ಜಿದ್ದಾಜಿದ್ದಿ ಕಣ, ನಾಯಕರ ಪ್ರಾಬಲ್ಯ ಕ್ಷೇತ್ರ
-ಮಲ್ಲು ಗುಳಗಿ
ಕ.ಪ್ರ. ವಾರ್ತೆ, ಸುರಪುರ, ಏ.28
ಕಲ್ಲು ಬಂಡೆಗಳಿಂದ ಆವೃತವಾದ ಸುರಪುರ ಅಸೆಂಬ್ಲಿ ಕಣದಲ್ಲಿ ದಿನದಿಂದ ದಿನಕ್ಕೆ ಚುನಾವಣಾ ಕಾವು ಏರುತ್ತಿದೆ. ಜಿದ್ದಾಜಿದ್ದಿ ರಾಜಕೀಯಕ್ಕೆ ಹೆಸರಾದ ಸುರಪುರದಲ್ಲಿ ಮತದಾರರು ಪಕ್ಷಕ್ಕಿಂತ ವ್ಯಕ್ತಿಗೆ ಮಣೆ ಹಾಕಿರುವುದು 1957ರ ಚುನಾವಣೆಯಿಂದಲೂ ಸಾಬೀತಾಗಿದೆ.
ನಾಯಕರ ಪ್ರಾಬಲ್ಯವಿರುವ ಸುರಪುರದಲ್ಲಿ 1952ರಲ್ಲಿ ಕುರುಬ ಜನಾಂಗದ ಕೊಲ್ಲೂರು ಮಲ್ಲಪ್ಪ ಹೊರತುಪಡಿಸಿದರೆ ಅಲ್ಲಿಂದ ಇಲ್ಲಿಯವರೆಗೆ ನಾಯಕ ಜನಾಂಗದವರು ಆಯ್ಕೆಯಾಗುತ್ತಾ ಬಂದಿರುವುದು ವಿಶೇಷ.
ನಾಯಕರ ಸೆಣಸಾಟ: ಸಾಮಾನ್ಯ ಕ್ಷೇತ್ರದಲ್ಲಿ ಸದಾ ನೇರ ಪೈಪೋಟಿ ನಡೆಯುತ್ತಿತ್ತು. ಆದರೆ 2008ರಲ್ಲಿ ಕ್ಷೇತ್ರ ಎಸ್ಟಿ ಮೀಸಲಾಗಿರುವುದರಿಂದ ಕೇವಲ ನಾಯಕ ಜನಾಂಗದ ನಡುವೆ ಸೆಣಸಾಟಕ್ಕೆ ಅಣಿಯಾಯಿತು. ರಾಜಾ ಪಿಡ್ಡನಾಯಕ ಹಾಗೂ ರಾಜಾ ಮದನಗೋಪಾಲ ನಾಯಕ ಸತತ ಮೂರು ಬಾರಿ ಆಯ್ಕೆಯಾದರು. ಒಂದು ಕಾಲದಲ್ಲಿ ಈ ಕ್ಷೇತ್ರ ಕಾಂಗ್ರೆಸ್ನ ಭದ್ರಕೋಟೆಯಾಗಿತ್ತು.
1994ರಲ್ಲಿ ಕೆಸಿಪಿ ಪಕ್ಷದಿಂದ ರಾಜಾ ವೆಂಕಟಪ್ಪನಾಯಕರು ಭದ್ರಕೋಟೆಯನ್ನು ಭೇದಿಸಿ ಗೆಲವು ಸಾಧಿಸಿದರು. ನಂತರ ಅವರು 1999ರಲ್ಲಿ ಕಾಂಗ್ರೆಸ್ನಿಂದ 2ನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 2004ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ರಾಜುಗೌಡ ಜೆಡಿಎಸ್ ಟಿಕೆಟ್ ಸಿಗದೇ ಇದ್ದಾಗ ಕನ್ನಡ ನಾಡು ಪಕ್ಷದಿಂದ ಸ್ಪರ್ಧಿಸಿ ಗೆದ್ದು ಬಂದರು. ಈ ವಿಜಯದ ಮೂಲಕವೇ ಕಾಂಗೆಸ್ನ ರಾಜಾ ವೆಂಕಟಪ್ಪನಾಯಕರೊಂದಿಗೆ ಪೈಪೋಟಿ ಶುರುವಾಗಿದೆ ಎನ್ನಲಾಗಿದೆ.
ವೆಂಕಟಪ್ಪಗೆ 'ಹೈ' ಸಂತಸ: ಕಾಂಗ್ರೆಸ್ ಅಭ್ಯರ್ಥಿ ರಾಜಾ ವೆಂಕಟಪ್ಪನಾಯಕರು ಕಾಂಗ್ರೆಸ್ ಟಿಕೆಟ್ ಸಮರದಲ್ಲಿ ಹೈಕಮಾಂಡ್ ಎತ್ತಿ ಹಿಡಿಯಿತ್ತಲ್ಲಾ ಎಂಬ ಸಂತಸದೊಂದಿಗೆ ಹಾಗೂ ತಾವು 2 ಬಾರಿ ಶಾಸಕರಾಗಿದ್ದ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕೆಲಸ ಪಟ್ಟಿ ಮಾಡಿಕೊಂಡು ಪ್ರತಿ ಹಳ್ಳಿಹಳ್ಳಿಗೆ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ.
