ಸಲಗರ ಹಾಸ್ಟೆಲ್ ಅವ್ಯವಸ್ಥೆ: ಶಾಸಕ ರಾಮಕೃಷ್ಣ ಗರಂ
ಕ.ಪ್ರ.ವಾರ್ತೆ, ಆಳಂದ, ಆ.19
'ಇವು ನಿಮ್ಮ ಮಕ್ಕಳ ತರಹವೇ ನೋಡಿಕೊಳ್ಳಬೇಕ್ರಿ. ಬೇಕಾ ಬಿಟ್ಟಿ ಅಂದ್ರೆ ಹ್ಯಾಂಗ...'
ತಾಲೂಕಿನ ವಿ.ಕೆ.ಸಲಗರ ಬಿಸಿಎಂ ವಸತಿ ನಿಲಯದ ಅವ್ಯವಸ್ಥೆ ಬಗ್ಗೆ ವಿದ್ಯಾರ್ಥಿಗಳ ಅಹವಾಲು ಆಲಿಸಿದ ಶಾಸಕ ಜಿ.ರಾಮಕೃಷ್ಣ ಅವರು ಹಾಸ್ಟೆಲ್ ಮೇಲ್ವಿಚಾರಕ ಹಾಗೂ ಅಧಿಕಾರಿಗಳನ್ನು ತರಾಟೆ ತೆಗೆದುಕೊಂಡ ಪರಿಯಿದು.
ವಸತಿ ನಿಲಯ ಕಟ್ಟಡ ಹಳೆಯದಾಗಿದೆ. ಬಾಗಿಲು ಕಿಡಕಿ ಸರಿಯಾಗಿಲ್ಲ. ಕುಡಿಯುವ ನೀರು ಸಿಗುತ್ತಿಲ್ಲ. ವಿದ್ಯುತ್ ಇಲ್ಲ. ಪ್ಯಾನ್, ಮಲಗಲು ಮಂಚಗಳು ಇಲ್ಲ. ನಿತ್ಯಾ ಇಲ್ಲಿನ ಮಕ್ಕಳಿಗೆ ತಿಳಿಸಾರು ಅನ್ನ, ರೊಟ್ಟಿ ಪಲ್ಯ ಕೊಡುತ್ತಾರ. ಸಿಹಿ ತಿಂಡಿ ಗೊತ್ತೇ ಇಲ್ಲ. ಟ್ಯೂಶನ್ ಹೇಳುವವರು ಇಲ್ಲ. ಮೂರು ಪತ್ರಿಕೆಗಳಲ್ಲಿ ಒಂದೂ ಬರಲ್ಲ. ಹೀಗೆ ಹಲವಾರು ಮೂಲಭೂತ ಸಮಸ್ಯೆಗಳ ಕೊರತೆಯಿಂದ ನರಳುತ್ತಿದ್ದೇವೆ ಎಂದು ಮಕ್ಕಳು ತಮ್ಮ ಅಳಲನ್ನು ಶಾಸಕರ ಮುಂದೆ ತೋಡಿಕೊಂಡರು. ಕಣ್ಣಾರೆ ಕಂಡ ಶಾಸಕರು ಮೊದಲು ವಸತಿ ನಿಲಯವನ್ನು ಸುತ್ತಾಡಿ ಎಲ್ಲವನ್ನು ಪರಿಶೀಲಿಸಿ ನಂತರ ಮೇಲ್ವಿಚಾರಕ ವಿಜಯಕುಮಾರ್ ಅವರನ್ನು ತರಾಟೆಗೆ ತೆಗೆದುಕೊಂಡು ಮಕ್ಕಳು ವಸತಿ ನಿಲಯದಲ್ಲಿ ಅನೇಕ ಸೌಲಭ್ಯಗಳಿಲ್ಲದೆ ನರಳಾಡುತ್ತಿದ್ದಾರೆ. ನಿವೇನು ಮಾಡುತ್ತಿದ್ದೀರಿ ಎಂದು ಏರಿದ ಧ್ವನಿಯಲ್ಲಿ ಗುಡುಗಿದರು. ಇಷ್ಟಕ್ಕೆ ಬಿಡದ ಶಾಸಕರು ಜಿಲ್ಲಾ ಹಿಂದುಳಿದ ಅಧಿಕಾರಿ ಕೆ.ಟಿ. ರಾಠೋಡ ಅವರಿಗೆ ದೂರವಾಣಿ ಮೂಲಕ ಮಾತನಾಡಿ, ಇಲ್ಲಿನ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಹಾಸಿಗೆ, ಹೊದಿಕೆ ಇಲ್ಲ. ಪ್ಯಾನ್, ವಿದ್ಯುತ್, ಮಂಚಗಳಿಲ್ಲ, 52 ಮಕ್ಕಳಲ್ಲಿ ಕೇವಲ 15 ಜನ ಮಾತ್ರ ವಸತಿ ಮಾಡುತ್ತಾರೆ. ಹೀಗಾಗಿ, ಎಲ್ಲ ಮಕ್ಕಳ ಹೆಸರಿನಲ್ಲಿ ಖರ್ಚು ಹಾಕುತ್ತೀರಿ. ಇದ್ದವರಿಗೆ ಕೂಡ ವ್ಯವಸ್ಥೆ ಮಾಡದ್ದಿದರೆ ಹೇಗೆ ಎಂದು ತರಾಟೆಗೆ ತೆಗೆದುಕೊಂಡರು. ಅಧಿಕಾರಿಯಾಗಿ ಜಿಲ್ಲೆಯಲ್ಲೆ ಕುಳಿತರೆ ಸಾಲದು, ವಸತಿ ನಿಲಯಕ್ಕೇ ಭೀಟಿ ನೀಡಿ ವಾಸ್ತವ್ಯ ವೀಕ್ಷಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಇಲ್ಲಿಂದ ಎತ್ತಂಗಡಿ ಮಾಡುತ್ತೇನೆ. ವಸತಿ ನಿಲಯದ ಮಕ್ಕಳು ಮತ್ತು ಅಧಿಕಾರಿಗಲನ್ನು ಇನ್ನು ಕೆಲವೇ ದಿನಗಳಲ್ಲಿ ಭೇಟಿ ಮಾಡುತ್ತೇನೆ. ಎಲ್ಲವೂ ವ್ಯವಸ್ಥಿತವಾಗಿರಬೇಕು ಎಂದು ಎಚ್ಚರಿಕೆ ನೀಡಿದರು.
ಕಾಂಗ್ರೆಸ್ ಮುಖಂಡ ಶರಣಗೌಡ ಪಾಟೀಲ್, ಡಾ. ಆಂಜನೇಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

