ್ಥಿರ ಹಾಗೂ ಸುಭದ್ರ ಸರ್ಕಾರ ರಚನೆ ಸಾಧ್ಯವಿಲ್ಲ ಎಂದು ಹೇಳಿದರು.
ಪಕ್ಷದ ಜಿಲ್ಲಾಧ್ಯಕ್ಷ ಮರಿಗೌಡ ಹುಲಕಲ್, ಶಾಸಕ ಬಾಬೂರಾವ ಚಿಂಚನಸೂರ ಮಾತನಾಡಿದರು. ಬ್ಲಾಕ್ ಅಧ್ಯಕ್ಷ ಮಹಿಪಾಲರಡ್ಡಿ ಹತ್ತಿಕುಣಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸೈದಾಪುರ ಬ್ಲಾಕ್ ಅಧ್ಯಕ್ಷ ವಿಶ್ವನಾಥ ನೀಲಹಳ್ಳಿ, ಜಿಪಂ ಉಪಾಧ್ಯಕ್ಷ ಶ್ರೇಣಿಕಕುಮಾರ ದೋಖಾ, ಚಿದನಾಂದಪ್ಪ ಕಾಳೆಬೆಳಗುಂದಿ, ಸಾಯಿಬಣ್ಣ ಬೋರಬಂಡಾ, ಕೃಷ್ಣಾ ಚಪೆಟ್ಲಾ, ಲಕ್ಷ್ಮೀ ಚಂಡ್ರಕಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