ರಾಜುಗೌಡಗೆ ಅಭಿವೃದ್ಧಿಯೇ ಶ್ರೀರಕ್ಷೆ: ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹಾಗೂ ಅವರ ಕಾರ್ಯಕರ್ತರು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ತಮ್ಮ ಅಧಿಕಾರಾವಧಿಯಲ್ಲಿ ಸಾವಿರಾರು ಕೋಟಿ ಅನುದಾನದಲ್ಲಿ ಆದ ಅಭಿವೃದ್ಧಿಗಳ ಬಗ್ಗೆ ಹಗಲಿರುಳು ಶ್ರಮಿಸಿ ಪ್ರತಿ ಗ್ರಾಮದಿಂದ ಹಿಡಿದು ಹೋಬಳಿ ಪಟ್ಟಣ ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
ಈ ಕ್ಷೇತ್ರದಿಂದ ಮೂರು ಬಾರಿ ಕಾಂಗ್ರೆಸ್ನಿಂದ ಆಯ್ಕೆಯಾಗಿ, ಒಂದು ಬಾರಿ ಸಚಿವರಾಗಿ ಆಯ್ಕೆಯಾಗಿದ್ದ ರಾಜಾ ಮದನಗೋಪಾಲ ಈ ಬಾರಿ ಬಿಜೆಪಿಯಿಂದ ಸ್ಪರ್ಧಿಸಿದ್ದು, ಅವರು ಬಿಜೆಪಿ ಸರ್ಕಾರದ ಹಲವಾರು ಸಾಧನೆಗಳನ್ನು ಜನತೆ ಮುಂದಿಟ್ಟು ಮತಯಾಚಿಸುತ್ತಿದ್ದಾರೆ.
ಸೇವೆಗೆ ಅವಕಾಶ ಕೊಡಿ- ಮಲ್ಲೇಶಿ: ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ವಾಲೆಗಾಂವ್ ಗ್ರಾಮದ ಶಿವರಾಜ ಮಲ್ಲೇಶಿ ಗೊಂಡ ಕುರುಬ ಜನಾಂಗಕ್ಕೆ ಸೇರಿದ್ದು, ಇವರು ಮೊದಲ ಬಾರಿಗೆ ಸುರಪುರ ರಾಜಕೀಯಕ್ಕೆ ಬಂದು ಕೆಜೆಪಿಯಿಂದ ಚುನಾವಣಾ ಕಣಕ್ಕೆ ಇಳಿದಿದ್ದಾರೆ. ಇವರು ಹಳ್ಳಿಗಳಿಗೆ ಭೇಟಿಯಾಗಿ ನನ್ನನ್ನು ಆಯ್ಕೆ ಮಾಡಿದರೆ ಸುರಪುರದಲ್ಲಿ ಮನೆ ಮಾಡುತ್ತೇನೆ. ಜನತೆ ಸೇವೆ ಮಾಡುತ್ತೇನೆ. ಈ ಬಾರಿ ಬದಲಾವಣೆ ತರುವುದು ನಿಮ್ಮ ಕೈಯಲ್ಲಿದೆ ಎಂದು ಮನೆ ಮನೆಗೆ ತೆರಳಿ ಮತಯಾಚಿಸುತ್ತಿದ್ದಾರೆ.
ಈ ಬಾರಿಯ ಸುರಪುರ ಮತಕ್ಷೇತ್ರದಲ್ಲಿ 10 ಅಭ್ಯರ್ಥಿಗಳು ಕಣದಲ್ಲಿದ್ದು, ಅವರಲ್ಲಿ 9 ಜನರು ನಾಯಕ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಜೆಡಿಎಸ್ನ ರಾಜುಗೌಡ, ಕಾಂಗ್ರೆಸ್ನ ರಾಜಾ ವೆಂಕಟಪ್ಪನಾಯಕ, ಬಿಜೆಪಿಯ ರಾಜಾ ಮದನಗೋಪಾಲ ನಾಯಕ, ಬಿಎಸ್ಸಾರ್ ಕಾಂಗ್ರೆಸ್ನ ನಂದಕುಮಾರ ಪಾಟೀಲ್, ಜೆಡಿಯುನ ರಾಮಲಿಂಗಪ್ಪ ನಾಯಕ ಹಾಗೂ ಪಕ್ಷೇತರರಾದ ಚಂದ್ರಶೇಖರ ನಾಯಕ, ಬಸವರಾಜ ನಾಯಕ ಪ್ರಭುಲಿಂಗ , ರಾಮನಗೌಡ ಒಂದೇ ಕೋಮಿನ ನಾಯಕ ಜನಾಂಗಕ್ಕೆ ಸೇರಿದ್ದಾರೆ.
ಆದ್ದರಿಂದ ಈ ಬಾರಿಯ ಫಲಿತಾಂಶ ಏನಾಗುತ್ತದೆ ಎಂಬ ಕುತೂಹಲ ಏರ್ಪಟ್ಟಿದೆ. ನಾಯಕರ ಗುದ್ದಾಟದಲ್ಲಿ ಯಾರಿಗೆ ಲಾಭವಾಗುತ್ತದೆ ಎಂದು ಹೇಳಲು ಸಾಧ್ಯವಾಗದಂತಾಗಿದೆ. ಸದ್ಯದ ಪರಿಸ್ಥಿತಿ ಅವಲೋಕಿಸಿದರೆ ಫೋಟೋ ಫಿನಿಷ್ ಫಲಿತಾಂಶ ಬರುವ ಲಕ್ಷಣಗಳು ಗೋಚರಿಸುತ್ತಿವೆ. ಆದರೆ ಯಾವುದಕ್ಕೂ ಮೇ 8ರವರೆಗೆ ಕಾಯಲೇಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

