ಗುಲ್ಬರ್ಗಾ

ಮತದಾನ ಹೆಚ್ಚಳಕ್ಕಾಗಿ ಮತ್ತೊಂದು ಪ್ರಯೋಗ!

Published On :

ಕನ್ನಡಪ್ರಭ ವಾರ್ತೆ, ಯಾದಗಿರಿ, ಏ.26
ಮತದಾನ ಹೆಚ್ಚಳಕ್ಕೆ ಎಲ್ಲ ರೀತಿಯ ತಂತ್ರ ಅನುಸರಿಸಲಾಗಿದ್ದು, ದಿನಪತ್ರಿಕೆ, ಕೋರಿಯರ್ ಹಾಗೂ ಅಂಚೆ ಚೀಟಿಗಳ ಮೇಲೆ ಕಡ್ಡಾಯವಾಗಿ ಮತದಾನ ಮಾಡುವಂತೆ ಮುದ್ರೆ ಹಾಕುವ ನೂತನ ಪ್ರಯೋಗ ಅನುಸರಿಸಲಾಗುತ್ತಿದೆ ಎಂದು ಜಿಪಂ ಸಿಇಒ ಹಾಗೂ ಸ್ವೀಪ್ ಸಮಿತಿ ಅಧ್ಯಕ್ಷ ಎಸ್.ಎ. ಜಿಲಾನಿ ತಿಳಿಸಿದರು.
ತಮ್ಮ ಕಚೇರಿಯಲ್ಲಿ ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಜಿಲ್ಲೆಯ ಜನತೆಯಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸಲು ಜಿಲ್ಲಾಡಳಿತ ಮತ್ತು ಚುನಾವಣೆ ಆಯೋಗ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಜಿಲ್ಲೆಯಲ್ಲಿ ಕಳೆದ ಬಾರಿ ಕೇವಲ ಶೇ. 52ರಷ್ಟು ಮತದಾನವಾಗಿತ್ತು.
 ಇದನ್ನು ಪರಿಗಣಿಸಿರುವ ಆಯೋಗ ಈ ಬಾರಿ ಶೇ. 100ರಷ್ಟು ಮತದಾನವಾಗಲು ಅಗತ್ಯ ರೀತಿಯ ಕ್ರಮ ಕೈಗೊಳ್ಳುವಂತೆ ಸೂಚಿಸಿದೆ.
ಮತದಾನಕ್ಕೆ ಕೋರಿ ಮುದ್ರೆ: ಆದ್ದರಿಂದ ಜಿಲ್ಲೆಯಲ್ಲಿ ಪ್ರತಿ ದಿನ ವಿತರಣೆಯಾಗುವ ಸುಮಾರು 32 ಸಾವಿರ ವಿವಿಧ ದಿನಪತ್ರಿಕೆಗಳು, ಸುಮಾರು 3 ಸಾವಿರ ಕೋರಿಯರ್ ಹಾಗೂ 2 ಸಾವಿರದಷ್ಟು ಅಂಚೆ ಕಾರ್ಡುಗಳ ಮೇಲೆ ಮತದಾನ ಮಾಡುವಂತೆ ಕೋರಿ ಮುದ್ರೆ ಹಾಕಲಾಗುವುದು. ಈ ನಿಟ್ಟಿನಲ್ಲಿ ಸಂಬಂಧಪಟ್ಟವರ ಜತೆ ಈಗಾಗಲೇ ಸಭೆ ನಡೆಸಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಆಶಾ ಕಾರ್ಯಕರ್ತೆಯರಿಂದ ಕರಪತ್ರ ಮತ್ತು ಬ್ಯಾನರ್‌ಗಳ ಮೂಲಕ ತಿಳಿವಳಿಕೆ ಮೂಡಿಸುವ ಕಾರ್ಯ ಪ್ರಗತಿಯಲ್ಲಿದೆ. ಮಾತ್ರವಲ್ಲ ಜಿಲ್ಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ  ಸುಮಾರು 600 ಕ್ಲಿನಿಕ್‌ಗಳಿದ್ದು, ಅದರಲ್ಲಿ ಒಂದು ದಿನಕ್ಕೆ 12 ಸಾವಿರಕ್ಕೂ ಹೆಚ್ಚು ಜನ ಚಿಕಿತ್ಸೆಗೆ ಬರುತ್ತಾರೆ.
ರಾಜ್ಯದಲ್ಲೇ ನೂತನ ಪ್ರಯೋಗ: ಹೀಗೆ ಬಂದವರಿಗೆ ತಪಾಸಣೆ ಚೀಟಿಯಲ್ಲಿ ಮತದಾನ ಕಡ್ಡಾಯವಾಗಿ ಮಾಡಿ ಎಂದು ರಬ್ಬರ್‌ಸ್ಪಾಂಪ್‌ಗಳಿಂದ ಮುದ್ರೆ ಒತ್ತಿಸಿ ಕೊಡುವ ಮಹತ್ವದ ಕಾರ್ಯ ಪ್ರಗತಿಯಲ್ಲಿದೆ. ಇದು ರಾಜ್ಯದಲ್ಲಿಯೇ ನೂತನ ಪ್ರಯೋಗವಾಗಿದೆ. ಇದಕ್ಕೆ ರಾಜ್ಯ ಚುನಾವಣಾ ಆಯೋಗವೂ ಮೆಚ್ಚುಗೆ ವ್ಯಕ್ತಪಡಿಸಿದೆ ಎಂದರು.
ಸುಮಾರು 1 ಲಕ್ಷ ಕಾರ್ಡುಗಳನ್ನು ಶಿಕ್ಷಣ ಇಲಾಖೆಗೆ ನೀಡಲಾಗಿದ್ದು, ಅವುಗಳಲ್ಲಿ ಸುಮಾರು 80 ಸಾವಿರ ಪ್ರತಿಗಳನ್ನು ಮಕ್ಕಳಿಗೆ ವಿತರಿಸಲಾಗಿದೆ. ಈ ಪೈಕಿ ಸದ್ಯ ಶಾಲೆಗಳಿಗೆ ರಜೆ ಇರುವುದರಿಂದ ಸುಮಾರು 30 ಸಾವಿರ ಮಕ್ಕಳು ತಮ್ಮ ಪಾಲಕರಿಂದ ಪ್ರಮಾಣ ಮಾಡಿಸಿ ಸಹಿ ಹಾಕಿಸಿಕೊಂಡು ವಾಪಸ್ ನೀಡಿದ್ದಾರೆ. 20 ಸಾವಿರ ಕಾರ್ಡುಗಳನ್ನು ಕಾಲೇಜು ವಿದ್ಯಾರ್ಥಿಗಳಿಗೆ ನೀಡಲಾಗಿದ್ದು, ಅವುಗಳಲ್ಲಿ 5 ಸಾವಿರ ಕಾರ್ಡುಗಳು ವಾಪಸ್ ಬಂದಿವೆ.
ಮತದಾನ ಹೆಚ್ಚಳ- ವಿಶ್ವಾಸ: ಇದಲ್ಲದೇ ಕಳೆದ ಬಾರಿ ಶೇ. 30- 50ರಷ್ಟು ಮತದಾನವಾಗಿರುವ ಸುಮಾರು 90 ಗ್ರಾಮಗಳಲ್ಲಿ ಬೈಕ್ ರ್ಯಾಲಿ, ರಂಗೋಲಿ ಸ್ಪರ್ಧೆ, ಬೀದಿ ನಾಟಕಗಳನ್ನು ಏರ್ಪಡಿಸಲಾಗಿದೆ. ಆದ್ದರಿಂದ ಈ ಬಾರಿ ಮತದಾನ ಹೆಚ್ಚಾಗುವ ವಿಶ್ವಾಸವಿದೆ ಎಂದು ಅವರು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.