ಮರಗುತ್ತಿ ಬಳಿ ಅಪಘಾತ;ಮೃತರ ಸಂಖ್ಯೆ 4ಕ್ಕೇರಿಕೆ
ಗುಲ್ಬರ್ಗ: ತಾಲೂಕಿನ ಮರಗುತ್ತಿ ಕ್ರಾಸ್ ಬಳಿಯ ರಾಷ್ಟ್ರೀಯ ಹೆದ್ದಾರಿಯ ಕುದುರೆಮುಖ ತಿರುವಿನಲ್ಲಿ ಶನಿವಾರ ಸಂಜೆ ಜರುಗಿದ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೇರಿದೆ.
ಕಾರು ಉರುಳಿ ಬಿದ್ದ ಪರಿಣಾಮ ಗುಲ್ಬರ್ಗದ ಶಕ್ತಿ ನಗರದ ನಿವಾಸಿ ವೆಂಕಟೇಶ ಶ್ರೀಮಂಡಲ(26), ಬಸವನಗರದ ನಿವಾಸಿ ಮಲ್ಲಿನಾಥ ಕಟ್ಟಿಮನಿ(28) ಎಂಬುವವರು ಸ್ಥಳದಲ್ಲಿಯೇ ಮೃತಪಟ್ಟಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಸಿಐಬಿ ಕಾಲೋನಿಯ ನಿವಾಸಿ ಗಜೇಂದ್ರ ತಂದೆ ಗುರುರಾಜ ಶಕ್ತಿ ಮತ್ತಿಮಡು(20) ಮತ್ತು ಬಸವನಗರ ನಿವಾಸಿ ಅನೀಲಕುಮಾರ್(27) ಗುಲ್ಬರ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ಅಸುನೀಗಿದ್ದಾರೆ. ಗಾಯಗೊಂಡ ಆನಂದ ಕಮನೂರ್ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹುಮನಾಬಾದ್ದಿಂದ ಗುಲ್ಬರ್ಗ ಕಡೆ ಬರುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾಗಿದ್ದು, ಅಪಘಾತದ ತೀವ್ರತೆಯಲ್ಲಿ ವಾಹನ ನುಜ್ಜುಗುಜ್ಜಾಗಿದೆ. ಘಟನಾ ಸ್ಥಳಕ್ಕೆ ಎಸ್ಪಿ ಅಮಿತ್ಸಿಂಗ್, ಹೆಚ್ಚುವರಿ ಎಸ್ಪಿ ಕಾಶಿನಾಥ ತಳಗೇರಿ, ಡಿಎಸ್ಪಿ ಎ.ಡಿ. ಬಸಣ್ಣನವರ್, ಸಿಪಿಐ ಸತೀಶ, ಕಮಲಾಪುರ ಪಿಎಸ್ಐ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಕುರಿತು ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ರ್ಯಾಕ್ಟರ್ ಉರುಳಿ ಒಬ್ಬ ಸಾವು
ಜೇವರ್ಗಿ: ತಾಲೂಕಿನ ಕೋಳಕೂರ ಗ್ರಾಮದ ಬಳಿ ಶನಿವಾರ ಸಂಜೆ ಟ್ರ್ಯಾಕ್ಟರ್ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಉರುಳಿ ಬಿದ್ದ ಪರಿಣಾಮ ಸ್ಥಳದಲ್ಲಿಯೇ ಒಬ್ಬ ವ್ಯಕ್ತಿ ಮೃತಪಟ್ಟಿದ್ದು, ಇಬ್ಬರು ಗಾಯಗೊಂಡ ಘಟನೆ ನಡೆದಿದೆ. ಹಣಮಂತ ಕೃಷ್ಣಪ್ಪ ಮುದಬಾಳ (25) ಮೃತನು. ಗಂಭೀರವಾಗಿ ಗಾಯಗೊಂಡ ಇಬ್ಬರನ್ನು ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ. ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಸಿಪಿಐ ರಾಮಣ್ಣ ಸಾವಳಗಿ, ಪಿಎಸ್ಐ ಸುಧೀರ ಬೆಂಕಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಅತ್ಯಾಚಾರ ಆರೋಪಿ ಬಂಧನ
ಜೇವರ್ಗಿ: ಕಳೆದ ಶುಕ್ರವಾರ ತಾಲೂಕಿನ ಮಂದೇವಾಲ ಗ್ರಾಮದ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸೆಗಿ ಪರಾರಿಯಾಗಿದ್ದ ಆರೋಪಿ ರಾಘವೇಂದ್ರ ಕಟ್ಟಿಮನಿಯನ್ನು ಶನಿವಾರ ಪೊಲೀಸರು ಮಿಂಚಿನ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸಿಪಿಐ ರಾಮಣ್ಣ ಸಾವಳಗಿ ನೇತೃತ್ವದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಭೇಟಿ: ಕಳೆದ ಶುಕ್ರವಾರ ಬಾಲಕಿಯ ಮೇಲಿನ ಅತ್ಯಾಚಾರದಿಂದ ಜರ್ಜರಿತಗೊಂಡ ಕುಟುಂಬ ವರ್ಗಕ್ಕೆ ಶನಿವಾರ ಮಂದೇವಾಲ ಗ್ರಾಮಕ್ಕೆ ತೆರಳಿದ ಶಾಸಕ ಡಾ. ಅಜಯಸಿಂಗ್ ಸಾಂತ್ವನ ಹೇಳಿ, ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ಒದಗಿಸುವಲ್ಲಿ ತಾವು ಅವಿರತ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.
ಜೇವರ್ಗಿ- ಕಳ್ಳತನ: ಮಹಿಳೆ ಬಂಧನ
ಜೇವರ್ಗಿ: ಪಟ್ಟಣದಲ್ಲಿರುವ ಜೆಸ್ಕಾಂ ವಸತಿ ಗೃಹಮೊಂದರಲ್ಲಿ ಕಳೆದ 29ರಂದು ಮನೆ ಕಳ್ಳತನ ಮಾಡಿದ ಮಹಿಳಾ ಆರೋಪಿಯನ್ನು ಪೊಲೀಸರು ಶನಿವಾರ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಬಂಧಿತ ಆರೋಪಿ ಜಯಶ್ರೀ ಗಂಡ ಕನ್ವರ(25) ಎಂದು ಗುರುತಿಸಲಾಗಿದೆ. ಬಂಧಿತಳಿಂದ 4 ತೊಲೆ ಬಂಗಾರ, 40 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ಸಿಂಗ್ ಮಾರ್ಗದರ್ಶನದಲ್ಲಿ ಸಿಪಿಐ ರಾಮಣ್ಣ ಸಾವಳಗಿ, ಪಿಎಸ್ಐ ಸುಧೀರ ಬೆಂಕಿ ಹಾಗೂ ಸಿಬ್ಬಂದಿ ದಾಳಿ ನಡೆಸಿ ಕಳ್ಳಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಕುರಿತು ಜೇವರ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

