ಅವ್ಯವಸ್ಥೆಗೆ ಕೊನೆಯಿಲ್ಲವೇ: ಮಜಗೆ ಪ್ರಶ್ನೆ
ಕನ್ನಡಪ್ರಭ ವಾರ್ತೆ ಯಾದಗಿರಿ ಆ.1
ಇಲ್ಲಿಯ ಜಿಲ್ಲಾ ಆಸ್ಪತ್ರೆ, ತಹಸೀಲ್ದಾರ್ ಕಚೇರಿ, ವಿದ್ಯಾರ್ಥಿ ವಸತಿ ನಿಲಯ ಸೇರಿದಂತೆ ವಿವಿಧೆಡೆ ಗುರುವಾರ ಹಠಾತ್ ಭೇಟಿ ನೀಡಿದ ಉಪ ಲೋಕಾಯುಕ್ತ ನ್ಯಾಯಮೂರ್ತಿ ಎಸ್.ಬಿ. ಮಜಗೆ, ಅಲ್ಲಿನ ಅವ್ಯವಸ್ಥೆ ಕಂಡು ಸಂಬಂಧಪಟ್ಟ ಅಧಿಕಾರಿಗಳಿಗೆ ಚುರುಕು ಮುಟ್ಟಿಸಿದರು. ನಗರದ ಚರಂಡಿ ತುಂಬಿರುವುದು, ಹಾಳಾದ ರಸ್ತೆ ನೋಡಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಪ ಲೋಕಾಯುಕ್ತ ಎಸ್.ಬಿ. ಮಜಗೆ ಅವರ ದಿಢೀರ್ ಭೇಟಿ ಅಧಿಕಾರಿಗಳಿಗೆ ಶಾಕ್ ನೀಡಿತು. ಇಲ್ಲಿಯ ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ವಿವಿಧ ವಾರ್ಡುಗಳನ್ನು ಅವರು ಪರಿಶೀಲಿಸಿದರು. ಸ್ವಚ್ಛತೆ ಕಾಪಾಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉದ್ಘಾಟನೆ ನಂತರ ಮಾಡಿಕೊಳ್ಳಿ..: ಔಷಧ ಸಂಗ್ರಹಣಾಲಯ, ಜನರಲ್ ವಾರ್ಡ್, ಶೌಚಾಲಯ, ಕುಡಿಯುವ ನೀರು ಸೇರಿದಂತೆ ಜಿಲ್ಲಾ ಆಸ್ಪತ್ರೆಯಲ್ಲಿ ಯಾವ ಸೌಲಭ್ಯವೂ ಸಮರ್ಪಕವಾಗಿಲ್ಲ. ಹೊಸ ಶೌಚಾಲಯ ಕಟ್ಟಿದ್ದರೂ ಅದನ್ನು ಯಾಕೆ ಬಳಕೆ ಮಾಡುತ್ತಿಲ್ಲ ಎಂದು ಪ್ರಶ್ನಿಸಿದರು. ಆಗ ಸರ್ಜನ್ ಡಾ. ಭಗವಂತ ಅನವಾರ, ಇನ್ನೂ ಕಟ್ಟಡ ಉದ್ಘಾಟನೆಯಾಗಿಲ್ಲ ಎಂದು ತಿಳಿಸಿದರು. ಉದ್ಘಾಟನೆ ನಂತರ ಮಾಡಿಕೊಳ್ಳಿ. ಮೊದಲು ಅದನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ ಎಂದು ಉಪ ಲೋಕಾಯುಕ್ತರು ತಾಕೀತು ಮಾಡಿದರು.
ಆಸ್ಪತ್ರೆ ಆವರಣ ಇಂದೇ ಸ್ವಚ್ಛಗೊಳಿಸಬೇಕು. ನಮ್ಮ ಅಧಿಕಾರಿಗಳು ಶುಕ್ರವಾರ ಬಂದು ನೋಡುತ್ತಾರೆ. ಒಂದು ವೇಳೆ ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ಗೊತ್ತಾಗದರೆ ನಿಮ್ಮ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಸರ್ಜನ್ರಿಗೆ ಎಚ್ಚರಿಕೆ ನೀಡಿದರು.
