ಅಭಿವೃದ್ಧಿ ಜತೆಗೆ ನೆಮ್ಮದಿ ನೀಡುವ ಸೇವಕ
ಕ.ಪ್ರ.ವಾರ್ತೆ , ಹುಣಸಗಿ , ಏ. 30
ಸುರಪುರ ತಾಲೂಕಿನಲ್ಲಿ ಕಳೆದ ಎರಡು ಅವಧಿಗಳಲ್ಲಿ ಭಯಮುಕ್ತ ವಾತಾವರಣ ಸೃಷ್ಟಿ ಮಾಡಿದ್ದು, ಈಗ ಎಲ್ಲರೂ ನೆಮ್ಮದಿಯ ಬದುಕು ನಡೆಸುವಂತೆ ಮಾಡಿದ್ದು ನನ್ನ ಸಾಧನೆಯಾಗಿದೆ ಎಂದು ಜೆಡಿಎಸ್ ಅಭ್ಯರ್ಥಿ ರಾಜುಗೌಡ ಹೇಳಿದರು.
ಪಟ್ಟಣದದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜೆಡಿಎಸ್ ಬಹಿರಂಗ ಸಭೆಯಲ್ಲಿ ಮಾತನಾಡಿ, ಈ ಮೊದಲು ಪ್ರತಿಯೊಂದು ಗ್ರಾಮದಲ್ಲಿ ಗುಂಪುಗಾರಿಕೆಗೆ ಕುಮ್ಮಕ್ಕು ಕೊಟ್ಟು ಸಂಸಾರಗಳನ್ನು ಹಾಳು ಮಾಡುತ್ತಿದ್ದರು. ಈಗ ಜನ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ ಎನ್ನುವುದೇ ಸಂತಸದ ವಿಚಾರ. ತಾಯಂದಿರ ಆಶೀರ್ವಾದದಿಂದ ಅಕ್ಕರೆಯ ತಿಮ್ಮಮ್ಮನ ಮಗನೆಂದು ಈ ಬಾರಿಯೂ ಆರಿಸುವ ನಿಮ್ಮ ಸಂಕಲ್ಪಕ್ಕೆ ಈ ಜನ ಸಾಗರವೇ ಸಾಕ್ಷಿ ಎಂದರು.
ಕಾಂಗ್ರೆಸ್ ಮುಖಂಡರಿಂದ ಮೋಸ: ಹೈದರಾಬಾದ್ ಕರ್ನಾಟಕದ ಕೆಲ ಕಾಂಗ್ರೆಸ್ ಮುಖಂಡರು ನನ್ನಿಂದ ಮಂತ್ರಿ ಪದವಿಗೆ ರಾಜಿನಾಮೆ ಕೊಡಿಸಿ, ಕಾಂಗ್ರೆಸ್ ಟಿಕೆಟ್ ನೀಡುವುದಾಗಿ ಮೋಸ ಮಾಡಿದರು. ಇದೇ ರೀತಿ ಮೋಸವನ್ನು ನಿಮ್ಮ ಮಕ್ಕಳಿಗೆ ಮಾಡುವಿರಾ ಎಂದು ನೇರವಾಗಿ ಪ್ರಶ್ನಿಸಿದ ರಾಜುಗೌಡ, 2005ರಲ್ಲಿ ಮಲ್ಲಿಕಾರ್ಜುನ ಖರ್ಗೆ ನೀರಾವರಿ ಮಂತ್ರಿಯಾಗಿದ್ದಾಗ ಕೃಷ್ಣಾ ಅಚ್ಚಕಟ್ಟು ಪ್ರದೇಶದ ಬತ್ತದ ಸಸಿಗಳನ್ನು ತುಳಿಯುವ ಪ್ರಯತ್ನ ಮಾಡಿದರು. ಆ ಸಂದರ್ಭದಲ್ಲಿ ಜಲಾಶಯದಲ್ಲಿ ನೀರಿದ್ದರೂ ಡ್ಯಾಂ ಗೇಟ್ ಬಂದ್ ಮಾಡಿ ರೈತರಿಗೆ ನೀರು ಕೊಟ್ಟಿರಲಿಲ್ಲ. ಆ ಸಂದರ್ಭದಲ್ಲಿ ಮಳೆ ಬಂದು ರೈತರ ಫಸಲು ಕೈಗೆ ಸಿಕ್ಕಿತ್ತು ಎಂದು ಸ್ಮರಿಸಿದರು.
ಈಗ ಅದೇ ಪಕ್ಷದ ಅಭ್ಯರ್ಥಿ ಎರಡು ಹಂಗಾಮಿನ ಬತ್ತದ ಬೆಳೆಗಳಿಗೆ ನೀರು ಕೊಡುವುದಾಗಿ ನಿಮ್ಮಲ್ಲಿ ಮತ ಕೇಳಲು ಬರುತ್ತಿದ್ದಾರೆ. ಅವರ ಮೋಸದ ಮಾತಿಗೆ ಮರಳಾಗಬೇಡಿ ಎಂದು ಹೇಳಿದರು.
