ಗುಲ್ಬರ್ಗಾ

ಏಕಬೋಟೆ ಅಮಾನತು ಮಾಡದಿದ್ರೆ ಹೋರಾಟ: ಜೈಕರವೇ

Published On :

ಕನ್ನಡಪ್ರಭ ವಾರ್ತೆ ,  ಗುಲ್ಬರ್ಗ ,  ಆ.16
ಪರೀಕ್ಷಾ ಅವ್ಯವಹಾರ ಮತ್ತು ಅನೇಕ ವಿದ್ಯಾರ್ಥಿಗಳ ಪಿಎಚ್.ಡಿ ನೋಂದಣಿ ರದ್ದುಗೊಳಿಸಿರುವ ಗುಲ್ಬರ್ಗ ವಿಶ್ವವಿದ್ಯಾಲಯದ ಶಿಕ್ಷಣ ವಿಭಾಗದ ಪ್ರಾಧ್ಯಾಪಕ ಡಾ. ಇ.ಆರ್. ಏಕಬೋಟೆ ಅವರನ್ನು 15 ದಿನದೊಳಗೆ ಅಮಾನತುಗೊಳಿಸದಿದ್ದರೆ ವಿವಿಧ ಹಂತದ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಜೈಕರವೇ ಸಂಸ್ಥಾಪಕ ಅಧ್ಯಕ್ಷ ಅರುಣಕುಮಾರ್ ಪಾಟೀಲ್ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಲವಾರು ಆರೋಪಗಳನ್ನು ಎದುರಿಸುತ್ತಿರುವ ಏಕಬೋಟೆ ಅವರನ್ನು ಕೂಡಲೇ ಅಮಾನತುಗೊಳಿಸುವಂತೆ ಒತ್ತಾಯಿಸಿ ಈಗಾಗಲೇ ರಾಜ್ಯಪಾಲರಿಗೆ ದೂರು ಸಲ್ಲಿಸಲಾಗಿದೆ ಎಂದರು.
ಧರಣಿ ಎಚ್ಚರಿಕೆ: ಒಂದು ವೇಳೆ 15 ದಿನದೊಳಗಾಗಿ ಅವರನ್ನು ಅಮಾನತುಗೊಳಿಸದಿದ್ದರೆ ಮೊದಲ ಹಂತವಾಗಿ ಎಲ್ಲ ತಾಲೂಕು, ಜಿಲ್ಲೆಗಳಲ್ಲಿ ಪ್ರತಿಭಟನೆ, ಎರಡನೇ ಹಂತವಾಗಿ ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಮುತ್ತಿಗೆ ಹಾಕಲಾಗುವುದು. ಮೂರನೇ ಹಂತವಾಗಿ ರಾಜ್ಯಪಾಲರ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಪಿಎಚ್.ಡಿ ನಿಯಮಾವಳಿ ಅಡಿಯಲ್ಲಿ ಪಿಎಚ್.ಡಿ ಕೋರ್ಸಿನ ಅರ್ಹತೆವಿದ್ದರೂ ಪ್ರವೇಶ ನೀಡಲು ಕುಲಪತಿ ಕೂಡ ಶಿಫಾರಸು ಮಾಡಿದ್ದರು ಮತ್ತು ಮಾರ್ಗದರ್ಶಕರು ಒಪ್ಪಿಗೆ ಪತ್ರ ನೀಡಿದ್ದರೂ ಏಕಬೋಟೆ ಅವರು ಪಿಎಚ್.ಡಿ ಪ್ರವೇಶ ಕೊಟ್ಟಿಲ್ಲ ಎಂದು ಪಿಎಚ್.ಡಿ ಪ್ರವೇಶದಿಂದ ವಂಚಿತಗೊಂಡ ಶಿವಾನಂದ ಕವಡಿಮಠ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ವಂಚನೆ: ಪ್ರಸ್ತುತ ವರ್ಷದ ಶಿಕ್ಷಣ ವಿಭಾಗದಲ್ಲಿ ಪಿಎಚ್.