ಜನಪದ ಶ್ರಾವಣ ಪ್ರವಚನ ಮಾಲಿಕೆಗೆ ಇಂದು ಚಾಲನೆ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.4
ಇಲ್ಲಿನ ಶರಣಬಸವೇಶ್ವರ ದಾಸೋಹ ಪೀಠದ ಅಂಗಳದಲ್ಲಿ ಈ ಬಾರಿಯ ಶ್ರಾವಣ ಚಿಂತನ ಜನಪದರು ರಚಿಸಿರುವ ದಾಸೋಹ ಭಂಡಾರಿ ಶರಣಬಸವೇಶ್ವರರ ಕುರಿತಾದ ತ್ರಿಪದಿಗಳನ್ನಾಧರಿಸಿ ನಡೆಯಲಿದೆ.
ಪ್ರತಿ ವರ್ಷ ಗುರುಲಿಂಗ ಕವಿಗಳ ಪುರಾಣದಿಂದ ನಡೆಯುತ್ತಿದ್ದ ಶ್ರಾವಣ ಪುರಾಣ, ಉಪನ್ಯಾಸಗಳಲ್ಲಿ ಈ ಬಾರಿ ಇದು ಮಹತ್ತರ ಬದಲಾವಣೆ ಹಾಗೂ ಜನಪದರಲ್ಲಿ ಬೆರೆತ ಶರಣರ ಜೀವನ, ಅಲ್ಲಿ ಚಿತ್ರಿತವಾಗಿರುವ ಲೀಲಾವಳಿಗಳ ಅನಾವರಣ ಈ ಶ್ರಾವಣ ಉಪನ್ಯಾಸಗಳ ಮೂಲಕ ನಡೆಸಲಾಗುತ್ತದೆ ಎಂದು ದಾಸೋಹ ಪೀಠಾಧಿಪತಿ ಡಾ. ಶರಣಬಸವಪ್ಪ ಅಪ್ಪ ಹೇಳಿದ್ದಾರೆ.
ತ್ರಿಪದಿ ಗುಚ್ಛ ಧ್ವನಿ: ಆ.6ರಂದು ತಮ್ಮ ಉಪಸ್ಥಿತಿಯಲ್ಲಿ ಜನಪದ ಶ್ರಾವಣ ಪ್ರವಚನ ಮಾಲಿಕೆಗೆ ಡಾ. ಬಸವರಾಜ ಸಬರದ ಚಾಲನೆ ನೀಡಲಿದ್ದಾರೆ. ಪುರಾಣ ಪ್ರವಚನ ಕೇಸರಿ ಡಾ. ಶಿವರಾಜಶಾಸ್ತ್ರಿ ಹೆರೂರ್ ಅವರು ತ್ರಿಪದಿಗಳನ್ನಾಧರಿಸಿ ಶರಣರ ಜೀವನದ ಮೇಲೆ ಬೆಳಕು ಚೆಲ್ಲಲಿದ್ದಾರೆ. ಈ ಕೆಲಸ 40 ದಿನಗಳ ಕಾಲ ನಿತ್ಯ ಸಂಜೆ 7 ಗಂಟೆಯಿಂದ ನಡೆಯಲಿದೆ. ಈ ಉಪನ್ಯಾಸಕ್ಕೂ ಮುನ್ನ 1 ಗಂಟೆಗಳ ಕಾಲ ತ್ರಿಪದಿಗಳನ್ನಾಧರಿಸಿಯೇ ಸಂಗೀತ ಗೋಷ್ಠಿಯೂ ನಡೆಯುತ್ತದೆ ಎಂದು ಡಾ. ಅಪ್ಪ ಶ್ರಾವಣ ಮಂಗಲ ಮಹೋತ್ಸವದ ಮಾಹಿತಿ ನೀಡಿದ್ದಾರೆ.
ದಾಸೋಹ ಮಹಾಮನೆಯಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಶೀಘ್ರದಲ್ಲೇ ಜನಪದರಲ್ಲಿ ಬೆರೆತು ಹೋಗಿರುವ ಶರಣರ ಜೀವನ ಲೀಲೆಗಳ ಮೇಲೆ ಹೊಸ ಬೆಳಕು ಚೆಲ್ಲಿರುವ ಆಯ್ದ ತ್ರಿಪದಿಗಳನ್ನು ಗುಚ್ಛವಾಗಿಸಿ ಖ್ಯಾತ ಗಾಯಕರಾದ ಅನುರಾಧಾ ಪೋಡವಾಲ್ ಮತ್ತು ಸುರೇಶ ವಾಡಕರ್ ಧ್ವನಿಯಲ್ಲಿ ಧ್ವನಿ ಸುರುಳಿ ಹೊರತರಲಾಗುತ್ತದೆ ಎಂದರು.
