ಗುಲ್ಬರ್ಗಾ

ನಂಬಿಕೆಯೇ ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ: ಸೋನಿಜಿ

Published On :

ಕನ್ನಡಪ್ರಭ ವಾರ್ತೆ, ಸುರಪುರ. ಆ.6
ದೇವರು ಎಂಬ ಕಲ್ಪನೆ ನಮ್ಮ ನಂಬಿಕೆಗೆ ಸೀಮಿತವಾಗಿದೆ. ಪ್ರತಿ ಕಾರ್ಯ ಮತ್ತು ಕರ್ಮಗಳಲ್ಲಿ ದೇವರ ಇರುವಿಕೆ ಬಗ್ಗೆ ನಂಬಿಕೆ ಇಟ್ಟಲ್ಲಿ ಯಶಸ್ವಿಯಾಗುತ್ತದೆ ಮತ್ತು ನಮ್ಮ ನಂಬಿಕೆಯೇ ನಮ್ಮನ್ನು ಸನ್ಮಾರ್ಗದಲ್ಲಿ ಮುನ್ನಡೆಸುತ್ತದೆ ಎಂದು ಅಖಿಲ ವಿಶ್ವ ಗಾಯಿತ್ರಿ ಪರಿವಾರ ಶಾಂತಿಕುಂಜ ಹರಿದ್ವಾರದ ಸ್ವಾಮೀಜಿ ಸೋನಿಜಿ ಹೇಳಿದರು.
ಸಮೀಪದ ರಂಗಂಪೇಟೆಯ ನಗರೇಶ್ವರ ದೇವಸ್ಥಾನದಲ್ಲಿ ಇಲ್ಲಿಯ ಗಾಯಿತ್ರಿ ಪರಿವಾರವು ಅಖಿಲ ವಿಶ್ವ ಗಾಯಿತ್ರಿ ಪರಿವಾರ ಶಾಂತಿಕುಂಜ ಹರಿದ್ವಾರ, ಉತ್ತರಾಖಂಡ ಇವರ ಮಾರ್ಗದರ್ಶನದಲ್ಲಿ ವಿಶ್ವ ಕಲ್ಯಾಣಾರ್ಥವಾಗಿ ಹಮ್ಮಿಕೊಂಡಿದ್ದ ಗಾಯಿತ್ರಿ ಹಾಗೂ ಮಹಾ ಮೃತ್ಯುಂಜಯ ಪಂಚ ಹೋಮಕುಂಡಗಳ ಯಜ್ಞ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ದೈವಭಕ್ತಿಯಿಲ್ಲದ ಬದುಕು ಕಷ್ಟ: ದೈವಭಕ್ತಿ, ಧರ್ಮನಿಷ್ಠೆ ಇಲ್ಲದೇ ಹೋದರೆ ಬಾಳಿ, ಬದುಕುವುದು ಕಷ್ಟವಾಗುತ್ತದೆ. ಜೀವನದ ವಿಕಾಸ ಮತ್ತು ಅಭ್ಯುದಯಕ್ಕೆ ಹೆದ್ದಾರಿಯಂತಿರುವ ಧರ್ಮದ ಮಾರ್ಗದಲ್ಲೇ ಪ್ರತಿಯೊಬ್ಬರೂ ಸಾಗಬೇಕು. ಇತರರಿಗೂ ಆದರ್ಶಪ್ರಾಯರಾಗಿ ಬಾಳುವುದೇ ನಿಜವಾದ ಧರ್ಮ ಎಂಬುದನ್ನು ತಿಳಿದುಕೊಳ್ಳಬೇಕು ಎಂದರು.
ಆಧ್ಯಾತ್ಮಿಕ ಸಂಪತ್ತು ಗಳಿಸಿ: ಪ್ರತಿಯೊಬ್ಬರ ಬದುಕು ಹಸನು ಮತ್ತು ಹಸನ್ಮುಖಿಯಾಗಿರಲು ಭೌತಿಕ ಸಂಪತ್ತಿನ ಜೊತೆ ಆಧ್ಯಾತ್ಮ ಸಂಪತ್ತು ಗಳಿಸಬೇಕು. ಧರ್ಮದ ಹಾದಿಯಲ್ಲಿ ಭೌತಿಕ ಸಂಪತ್ತು ಗಳಿಸಬೇಕು. ಪ್ರತಿನಿತ್ಯ ಗುರು, ಹಿರಿಯರಿಂದ ಆಧ್ಯಾತ್ಮಿಕ ವಿಚಾರಗಳನ್ನು ತಿಳಿಯುವುದರಿಂದ ಆಧ್ಯಾತ್ಮಿಕ ಸಂಪತ್ತು ಗಳಿಸಬೇಕು.
ಧರ್ಮ ಎಂದರೆ ಬೇರೇನೂ ಅಲ್ಲ, ನಂಬಿಕೆ ಮತ್ತು ಆಚರಣೆ. ಧರ್ಮದ ನೀತಿ ಸಂಹಿತೆಯಿಂದಲೇ ಸಾಗುವ ಮೂಲಕ ಭಗವಂತನನ್ನು ಮೆಚ್ಚಿಸಬೇಕು. ಪ್ರತಿಯೊಬ್ಬರೂ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಲು ಸತತ ಸಾಧನೆ ಮತ್ತು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಪ್ರತಿಯೊಬ್ಬರಿಗೂ ಯೋಗ್ಯ ಸದ್ವಿಚಾರ, ಸಂಸ್ಕಾರ ನೀಡಿದಲ್ಲಿ ಸಮಾಜಕ್ಕೆ ಆದರ್ಶ ವ್ಯಕ್ತಿಗಳಾಗುತ್ತಾರೆ. ಧರ್ಮದ ದಶವಿಧ ಸೂತ್ರಗಳು ಬದುಕನ್ನು ಬೆಳೆಸುತ್ತವೆ, ಅರಳಿಸುತ್ತವೆ ಎಂದು ಹೇಳಿದರು.
ಶಾಂತಿಕುಂಜ ಪರಿವಾರದ ಸ್ವಾಮೀಜಿ ಕಿರಣಜಿ ನೇತೃತ್ವ ವಹಿಸಿದ್ದರು. ಪ್ರಮುಖರಾದ ಸುಬ್ಬಣ ಕಡಬೂರ್, ಗೋಪಾಲಯ್ಯ ಪೋಲಂಪಲ್ಲಿ, ರಾಮು ಪೋಲಂಪಲ್ಲಿ, ವೆಂಕಟೇಶ ಕಲಕುಂಡಿ, ತಿಪ್ಪಣ್ಣ ಪೋಲಂಪಲ್ಲಿ, ಗಾಯಿತ್ರಿ ಚೇತನಾ ಕೇಂದ್ರದ ರಾಜಾ ಮುಕುಂದ ನಾಯಕ, ಶ್ಯಾಮಸುಂದರ ವ್ಯಾಸ್, ಪವನ ಶರ್ಮಾ, ಪಂಕಜಕುಮಾರ ಜೋಷಿ ಸೇರಿದಂತೆ ಅನೇಕರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.