ಕೃಷಿ ಭೂಮಿ ಲೇವಾದೇವಿ ಪ್ರಕ್ರಿಯೆಗೆ ಭಾರಿ ತಡೆ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ಆಳಂದ ಆ.1
ರೈತರು ತಮ್ಮ ಕೃಷಿ ಭೂಮಿ ಮಾರಾಟ, ಖರೀದಿ ಮಾಡಲು ಅಥವಾ ಪಹಣಿ ಪತ್ರಿಕೆಯಲ್ಲಿ ಉಂಟಾದ ಲೋಪದೋಷ ಸರಿಪಡಿಸಲು ಮುಂದಾದರೆ ಹಲವು ತಿಂಗಳು, ವರ್ಷಗಳೇ ಕಾಯುವ ಪರಿಸ್ಥಿತಿ ಎದುರಾಗಿದೆ.
ತುರ್ತು ವಿಲೇವಾರಿಗೆ ಬೇಕಾದ ಭೂ ಮಾಪನ ಸಿಬ್ಬಂದಿ ಕೊರತೆ ಹಾಗೂ ಹೊಸಬರ ನೇಮಕಾತಿ ವಿಳಂಬ ನೀತಿಯಿಂದಾಗಿ ಭೂ ಸರಹದ್ದು ಹದ್ದಬಸ್ತ್, ತಾತ್ಕಾಲಿಕ ಫೋಡಿ, ಕೋರ್ಟ್ ಡಿಗ್ರಿ ಮತ್ತು ಕೋರ್ಟ್ ಕಮಿಷನ್ ಮತ್ತು ಅತ್ಯಂತ ಮಹತ್ವದಾಗಿರುವ 11ಇ ನಕ್ಷೆ ತಯಾರಿಸಲು, ಪಹಣಿಯಲ್ಲಿ ಜಂಟಿ ಹೆಸರುಗಳನ್ನು ಪ್ರತ್ಯೇಕಿಸಲು ವಿಳಂಬಗೊಳ್ಳುವುದು ಜನರಿಗೆ ತೊಂದರೆಯಾಗಿದೆ.
2571 ಅರ್ಜಿ ವಿಲೇವಾರಿ ಬಾಕಿ: ಭೂ ದಾಖಲೆಗೆ ಸಂಬಂಧಿಸಿದ ಯಾವುದೇ ತುರ್ತು ಕೆಲಸ ಕಾರ್ಯಗಳು ನಡೆಯದೆ ಇರುವುದು ಜನರಿಗೆ ನುಂಗದ ತುತ್ತಾಗಿ ಪರಿಣಮಿಸಿ ಸರ್ಕಾರದ ಮೇಲೆ ಹಿಡಿಶಾಪ ಹಾಕುತ್ತಿದ್ದಾರೆ. ಕಂದಾಯ ಇಲಾಖೆ ವ್ಯಾಪ್ತಿಗೊಳಪಡುವ ಭೂ ಮಾಪನ ಶಾಖೆಗೆ ಕಳೆದ ಆರು ತಿಂಗಳಿಂದ ಒಟ್ಟು ಸಲ್ಲಿಕೆಯಾದ 2571 ಅರ್ಜಿಗಳ ವಿಲೇವಾರಿ ಕಾರ್ಯದ ಬಾಕಿ ಉಳಿದುಕೊಂಡಿದೆ.
ಹದ್ದಬಸ್ತ್ 830 ಅರ್ಜಿ, ತಾತ್ಕಾಲ್ ಫೋಡಿ 42, 11ಇ 1699 ಅರ್ಜಿಗಳು ವಿಲೇವಾರಿ ಬಾಕಿಯಿದೆ. ಅದಕ್ಕೆ ಸಿಬ್ಬಂದಿ ಕೊರತೆ ಮಧ್ಯದಲ್ಲಿ ನಡೆದ ಹಲವು ಚುನಾವಣೆಗಳು, ಅಧಿಕಾರಿಗಳಿಗೆ ಮೇಲಿಂದ ಮೇಲೆ ಕಚೇರಿಯ ಅನ್ಯ ಕೆಲಸಗಳ ಒತ್ತಡ... ವಿಳಂಬಕ್ಕೆ ಕಾರಣ ಎನ್ನಲಾಗಿದೆ.
ಖಾಲಿ ಹುದ್ದೆ: ತಾಲೂಕಿನ ಭೂ ಮಾಪನ ಪ್ರಕ್ರಿಯೆಗೆ ಮುಖ್ಯವಾಗಿ ಇಬ್ಬರು ಪರಿವೀಕ್ಷಕರು, ಮೂವರು ಭೂ ಮಾಪಕರು, ನಾಲ್ವರು ಸರ್ವೆ ಜವಾನರು ಹುದ್ದೆ ಖಾಲಿಯಾಗಿವೆ. ಆದರೆ ಜನಸಂಖ್ಯೆ ಹೆಚ್ಚಾದಂತೆ ಹೆಚ್ಚುವರಿ ಸಿಬ್ಬಂದಿ ಬೇಕು. ಆದರೆ ಸರ್ಕಾರದ ಮಟ್ಟದಲ್ಲಿ ಅದರ ಚಕಾರವೇ ಇಲ್ಲ.
