ಗುಲ್ಬರ್ಗಾ

ಖಮರುಲ್ ಖನ್ನಡಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕರು

Published On :

ಕ.ಪ್ರ.ವಾರ್ತೆ   ಗುಲ್ಬರ್ಗ   ಆ. 15
1) ಅ... ಆದ...
(ಅಭಿಮಾನದಿಂದ ನೆನಪಿಸಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯ)
2) ರಾ... ಗಾಂಧಿ...
(ರಾಷ್ಟ್ರಪಿತ ಮಹಾತ್ಮಾ ಗಾಂಧಿ)
3) ಬ್ರಿ... ಛಿ... ತು...
(ಬ್ರಿಟಿಷರು ಕಟ್ಟಿದ್ದ ಸೂರ್ಯ ಮುಳುಗದ ಸಾಮ್ರಾಜ್ಯವನ್ನು ಮಹಾತ್ಮಾ ಗಾಂಧೀಜಿಯವರ ಅಹಿಂಸಾ ಹೋರಾಟ ಛಿದ್ರ ಮಾಡಿತು)
ಸಂಕ್ಷಿಪ್ತ ವಾಕ್ಯಗಳು, ಕಂಸದಲ್ಲಿರುವ ವಿವರಣಾತ್ಮಕ ವಾಕ್ಯಗಳನ್ನು ಕಂಡವರು ಇದು ಶಾರ್ಟ್‌ಹ್ಯಾಂಡ್... ಇರಬೇಕು ಅಂದುಕೊಳ್ಳಬಹುದು. ಆದರಿದು ಯಾವುದೇ ಶಾರ್ಟ್‌ಹ್ಯಾಂಡ್, ಸ್ಟೆನೋಗ್ರಫಿ ಅಲ್ಲ. ಇದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ರಾಜ್ಯದ ಪೌರಾಡಳಿತ ಮಂತ್ರಿ ಖಮರುಲ್ ಇಸ್ಲಾಂ ಅವರು ಜಿಲ್ಲಾಡಳಿತ ಆಯೋಜಿಸಿದ್ದ ದೇಶದ 67ನೇ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಧ್ವಜಾರೋಹಣ ನಡೆಸಿ ಆಡಿದ ಕನ್ನಡ ನುಡಿಮುತ್ತುಗಳು.
ಸಚಿವ ಇಸ್ಲಾಂ ಕನ್ನಡದಲ್ಲಿ ಮಾತನಾಡಲು ಹೋದಾಗ ಸರಣಿ ಯಡವಟ್ಟುಗಳು ಸಂಭವಿಸಿದವು. ಸಚಿವರ ಭಾಷಣವೇ ಸಾರ್ವಜನಿಕರ ನಗೆಪಾಟಲಿಗೆ ಗುರಿಯಾಯ್ತು.
ಮ್ಯಾರಥಾನ್ ಭಾಷಣ: ಅದ್ಯಾಕೋ ಏನೋ, ಕನ್ನಡ ಸಮಾರಂಭಗಳಲ್ಲಿಯೂ ಇಂಗ್ಲಿಷ್, ಉರ್ದು, ಹಿಂದಿ ಭಾಷೆಯಲ್ಲಿ ಮಾತನಾಡುವ ಸಚಿವರು, ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಕನ್ನಡದಲ್ಲೇ ಮಾತನಾಡಬೇಕು ಎಂದು ಸಂಕಲ್ಪಿಸಿದ್ದಂತಿತ್ತು. ಕನ್ನಡ ಮಾತುಗಳನ್ನೇ ಆಂಗ್ಲ ವರ್ಣಮಾಲೆಯಲ್ಲಿ ಟೈಪ್ ಮಾಡಿಸಿಕೊಂಡು ಜೊತೆಯಲ್ಲಿ ತಂದಿದ್ದರು.
ಇಂತಹ 8 ಪುಟಗಳೊಂದಿಗೆ ಬಂದಿದ್ದ ಸಚಿವರು, ಮೈಕ್ ಮುಂದೆ ನಿಂತವರೇ ಸುಗಮವಾಗಿ ಓದಲಾಗದೆ ತಡವರಿಸಲಾರಂಭಿಸಿದರು. ಕನ್ನಡ ಮಾತುಗಳನ್ನು ಹೇಳಲಾಗದೆ ಸಚಿವರು ತಡವರಿಸುವುದು ಸಮಯ ಕಳೆದಂತೆ ಹೆಚ್ಚಾಗುತ್ತ ಹೋಯ್ತು. ಎರಡು- ಮೂರು ಶಬ್ದಗಳಿರುವ ವಾಕ್ಯಗಳನ್ನೂ ಸಹ ಸುಲಭದಲ್ಲಿ ಹೇಳಲಾಗದೆ ತಡವರಿಸಿದರು.
ಇದು ಮೈದಾನದಲ್ಲಿ ಸೇರಿದ್ದ ಸಾವಿರಾರು ಶಾಲಾ ಮಕ್ಕಳಿಗೆ ನಗೆಹಬ್ಬದ ಪ್ರಸಂಗವಾಗಿ ಗೋಚರಿಸಿತು.
ಆದರೆ ಕನ್ನಡದಲ್ಲೇ ಮಾತನಾಡಿ ಮುಗಿಸಬೇಕು ಎಂದು ಅದೆಷ್ಟೆ ಕಷ್ಟವಾದರೂ ಸಚಿವ ಇಸ್ಲಾಂ ಕನ್ನಡದಲ್ಲೇ ಸ್ವಾತಂತ್ರ್ಯೋತ್ಸವ ಮಾತುಗಳನ್ನು ಆಡಿದ್ದು ಗಮನಾರ್ಹವಾಗಿತ್ತು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.