ಗುಲ್ಬರ್ಗಾ

ಸಿಬ್ಬಂದಿ ಕೊರತೆ: ಜನತೆಗೆ ಜೆಸ್ಕಾಂ ಬರೆ(ರ)

Published On :

ಕನ್ನಡಪ್ರಭ ವಾರ್ತೆ  ಯಾದಗಿರಿ  ಆ.5
ಜಿಲ್ಲೆ ವ್ಯಾಪ್ತಿಯಲ್ಲಿ ಪ್ರತಿನಿತ್ಯ 10ಕ್ಕೂ ಹೆಚ್ಚು ವಿದ್ಯುತ್ ಟ್ರಾನ್ಸ್ಫಾರ್ಮರ್(ಟಿಸಿ)ಗಳು ಸುಡುತ್ತಿವೆ. ಸುಟ್ಟ ಟಿಸಿಯನ್ನು ತಿಂಗಳಾದರೂ ಬದಲಿಸಲು ಸಾಧ್ಯವಾಗದೇ ಜೆಸ್ಕಾಂ ಪರದಾಡುತ್ತಿದೆ. ಇದರಿಂದ ಗ್ರಾಮೀಣ ಭಾಗದ ಜನತೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.
ಇದರೊಂದಿಗೆ ಜೆಸ್ಕಾಂ ಯಾದಗಿರಿ ವಿಭಾಗದಲ್ಲಿ ಅರ್ಧದಷ್ಟು ಸಿಬ್ಬಂದಿ ಹುದ್ದೆ ಖಾಲಿಯಿದ್ದು, ಸಮರ್ಪಕ ವಿದ್ಯುತ್ ಪೂರೈಕೆ ಮಾಡುವುದೇ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಕುಡಿವ ನೀರು, ಕೃಷಿ, ಉದ್ದಿಮೆಗಳ ಹಾಗೂ ಗೃಹ ಬಳಕೆಗೆ ಸಂಪರ್ಕ ನೀಡಿದ್ದ ಟಿಸಿಗಳು ಒಮ್ಮೆ ಟಿಸಿ ಸುಟ್ಟರೆ ದುರಸ್ತಿಯಾಗಿ ಬರಲು ತಿಂಗಳತನಕ ಕಾಯಬೇಕು. ಅಲ್ಲಿವರೆಗೆ ಬೆಳೆಗಳಿಗೆ ನೀರುಣಿಸಲು, ಕುಡಿಯಲು ನೀರಿಲ್ಲದೇ, ಗಿರಣಿಗಳಲ್ಲಿ ಹಿಟ್ಟು ಮಾಡಿಸಲೂ ಸಾಧ್ಯವಾಗದೇ ಜನರ ತೊಂದರೆ ಅನುಭವಿಸಲೇಬೇಕು. ಆದರೆ ಜೆಸ್ಕಾಂನಿಂದ ತಕ್ಷಣ ಟಿಸಿ ನೀಡಲು ಸಾಧ್ಯವಾಗುತ್ತಿಲ್ಲ.
75 ಟಿಸಿ ಬೇಕು: ಆದ್ಯತೆ ಮೇರೆಗೆ ಜಿಲ್ಲೆಯಲ್ಲಿ ಟಿಸಿ ಅಳವಡಿಸುತ್ತಿದ್ದರೂ ಇನ್ನೂ 75 ಕಡೆ ಬಾಕಿ ಉಳಿದಿದೆ. ಟಿಸಿ ದುರಸ್ತಿ ಮಾಡುವ ಒಂದೇ ಕೇಂದ್ರವಿದ್ದು, ಹೆಚ್ಚೆಂದರೆ ದಿನಕ್ಕೆ 8ರಿಂದ 10 ಟಿಸಿ ದುರಸ್ತಿ ಮಾಡಲಾಗುತ್ತಿದೆ. ಆದರೆ ರಿಪೇರಿ ಮಾಡುವಷ್ಟರಲ್ಲಿ ಮತ್ತೊಂದು ಕಡೆಯಿಂದ ದೂರು ಬರುತ್ತಿದೆ. ಇದರಿಂದ ಕೆಲ ಗ್ರಾಮಗಳಿಗೆ ತಿಂಗಳಾದರೂ ಹೊಸ ಟಿಸಿ ಅಳವಡಿಸಲಾಗುತ್ತಿಲ್ಲ.
