ಗರ್ಭಿಣಿ ಕೊಲೆ ಪಾಪಿಗಳಿಗೆ ಉಗ್ರ ಶಿಕ್ಷೆ ವಿಧಿಸಿ
ಕನ್ನಡಪ್ರಭ ವಾರ್ತೆ ಹುಣಸಗಿ ಆ.9
ಪ್ರೀತಿಸಿ ಮದುವೆಯಾಗಿದ್ದ ಮಗಳ ಬದುಕು ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ದುರುಳರಿಗೆ ಕಾನೂನು ಉಗ್ರ ಶಿಕ್ಷೆ ನೀಡಬೇಕು....
- ಇದು ಮಗಳು ಪಾಪಿಬಾಯಿ ಕಳೆದುಕೊಂಡ ತಂದೆ ತಿಪ್ಪಣ್ಣ ನಾಯಕ ಶೋಕತಪ್ತ ಮನವಿ.
ನಾಲ್ಕು ವರ್ಷಗಳಿಂದ ನನ್ನ ಮಗಳ ಕೊಲೆಗೆ ಮಾಡಲು ಸಂಚು ಹೂಡಿದ್ದರು. ಇದೀಗ ಅವಳ ಅಂತ್ಯವಾಗಿದೆ. ಆರ್ಥಿಕವಾಗಿ ಬಲಾಢ್ಯರಿರುವ ಕುಟುಂಬ ಕಾನೂನಿನ ಕುಣಿಕೆಯಿಂದ ಪಾರಾಗಿ ಬರ್ತಾರಿ, ನಮ್ಮಂಥವರಿಗೆ ಯಾರು ಸಹಾಯ ಮಾಡಬೇಕು? ನನ್ನ ಮಗಳೇನು ವಿದೇಶದಾಗ ಮಡಿದ ಸವಿತಾ ಹಾಲಪ್ಪನವರ ಅಂತಾ, ಅಥವಾ ದೊಡ್ಡ ಸಿಟಿಯಾಗ ಇದ್ದರ ಮಹಿಳಾ ಆಯೋಗ, ಮಂತ್ರಿಗಳು, ಶಾಸಕರು ಯಾರಾದರೂ ಭೇಟಿ ನೀಡ್ತಾರ? ನಮ್ಮಂಥ ದಿಕ್ಕಿಲ್ಲದೆ ಪರದೇಶಿಗಳಿಗೆ ಯಾರು ಸಹಾಯ ಮಾಡಬೇಕು. ಇಂತಹ ದುರುಳರಿಗೆ ಕಾನೂನು ಉಗ್ರ ಶಿಕ್ಷೆ ನೀಡಬೇಕೆಂದು ಮೃತಳ ತಂದೆ ತಿಪ್ಪಣ್ಣ ನಾಯಕ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ಹಿನ್ನೆಲೆ: 4 ವರ್ಷಗಳ ಹಿಂದೆ ಅಮರುನಾಯಕ ಮತ್ತು ಪಾಪಿಬಾಯಿ ಪರಸ್ಪರ ಪ್ರೀತಿಸುತ್ತಿದ್ದರು. ಇದು ಪಾಪಿಬಾಯಿ ಪಾಲಕರಿಗೆ ಗೊತ್ತಾಗಿ, ಗಲಾಟೆ ಮಾಡಿದಾಗ, ಊರವರ ಸಮ್ಮುಖದಲ್ಲಿ ಮಗಳ ಮದುವೆಯನ್ನು