ಒಟ್ಟು 27 ಹುದ್ದೆಗಳ ಪೈಕಿ ಕೇವಲ 18 ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಅದರಲ್ಲಿ ರಜೆ ಮೇಲೆ, ಆಸ್ಪತ್ರೆ, ಕಚೇರಿ ಕೆಲಸ ಮತ್ತು ನಿಯೋಜನೆ ಹೋದರೆ ಇನ್ನಷ್ಟು ಸಿಬ್ಬಂದಿ ಕೊರತೆ ಎದುರಾಗುತ್ತದೆ. ದಿನಕ್ಕೆ 25ರಿಂದ 30 ಹೊಸ ಅರ್ಜಿ ಬರುತ್ತವೆ. ಹೀಗೆ ತಿಂಗಳಿಗೆ ಮುನ್ನೂರು ಅರ್ಜಿ ಸಲ್ಲಿಕೆಯಾಗುತ್ತವೆ. ಅದರಲ್ಲಿ ಇರುವ 11 ಜನ ಭೂ ಮಾಪಕರಿಗೆ ತಿಂಗಳಿಗೆ ತಲಾ 25 ಅರ್ಜಿ ವಿಲೇವಾರಿ ಕೈಗೊಳ್ಳಲು ಕಡತ ಹಂಚಿಕೆ ಮಾಡಿದರೆ, ಇನ್ನೂ 100 ಅರ್ಜಿ ವಿಲೇವಾರಿ ಆಗದೆ ಬಾಕಿ ಉಳಿದುಕೊಳ್ಳುತ್ತಿವೆ. ಹೀಗೆ ತಿಂಗಳಿಗೆ 100 ಅರ್ಜಿ ಸೇರಿ ವರ್ಷಕ್ಕೆ 1200 ಅರ್ಜಿ ಬಾಕಿ ಉಳಿಯುತ್ತಿದ್ದು, ಇದರಿಂದ ಜನರಿಗೆ ಭಾರಿ ಕಷ್ಟ ಅನುಭವಿಸುವಂತಾಗಿದೆ. ಅಗತ್ಯ ದಾಖಲೆಗಾಗಿ ಅರ್ಜಿ ಸಲ್ಲಿಸಿದವರ ಸಂಪೂರ್ಣವಾಗಿ ಕೆಲಸ ಮುಗಿಯಲು ಆರು ತಿಂಗಳ ಅವಧಿ ಕಾಯಬೇಕಾಗಿದೆ.
ತಿಂಗಳಿಂದ ಪ್ರಕ್ರಿಯೆ ಸ್ಥಗಿತ: ರಾಜ್ಯ ಸರ್ಕಾರ 1800 ಜನ ಹೊಸ ಭೂ ಮಾಪಕರ ನೇಮಕಾತಿ ಕೈಗೊಳ್ಳಲು ಮುಂದಾಗಿದೆ. ಇದರಿಂದಾಗಿ ಕುಪಿತಗೊಂಡಿರುವ ಖಾಸಗಿ ಪರವಾನಗಿ ಭೂ ಮಾಪಕರು ಕಳೆದ ಅನೇಕ ವರ್ಷಗಳಿಂದ ಸೇವೆ ಸಲ್ಲಿಸಿದ್ದೇವೆ. ನಮಗೂ ನೇಮಕಾತಿ ಮಾಡಿಕೊಳ್ಳಬೇಕು ಎಂದು ಜುಲೈ 1ರಿಂದ ರಾಜ್ಯಾದ್ಯಂತ ಹೂಡಿದ ಮುಷ್ಕರದ ಹಿನ್ನೆಲೆಯಲ್ಲಿ ತಾಲೂಕಿನ ಭೂ ಮಾಪಕರು ಕೆಲಸಕ್ಕೆ ಹಾಜರಾಗುತ್ತಿಲ್ಲ.
ಹೀಗಾಗಿ ಇಲ್ಲಿನ ಕಡತ ವಿಲೇವಾರಿ ಪ್ರಕ್ರಿಯೆ ಕಳೆದೊಂದು ತಿಂಗಳಿಂದ ಸ್ಥಗಿತಗೊಂಡಿದೆ. ಒಂದು ತಿಂಗಳ ಮುಷ್ಕರ ಹೂಡಿದರೆ ಎರಡು ತಿಂಗಳ ಕೆಲಸ ಬಾಕಿ ಉಳಿಯುವಂತಾಗಿದೆ ಎಂದು ಭೂ ಮಾಪಕ ಅಧಿಕಾರಿ ವಿನಾಯಕ ಕುಲಕರ್ಣಿ ಹೇಳುತ್ತಾರೆ.
ಸಾರ್ವಜನಿಕರ ಒತ್ತಾಯ: ಅರ್ಜಿ ಸಲ್ಲಿಸಿದ ರೈತರ ಕೆಲಸ ಒಂದು ತಿಂಗಳೊಳಗೆ ಸರ್ಕಾರ ಕ್ರಮ ಜರುಗಿಸಬೇಕು ಎಂದು ಸಾವಳೇಶ್ವರ ಚಂದ್ರಕಾಂತ ಘೋಡಕೆ ಮತ್ತು ಶಶಿಕಾಂತ ಶೀಲವಂತ ಒತ್ತಾಯಿಸಿದ್ದಾರೆ.
ಭೂ ದಾಖಲೆ ವಿಲೇವಾರಿ ಸರಿಪಡಿಸಲು ಸ್ವಲ್ಪ ವಿಳಂಬವಾಗುತ್ತಿದೆ. ಅದಕ್ಕಾಗಿ ಸಿಬ್ಬಂದಿ ಕೊರತೆ ಮತ್ತು ಖಾಸಗಿ ಭೂ ಮಾಪಕರ ಮುಷ್ಕರದಿಂದಾಗಿ ಮತ್ತಷ್ಟು ತೊಂದರೆಯಾಗಿದೆ. ಸರ್ಕಾರ ಈ ಕೂಡಲೇ ಸಿಬ್ಬಂದಿ ಕಳುಹಿಸಿಕೊಡುವ ನಿರೀಕ್ಷೆಯಿದೆ ಎಂದು ತಹಸೀಲ್ದಾರ್ ಪರಮೇಶ್ವರ ಕೆ.ಸ್ವಾಮಿ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

