ದುಶ್ಚಟದಿಂದ ದೂರವಾಗುವುದಕ್ಕೆ ಶಪಥ
ಗುಲ್ಬರ್ಗ/ಶಹಾಬಾದ್: ಶಹಾಬಾದ್ ಬಳಿಯ ನಾಲವಾರ ಗ್ರಾಮದ ಅಟೋ ಚಾಲಕರು ಮತ್ತು ಕೋಲಿ ಸಮಾಜದ ಯುವಕರು ನಿಜ ಶರಣ ಅಂಬಿಗರ ಚೌಡಯ್ಯ ಭಾವಚಿತ್ರದ ಮುಂದೆ ಇನ್ನು ಮುಂದೆ ದುಶ್ಚಟಗಳಿಂದ ದೂರವಾಗಿ, ಸಾಮಾಜದಲ್ಲಿ ಉತ್ತಮ ಯುವಕರರಾಗಿ ಬಾಳುವುದಾಗಿ ಶಪಥಗೈದರು.
ಗ್ರಾಮದ ಸುಮಾರು 15 ರಿಂದ 20 ಜನ ಯುವಕರು ಶ್ರಾವಣ ಮಾಸದ ನಿಮಿತ್ತ ಚೌಡಯ್ಯ ವೃತ್ತದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಇಂದಿನಿಂದ ಎಲ್ಲ ದುಶ್ಚಟಗಳನ್ನು ಬಿಟ್ಟು, ಸಮಾಜದಲ್ಲಿ ಉತ್ತಮ ಯುವಕರಾಗಿ, ಪ್ರೀತಿ, ಸಹ ಬಾಳ್ವೆಯಿಂದ ಬಾಳುತ್ತ, ಕಾಯಕ ನಿಷ್ಠರಾಗಿ ಚೌಡಯ್ಯ ಸಮಾಜಕ್ಕೆ ತೋರಿಸಿದ ಮಾರ್ಗದಲ್ಲಿ ನಡೆದು, ಉತ್ತಮ ನಾಗರಿಕರು ಎಂದೆನಿಸಿಕೊಳ್ಳುವುದಾಗಿ ಯುವಕರು ಸಾಮೂಹಿಕ ಶಪಥ ಗೈದರು.
ಈ ಸಂದರ್ಭದಲ್ಲಿ ಸಮಾಜದ ಯುವ ಮುಖಂಡರಾದ ಸಂತೋಷ ಮಳಬಾ, ರಾಜಮಲ್ಲು, ಸಿದ್ದು ವಾಲೀಕಾರ್ ಇತರರು ಪಾಲ್ಗೊಂಡಿದ್ದರು.
ಬೆಳಮಗಿ ಪಕ್ಷದ ಕಡೆ ಗಮನ ಹರಿಸಲಿ
ಗುಲ್ಬರ್ಗ: ಕೇಂದ್ರ ರೇಲ್ವೆ ಖಾತೆ ಸಚಿವ ಡಾ. ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಮಾಜಿ ಸಚಿವ ರೇವುನಾಯಕ ಬೆಳಮಗಿ ಇಲ್ಲ ಸಲ್ಲದ ಹೇಳಿಕೆ ನೀಡುತ್ತ, ಜನರ ದಿಕ್ಕು ತಪ್ಪಿಸುತ್ತಿರುವುದನ್ನು ಬಿಟ್ಟು ತಮ್ಮ ಪಕ್ಷದ ಸಂಘಟನೆಯಲ್ಲಿ ತೊಡಗುವುದು ಸೂಕ್ತ ಎಂದು ಬಹುಜನ ಸಂಘರ್ಷ ಸಮಿತಿ ರಾಜ್ಯಾಧ್ಯಕ್ಷ ಅಯ್ಯಣ್ಣ ಹಾಲಭಾವಿ ಮತ್ತು ಜಿಲ್ಲಾ ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ರಮೇಶ ಮರಗೋಳ, ಜಿಪಂ ಸದಸ್ಯ ಗುರುಲಿಂಗಪ್ಪಗೌಡ ಆಂದೋಲಾ, ಕಾಂಗ್ರೆಸ್ ಮುಖಂಡ ಪವನಕುಮಾರ ವಳಕೇರಿ ಕಿವಿಮಾತು ಹೇಳಿದ್ದಾರೆ. ಈಗಾಗಲೇ ಬೆಳಮಗಿ ಅವರಿಗೆ ವಿಧಾನಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರು ತಕ್ಕ ಪಾಠ ಕಲಿಸಿದ್ದಾರೆ. ನಾಲ್ಕು ಬಾರಿ ಶಾಸಕರಾಗಿ, ಎರಡು ಅವಧಿಗೆ ಸಚಿವರಾಗಿ, ತಮ್ಮ ಕ್ಷೇತ್ರದ ಜನರಿಗೆ ಯಾವುದೇ ಕೊಡುಗೆ ನೀಡಿಲ್ಲ. 20 ವರ್ಷಗಳ ಕಾಲ ಶಾಸಕರಾಗಿ, ಸಚಿವರಾಗಿ ಅಧಿಕಾರ ಅನುಭವಿಸಿ ಅಭಿವೃದ್ಧಿ ಮಾತ್ರ ಶೂನ್ಯ ಆಗಿರುವುದು ಇಡೀ ಕ್ಷೇತ್ರದ ಜನತೆಗೆ ಗೊತ್ತಿದೆ ಎಂದು ತಿಳಿಸಿದ್ದಾರೆ. ಖರ್ಗೆ ಕೈಗೊಳ್ಳುತ್ತಿರುವ ರೇಲ್ವೆ ಯೋಜನೆಗಳು, ಕಾರ್ಯಕ್ರಮಗಳ ಕುರಿತ ಪಕ್ಷದ ಪ್ರಣಾಳಿಕೆಯ ಪ್ರಚಾರ ಎಂದು ಟೀಕಿಸಲು ಬೆಳಮಗಿಗೆ ನೈತಿಕ ಹಕ್ಕಿಲ್ಲ. ಗುಲ್ಬರ್ಗ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳಾಗಲಿ ಎಂಬುವುದು ಖರ್ಗೆ ಪ್ರಮುಖ ಉದ್ದೇಶ ಎಂದು ತಿಳಿಸಿದ್ದಾರೆ.