ಓವರ್ ಲೋಡ್ ಸಮಸ್ಯೆಯಿಂದ ಟಿಸಿ ಸುಡುತ್ತಿದೆ ಎಂದು ಜೆಸ್ಕಾಂ ಅಧಿಕಾರಿಗಳು ಹೇಳುತ್ತಾರೆ. ಆದರೆ ಸಾರ್ವಜನಿಕರು ಹೇಳುವ ಪ್ರಕಾರ, ಟಿಸಿ ಗುಣಮಟ್ಟವೇ ಕಡಿಮೆಯಿದ್ದು, ಎಷ್ಟೇ ಕಡೆಗಳಲ್ಲಿ ಹಾಕಿದ ದಿನವೇ ಮತ್ತೆ ಟಿಸಿ ಸುಟ್ಟ ಉದಾಹರಣೆಗಳಿವೆ ಎನ್ನುತ್ತಾರೆ. ಆ. 2ರವರೆಗೆ ಜಿಲ್ಲೆಯ 75 ಕಡೆಗಳಲ್ಲಿ ಸುಟ್ಟ ಟಿಸಿ ಬದಲಿಸುವುದು ಬಾಕಿಯಿದೆ.
ಶೇ. 50 ಸಿಬ್ಬಂದಿ ಕೊರತೆ: ಜೆಸ್ಕಾಂ ಯಾದಗಿರಿ ವಿಭಾಗಕ್ಕೆ ಅಧಿಕಾರಿಗಳು, ಎಂಜಿನಿಯರ್ ಸೇರಿದಂತೆ ಒಟ್ಟು 652 ಹುದ್ದೆ ಮಂಜೂರಾಗಿದೆ. ಆದರೆ ಸದ್ಯ ಕಾರ್ಯನಿರ್ವಹಿಸುತ್ತಿರುವವರ ಸಂಖ್ಯೆ 351 ಆಗಿದ್ದು, 301 ಹುದ್ದೆ ಖಾಲಿಯಿದೆ. ಮುಖ್ಯವಾಗಿ ಲೈನ್ಮನ್ಗಳ ಕೊರತೆಯಿಂದ ಜೆಸ್ಕಾಂ ಬಳಲುತ್ತಿದ್ದು, ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡಲು ತೊಂದರೆಯಾಗಿದೆ.
ಲೈನ್ಮನ್ ಸೇರಿದಂತೆ ಡಿ ಗ್ರೂಪ್ನ 347 ಹುದ್ದೆಗಳಲ್ಲಿ 166 ಹುದ್ದೆ ಖಾಲಿಯಿದೆ. ಕಳೆದ ಹತ್ತಾರು ವರ್ಷಗಳಿಂದ ನೇಮಕಾತಿಯೇ ನಡೆಯದಿರುವುದು ಸಮಸ್ಯೆ ಗಂಭೀರವಾಗಲು ಕಾರಣವಾಗಿದೆ. ಕಳೆದ ಅನೇಕ ತಿಂಗಳಿಂದ ಖಾಲಿಯಿದ್ದ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಹುದ್ದೆಗೆ ಎರಡು ದಿನಗಳ ಹಿಂದಷ್ಟೇ ನಾಗರಾಜ್ ಎಂಬವರು ಬಂದಿದ್ದಾರೆ. ಸಹಾಯಕ ಎಂಜಿನಿಯರ್, ಡ್ರೈವರ್ ಸೇರಿದಂತೆ ಸಿ ದರ್ಜೆಯ 269 ಹುದ್ದೆಗಳಲ್ಲಿ 126 ಹುದ್ದೆ ಖಾಲಿಯಿದೆ.
