ಗುಲ್ಬರ್ಗಾ

ಹೆಲಿಪ್ಯಾಡಲ್ಲಿದ್ದ ನೋಟಿನ ಕಂತೆ ಸ್ಟೇಜಲ್ಲಿ 'ಮಾಯ'!

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ. 27
ಕರ್ನಾಟಕ ವಿಧಾನಸಭಾ ಮತ ಸಮರದ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ಚುನಾವಣಾ ಮಾದರಿ ನೀತಿ ಸಂಹಿತೆ ಬಿಸಿ ಶನಿವಾರ ರಾಜ್ಯ ಪ್ರವಾಸದಲ್ಲಿರುವ ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ ಹಾಗೂ ಬಿಎಸ್ಪಿ ಅಧಿನಾಯಕಿ ಮಾಯಾವತಿಗೂ ತಟ್ಟಿತು!
ಆದರೆ ಮಾಯಾವತಿ ಹೊಸ ಉಪಾಯವೊಂದನ್ನು ಹೆಣೆದು ಎಲ್ಲರೂ ನೋಡುತ್ತಿದ್ದಂತೆಯೇ ಮಾದರಿ ನೀತಿ ಸಂಹಿತೆಯ ಬೀಸೊ ದೊಣ್ಣೆಯಿಂದ ತಪ್ಪಿಸಿಕೊಂಡು ಹೋದರು. ಅಷ್ಟೇ ಅಲ್ಲ, ನೀತಿ ಸಂಹಿತೆ ನೆಪವಾಗಿಟ್ಟುಕೊಂಡು ಚುನಾವಣಾ ಆಯೋಗದವರು ದಲಿತ ಮಹಿಳೆಯಾಗಿರುವ ತಮಗೆ ಕುರುಕುಳ ಕೊಡುತ್ತಿದ್ದಾರೆಂದು ದೂರುವ ಮೂಲಕ ಸಂಹಿತೆಯನ್ನೇ ಧಿಕ್ಕರಿಸಿದರು.
ಜೇವರ್ಗಿಯಲ್ಲಿ ಕಣದಲ್ಲಿರುವ ಬಿಎಸ್ಪಿ ಅಭ್ಯರ್ಥಿ ಹುಸೇನ್ ಪಟೇಲ್ ಪರ ಪ್ರಚಾರಕ್ಕೆಂದು ಮಾಯಾವತಿ ಆಗಮಿಸಿದ್ದರು. ಮಾಯಾವತಿ ಜೇವರ್ಗಿ ಹೆಲಿಪ್ಯಾಡ್‌ನಲ್ಲಿ ಇಳಿಯುತ್ತಿದ್ದಂತೆಯೇ ಚುನಾವಣೆ ಕರ್ತವ್ಯದ ಮೇಲಿದ್ದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕ ನಾಗರಾಜ್ ನೇತೃತ್ವದ ಫ್ಲೈಯಿಂಗ್ ಸ್ಕ್ವಾಡ್ ತಂಡ ತಕ್ಷಣ ಅವರನ್ನು ಸುತ್ತುವರಿಯಿತು.
ಅವರ ಬೆಂಗಾವಲು ವಾಹನ, ಅವರ ಪ್ರಯಾಣಕ್ಕೆ ಸಿದ್ಧಪಡಿಸಿದ್ದ ವಾಹನ, ಮಾಯಾವತಿ ಬಳಿ ಇದ್ದ ಪರ್ಸ್ ಅನ್ನು ಪರಿಶೀಲಿಸಿದಾಗ ಪರ್ಸ್‌ನಲ್ಲಿ 1 ಲಕ್ಷ ನೋಟಿನ ಕಂತೆ ಪತ್ತೆಯಾಯ್ತು. ಇದಕ್ಕೆ ಸೂಕ್ತ ದಾಖಲೆ ತೋರಿಸುವಂತೆ ಕೇಳಿದಾಗ ಕುಪಿತರಾದ ಮಾಯಾ ನೋಟಿನ ಕಂತನ್ನು ಕಿತ್ತುಕೊಂಡು, ಅವರಿಗಾಗಿ ಕಾಯುತ್ತಿದ್ದ ವಾಹನವನ್ನೇರಿ ಪ್ರಚಾರ ಸಭೆಗೆ ತೆರಳಿದರು. ಆಗ ಅವರ ಬೆಂಗಾವಲಿಗಿದ್ದ ಬ್ಲ್ಯಾಕ್ ಕ್ಯಾಟ್ ಕಮಾಂಡೋಗಳೂ ಸಂಹಿತೆ ಅಧಿಕಾರಿಗಳ ತಂಡವನ್ನು ತಳ್ಳಾಡಿಕೊಂಡೇ ಅಲ್ಲಿಂದ ಜಾಗ ಖಾಲಿ ಮಾಡಿದರು ಎಂದು ಪ್ರತ್ಯಕ್ಷದರ್ಶಿಗಳು “OÚ«Ú­sÚ®ÚúڒOæQ ತಿಳಿಸಿದ್ದಾರೆ.
