ಹೈ-ಕ ಪ್ರಗತಿ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ;
ಖರ್ಗೆ-ಧರಂಗೆ ಅನಂತಕುಮಾರ್ ಸವಾಲ್
ದಕ್ಷಿಣೋತ್ತರದಾಗ ದತ್ತು- ರೆಡ್ಡಿ ರಾಮ ಲಕ್ಷ್ಮಣ ಜೋಡಿ: ಸಂಸದ ಬಣ್ಣನೆ
ಕನ್ನಡಪ್ರಭ ವಾರ್ತೆ ಗುಲ್ಬರ್ಗ ಏ.26
ಬಿಜೆಪಿ ದತ್ತಾತ್ರೇಯ ಪಾಟೀಲ್ ರೇವೂರ್ ಹಾಗೂ ರಾಜಗೋಪಾಲರೆಡ್ಡಿ ಅವರನ್ನು ಕಣಕ್ಕಿಳಿಸಿದ್ದು ಇವರಿಬ್ಬರು ರಾಮ-ಲಕ್ಷಣ ಇದ್ಹಂಗ, ದಕ್ಷಿಣೋತ್ತರದಾಗ ನಿಂತಿದ್ದು ಇವರಿಬ್ಬರಿಗೂ ಜನತೆ ಆಶೀರ್ವದಿಸಿ ಗೆಲ್ಲಿಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್ ಕರೆ ನೀಡಿದ್ದಾರೆ.
ಇಲ್ಲಿನ ಸೂಪರ್ ಮಾರ್ಕೆಟ್ ಮೈದಾನದಲ್ಲಿ ಶುಕ್ರವಾರ ಸಂಜೆ ಚುನಾವಣಾ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಗುಲ್ಬರ್ಗ ಪ್ರಗತಿಗೆ ಬಿಜೆಪಿ ನೀಡಿರುವ ಕೊಡುಗೆ ಅಪಾರ. 200 ಕೋಟಿ ಸಿಎಂ ನಗರೋತ್ಥಾನ ಅನುದಾನ ಸೇರಿದಂತೆ ಬಹುಕೋಟಿ ಹಣ ನಗರಕ್ಕೆ ಹರಿದು ಬರಲು ಬಿಜೆಪಿ ಕಾರಣ ಎಂಬುದನ್ನು ನಗರ ಮತದಾರರು ಮರೆಯಬಾರದೆಂದರು.
ಗುಲ್ಬರ್ಗದಿಂದ ಸತತ 2 ಬಾರಿ ಬಿಜೆಪಿ ಶಾಸಕರಾಗಿದ್ದ ಚಂದ್ರಶೇಖರ ಪಾಟೀಲ್ ರೇವೂರ್ ಸ್ಮರಿಸಿದ ಅನಂತ, ಅವರ ಜನಪರ ಧೋರಣೆಯೇ ಇಂದು ಬಿಜೆಪಿಗೆ ಇಲ್ಲಿ ವರ. ಅಲ್ಲದೇ ಹಿಂದೆ ಪಕ್ಷದ ಆಂತರಿಕ ಕಚ್ಚಾಟದಿಂದ ಆಗಿದ್ದಂತಹ ತಪ್ಪು ಸರಿಪಡಿಸಲು ಇಂದು ಪಕ್ಷ ಚಂದ್ರಶೇಖರ ರೇವೂರ್ ಅವರ ಪುತ್ರ ದತ್ತಾತ್ರೇಯ ರೇವೂರ್ ಅವರಿಗೆ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಸ್ಪರ್ಧೆಗೆ ಅವಕಾಶ ಕಲ್ಪಿಸಿದೆ ಎಂದರು.
ಧರಂ- ಖರ್ಗೆ ವಿರುದ್ಧ ವಾಗ್ದಾಳಿ: ಧರಂಸಿಂಗ್ ಹಾಗೂ ಮಲ್ಲಿಕಾರ್ಜುನ ಖರ್ಗೆ ಇಬ್ಬರು ಸಂಸತ್ತಿನಲ್ಲಿ ಕಳೆದ 4 ವರ್ಷಗಳಿಂದ ಇದ್ದರೂ ತಾವು ಇವರಿಬ್ಬರು ಒಮ್ಮೆಯೋ ಈ ಭಾಗದ ಸಮಸ್ಯೆಗಳಿಗಾಗಿ ಎದ್ದು ನಿಂತದ್ದು ಕಾಣಲಿಲ್ಲ. ಈ ನಾಯಕರು ತಮ್ಮ ಪುತ್ರರ ಗೆಲವಿಗಾಗಿ ಮಾತ್ರ ಎದ್ದು ನಿಲ್ಲುವ ಸಂಕಲ್ಪ ಮಾಡಿದಂತಿದೆ ಎಂದು ಲೇವಡಿ ಮಾಡಿದರು.
ಈ ಭಾಗದ ಮೂಲ ಸೌಕರ್ಯ ಸಮಸ್ಯೆ ಇಂದಿಗೂ ಪರಿಹಾರ ಕಂಡಿಲ್ಲ. ಇವರಿಬ್ಬರೂ ಬಹಿರಂಗವಾಗಿ ಚರ್ಚೆಗೆ ಬರಬೇಕು. ಬಿಜೆಪಿ ಈ ಭಾಗಕ್ಕೆ ಏನು ಮಾಡಿದೆ ಎಂಬುದನ್ನು ನಾವು ಹೇಳುತ್ತೇವೆ. ಧರಂ- ಖರ್ಗೆ ಇಬ್ಬರೂ ಚರ್ಚೆಯಲ್ಲಿ ತಮ್ಮ ಕೊಡುಗೆಗಳನ್ನು ಪಟ್ಟಿ ಮಾಡಲಿ ಎಂದು ಅನಂತ ಸವಾಲ್ ಹಾಕಿದರು. ಉತ್ತರ ಅಭ್ಯರ್ಥಿ ರಾಜಗೋಪಾಲ ರೆಡ್ಡಿ, ದಕ್ಷಿಣದ ದತ್ತಾತ್ರೇಯ ರೇವೂರ್ ಮಾತನಾಡಿದ ಜನಾಶೀರ್ವಾದ ಕೋರಿದರು. ಸೇವೆಗೆ ಅವಕಾಶ ಕೊಡಿ ಎಂದು ಮತದಾರರಲ್ಲಿ ಮನವಿ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