ಬಿಲ್ ವಸೂಲಿಗಷ್ಟೇ ಗಮನ: ಈಗಿರುವ ಲೈನ್ಮನ್ಗಳಲ್ಲಿ ಅನೇಕರಿಗೆ ವಯಸ್ಸಾಗಿರುವುದರಿಂದ ಹೆಚ್ಚಿನ ಕೆಲಸ ತೆಗೆದುಕೊಳ್ಳಲಾಗುತ್ತಿಲ್ಲ. ಮಳೆಗಾಲದಲ್ಲಿ ತಂತಿ ಮೇಲೆ ಮರ ಬಿದ್ದರೂ ತೆಗೆಯಲಾಗುತ್ತಿಲ್ಲ. ಮುಂಜಾಗ್ರತಾ ಕ್ರಮವಾಗಿ ಅಪಾಯದಲ್ಲಿರುವ ಮರ ಹಾಗೂ ಕೊಂಬೆಗಳ ಕಟಾವು ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಲೈನ್ ನಿರ್ವಹಣೆಗೆ ಜೆಸ್ಕಾಂ ಹೆಚ್ಚಿನ ಗಮನ ನೀಡುತ್ತಿಲ್ಲ. ಬಿಲ್ ವಸೂಲಿಗೆ ತೋರುವ ಆಸಕ್ತಿಯನ್ನು ಗ್ರಾಹಕರಿಗೆ ವಿದ್ಯುತ್ ಒದಗಿಸುವ ನಿಟ್ಟಿನಲ್ಲಿ ನೀಡುತ್ತಿಲ್ಲ. ಕರೆಂಟ್ ಎಷ್ಟು ಹೊತ್ತಿಗೆ ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
ನಗರ ಪ್ರದೇಶದಲ್ಲೇ ಕರೆಂಟ್ ವ್ಯತ್ಯಯವಾಗುತ್ತಿದ್ದು, ಇನ್ನು ಗ್ರಾಮೀಣ ಪ್ರದೇಶದ ಕತೆ ಬೇರೆಯೇ ಇದೆ. ನಿತ್ಯವೂ ದೂರದ ಊರುಗಳಿಂದ ಟಿಸಿ ಸುಟ್ಟ ದೂರು ಹೊತ್ತು ಬರುವ ರೈತರು ಬರಿಗೈಲಿ ವಾಪಸಾಗುತ್ತಿದ್ದಾರೆ.
ಜನರ ಪರದಾಟ: ಸುರಪುರ ತಾಲೂಕಿನ ಕೆಂಭಾವಿ, ಶಹಾಪುರದ ನಾಯ್ಕಲ್, ಹಾಲಗೇರಾ, ಹತ್ತಿಕುಣಿ, ಬದ್ದೇಪಲ್ಲಿ ಸೇರಿದಂತೆ ಹತ್ತಾರು ಗ್ರಾಮಗಳ ಜನತೆ 15 ದಿನಗಳಿಂದ ಕತ್ತೆಲೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಟಿಸಿ ಸುಟ್ಟರೂ ಅಧಿಕಾರಿಗಳು ಗಮನ ನೀಡುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಈ ಬಗ್ಗೆ ಜೆಸ್ಕಾಂ ಹೆಚ್ಚಿನ ಗಮನ ನೀಡಿ ಗ್ರಾಹಕರಿಗೆ ನಿರಂತರ ವಿದ್ಯುತ್ ನೀಡುವ ಬಗ್ಗೆ ಗಮನ ನೀಡಬೇಕು. ಮಳೆಯಿಲ್ಲದೇ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು, ಪಂಪ್ಸೆಟ್ಗಳಿಗೆ ಸಂಪರ್ಕ ನೀಡಿದ್ದ ಟಿಸಿಗಳು ಸುಟ್ಟಲ್ಲಿ ತಕ್ಷಣ ಬದಲಿಸಬೇಕೆಂದು ಜಿಪಂ ಸದಸ್ಯ ದೇವರಾಜ ಆಗ್ರಹಿಸಿದ್ದಾರೆ.
- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.