ಕೊಡೇಕಲ್ಲ ಬಸವೇಶ್ವರ ದೇವಸ್ಥಾನದಲ್ಲಿ ಮಾಡಲಾಗಿತ್ತು. ಮದುವೆಗೆ ಅಮರುನಾಯಕ ತಕರಾರು ಮಾಡಿದಾಗ, ಹುಣಸಗಿ ಪೊಲೀಸ್ ಠಾಣೆಯಲ್ಲಿ ರಾಜಿ ಪಂಚಾಯ್ತಿ ನಡೆದಿತ್ತು. ನಂತರ ಪಾಪಿಬಾಯಿ ಪಾಲಕರು ಎರಡು ತೊಲ ಬಂಗಾರ, ರು. 30 ಸಾವಿರ ವರದಕ್ಷಿಣೆ, ರು. 70 ಸಾವಿರ ಖರ್ಚು ಮಾಡಿ ಮದುವೆ ಮಾಡಿಕೊಟ್ಟಿದ್ದರು. ಮದುವೆ ನಂತರ ಮಗಳ ಬದುಕು ಸುಖಮಯವಾಗಿ ಸಾಗುವುದು ಎಂದು ಭಾವಿಸಿದ್ದ ಪಾಲಕರಿಗೆ ಇದ್ದ ಊರಲ್ಲಿ ಮಗಳನ್ನು ಕೊಟ್ಟು, ತಮ್ಮ ನೆಮ್ಮದಿಯ ಬದುಕಿನ ಉಡಿಯಲ್ಲಿ ಬೆಂಕಿ ಕಟ್ಟಿಕೊಂಡಂತೆ ಆಯಿತು. ಮದುವೆಯಾಂದಿನಿಂದ ಶುರುವಾಯಿತು ಪಾಪಿಬಾಯಿಗೆ ನಿತ್ಯ ಕಿರುಕುಳ.
ನಿರಂತರ ಕೊಲೆ ಯತ್ನ: ನಾದಿನಿ, ಅತ್ತೆ ಸೋಮಲಾಬಾಯಿ ಪತಿ ಅಮರುನಾಯಕ ಕಿರುಕುಳ ಶುರು ಮಾಡಿದರು. ಈಕೆಯನ್ನು ಹೇಗಾದರೂ ಕೊಲೆ ಮಾಡಿ, ಇನ್ನೊಂದು ಮದುವೆ ಮಾಡುವ ಹವಣಿಕೆಯಲ್ಲಿದ್ದರು. ಇವಳು ಎರಡು ಬಾರಿ ಗರ್ಭವತಿಯಾಗಿದ್ದಳು. ಆದರೆ ಎರಡು ಬಾರಿಯೂ ಗರ್ಭಪಾತ ಮಾಡಿಸಲಾಯಿತು. ಒಮ್ಮೆಯಂತೂ ಹುಣಸಗಿ ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತ ಮಾಡಿಸಲೂ ಹೋಗಿ ಸಾವು ಬದುಕಿನ ಮಧ್ಯ ದೀರ್ಘ ಹೋರಾಟದ ನಂತರ ಉಳಿದದ್ದೇ ಹೆಚ್ಚು ಎನ್ನುವಂತಾಗಿತ್ತು. ಹುಣಸಗಿ ಠಾಣೆಯಲ್ಲಿ ಈ ಕುರಿತು ದೂರು ನೀಡಿದ ಮೃತಳ ತಂದೆ ತಿಪ್ಪಣ್ಣ ನಾಯಕ ಅಳುತ್ತಾ ಹೇಳಿದರು.