ಹಾಸ್ಟೆಲ್ ಅವ್ಯವಸ್ಥೆಗೆ ಕಿಡಿ: ಅಂಬೇಡ್ಕರ್ ನಗರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದ ನ್ಯಾ. ಮಜಗೆ ಅಲ್ಲಿ ಮಕ್ಕಳಿಗೆ ನೀಡುತ್ತಿರುವ ಆಹಾರ ಹಾಗೂ ಇನ್ನಿತರ ಸೌಲಭ್ಯಗಳನ್ನು ಪರಿಶೀಲಿಸಿದರು. ಸರಿಯಾಗಿ ಊಟ, ಉಪಾಹಾರ ನೀಡಲಾಗುತ್ತಿದೆಯೇ ಎಂದು ಬಾಲಕಿಯರನ್ನು ಕೇಳಿದರು.
'ನಿತ್ಯವೂ ತಿಳಿ ಸಾರು, ಅನ್ನ ನೀಡುತ್ತಾರೆ. ಅದಕ್ಕೆ ತರಕಾರಿಯೇ ಇರುವುದಿಲ್ಲ. ಚಪಾತಿಯನ್ನು ನೀರು ಹಾಕಿ ಸುಡುತ್ತಾರೆ. ಸೂಚನಾ ಫಲಕದಲ್ಲಿ ಮಾತ್ರ ಬಗೆಬಗೆಯ ಪದಾರ್ಥ ಮಾಡುವುದಾಗಿ ತಿಳಿಸಲಾಗಿದೆ. ಆದರೆ ನಮಗೆ ಹಣ್ಣು, ಹಾಲು ಇತ್ಯಾದಿ ಯಾವುದನ್ನೂ ನೀಡುತ್ತಿಲ್ಲ' ಎಂದು ವಿದ್ಯಾರ್ಥಿನಿಯರು ಹಾಸ್ಟೆಲ್ ಅವ್ಯವಸ್ಥೆಯನ್ನು ಬಿಚ್ಚಿಟ್ಟರು.
ಮೇಲ್ವಿಚಾರಕರ ಅಸಮರ್ಪಕ ಉತ್ತರ: ಮಕ್ಕಳಿಗೆ ಎಷ್ಟು ಪ್ರಮಾಣದಲ್ಲಿ ಆಹಾರ ನೀಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ ಮೇಲ್ವಿಚಾರಕರಿಂದ ಸಮರ್ಪಕ ಉತ್ತರ ಸಿಗಲಿಲ್ಲ. ನಂತರ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ರಾಮನಗೌಡ ಅವರನ್ನು ಕರೆಸಿ, ಮಾಹಿತಿ ಪಡೆದರು. ಶೌಚಾಲಯ, ಸ್ನಾನಗೃಹ, ಮಲಗುವ ಕೋಣೆ ಇತ್ಯಾದಿ ಸ್ವಚ್ಛವಾಗಿಡುವಂತೆ ಸೂಚಿಸಿದರು. ಸರ್ಕಾರದಿಂದ ಬಂದಿರುವ ಪಠ್ಯಪುಸ್ತಕ, ಬಟ್ಟೆ, ಸೋಪು ಇತ್ಯಾದಿ ಸಾಮಗ್ರಿಗಳನ್ನು ಇನ್ನೂ ಮಕ್ಕಳಿಗೆ ನೀಡದಿರುವ ಬಗ್ಗೆ ನ್ಯಾ. ಮಜಗೆ ಕಿಡಿ ಕಾರಿದರು.