ಯಾತ್ರೆ ಗುಲ್ಬರ್ಗಕ್ಕೆ
ಗುಲ್ಬರ್ಗ: ರಾಷ್ಟ್ರವನ್ನು ಸಶಕ್ತ, ಸಮರ್ಥ, ಶಾಂತ ಮತ್ತು ಸಮೃದ್ಧ ಮಾಡಲು ಬೆಂಗಳೂರಿನ ಗಾಯತ್ರಿ ಅಶ್ವವೇಧ ಮಹಾಯಜ್ಞವು ನಡೆಸುವ ಶಕ್ತಿ ಕಳಸ ತೀರ್ಥ ಯಾತ್ರೆಯು ಆ.14ರಂದು ಗುಲ್ಬರ್ಗಕ್ಕೆ ಆಗಮಿಸಲಿದೆ. ಕಳೆದ ಜನವರಿ 17ರಂದು ಬೆಂಗಳೂರಿನ ಪ್ಯಾಲೆಸ್ ಮೈದಾನದಿಂದ ಆರಂಭಗೊಂಡಿರುವ ಈ ಯಾತ್ರೆ ಸೌಭಾಗ್ಯದಿಂದ ಆ.14 ರಂದು ಗುಲ್ಬರ್ಗ ನಗರಕ್ಕೆ ಬರಲಿದೆ. ಇದರ ಸಾಮೂಹಿಕ ಪೂಜೆ ಮತ್ತು ಜಪ ಕಾರ್ಯಕ್ರಮ ಸಂಜೆ 5.30ಕ್ಕೆ ನಗರದ ಜಿಲ್ಲಾ ವಿಜ್ಞಾನ ಕೇಂದ್ರದ ಬಳಿಯಲ್ಲಿರುವ ಯಲ್ಲಮ್ಮ ದೇವಾಲಯದಲ್ಲಿ ಆಯೋಜಿಸಲಾಗಿದೆ. ಗಾಯತ್ರಿ ಮಂತ್ರ ಬರೆಯುವ ಲೇಖನ ಪುಸ್ತಕ ಹಂಚಲಾಗುವುದು ಮತ್ತು ಸಹಾಯಜ್ಞಕ್ಕಾಗಿ ಭಾಗವಹಿಸಲು ದಂಪತಿ ಸಂಕಲ್ಪವನ್ನು ಮಾಡಲಾಗುವುದು. ವಿವರಕ್ಕೆ ರಮೇಶ ಜೋಶಿ 9448038949, ವಿದ್ಯಾಕುಮಾರ್ ತಿವಾರಿ 9880306797, ಅಶೋಕ ನರಿಬೋಳಿಕಾರ್ 94481 81115, ಮಲ್ಲಿಕಾರ್ಜುನ ಮೈಲಾಪುರ್ 98453 52551, ಪುರುಷೋತ್ತಮ ಮಾಲು 94484 00400ಗೆ ಸಂಪರ್ಕಿಸಲು ಕೋರಲಾಗಿದೆ.
ಸಭೆ ಇಂದು
ಗುಲ್ಬರ್ಗ: ಶರಣ ಹರಳಯ್ಯ ವಿವಿಧೋದ್ದೇಶ ಜಿಲ್ಲಾ ಸಮಾಜ ಸೇವಾ ಸಂಘದ ಸಭೆಯು ಆ.13ರಂದು ಸಂಘದ ನಗರ ಅಧ್ಯಕ್ಷ ಸೂರ್ಯಕಾಂತ ಚೌದ್ರಿ ಅವರ ಮನೆಯಲ್ಲಿ ನಡೆಯಲಿದೆ. ಈ ಸಭೆಗೆ ರಾಜ್ಯಾಧ್ಯಕ್ಷ ಜಗದೀಶ ಬೆಟಗೇರಿ ಮತ್ತು ದಾನಪ್ಪ ಕಟ್ಟಿಮನಿ ಆಗಮಿಸಿ ಹಲವು ವಿಷಯಗಳನ್ನು ಮತ್ತು ಸಲಹೆ, ಸೂಚನೆಗಳನ್ನು ನೀಡಲಿದ್ದಾರೆ. ಸಮಾಜದ ಗಣ್ಯರು, ಸಂಘದ ಪದಾಧಿಕಾರಿಗಳು, ಸದಸ್ಯರು ಸಭೆಗೆ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಮಹಾಂತೇಶ ಗೌಳಿ ಕೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