ಹಲವು ಅಭಿವೃದ್ಧಿ ಕಾರ್ಯ: ಇಂದು ತಾಲೂಕಿನಲ್ಲಿ ಅಭಿವೃದ್ಧಿಯ ಹೊಳೆಯೇ ಹರಿದಿದ್ದು, ಎನ್ಎಲ್ಬಿಸಿ ಮುಖ್ಯ ಕಾಲುವೆಯ 25 ಕಿಮೀ ವ್ಯಾಪ್ತಿಯಲ್ಲಿ 200 ಕೋಟಿಯಲ್ಲಿ ನವೀಕರಣ ಮಾಡಲಾಗಿದೆ. ರಸ್ತೆ, ಶಾಲಾ-ಕಾಲೇಜು, ಪಿಕ್ಅಪ್ಗಳು, ಹುಣಸಗಿ 110 ಕೆವಿ, ಕೊಡೇಕಲ್ ವಿದ್ಯುತ್ ವಿತರಣಾ ಕೇಂದ್ರ, ಹುಣಸಗಿಯನ್ನು ನೂತನ ತಾಲೂಕನ್ನಾಗಿ ಮಾಡಿದ್ದು, ಮಲ್ಲಾ- ನಾರಾಯಣಪೂರ ಜೋಡು ರಸ್ತೆಯನ್ನು ನಿರ್ಮಾಣ ಮಾಡಿದ್ದು, 300 ಕೋಟಿಯಲ್ಲಿ 10 ಸಾವಿರ ಎಕರೆಗೆ ನೀರಾವರಿಯನ್ನು ಒದಗಿಸಲಾಗಿದೆ ಎಂದು ಸಾಧನೆ ಬಿಚ್ಚಿಟ್ಟರು.
ಪ್ರವಾಹದ ಸಂದರ್ಭದಲ್ಲಿ ಮನೆ ಮಠಗಳನ್ನು ಕಳೆದುಕೊಂಡ ಗ್ರಾಮಗಳಾದ ತಿಂಥಣಿ, ಬಂಡೋಳಿ, ಹೊಸೂರು- ಪೈದೊಡ್ಡಿ, ಉಪ್ಪಲದಿನ್ನಿ ಗ್ರಾಮಗಳಲ್ಲಿ ಸುಂದರವಾದ ಮನೆಗಳನ್ನು ನಿರ್ಮಾಣ ಮಾಡಲಾಗಿದೆ. ಬರುವಂತಹ ದಿನಗಳಲ್ಲಿ ಸುರಪುರ ತಾಲೂಕಿನ ಹಿಂದುಳಿದ ಗ್ರಾಮಗಳಲ್ಲಿ ಅಭಿವೃದ್ಧಿ, ಶಾಂತಿ, ನೆಮ್ಮದಿಯೊಂದಿಗೆ ನಿಮ್ಮ ಸೇವಕನಾಗಿ ಸದಾ ದುಡಿಯಲು ಸಿದ್ಧನಿದ್ದೇನೆ. ಆದ್ದರಿಂದ ಈ ಬಾರಿ ಜೆಡಿಎಸ್ಗೆ ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.
ಜೆಡಿಎಸ್ ಸೇರ್ಪಡೆ: ಜೆಡಿಎಸ್ ಜಿಲ್ಲಾಧ್ಯಕ್ಷ ನಾಗನಗೌಡ ಕಂದಕೂರ್, ಶಹಾಪುರ ಕ್ಷೇತ್ರದ ಅಭ್ಯರ್ಥಿ ಶರಣಪ್ಪ ಸಲಾದಪುರ ಇದ್ದರು. ಇದೇ ವೇಳೆ ರಾಜಾ ಕೃಷ್ಣಪ್ಪ ನಾಯಕ, ಎಂ.ಆರ್.ನಾಯಕ್ ಇತರರು ಜೆಡಿಎಸ್ ಸೇರಿದರು. ಹಣಮಪ್ಪನಾಯಕ(ತಾತಾ), ಸಲೀಂ ವರ್ತಿ, ಎಚ್.ಸಿ. ಪಾಟೀಲ್, ಯಲ್ಲಪ್ಪ ಕುರಕುಂದಿ, ವಜಾಹತ್ ಹುಸೇನ್, ನಿಂಗಣ್ಣ ಬಾದ್ಯಾಪುರ, ನಾಗಣ್ಣ ದಂಡಿನ್, ವೀರೇಶ ಚಿಂಚೋಳಿ, ನಿಂಗರಾಜ ಬಾಚಿಮಟ್ಟಿ, ಶಿವಪ್ಪ ಸದಬ, ದುರಗಪ್ಪ ಗೋಗಿ, ಗದ್ದಪ್ಪ ಪೂಜಾರಿ, ಪರಮಣ್ಣ ಪೂಜಾರಿ, ಕಿಶೋರಚಂದ್ ಜೈನ್, ದೇವು ಗೋಪಾಳಿ, ಬಸವರಾಜಸ್ವಾಮಿ ಸ್ಥಾವರಮಠ, ಸಂಗನಗೌಡ ವಜ್ಜಲ್, ಎಂ.ಜಿ.ಕೊಣ್ಣೂರು, ಬಸನಗೌಡ ಅಳ್ಳಿಕೋಟಿ, ರಂಗನಾಥ ದೊರಿ, ರಾಜು ಹವಾಲ್ದಾರ, ಬಸವರಾಜ ಮಲಗಲದಿನ್ನಿ, ಚಂದ್ರಶೇಖರ ದಂಡಿನ್, ಬಸಣ್ಣ ಬಂಗಿ, ಚಂದ್ರಶೇಖರ ಜಡಿಮರಳ, ಶಾಂತಗೌಡ ಕೋನ್ಹಾಳ, ಪ್ರಕಾಶ ಗುತ್ತೇದಾರ, ರಾಜಾ ವೇಣುಗೋಪಾಲ ನಾಯಕ, ಗುರು ಗುತ್ತೇದಾರ ಇತರರು ಇದ್ದರು. ಮಹಿಳೆಯರು ಸೇರಿದಂತೆ 10 ಸಾವಿರಕ್ಕೂ ಹೆಚ್ಚು ಜನರು ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