ಡಿ ಪ್ರವೇಶ ಪರೀಕ್ಷೆಯಲ್ಲಿ ಸುಮಾರು 52 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಅದರಲ್ಲಿ ಒಬ್ಬ ವಿದ್ಯಾರ್ಥಿಯೂ ಕೂಡ ಪಿಎಚ್.ಡಿ ಮತ್ತು ಎಂ.ಫಿಲ್ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಅರ್ಹತೆ ನೀಡಿಲ್ಲ. ಇದರಿಂದ ಸುಮಾರು ವಿದ್ಯಾರ್ಥಿಗಳಿಗೆ ಪ್ರವೇಶದಿಂದ ವಂಚಿಸಲಾಗಿದೆ ಎಂದು ಕವಡಿಮಠ ತಿಳಿಸಿದರು.
ಹಠಮಾರಿ ಏಕಬೋಟೆ: ಕರ್ನಾಟಕ ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳ ಶಿಕ್ಷಣ ವಿಭಾಗದಲ್ಲಿ ಪಿಎಚ್.ಡಿ ಮತ್ತು ಎಂ.ಫಿಲ್ ಕೋರ್ಸ್‌ಗಳನ್ನು ಕನ್ನಡ ಮಾಧ್ಯಮದಲ್ಲಿ ಮಾಡುವ ಅವಕಾಶವಿದೆ. ಆದರೆ, ಗುಲ್ಬರ್ಗ ವಿಶ್ವವಿದ್ಯಾಲಯದ ಎಲ್ಲ ವಿಷಯಗಳಲ್ಲಿ(ವಿಜ್ಞಾನ ವಿಷಯ ಹೊರತುಪಡಿಸಿ) ಪಿಎಚ್.ಡಿ, ಎಂ.ಫಿಲ್ ಕೋರ್ಸ್ ಕನ್ನಡ ಮಾಧ್ಯಮದಲ್ಲಿ ಮಾಡಿಕೊಡಲು 2009ರಿಂದಲೇ ಅವಕಾಶ ಕಲ್ಪಿಸಲಾಗಿದೆ. ಆದರೆ, ಶಿಕ್ಷಣ ವಿಷಯದಲ್ಲಿ ಮಾತ್ರ ಡಾ. ಏಕಬೋಟೆ ಹಠಮಾರಿತನದಿಂದ ಈವರೆಗೂ ಪಿಎಚ್.ಡಿ ಕೋರ್ಸ್‌ಗಳಿಗೆ ಶಿಕ್ಷಣ ವಿಭಾಗದಲ್ಲಿ ಕನ್ನಡ ಮಾಧ್ಯಮದಲ್ಲಿ ಮಾಡಲು ಅವಕಾಶ ಕಲ್ಪಿಸಿಲ್ಲ. ಇದರಿಂದ ಹೈ-ಕ ವಿದ್ಯಾರ್ಥಿಗಳಿಗೆ ತುಂಬಲಾರದ ನಷ್ಟವಾಗಿದೆ ಎಂದರು.
ಹಲವಾರು ಅಪರಾಧ, ಆಪಾದನೆಯ ಹಿನ್ನೆಲೆಯಲ್ಲಿ ಡಾ. ಏಕಬೋಟೆ ಅವರು ತಮ್ಮ ಸೇವೆಯಲ್ಲಿ ಮುಂದುವರೆಯಲು ಯಾವುದೇ ನೈತಿಕ ಹಕ್ಕು, ವೃತ್ತಿಪರ ನೀತಿ ಸಂಹಿತೆಗಳು, ನಿಯಮಗಳು ಮತ್ತು ಕಾನೂನಿನ ದೃಷ್ಟಿಯಿಂದಲೂ ಅರ್ಹತೆ ಹೊಂದಿರುವುದಿಲ್ಲ. ಕೂಡಲೇ ಅವರ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಅರುಣಕುಮಾರ್ ಪಾಟೀಲ್ ರಾಜ್ಯಪಾಲರಿಗೆ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಗನ್ನಾಥ ಪಟ್ಟಣಶೆಟ್ಟಿ, ಮಂಜುನಾಥ ಹಾಗರಗಿ, ಮಂಜುನಾಥ ಹಾಗರಗಿ, ಶ್ರೀಕಾಂತ ಆಲೂರ್ ಇದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.