ಗುಲ್ಬರ್ಗಾ

ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಹೋರಾಟ ಹಿಂದಕ್ಕೆ

Published On :

ಕನ್ನಡಪ್ರಭ ವಾರ್ತೆ , ಗುಲ್ಬರ್ಗ , ಆ.10
ಸಂವಿಧಾನದ 371ನೇ (ಜೆ) ವಿಧಿ ತಿದ್ದುಪಡಿ ಅಡಿಯಲ್ಲಿ ನೇಮಕಾತಿ ಮತ್ತು ಶಿಕ್ಷಣ ರಂಗದಲ್ಲಿ ಹೈ.ಕ. ಪ್ರದೇಶಕ್ಕೆ ಮೀಸಲಾತಿ ಪ್ರಮಾಣದ ಬಗ್ಗೆ ಪುನರ್ ಪರಿಶೀಲಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಆ. 15ರ ಸ್ವಾತಂತ್ರ್ಯ ದಿನದಂದು ಪ್ರತ್ಯೇಕ ರಾಜ್ಯದ ಧ್ವಜಾರೋಹಣ ಮಾಡುವ ಹೋರಾಟ ಕೈ ಬಿಡಲಾಗಿದೆ ಎಂದು ಹೈ.ಕ. ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಅಧ್ಯಕ್ಷ ಲಕ್ಷ್ಮಣ ದಸ್ತಿ ತಿಳಿಸಿದ್ದಾರೆ.
ಆಶ್ವಾಸನೆ: ಅವರು ಶನಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜಧಾನಿ ಬೆಂಗಳೂರು ಸೇರಿದಂತೆ ಇತರೆ  ವಿಭಾಗಗಳಲ್ಲಿ ಲಭ್ಯವಿರುವ ಹುದ್ದೆಗಳಲ್ಲಿ ಶೇ. 8ರಷ್ಟು ಮೀಸಲಾತಿ ನೀಡಿರುವುದು ಸಮಿತಿ ವಿರೋಧ ವ್ಯಕ್ತಪಡಿಸಿ, ಈಚೆಗೆ ನಿಯೋಗ ಬೆಂಗಳೂರಿಗೆ ತೆರಳಿ ಸಿಎಂ ಅವರಿಗೆ ಮನವರಿಕೆ ಮಾಡಿದಾಗ ಅವರು ಪುನರ್ ಪರಿಶೀಲನೆ ನಡೆಸಿ, ಹೆಚ್ಚಿನ ಪ್ರಮಾಣದಲ್ಲಿ ಮೀಸಲಾತಿ ಕಲ್ಪಿಸುವ ಕುರಿತು ಆಶ್ವಾಸನೆ ನೀಡಿದ್ದಾರೆ ಎಂದರು.
ಸರ್ಕಾರದ ನೇಮಕಾತಿಗಳಲ್ಲಿ ಹೈ.ಕ. ಪ್ರದೇಶದ ಆರು ಜಿಲ್ಲೆಗಳಲ್ಲಿ ಎ ಮತ್ತು ಬಿ ದರ್ಜೆಯ ಹುದ್ದೆಗಳಿಗೆ ಶೇ. 75ರಷ್ಟು, ಸಿ ಹುದ್ದೆಗಳಲ್ಲಿ ಶೇ. 80ರಷ್ಟು ಮತ್ತು ಡಿ ಗ್ರೂಪ್ ಹುದ್ದೆಗಳು ಶೇ. 85ರಷ್ಟು ಮತ್ತು ಶಿಕ್ಷಣದಲ್ಲಿ ಶೇ. 70 ರಷ್ಟು ಮೀಸಲಾತಿ ಕಲ್ಪಿಸಿರುವುದು ಸ್ವಾಗತಾರ್ಹ. ಆದರೆ, ಹೈ.ಕ. ಹೊರತುಪಡಿಸಿ ರಾಜ್ಯದ ಬೇರೆ ಭಾಗಗಳ ಹುದ್ದೆಗಳಲ್ಲಿ ಕೇವಲ 8ರಷ್ಟು ಮಾತ್ರ ಮೀಸಲಾತಿ ನಿಗದಿ ಮಾಡಿರುವುದು ಅನ್ಯಾಯವಾಗಿದೆ ಎಂದು ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು ಎಂದರು.