ವೀರಶೈವ ಸಂಸ್ಥೆಗಳ ಕೊಡುಗೆ ಚಿಂತನೆ: ಶ್ರಾವಣ ಉಪನ್ಯಾಸ, ಜನಪದರ ತ್ರಿಪದಿಗಳ ಚಿಂತನೆ ಜೊತೆಗೇ ರಾಜ್ಯದ ವಿವಿಧ ಪ್ರದೇಶಗಳಲ್ಲಿ ವೀರಶೈವರು ಸ್ಥಾಪಿಸಿ ಬೆಳೆಸಿರುವ ಪ್ರಮುಖ ಶಿಕ್ಷಣ ಸಂಸ್ಥೆಗಳ ಕುರಿತಂತೆ ಉಪನ್ಯಾಸಗಳನ್ನು ಪರಿಣಿತರು ನಡೆಸಿಕೊಡುತ್ತಿದ್ದಾರೆ.
ಸೆಪ್ಟೆಂಬರ್ 14ರಂದು ಲಿಂಗೈಕ್ಯ ದೊಡ್ಡಪ್ಪ ಅಪ್ಪ ಅವರ ಪುಣ್ಯತಿಥಿ ಆಚರಿಸಲಾಗುತ್ತದೆ. ಈ ದಿನದವರೆಗೂ ಶ್ರಾವಣ ಚಿಂತನ- ಮಂಥನ ಸಾಗಲಿದೆ. ಶರಣಬಸವೇಶ್ವರ ಸಂಸ್ಥಾನದ ಅಖಿಲ ಭಾರತ ಅನುಭವ ಮಂಟಪ ವೇದಿಕೆಯಲ್ಲೇ ಇವೆಲ್ಲ ಚಿಂತನೆ, ಸಂಗೀತ ಸಮಾರಂಭಗಳು ನಡೆಯಲಿವೆ. ನಿತ್ಯ ಸಂಜೆ 6.30ರಿಂದ ಶುರುವಾಗುವ ಶ್ರಾವಣ ಮಂಗಲ ಮಹೋತ್ಸವಕ್ಕೆ ನಡೆಯಲಿದೆ.
ಲತಾ ಮಂಗೇಶ್ಕರ್ ಧ್ವನಿ: ಗುಲ್ಬರ್ಗ ಸೇರಿದಂತೆ ಉತ್ತರ ಕರ್ನಾಟಕದಲ್ಲಿಯೇ ಶತಮಾನ ಕಂಡಿರುವ ಪ್ರಮುಖ ಸಂಸ್ಥೆಯಾಗಿ ಹೊರಹೊಮ್ಮಿರುವ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಶಿಕ್ಷಣ ಸಂಸ್ಥೆಗಳಿಗೆ ಪ್ರತ್ಯೇಕ ಪ್ರಾರ್ಥನಾ ಗೀತೆ ರಚಿಸಲಾಗಿದೆ. ಇದನ್ನು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ ಅವರಿಂದ ಹಾಡಿಸಿ ಧ್ವನಿ ಮುದ್ರಿಸಿಕೊಂಡು ಎಲ್ಲಾ ಸಂಸ್ಥೆಗಳಲ್ಲಿ ನಿತ್ಯ ಹಾಡಲು ಆರಂಭಿಸಲಾಗುತ್ತದೆ ಎಂದು ಡಾ. ಶರಣಬಸವಪ್ಪ ಅಪ್ಪ ಹೇಳಿದ್ದಾರೆ.
ಅಪ್ಪಾ ತಂತ್ರಜ್ಞಾನ ಸಂಸ್ಥೆಯ ಪ್ರಾಚಾರ್ಯ ಅನೀಲ್ಕುಮಾರ ಬಿಡವೆ ಸೇರಿದಂತೆ ವಿವಿಧ ಸಂಸ್ಥೆಗಳ ಪ್ರಾಚಾರ್ಯರು, ಶರಣಬಸವೇಶ್ವರರ ಜನಪದ ತ್ರಿಪದಿಗಳ ಸಂಶೋಧನೆ, ಸಂಗ್ರಹ ಕಾರ್ಯ ನಡೆಸಿರುವ ಗೋದುತಾಯಿ ವಿದ್ಯಾಲಯದ ಪ್ರಾಚಾರ್ಯರಾದ ಡಾ. ನೀಲಾಂಬಿಕಾ ಪೊಲೀಸ್ ಪಾಟೀಲ್, ಡಾ. ಶಿವರಾಜ್ ಶಾಸ್ತ್ರೀ ಹೆರೂರ್ ಸುದ್ದಿಗೋಷ್ಠಿಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