ಮತ್ತೆ ಬರುತ್ತೇನೆ: ನಂತರ ಶಾಲೆಯಲ್ಲಿ ನೀಡುತ್ತಿರುವ ಬಿಸಿಯೂಟವನ್ನು ಪರಿಶೀಲಿಸಿದರು. ತಯಾರಿಸಿದ್ದ ಬಿಸಿಯೂಟದ ರುಚಿ ನೋಡಿದರು. ಅಡುಗೆ ತಯಾರಿಸುವ ಕೋಣೆ ಸ್ವಚ್ಛವಾಗಿಟ್ಟುಕೊಂಡು ಮಕ್ಕಳಿಗೆ ಸಮರ್ಪಕ ಊಟ, ಶುದ್ಧ ಕುಡಿವ ನೀರು ನೀಡುವಂತೆ ತಿಳಿಸಿದರು.
ದಾರಿಯುದ್ದಕ್ಕೂ ಅಲ್ಲಲ್ಲಿ ಕಾರಿನಿಂದ ಇಳಿದು ಚರಂಡಿ, ರಸ್ತೆಯನ್ನು ಪರಿಶೀಲಿಸಿದರು. ಹೊಸಳ್ಳಿ ಕ್ರಾಸ್ ಬಳಿ ರಸ್ತೆ ಪಕ್ಕದಲ್ಲಿ ತ್ಯಾಜ್ಯ ನೀರು ಸಂಗ್ರಹವಾಗಿರುವುದು, ತೆರೆದ ಚರಂಡಿ ತುಂಬ ಕಸ ತುಂಬಿರುವುದನ್ನು ಕಂಡು ಪೌರಾಯುಕ್ತರನ್ನು ತರಾಟೆಗೆ ತೆಗೆದುಕೊಂಡರು. ನಗರ ಸ್ವಚ್ಛತೆ ಬಗ್ಗೆ ಗಮನ ನೀಡಬೇಕು. ಇಲ್ಲಿಗೆ ಮತ್ತೆ ಬರುತ್ತಿರುತ್ತೇನೆ. ಆ ಸಂದರ್ಭದಲ್ಲಿ ಮತ್ತೆ ಇದೇ ರೀತಿ ಅವ್ಯವಸ್ಥೆ ಕಂಡರೆ ಸುಮ್ಮನಿರುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ತಹಸೀಲ್ದಾರ್ ಕಚೇರಿಗೆ ಭೇಟಿ: ನಂತರ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಅಲ್ಲಿಯ ಕಾರ್ಯವೈಖರಿ ಪರಿಶೀಲಿಸಿದರು. ಸರ್ಕಾರದ ವಿವಿಧ ಯೋಜನೆಗಳನ್ನು ಕಾಲಮಿತಿಯಲ್ಲಿ ಸಾರ್ವಜನಿಕರಿಗೆ ಒದಗಿಸಲಾಗುತ್ತಿದೆಯೇ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ನಂತರ ಸುರಪುರಕ್ಕೆ ತೆರಳಿ ಅಲ್ಲಿಯ ಮಾರುಕಟ್ಟೆ, ಪುರಾತನ ಬಾವಿಗಳನ್ನು ವೀಕ್ಷಿಸಿದರು. ಹಳೆದ ಬಾವಿಗಳ ಒತ್ತುವರಿ ತೆರವುಗೊಳಿಸುವಂತೆ, ತ್ಯಾಜ್ಯ ನೀರು ಸೇರಿ ಹಾಳಾಗಿರುವ ಬಾವಿಗಳ ಜೀರ್ಣೋದ್ಧಾರ ಕೈಗೊಳ್ಳುವಂತೆ ತಾಪಂ ಇಒಗೆ ಸೂಚಿಸಿದರು.
ಲೋಕಾಯುಕ್ತ ಎಸ್ಪಿ ಎಸ್.ಎಸ್. ಕಂಬಾರ, ಡಿವೈಎಸ್ಪಿ ಆರ್.ಎಚ್. ನಾಯಕ, ಎಸ್.ಡಿ.ಕಟ್ಟಿಮನಿ, ಪಿಐ ಜಗದೀಶ ಹಂಚನಾಳ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

