ರಾಷ್ಟ್ರಪತಿ ಅಂಕಿತಕ್ಕೆ ಸರ್ಕಾರದ ಆದ್ಯತೆಯಿರಲಿ
ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.6
ಗುಲ್ಬರ್ಗ: ಸಂವಿಧಾನದ 371(ಜೆ) ವಿಧಿ ತಿದ್ದುಪಡಿಗೆ ಸಂಬಂಧಿಸಿದ ಕಾನೂನಿಗೆ ಶೀಘ್ರದಲ್ಲಿ ರಾಷ್ಟ್ರಪತಿಯಿಂದ ಅಂಕಿತ ಪಡೆದುಕೊಳ್ಳಲು ರಾಜ್ಯ ಸರ್ಕಾರ ಪ್ರಯತ್ನಿಸಬೇಕು ಎಂದು ಹೈ.ಕ. ಹೋರಾಟ ಸಮಿತಿ ಅಧ್ಯಕ್ಷ, ಮಾಜಿ ಸಚಿವ ವೈಜನಾಥ ಪಾಟೀಲ್ ಆಗ್ರಹಿಸಿದ್ದಾರೆ.
ಅವರು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಿರಂತರ ಹೋರಾಟದ ಫಲವಾಗಿ ಕೇಂದ್ರ ಸರ್ಕಾರ ಸಂವಿಧಾನದ 371 (ಜೆ) ವಿಧಿಗೆ ತಿದ್ದುಪಡಿ ತಂದು ಹೈ.ಕ. ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಿದೆ. ಇದಕ್ಕೆ ಸಂಬಂಧಿಸಿದ ನಿಯಮಾವಳಿಗಳನ್ನು ತ್ವರಿತಗತಿಯಲ್ಲಿ ರೂಪಿಸಲಾಗಿದೆ. ಇದೇ ರೀತಿ ಈ ಕಾನೂನಿಗೆ ರಾಷ್ಟ್ರಪತಿಗಳಿಂದ ತ್ವರಿತ ಅಂಕಿತ ಪಡೆಯಲು ರಾಜ್ಯ ಸರ್ಕಾರ ಯತ್ನಿಸಬೇಕು ಎಂದು ಒತ್ತಾಯಿಸಿದರು.
ಅಂಕಿತ ಅಗತ್ಯ: ಆಂಧ್ರ ಪ್ರದೇಶದ ತೆಲಂಗಾಣ ಹಾಗೂ ಮಹಾರಾಷ್ಟ್ರದ ವಿದರ್ಭ ಪ್ರದೇಶಗಳಿಗೆ ವಿಶೇಷ ಸ್ಥಾನಮಾನ ನೀಡಿದ ಎರಡು- ಮೂರು ವರ್ಷಗಳ ನಂತರ ನಿಯಮಾವಳಿಗಳನ್ನು ರೂಪಿಸಿ, ರಾಷ್ಟ್ರಪತಿಯ ಅಂಕಿತ ಪಡೆಯಲಾಗಿದೆ. ಆದರೆ, ರಾಜ್ಯ ಸರ್ಕಾರ ವಿಳಂಬ ಮಾಡದೇ ನಿಯಮಾವಳಿಗಳನ್ನು ರೂಪಿಸಿದೆ. ಅದೇ ರೀತಿ ರಾಷ್ಟ್ರಪತಿಗಳ ಅಂಕಿತಕ್ಕೂ ರಾಜ್ಯ ಹೆಚ್ಚಿನ ಆಸಕ್ತಿ ವಹಿಸಲಿ ಎಂದರು.
ರಾಷ್ಟ್ರಪತಿ ಅಂಕಿತ ಪಡೆಯುವುದಕ್ಕೆ ಯಾವುದೇ ರೀತಿಯಿಂದ ವಿಳಂಬವಾಗಬಾರದು. ವಿಳಂಬವಾದರೆ ಹೈ.ಕ. ಪ್ರದೇಶದ ನಿರುದ್ಯೋಗಿಗಳಿಗೆ ಅನ್ಯಾಯವಾಗಲಿದೆ. ಹೈ ಕ. ಹೋರಾಟ ಸಮಿತಿ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದಿರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಯಶಸ್ವಿಯಾಯಿತು ಎಂದರು.
ಆತಂಕ: ರಾಜ್ಯ ಸರ್ಕಾರವೂ 371 (ಜೆ) ವಿಧಿ ನಿಯಮಾವಳಿ ರೂಪಿಸಿ ಕಾನೂನು ಜಾರಿಯಾದ ನಂತರವೇ ನೇಮಕಾತಿ ಪ್ರಕ್ರಿಯೆ ಆರಂಭಿಸುವ ವಾಗ್ದಾನ ಮಾಡಿದೆ. ಆದರೆ, ಈ ಭಾಗದ ವಯೋವುತಿ ಮೀರುತ್ತಿರುವ ನಿರುದ್ಯೋಗ ಅಭ್ಯರ್ಥಿಗಳು ಸಮಿತಿಗೆ ಸಂಪರ್ಕಿಸಿ, ಕಾನೂನು- ಜಾರಿಯಾಗಲು ವಿಳಂಬವಾದರೆ ನಾವು ಸರ್ಕಾರಿ ಉದ್ಯೋಗದಿಂದ ವಂಚಿತರಾಗಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಯಾವುದೇ ಒಂದು ಕಾನೂನು ಜಾರಿಯಾಗಬೇಕಾದರೆ, ಅಲ್ಪಸ್ವಲ್ಪ ಲೋಪದೋಷಗಳು ಇದ್ದೇ ಇರುತ್ತವೆ. ಅವುಗಳನ್ನು ನಂತರದಲ್ಲಿ ಸರಿಪಡಿಸಲು ಅವಕಾಶಗಳಂತೂ ಇದ್ದೇ ಇರುತ್ತವೆ ಎಂದರು.
ಸಂಪುಟ ಉಪ ಸಮಿತಿ ನೀಡಿರುವ ಶಿಫಾರಸುಗಳಿಂದ ತಮಗೆ ಸಂಪೂರ್ಣ ಸಮಾಧಾನವಾಗಿಲ್ಲ. ಇನ್ನೂ ಅಭಿವೃದ್ಧಿ ಮಂಡಳಿಯ ಬಗ್ಗೆ ನಿರ್ಧಾರವಾಗಬೇಕಾಗಿದೆ. ಈ ಮಂಡಳಿಗೆ ರಾಜ್ಯಪಾಲರು ಇರಬೇಕೆಂಬುವುದು ಹಲವರ ಅಭಿಪ್ರಾಯ. ಇನ್ನೂ ಹಲವರು ಜಿಲ್ಲಾ ಉಸ್ತುವಾರಿ ಮಂತ್ರಿಗಳೇ ಇರಬೇಕೆಂದು ಹೇಳುತ್ತಿದ್ದಾರೆ. ಈ ಕುರಿತು ಸ್ಪಷ್ಟ ತೀರ್ಮಾನವಾಗಬೇಕಾಗಿದೆ ಎಂದು ವೈಜನಾಥ ಪಾಟೀಲ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ ಸಜ್ಜನ್, ಎಂ.ಬಿ. ಅಂಬಲಗಿ, ರಮೇಶ ಹೊಸಮನಿ, ಅಶೋಕ ಗುರೂಜಿ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