ಜಗಳ ವಿಕೋಪಕ್ಕೆ: ಸಾಯುವ ಹಿಂದಿನ ರಾತ್ರಿ ಸನಿಹದಲ್ಲಿಯೇ ಇರುವ ಮಗಳ ಮನೆಗೆ, ಗಲಾಟೆ ಕೇಳಿ ತಿಪ್ಪಣ್ಣ ಮತ್ತು ಹೆಂಡತಿ ಕಮಲಾಬಾಯಿಯೊಂದಿಗೆ ಹೋಗಿದ್ದಾರೆ. ನಡೆಯುತ್ತಿದ್ದ ಗಲಾಟೆ ಬಗ್ಗೆ ಕೇಳಿದಾಗ, ಪಾಪಿಬಾಯಿಗೆ ಅರಾಮ ಇಲ್ಲ. ತೋರಸ್ಗೊಂಡ ಬರೋಣು ಅಂದರ ಒಲ್ಲೆ ಎನ್ನುತ್ತಿದ್ದಾಳೆ ಎಂದು ಅತ್ತೆ ಸೋಮಲಾಬಾಯಿ ದೂರಿದ್ದಾಳೆ. ಆಗ ಮಗಳು ಐದು ತಿಂಗಳು ಬಸುರಿ ಇದ್ದು, ಅಬಾರ್ಷನ್ ಮಾಡುವವರಿದ್ದಾರೆ. ಅದಕ ನಾನು ದವಾಖಾನೆಗೆ ಹೋಗಲು ಒಲ್ಲೆ ಎಂದಿದ್ದಾಳೆ. ಆಗ ಜಗಳ ವಿಕೋಪಕ್ಕೆ ಹೋದಾಗ, ರಾತ್ರಿ ಜಗಳ ಬೇಡಾ ಮುಂಜಾನೆ ಊರದೈವ ಸೇರಿ ಜಗಳ ಬಗೆಹರಿಸೋಣ ಎಂದು ಸ್ವಾಂತಾನ ಹೇಳಿದ್ದಾರೆ. ನಂತರ ಬೆಳಗಿನ ಮುಂಜಾನೆ ಆರು ಗಂಟೆಗೆ ನಿನ್ನ ಮಗಳಿಗೆ ಅರಾಮ ಇಲ್ಲ ಎಂದು ಕರೆಯಲು ಬಂದಿದ್ದಾರೆ.
ಎಲ್ಲಾ ಮುಗಿದು ಹೊಯ್ತು: ಆಗ ಹೋಗಿ ನೋಡಲು ಹೋದಾಗ ಹುಣಸಗಿ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋದಾಗ ದಾರಿಯಲ್ಲೇ ಮೃತಪಟ್ಟಳು ಎಂದು ಹೇಳಲಾಗಿದೆ. ಇದರಿಂದ ತಿಪ್ಪಣ್ಣ ನಾಯಕ ದಿಗ್ಭ್ರಮೆಗೆ ಒಳಗಾಗಿದ್ದಾರೆ. ನ್ಯಾಯ ಕೋರಿ ಪೊಲೀಸ್ ಠಾಣೆ ಮೆಟ್ಟಲೇರಿದ್ದಾರೆ.
ಶಾಸಕರ ಸಾಂತ್ವನ: ಪಾಪಿಬಾಯಿ ತಂದೆ ತಿಪ್ಪಣ್ಣ ನಾಯಕರನ್ನು ಶಾಸಕ ರಾಜ ವೆಂಕಟಪ್ಪ ನಾಯಕ ಭೇಟಿ ಮಾಡಿ ಸಾಂತ್ವನ ಹೇಳಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಇರುತ್ತದೆ. ಪಾಪಿಬಾಯಿಯ ಕೊಲೆ ಮಾಡಿದವರು ಪ್ರಭಾವಿಗಳೇ ಆದರೂ, ಕಾನೂನು ಶಿಕ್ಷೆ ನೀಡಲಿದೆ ಎಂದು ತಿಳಿಸಿದ್ದಾರೆ.
ಈಗಾಗಲೇ ತಹಸೀಲ್ದಾರ್ ಗೌಸುದ್ದೀನ್, ಯಾದಗಿರಿ ಡಿವೈಎಸ್ಪಿ, ಹುಣಸಗಿ ಸಿಪಿಐ ಎಲ್ಲಾ ರೀತಿಯ ಮಾಹಿತಿ ಸಂಗ್ರಹಿಸಿ ತಪ್ಪಿತಸ್ಥರನ್ನು ಬಂಧಿಸಲಾಗಿದೆ, ತನಿಖೆ ಜಾರಿಯಲ್ಲಿದೆ ಎಂದು ತನಿಖಾಧಿಕಾರಿ ಹಾಗೂ ಹುಣಸಗಿ ಠಾಣೆಯ ಪಿಎಸ್ಐ ವೀರಣ್ಣ ಹಳ್ಳಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

