ಗುಲ್ಬರ್ಗಾ

ದತ್ತಾತ್ರೇಯ ನಂಬಿಕೆ ದ್ರೋಹ ಮಾಡ್ದ: ಎಚ್ಡಿಕೆ ಕಿಡಿ

Published On :

ಕನ್ನಡಪ್ರಭ ವಾರ್ತೆ, ಗುಲ್ಬರ್ಗ, ಏ. 30
ರೇವೂರ ಗೌಡರ ಪುತ್ರ ದತ್ತಾತ್ರೇಯ ಪಾಟೀಲ್ ನಂಬಿಕೆ ದ್ರೋಹ ಮಾಡ್ದ, ನನ್ನ ಕುತ್ತಿಗೆ ಕೊಯ್ದ. ತಂದೆ ಮರಣಾನಂತರ ಸಹೋದರನ ಸ್ಥಾನ ನೀಡಿ ನಾನು ಅವನನ್ನ ಎತ್ತಿ ಹಿಡಿದೆ. ಆದರೆ ಆತ ಪಕ್ಷದ ಟಿಕೆಟ್ ಧಿಕ್ಕರಿಸಿ ಹೋದ. ಕಷ್ಟ ಕಾಲದಲ್ಲಿ ನೆರವಿಗೆ ಬಂದವರ ಮರೆತುಬಿಟ್ಟ, ಸಹೋದರಿಯಾದರೂ (ಶಾಸಕಿ ಅರುಣಾ ಪಾಟೀಲ್) ನನ್ನ ನೆರವು ಮರೆಯಬಾರದಾಗಿತ್ತು, ಆದರೇನು ಮಾಡುವುದು, ಅವರೂ ಮರೆತರು...
ಗುಲ್ಬರ್ಗ ದಕ್ಷಿಣ ಅಸೆಂಬ್ಲಿ ಕಣದಲ್ಲಿ ಬಿಜೆಪಿ ಅಭ್ಯರ್ಥಿಯಾಗಿರುವ ದತ್ತಾತ್ರೇಯ ಪಾಟೀಲ್ ರೇವೂರರನ್ನು ಉದ್ದೇಶಿಸಿ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಹೇಳಿದ ಮಾತುಗಳಿವು.
ಜೆಡಿಎಸ್‌ನ್ನು ಹರಿಸಿ: ಪಕ್ಷ ಟಿಕೆಟ್ ನೀಡಿದ್ದರೂ ಅದನ್ನು ಧಿಕ್ಕರಿಸಿ ದತ್ತಾತ್ರೇಯ ಪಾಟೀಲ್ ರೇವೂರ ಕೊನೆ ಕ್ಷಣದಲ್ಲಿ ಬಿಜೆಪಿ ಸೇರಿದ್ದು ಇತಿಹಾಸ. ಈ ಬೆಳವಣಿಗೆಯನ್ನೇ ತುಂಬ ಗಂಭೀರವಾಗಿ ಪರಿಗಣಿಸಿರುವ ಕುಮಾರಸ್ವಾಮಿ ಮಂಗಳವಾರ ಗುಲ್ಬರ್ಗ ಪ್ರವಾಸದಲ್ಲಿ ದಕ್ಷಿಣ ಕ್ಷೇತ್ರಕ್ಕೆ ಭೇಟಿ ನೀಡಿ ಮತದಾರರು ಜಾಗೃತರಾಗಿದ್ದಾರೆ. ಇಲ್ಲಿ ತೆನೆ ಹೊತ್ತ ಮಹಿಳೆಗೇ ಹರಸುತ್ತಾರೆ.
2010 ರಲ್ಲಿ ಈ ಕ್ಷೇತ್ರ ಕಂಡ ಉಪ ಚುನಾವಣೆಯಲ್ಲಿ ತಾವು ವಾರಕಾಲ ಇಲ್ಲಿದ್ದು, ಮತದಾರರ ಗೋಳು ನೋಡಿದ್ದಾಗಿ ಹೇಳಿದ ಕುಮಾರಸ್ವಾಮಿ ಇಲ್ಲಿಂದ ನಮೋಶಿಯವರನ್ನ ಅಸೆಂಬ್ಲಿಗೆ ಕಳುಹಿಸಿ ನೋಡಿ, ಬರುವ ದಿನಗಳಲ್ಲಿ ನಿಮ್ಮೆಲ್ಲರ ಋಣ ತೀರಿಸುವೆ ಎಂದು ಮತದಾರರನ್ನು ಉದ್ದೇಶಿಸಿ ಭರವಸೆ ನೀಡಿದರು.
ಯಾರೂ ಕ್ಷಮಿಸಲಾಗದು: ದತ್ತಾತ್ರೇಯ ಪಾಟೀಲ್ ಕಳೆದೆರಡು ತಿಂಗಳ ಹಿಂದೆಷ್ಟೆ ಸಾಮೂಹಿಕ ವಿವಾಹ ಕಾರ್ಯಕ್ರಮ ಹಾಕಿಕೊಂಡಾಗ ತಾವು ಸಪತ್ಮೀಕರಾಗಿ ಬಂದಿದ್ದನ್ನು ನೆನಪಿಸಿಕೊಂಡ ಕುಮಾರಸ್ವಾಮಿ ಆಗ ತಾವು ದತ್ತಾತ್ರೇಯನ ಕುರಿತು ತಪ್ಪು ಮಾಡಿದರೂ ಕ್ಷಮಿಸಿ ಎಂದು ಗುಲ್ಬರ್ಗ ಜನತೆ ಕಿವಿಮಾತುಹೇಳಿದ್ದಾಗಿ ನೆನಪಿಸಿಕೊಳ್ಳುತ್ತ ಇಂತಹ ದೊಡ್ಡ ತಪ್ಪಿಗೆ ಯಾರೂ ಕ್ಷಮಿಸಲಾಗದು ಎಂದು ಮಾರ್ಮಿಕವಾಗಿ ನುಡಿದರು. ದಿ. ಚಂದ್ರಶೇಖರ ಪಾಟೀಲ್ ರೇವೂರ್ ತಮ್ಮ ಗೆಳೆಯರಾಗಿದ್ದರು ಎಂದು ಹಳೆಯ ದಿನಗಳನ್ನು ಮೆಲಕು ಹಾಕಿದ ಕುಮಾರಸ್ವಾಮಿ ಗೆಳೆಯ ಸಾವನ್ನಪ್ಪಿದಾಗ ಮಾನವೀಯತೆ ದೃಷ್ಟಿಕೋನದಿಂದ ತಾವು ನೆರವಿನ ಹಸ್ತ ನೀಡಿದ್ದಾಗಿ ಹೇಳಿದರಲ್ಲದೆ ಇಷ್ಟು ಬೇಗ ತಮ್ಮ ಸಹಾಯ- ಸಹಕಾರ ರೇವೂರ್ ಕುಟುಂಬ ಮರೆತು ಬಿಡುತ್ತದೆ ಎಂದು ತಾವು ಕನಸು ಮನಸಲ್ಲೂ ಯೋಚಿಸಿರಲಿಲ್ಲ ಎಂದರು.
ಪಾರ್ಟಿ ಬಿಡಲ್ಲ ಅಂತ ಪ್ರಮಾಣ ಮಾಡಿದ್ದ ದತ್ತು: ದತ್ತಾತ್ರೇಯ ರೇವೂರ್ ಕುರಿತಂತೆ ಕುಮಾರಸ್ವಾಮಿಯವರಿಗೆ ತುಂಬ ಅಸಮಾಧಾನ. ಅದಕ್ಕೆಂದೇ ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ಪ್ರಸ್ತಾಪಿಸಿದ್ದರೂ, ಅದನ್ನೇ ಎನ್ವಿ ಕಾಲೇಜು ಮೈದಾನದಲ್ಲಿನ ಬಹಿರಂಗ ಸಭೆಯಲ್ಲೂ ಪ್ರಸ್ತಾಪಿಸುತ್ತ ತಮ್ಮ ಮನದಾಳದ ನೋವಿನ ಭಾವನೆಗಳನ್ನು ಹೊರಹಾಕಿದರು. ದತ್ತಾತ್ರೇಯ 3 ತಿಂಗಳ ಹಿಂದೆಯೇ ನಡೆದಿದ್ದ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಪಕ್ಷ ಬಿಡೋದಿಲ್ಲ ಎಂದು ಭರವಸೆ ನೀಡಿದ್ದರು. ಆದರೆ ಅಸೆಂಬ್ಲಿ ಚುನಾವಣೆಯ ಕೊನೆ ಗಳಿಗೆಯಲ್ಲಿ ಕೈ ಕೊಟ್ಟರು.
ಸಹೋದರಿಯೂ ಯೋಚಿಸಲಿಲ್ಲ: ದಿ. ಚಂದ್ರಶೇಖಥರ ಪಾಟೀಲರ ಧರ್ಮಪತ್ನಿಯನ್ನು ತಾವು ಸಹೋದರಿ ಎಂದೇ ತಿಳಿದಿದ್ದಾಗಿ ಹೇಳಿದ ಕುಮಾರಸ್ವಾಮಿ, ಸಹೋದರಿಯೂ ತಮ್ಮ ವಿಚಾರದಲ್ಲಿ ಇಂತಹ ನಿಲುವು ಕೈಗೊಂಡರು ಎಂದು ವಿಷಾದಿಸಿದರು.
2010 ರ ಉಪ ಚುನಾವಣೆಯಲ್ಲಿಯೂ ಗುಲ್ಬರ್ಗ ದಕ್ಷಿಣ ತಮ್ಮ ಪಾಲಿಗೆ ತುಂಬ ಸವಾಲಿನ ಕ್ಷೇತ್ರವಾಗಿತ್ತು. 2013 ರಲ್ಲಿಯೂ ಈ ಕ್ಷೇತ್ರದಲ್ಲಿ ಪಕ್ಷದ ಅಧಿಕೃತ ಆಹ್ವಾನ ಧಿಕ್ಕರಿಸಿ ದತ್ತಾತ್ರೇಯ ವಿರೋಧ ಪಕ್ಷದ ಪಾಳಯ ಸೇರಿದ್ದರಿಂದಾಗಿ ಈ ಬಾರಿಯೂ ತುರುಸಿನ ಕ್ಷೇತ್ರವಾಗಿ ಪರಿಣಮಿಸಿದೆ. ಈ ಬಾರಿಯೂ ಗುಲ್ಬರ್ಗ ದಕ್ಷಿಣದಲ್ಲಿ ತೆನೆ ಹೊತ್ತ ಮಹಿಳೆಯೇ ವಿಜಯನಗೆ ಬೀರುತ್ತಾಳೆ. ಮತದಾರರು ಜೆಡಿಎಸ್ ಗೆಲ್ಲಿಸುವ ಸಂಕಲ್ಪ ಮಾಡಿದ್ದಾರೆ ಎಂದು ಕುಮಾರಣ್ಣ ವಿಶ್ವಾಸ ಹೊರಹಾಕಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.