ಮಾಯಾವತಿಯವರ ಬ್ಯಾಗ್‌ನಲ್ಲಿದ್ದ ಹಣವನ್ನು ತಪಾಸಣೆ ನಡೆಸುವಂತೆ ಸ್ಕ್ವಾಡ್ ಜೇವರ್ಗಿಯಲ್ಲಿದ್ದ ಮತ್ತೊಂದು ತಂಡಕ್ಕೆ ಸೂಚಿಸಿತ್ತು. ಸಭೆ ನಡೆಯುತ್ತಿದ್ದ ವೇದಿಕೆ ಮೇಲೆ ಬ್ಯಾಗನ್ನು ಪರಿಶೀಲಿಸಿದರೆ ಹಣವೇ ಮಾಯವಾಗಿತ್ತು. ಜತೆಗಿದ್ದವರ ಬ್ಯಾಗನಲ್ಲೂ ಆ ಹಣ ಕಂಡು ಬರಲಿಲ್ಲ.
ಆಯೋಗದ ವಿರುದ್ಧ ಮಾಯಾ ಕಿಡಿ: ಜೇವರ್ಗಿಯಲ್ಲಿ ಎರಡೆರಡು ಬಾರಿ ತಪಾಸಣೆ ನಡೆಸಿದ್ದ ಚುನಾವಣಾ ಆಯೋಗದ ಕ್ರಮದಿಂದ ಕಿರಿಕಿರಿ ಅನುಭವಿಸಿದಂತೆ ಕಂಡು ಬಂದ ಮಾಯಾವತಿ ತಮ್ಮ ಮಾತುಗಳಲ್ಲಿ ಇದನ್ನೆಲ್ಲ ಪ್ರಸ್ತಾಪಿಸುತ್ತ ಬಲವಾಗಿ ಖಂಡಿಸಿದರು.
ತಾವು ದಲಿತ ವರ್ಗಕ್ಕೆ ಸೇರಿದ ಮಹಿಳೆ ಎಂದು ಹೀಗೆ ಎಲ್ಲೆಂದರಲ್ಲಿ ತಪಾಸಣೆಗೆ ಆಯೋಗ ಮುಂದಾಗಿದೆ. ಇದೇ ತಪಾಸಣೆ ಬಿಜೆಪಿಯ ಸುಷ್ಮಾ, ಯೂಪಿಎ ಅಧಿನಾಯಕಿ ಸೋನಿಯಾ ಗಾಂಧಿ ರಾಜ್ಯಕ್ಕೆ ಬಂದಾಗ ಏಕೆ ಮಾಡಲಿಲ್ಲ? ಎಲ್ಲರಿಗೂ ತಪಾಸಣೆ ಮಾಡಲಿ ನೋಡೋಣ ಎಂದು ಸವಾಲು ಹಾಕಿದರು.
ಹೆಲಿಪ್ಯಾಡಲ್ಲಿ ಮಾಯಾ ವಿವರಣೆ: ಭಾಷಣ ಮುಗಿದು ಮತ್ತೆ ಹೆಲಿಪ್ಯಾಡ್‌ಗೆ ಬಂದಾಗ, ಪರ್ಸ್‌ನಲ್ಲಿದ್ದ 1 ಲಕ್ಷದಲ್ಲಿ 50 ಸಾವಿರ ತಮ್ಮೊಂದಿಗೆ ಬಂದ ಪಕ್ಷದ ಪ್ರದಾನ ಕಾರ್ಯದರ್ಶಿ ಹಾಗೂ ಇನ್ನುಳಿದದ್ದು ಪಕ್ಷದ ಪದಾಧಿಕಾರಿಯದ್ದು ಎಂದಷ್ಟೇ ಹೇಳಿ ತರಾತುರಿಯಲ್ಲಿ ಹೆಲಿಕಾಪ್ಟರ್ ಹತ್ತಿ ಹೊರಟೇ ಹೋದರು.
ಕ್ಯಾಮೆರಾ ಕಣ್ಣಲ್ಲಿ ಮಾಯಾಜಾಲ ಸೆರೆ: ಜೇವರ್ಗಿಯ ಹೆಲಿಪ್ಯಾಡ್ ಹಾಗೂ ಪ್ರಚಾರ ವೇದಿಕೆಯಲ್ಲಿ ಶನಿವಾರ ನಡೆದ ನೀತಿ ಸಂಹಿತೆ ಅನುಷ್ಠಾಠಾನ ಹಾಗೂ ಮಾಯಾವತಿಯ ನಡವಳಿಕೆ ಚಿತ್ರೀಕರಣಗೊಂಡಿದ್ದು, ಡಿಸಿ ಡಾ. ಕೆ.ಜೆ ಜಗದೀಶ್ ಈ ಬೆಳವಣಿಗೆಯ ವಿಡಿಯೊ ವೀಕ್ಷಿಸಿ ಮುಂದಿನ ಕ್ರಮ ಕೈಗೊಳ್ಳುವ ಸಂಬಂಧ ಚಿಂತಿಸಲಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.