ಯಥಾವತ್ ಮಂಡನೆ: ಸಿದ್ದರಾಮಯ್ಯ ನಿಯೋಗದ ಮನವಿ ಪತ್ರ ಸ್ವೀಕರಿಸಿ, ಹೈ.ಕ. ಪ್ರದೇಶದ ಸಚಿವರನ್ನೊಳಗೊಂಡ ಎಚ್.ಕೆ. ಪಾಟೀಲ್ ಅವರ ನೇತೃತ್ವದ ಉಪ ಸಮಿತಿ ನೀಡಿರುವ 371ನೇ (ಜೆ) ವಿಧಿ ತಿದ್ದುಪಡಿ ನಿಯಮಗಳಲ್ಲಿ ತಾವು ಒಂದು ಶಬ್ದ ಮತ್ತು ಒಂದು ಅಂಕಿಯೂ ಸಹ ಹೆಚ್ಚು ಕಡಿಮೆ ಮಾಡಲಾರದೆ ಯಥಾವತ್ತಾಗಿ ಸದನದಲ್ಲಿ ಮಂಡಿಸಿದ್ದೇನೆ. ಇದರಲ್ಲಿ ನನ್ನ ಯಾವ ಹಸ್ತಕ್ಷೇಪವೂ ಇಲ್ಲ. ಅದರಂತೆ ಸಂಪುಟ ಸಭೆಯಲ್ಲಿ ಈ ವರದಿಯ ಬಗ್ಗೆ ಹೈ.ಕ. ಪ್ರದೇಶದ ಎಲ್ಲ ಸಚಿವರು ಯಾವ ತಕರಾರೂ ಎತ್ತಿರುವುದಿಲ್ಲ. ಎಲ್ಲರ ಸಹಮತಿಯಂತೆ ಸಂಪುಟದಲ್ಲಿ ಮಂಡಿಸಿ ಸದನದಲ್ಲಿ ಪ್ರಕಟಿಸಿರುವುದಾಗಿ ತಿಳಿಸಿದರು.
ಆದರೂ ಸಹ ಇಂತಹ ತಾರತಮ್ಯಗಳ ಬಗ್ಗೆ ದೂರುಗಳನ್ನು ನಿವಾರಿಸಲು ಆಗಾಗ ನಿಯಮಗಳನ್ನು ಸರಿಪಡಿಸಲು ಅವಕಾಶ ಕಲ್ಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ನೇಮಕಾತಿಗಳಲ್ಲಿ ಮತ್ತು ಶಿಕ್ಷಣದಲ್ಲಿ ಹೈ.ಕ. ಪ್ರದೇಶದ ಜನಸಂಖ್ಯೆಗೆ ಅನುಗುಣವಾಗಿ ಹುದ್ದೆಗಳ ಪ್ರಮಾಣವನ್ನು ಗಮನದಲ್ಲಿಟ್ಟುಕೊಂಡು ಪುನರ್ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ದಸ್ತಿ ಹೇಳಿದರು.
ಸಿಎಂ ಭರವಸೆ ಮೇರೆಗೆ ಆ. 15ರಂದು ಪ್ರತ್ಯೇಕ ರಾಜ್ಯದ ದ್ವಜಾರೋಹಣ ನಡೆಸಲು ನಿರ್ಧರಿಸಿರುವ ಹೋರಾಟವನ್ನು ಸದ್ಯಕ್ಕೆ ಕೈಬಿಡಲಾಗಿದೆ. ಸುದ್ದಿಗೋಷ್ಠಿಯಲ್ಲಿ ನಾಗಲಿಂಗಯ್ಯ ಮಠಪತಿ, ಕಲ್ಯಾಣರಾವ ಪಾಟೀಲ್, ಗೋಪಾಲ್ ನಾಟಿಕರ್, ಧರ್ಮಸಿಂಗ್ ತಿವಾರಿ, ವಿಶಾಲದೇವ, ಶಿವಲಿಂಗಪ್ಪ ಬಂಡಕ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.