ಗುಲ್ಬರ್ಗಾ

ತಾಪಂ ಇಒ ಸ್ಥಾನಕ್ಕೆ ವೈದ್ಯರ ನೇಮಕ: ಆಕ್ಷೇಪ

Published On :

ಯಾದಗಿರಿ: ಇಲ್ಲಿಯ ತಾಲೂಕು ಪಂಚಾಯಿತಿಯಲ್ಲಿ ಖಾಲಿ ಇದ್ದ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಹೋಮಿಯೋಪತಿ ವೈದ್ಯಾಧಿಕಾರಿಯನ್ನು ನೇಮಿಸಿರುವುದಕ್ಕೆ ತೀವ್ರ ಆಕ್ಷೇಪ ಕೇಳಿಬಂದಿದೆ. ಜಿಲ್ಲೆಯ ಆಸ್ಪತ್ರೆಗಳಲ್ಲಿ ವೈದ್ಯರ ಹುದ್ದೆಗಳು ಖಾಲಿಯಿರುವ ಸಂದರ್ಭ ತಾಪಂಗೆ ಅವರನ್ನು ತಂದು ಕೂರಿಸಿರುವುದು ಯಾಕೆ ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.
  ಇಲ್ಲಿಯ ತಾಪಂ ಇಒ ಹುದ್ದೆ ಕೆಲ ದಿನಗಳಿಂದ ಖಾಲಿಯಿತ್ತು. ಆ ಸ್ಥಾನಕ್ಕೆ ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದ ಸರ್ಕಾರಿ ಹೋಮಿಯೋಪತಿ ಚಿಕಿತ್ಸಾಲಯದ ವೈದ್ಯಾಧಿಕಾರಿಯಾಗಿದ್ದ ಡಾ.ಸತೀಶ ಜಮಾದಾರ ಅವರನ್ನು ನೇಮಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಇಲಾಖೆ ಅಧೀನ ಕಾರ್ಯದರ್ಶಿ ಎಚ್.ಇ. ರಘುನಾಥ್ ಆದೇಶ ಹೊರಡಿಸಿದ್ದಾರೆ. ಆದರೆ, ಪಂಚಾಯಿತಿ ವ್ಯವಸ್ಥೆ ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ವೈದ್ಯರನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಿರುವುದು ಹುಬ್ಬೇರುವಂತೆ ಮಾಡಿದೆ. ಈ ಕುರಿತು ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
  ಯಾದಗಿರಿ ತಾಪಂಗೆ ವೈದ್ಯರನ್ನು ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಸರ್ಕಾರ ನೇಮಕ ಮಾಡಿರುವುದು ಖಂಡನಿಯ ಎಂದು ಬಿಎಸ್ಸಾರ್ ಮುಖಂಡ ಮರೆಪ್ಪ ನಾಯಕ ಮಗದಂಪುರ ತಿಳಿಸಿದ್ದಾರೆ. ತಾಪಂ ಇಒ ಹುದ್ದೆಗೆ ಒಬ್ಬ ವೈದ್ಯರನ್ನು ನೇಮಕ ಮಾಡಿರುವುದು ಎಷ್ಟರಮಟ್ಟಿಗೆ ಸರಿ. ವೈದ್ಯಾಧಿಕಾರಿಗೆ ತಾಂತ್ರಿಕ ಕೆಲಸಗಳ,ಪಂಚಾಯಿತಿ ಅಭಿವೃದ್ಧಿ ಯೋಜನೆಗಳ ಬಗ್ಗೆ ಎಷ್ಟು ಮಾಹಿತಿ ಇರಲು ಸಾಧ್ಯ. ಅಂಥವರನ್ನು ಇಒ ಹುದ್ದೆಗೆ ನೇಮಕ ಮಾಡಿರುವುದು ಸರಿಯಲ್ಲ. ಹೀಗಾಗಿ ಉಸ್ತುವಾರಿ ಮಂತ್ರಿಗಳಿಗೆ ಈ ವಿಷಯ ಗಮನಕ್ಕೆ ಬರಲಿಲ್ಲವೇ ಎಂದು ಮಗದಂಪುರ ಪ್ರಶ್ನಿಸಿದ್ದಾರೆ.
   ಈ ಹುದ್ದೆಗೆ ಸಂಬಂಧ ಇಲ್ಲದೇ ಇರುವ ವೈದ್ಯರನ್ನು ನೇಮಕ ಮಾಡಿರುವುದು ಸರಿಯಲ್ಲ. ತಕ್ಷಣವೇ ಅಧಿಕಾರಿಯನ್ನು ಮಾತೃ ಇಲಾಖೆಗೆ ಕಳಿಸಿ ಮುಂದೆ ಇಂತಹ ತಪ್ಪು ಮರುಕಳಿಸದಂತೆ ಎಚ್ಚರವಹಿಸಬೇಕು. ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿದ್ದು ಜಿಲ್ಲೆಯ ಅಭಿವೃದ್ಧಿ ಬಗ್ಗೆ ಕಾಳಜಿ ವಹಿಸಿ ಕೆಲಸ ಮಾಡುವುದು ಅವಶ್ಯ. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುಲಾಗುತ್ತದೆ ಎಂದು ಮರೆಪ್ಪ ನಾಯಕ ಎಚ್ಚರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.